ಜೀವನಯಾನ

Thursday, October 3, 2013

ನೀಲಿ ರಕ್ತದ ಹಾರ್ಸ್ ಶೂ ಏಡಿ!

ಮನುಷ್ಯರಂತೆಯೇ ಪ್ರಾಣಿಗಳ ರಕ್ತವೂ ಕೆಂಪಾಗಿರುವುದು ಸಾಮಾನ್ಯ. ಆದರೆ, ಈ ವಿಶಿಷ್ಟ ಪ್ರಾಣಿಯ ರಕ್ತದ ಬಣ್ಣ ಮಾತ್ರ ನೀಲಿ! ಈ ಕಾರಣಕ್ಕಾಗಿಯೇ ಇದನ್ನು ತೀರಾ ಅರೂಪದ ಪ್ರಾಣಿ ಸಂಕುಲ ಎಂದು ಗುರುತಿಸಲಾಗಿದೆ. ಈ ಪ್ರಾಣಿಯ ಹೆಸರು ಹಾರ್ಸ್ ಶೂ ಏಡಿ. ಇಂದು ಹಾರ್ಸ್ ಶೂ ಏಡಿಯ ಕೇವಲ ನಾಲ್ಕು ಪ್ರಕಾರಗಳು ಮಾತ್ರ ಉಳಿದುಕೊಂಡಿದೆ. ಇವುಗಳಲ್ಲಿ ಒಂದು ಪ್ರಕಾರ ಉತ್ತರ  ಅಮೆರಿಕ, ಅಟ್ಲಾಂಟಿಕ್ ಮತ್ತು ಗಲ್ಫ್ ಸಮುದ್ರ ತೀರದಲ್ಲಿ ಕಂಡುಬಂದರೆ, ಇನ್ನುಳಿದ ಮೂರು ಪ್ರಕಾಗಳು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಇವುಗಳಿಗೆ ಏಡಿ ಎನ್ನುವ ಹೆಸರು ಬಂದಿದ್ದರೂ ಸಹ. ಕಡಲೇಡಿ ಅಥವಾ ಸಿಗಡಿಗಳ ಜಾತಿಗೆ ಸೇರಿಲ್ಲ. ಬದಲಾಗಿ ಜೇಡ ಮತ್ತು ಚೇಳಿನ ಸಂತತಿಗೆ ಸೇರಿದ ಅರಾಕ್ನಿಡ್ ಎನ್ನುವ ಪ್ರಜಾತಿಗೆ ಸೇರಿದೆ. 


 ಜೀವಂತ ಪಳೆಯುಳಿಕೆ!
ಇವು ಡೈನೋಸಾರ್ಗಳಿಗಿಂತ 20 ಕೋಟಿ ವರ್ಷಗಳ ಹಿಂದಿನವು. ಅಂದರೆ ಸುಮಾರು 45 ಕೋಟಿ ವರ್ಷಗಳಿಂದ ಭೂಮಿಯ ಮೇಲಿವೆ. ಹೀಗಾಗಿ ಇವುಗಳಿಗೆ "ಜೀವಂತ ಪಳೆಯುಳಿಕೆ" ಎಂದು  ಕರೆಯಲಾಗುತ್ತದೆ. ಭೂಮಿಯ ಮೇಲೆ ಇಷ್ಟೊಂದು ಸುದೀರ್ಘ ಕಾಲದಿಂದ ಬದುಕಿದ್ದರೂ ಸಹ ಹಾರ್ಸ್ಶೂ ಏಡಿಯ ದೇಹ ರಚನೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಮುಂಚೆ ಹೇಗಿತ್ತೋ ಈಗಲೂ ಹಾಗಯೇ ಇದೆ.

ಶಾಂತ ಸ್ವಭಾವದ ಪ್ರಾಣಿ
ಹಾರ್ಸ್ಶೂ ಏಡಿಯ ಮೈಮೇಲೆ ತೆಳುವಾದ ಕವಚವಿದೆ. ಹರಿತವಾದ ಉದ್ದನೆಯ ಬಾಲದಿಂದ ಆಕ್ರಮಣಕಾರಿಯತೆ ಬಿಂಬಿತವಾಗಿದೆ. ಆದರೆ, ಇವು ಯಾರಿಗೂ ಹಾನಿ ಮಾಡುವಂತದ್ದಲ್ಲ. ಉದ್ದನೆಯ ಬಾಲ ಸಮುದ್ರದಲ್ಲಿ ಚಲಿಸುವ ದಿಕ್ಕನ್ನು ಬದಲಿಸಲು ನೆರವಾಗುತ್ತದೆ. ಹೆಣ್ಣು ಹಾರ್ಸ್ಶೂ ಏಡಿ ಸಮುದ್ರದ ದಡದಲ್ಲಿ 60 ರಿಂದ 120 ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಆದರೆ, ಅದರಲ್ಲಿ ಸಹಸ್ರಾರು ಮೊಟ್ಟೆಗಳು ಸಮುದ್ರ ಪಕ್ಷಿಗಳಿಗೆ ಆಹಾರವಾಗುತ್ತದೆ. ಹೆಚ್ಚಿನ ಸಂಖ್ಯೆಯ ಮರಿಗಳನ್ನು ಬೆಳೆಸುತ್ತವೆ. ಹೀಗಾಗಿಯೇ ಇವು ಸುದೀರ್ಘ ಕಾಲ ಭೂಮಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ. ಆದರೆ ಇಂದು ಇವು ಅಳಿವಿನ ಅಂಚಿಗೆ ತಲುಪಿರುವುದರಿಂದ ಹಾರ್ಸ್ಶೂ ಏಡಿಯ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.


