ಜೀವನಯಾನ

Sunday, May 26, 2013

ಸಹರಾ ಎಂಬ ಮರಳುಗಾಡು!

ಸುಡುವ ಬಿಸಿಲಿಗೆ ಇನ್ನೊಂದು ಹೆಸರು ಸಹರಾ ಮರುಭೂಮಿ. ಜಗತ್ತಿನ ಅತ್ಯಂತ ಬಿಸಿಲಿನ ಪ್ರದೇಶ ಎಂದು ಕರೆಸಿಕೊಂಡಿರುವ ಸಹರಾ ವರ್ಷಪೂರ್ತಿ ಮಳೆಯನ್ನೇ ಕಾಣದ ಮರಳುಗಾಡು. ಸುಮಾರು 9,400,000 ಚದರ್ ಕಿ. ಮೀಟರ್ ವಿಸ್ತೀರ್ಣ ಹೊಂದಿರುವ ಜಗತ್ತಿನ ಎರಡನೇ ದೊಡ್ಡ ಮರುಭೂಮಿ. ವಿಚಿತ್ರವೆಂದರೆ ಜಗತ್ತಿನ ಅತ್ಯಂತ ಉದ್ದದ ನದಿ ಎಂದು ಹೆಸರಾದ ನೈಲ್ ನದಿ ಹರಿಯುವುದು ಇದೇ ಸಹರಾ ಮರುಭೂಮಿಯಲ್ಲಿ!



ಸಮುದ್ರವಿದ್ದರೂ ಮರುಭೂಮಿ

ಸಹರಾ ಮರುಭೂಮಿಗೆ ಸುಮಾರು 30 ಲಕ್ಷ ವರ್ಷಗಳಷ್ಟು ಇತಿಹಾಸವಿದೆ. ಉತ್ತರ ಆಫ್ರಿಕಾದ ಬಹುತೇಕ ಭಾಗವನ್ನು ಸಹರಾ ಮರುಭೂಮಿ ಆಕ್ರಮಿಸಿಕೊಂಡಿದೆ. ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ದಂಡೆ ಮತ್ತು ಅಟ್ಲಾಂಟಿಕ್ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದ್ದರೂ ಸಹರಾ ಮಾತ್ರ ಮರುಭೂಮಿಯಾಯೇ ಉಳಿದಿದೆ. ಇಲ್ಲಿ ವರ್ಷದಲ್ಲಿ ಬೀಳುವ ಮಳೆಯ ಪ್ರಮಾಣ 20 ಮಿಲಿ ಮೀಟರ್ಗಿಂತಲೂ ಕಡಿಮೆ. ಕೆಲವು ಪ್ರದೇಶದಲ್ಲಿ 10 ಮಿಲಿ ಮೀಟರ್ನಷ್ಟೂ ಮಳೆಯಾಗುವುದಿಲ್ಲ. ಆದರೂ ಇಲ್ಲಿ ಕೆಲವು ಪ್ರದೇಶದಲ್ಲಿ ಜನವಸತಿ ಇದೆ. ಬೆರ್ಬರ್ ಜನಾಂಗದವರು ಇಲ್ಲಿ ಅನಾದಿಕಾಲದಿಂದಲೂ ವಾಸವಾಗಿದ್ದಾರೆ. ಸಹರಾ ಮರುಭೂಮಿಯಲ್ಲಿ ಒಟ್ಟು 20 ಲಕ್ಷ ಜನರಿದ್ದಾರೆ. ಅರೆಬಿಕ್ ಅತಿ ಹೆಚ್ಚಾಗಿ ಮಾತನಾಡುವ ಭಾಷೆ.


ಹವಾಮಾನ ವೈಪರಿತ್ಯ:
ಸಹರಾ ಮರುಭುಮಿಯ ಇನ್ನೊಂದು ವಿಶೇಷವೆಂದರೆ ಹಗಲಿನಲ್ಲಿ ವಿಪರೀತ ಬಿಸಿಲಿದ್ದರೆ, ರಾತ್ರಿಯಲ್ಲಿ ಚಾದರ ಹೊದ್ದು ಮಲಗುವಷ್ಟು ಚಳಿ ಇರುತ್ತದೆ. ಬೇಸಿಗೆಯ ಹಗಲಿನಲ್ಲಿ ಸರಾಸರಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುತ್ತದೆ. ರಾತ್ರಿಯಾಗುತ್ತಿದ್ದಂತೆ ತಾಪಮಾನ 0 ಡಿಗ್ರಿಗೆ ಕುಸಿದುಬಿಡುತ್ತದೆ.ಸಹರಾದ ಮಧ್ಯಭಾಗ ಅತ್ಯಂತ ಶುಷ್ಕ ಪ್ರದೇಶ. ಇಲ್ಲಿ ಮರಗಿಡಗಳು ತೀರಾ ಕಡಿಮೆ. ಅತ್ಯಂತ ಒರಟಾದ ಹವಾಮಾನ ಸಹರಾ ಮರುಭೂಮಿಯದ್ದು. ಇಂತಹ ಸುಡುವ ಸಹರಾದಲ್ಲಿಯೂ ಕೂಡಾ 500 ಜಾತಿಯ ಸಸ್ಯಗಳು ಬೆಳೆಯುತ್ತವೆ.  ಇಲ್ಲಿನ ವಿಷಮ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಾಣಿಗಳು ಸಹ ಇಲ್ಲಿವೆ. ಒಂಟೆ ಹಾಗೂ ಮೇಕೆ ಇಲ್ಲಿನ ಪ್ರಮುಖ ಪ್ರಾಣಿಗಳು. ಅಲ್ಲದೆ ಸಹರಾ ಚೀತ್, ಮರಳು ವೈಪರ್ಸ್, ಚೇಳು, ಹಲ್ಲಿಗಳು ಇಲ್ಲಿ ಕಾಣಸಿಗುತ್ತವೆ.


ಮರಳಿನ ಸುಂಟರಗಾಳಿ:
ಇಲ್ಲಿ ಆಗಾಗ ಮರಳಿನ ಸುಂಟರಗಾಳಿ ಬೀಸುತ್ತದೆ. ಇದರ ಪ್ರಭಾವ ಎಷ್ಟಿರುತ್ತೆ ಅಂದರೆ, ಇಲ್ಲಿ ಬೀಸುವ ಬಿರುಗಾಳಿಯು ಕೆಲವು ಪ್ರದೇಶಗಳ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಕೆಲವೊಮ್ಮೆ ಸಹರಾ ಮರುಭೂಮಿಯ ಮರಳಿನ ಕಣಗಳು ಬ್ರಿಟನ್ ಮತ್ತು ಜರ್ಮನಿಯ ವರೆಗೆ ಗಾಳಿಯ ಮೂಲಕ ತಲುಪುತ್ತವೆ. ಬಿರುಗಾಳಿ ಸಮಯದಲ್ಲಿ ವಿಚಿತ್ರವಾದ ಶಬ್ದ ಸೃಷ್ಟಿಯಾಗುತ್ತದೆ.

ಸಂಪೂರ್ಣ ಮರುಳುಗಾಡಲ್ಲ:
ಬಹುತೇಕ ಮಂದಿ ನಂಬಿರುವಂತೆ ಇದು ಸಂಪೂರ್ಣ ಮರಳುಗಾಡಲ್ಲ. ಇಲ್ಲಿ ನೂರಾರು ಮೈಲಿ ಭೂ ಪ್ರದೇಶ, ವಿಶಾಲವಾದ ಕಲ್ಲಿನ ಪ್ರಸ್ಥಭೂಮಿ, ಜಲ್ಲಿ ಕಲ್ಲಿನ ಬಯಲು ಪ್ರದೇಶ, ಒಣ ಕಣಿವೆಗಳು, ಬಯಲು ಪ್ರದೇಶಗಳಿವೆ. ಕೆಲವು ಕಡೆ ಅಂತರ್ಜಲವೂ ಲಭ್ಯವಿದೆ. ಅಷ್ಟೇಅಲ್ಲ ಓಯಾಸಿಸ್ಗಳಿಗೂ ಹೆಸರುವಾಸಿ. ಸಹರಾ ಮರುಭುಮಿಯ ಅತ್ಯಂತ ಎತ್ತರದ ಶಿಖರ ಎಮಿ ಕೋಸಿ, ಇದು 3,415 ಮೀಟರ್ ಎತ್ತರವಾಗಿದೆ.

ವಿಸ್ತೀರ್ಣ ಹೆಚ್ಚುತ್ತಿದೆ:

ಇಲ್ಲಿನ ಕೆಲವು ಮರಳಿನ ದಿಬ್ಬಗಳು 180 ಮೀಟರ್ವರೆಗೆ ಎತ್ತರವಾಗಿರುತ್ತವೆ. ಸಹರಾ ಮರುಭೂಮಿಯ ವಿನ್ಯಾಸ ಆಗಾಗ ಬದಲಾಗುತ್ತಿರುತ್ತದೆ. ಸಹರಾ ವಿಸ್ತೀರ್ಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿಜ್ಞಾನಿಗಳು ಉಪಗ್ರಹ ಚಿತ್ರದ ಮೂಲಕ ಅಧ್ಯಯನ ಮಾಡುತ್ತಿದ್ದಾರೆ. ಕೆಲವು ಕಡೆ  ಸಹರಾದ ವಿಸ್ತೀರ್ಣ ಕಡಿಮೆಯಾಗುತ್ತಿದ್ದು, ಇನ್ನು ಕೆಲವು ಕಡೆ ಮರುಭೂಮಿ ತನ್ನ ವಿಸ್ತೀರ್ಣ ಹಿಗ್ಗಿಸಿಕೊಳ್ಳುತ್ತಿದೆ.
 

No comments:

Post a Comment