ರಕ್ತದ ಬಣ್ಣ ನೀಲಿ ಏಕೆ?
ಹಾರ್ಸ್ಶೂ ಏಡಿಯ ರಕ್ತ ಕೆಂಪಾಗಿರುವ ಬದಲು ನೀಲಿಯಾಗಿದೆ. ಇದಕ್ಕೆ ಕಾರಣ ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶವೇ ಇಲ್ಲ. ಇದರ ಬದಲಾಗಿ ಆಮ್ಲಜನಕವನ್ನು  ಹೊಂದಿರುವ ಹೊಮೊಸೈನಿಸ್ ಇದೆ. ಹೊಮೊಸೈನಿಸ್ನಲ್ಲಿ ತಾಮ್ರದ ಅಂಶ ಹೆಚ್ಚಾಗಿ  ಇರುವುದರಿಂದ ಹಾರ್ಸ್ಶೂ ಏಡಿಯ ರಕ್ತ ನೀಲಿಯಾಗಿದೆ. ಇವು ರೋಗಕಾರಕದ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಬ್ಯಾಕ್ಟೀರಿಯಾಗಳ ನಾಶಕ್ಕೆ ರಕ್ತವನ್ನು ಬಳಸಲಾಗುತ್ತದೆ.

ರಕ್ತಕ್ಕೆ ಭಾರೀ ಬೇಡಿಕೆ!
ಹಾರ್ಸ್ಶೂ ಏಡಿಯ ರಕ್ತವನ್ನು ರಾಸಾಯನಿಕಗಳ ಪರೀಕ್ಷೆಗೆ ಉಪಯೋಗಿಸಲಾಗುತ್ತದೆ. ಕಡಿದ ಗಾಯಗಳನ್ನು ಗುಣಪಡಿಸಲು ಹಾರ್ಸ್ಶೂ ಏಡಿಯ ರಕ್ತದ ಜೆಲ್ನ್ನು ಹಚ್ಚಲಾಗುತ್ತದೆ. ಹೀಗಾಗಿ ಹಾರ್ಸ್ಶೂನ ನೀಲಿ ರಕ್ತಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಇದರ ಒಂದು ಬಾಟಲಿ ರಕ್ತಕ್ಕೆ ಸುಮಾರು 9 ಲಕ್ಷ ರೂ. ಬೆಲೆಯಿದೆ. ಸಮುದ್ರದಿಂದ ಹಾರ್ಸ್ಶೂ ಏಡಿಯನ್ನು ಹಿಡಿದು ತಂದು ರಕ್ತ ತೆಗೆದು, ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ. ದೇಹದಿಂದ ಶೇ.30ರಷ್ಟು ರಕ್ತ ತೆಗೆದರೂ ಇವು ಬದುಕುಳಿಯ ಬಲ್ಲವು. ನಷ್ಟವಾದ ರಕ್ತವನ್ನು 30 ದಿನದಲ್ಲಿ ತುಂಬಿಕೊಳ್ಳುತ್ತವೆ. ಆದರೆ, ಹೆಚ್ಚಿನ ರಕ್ತ ತೆಗೆಯುವುದರಿಂದ ಪ್ರತಿ ವರ್ಷ ಸುಮಾರು 20 ದಿಂದ 35 ಸಾವಿರ ಹಾರ್ಸ್ಶೂ ಏಡಿಗಳು ಸಾವಿಗೀಡಾಗುತ್ತಿವೆ ಎಂದು ಅಧ್ಯನದಿಂದ ತಿಳಿದುಬಂದಿದೆ. ರಕ್ತ ತೆಗೆಯುವುದರಿಂದ ಹಾರ್ಸ್ಶೂ ಸಂತತಿ ಇಂದು ಅಳಿವಿನ ಅಂಚನ್ನು ತಲುಪಿದೆ.

 

No comments:

Post a Comment