ಜೀವನಯಾನ

Sunday, February 12, 2012

ಬಾವಲಿ..

   ಬಾವಲಿ ಮಿತ್ರ ಕಾಣುವುದು ರಾತ್ರಿ ಮಾತ್ರ ..!
ಹಗಲಿನಲ್ಲಿ ಕಣ್ಣು ಕಾಣಿಸದ ನಿಶಾಚರಿ ಬಾವಲಿಗಳು ಮರಗಳ ಮರೆಯಲ್ಲಿ, ಬಾವಿ, ಸುರಂಗ, ಗುಹೆಗಳಲ್ಲಿ ತಲೆ ಕೆಳಗಾಗಿ ಜೋತು ಬಿದ್ದಿರುತ್ತವೆ. ಹಗಲಿನಲ್ಲಿ ತಲೆಕೆಳಗಾಗಿ ನಿದ್ರಿಸುವ ಇವು ರಾತ್ರಿಯಾಗುತ್ತಿದ್ದಂತೆ ಚಟುವಟಿಕೆ ಶುರುಹಚ್ಚಿಕೊಳ್ಳುತ್ತವೆ. ಬಾವಲಿಗಳು ಮಾನವನ ಜೀವನಕ್ಕೂ  ಒಗ್ಗಿಕೊಂಡಿವೆ, ಹಳೆಯ ಕಟ್ಟಡಗಳು, ಯಾರು ವಾಸಿಸದ ಬಂಗಲೆಗಳು, ಸೇತುವೆಗಳ ತಳದಲ್ಲಿ ವಾಸಿಸಬಲ್ಲವು.  
ಅತ್ತ ಪ್ರಾಣಿಯೂ ಅಲ್ಲದ, ಇತ್ತ ಪಕ್ಷಿಯೂ ಅಲ್ಲದ ಸಸ್ತನಿ ಇದು.  ನಾಲ್ಕು ಕಾಲುಗಳಿದ್ದು, ಮೊಟ್ಟೆಯಿಡದೆ ಮರಿಗಳಿಗೆ ಜನ್ಮನೀಡುವ, ಮರಿಗಳಿಗೆ ಮೊಲೆ ಹಾಲುಣಿಸುವ ವರ್ಗಕ್ಕೆ ಸೇರಿದೆ. ಸಸ್ತನಿ ಜಾತಿಯಲ್ಲಿ ಹಾರುವ ಸಾಮರ್ಥ್ಯ  ಇರುವುದು ಬಾವಲಿಗೆ ಮಾತ್ರ. ಆದರೆ ಹಕ್ಕಿಗಳಂತೆ ಬಹಳ ದೂರ ಹಾರಲಾರವು. ಇವು ಎತ್ತರದ ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವಾಗ ರೆಕ್ಕೆ ಬಡಿದುಕೊಳ್ಳುತ್ತವೆ. ಅರಣ್ಯ, ಮರುಭೂಮಿ, ಪಟ್ಟಣ ಹೀಗೆ ಪ್ರಪಂಚದ ಎಲ್ಲಾ ಭಾಗದಲ್ಲಿಯೂ ಕಂಡು ಬರುತ್ತವೆ. ಬಾವಲಿಗಳು ಇರದ ಖಂಡ ಅಂದರೆ ಅಂಟಾರ್ಟಿಕಾ. ಸಾವಿಕ್ಕಿಂತ ಹೆಚ್ಚು ಬಗೆಯ ಬಾವಲಿಯ  ಪ್ರಭೇದ ಪ್ರಪಂಚದಲ್ಲಿದೆ. ರೆಕ್ಕೆ ಉಳ್ಳ ಪಕ್ಷಿಯಂತೆ ಕಾಣುವ ಬಾವಲಿ ಪ್ರಾಣಿಗಳ ಶಾರೀರವನ್ನು ಹೊಂದಿದೆ. ರೆಕ್ಕೆ ಮತ್ತು ಕಾಲಿನಲ್ಲಿ ಮೊನಚಾದ ಮುಳ್ಳಿನಂಥಹ ಉಗುರುಗಳಿರುತ್ತವೆ. ವಿಕಾರವಾಗಿ ಕೇಕೆ ಹಾಕುವ ಬಾವಲಿಯ ಧ್ವನಿ ಮಕ್ಕಳಲ್ಲಿ ಭಯ ಹುಟ್ಟಿಸುತ್ತದೆ. 

  • ಗುಂಪಾಗಿಯೇ ಇರುತ್ತವೆ.
ಅತೀ ಉಷ್ಣ ಮತ್ತು ಅತೀ ಶೀತ ಹವೆಯಲ್ಲಿಯೂ ಇವು ಬದುಕ ಬಲ್ಲವು. ಬವಲಿಯ ಜೀವಿತಾವಧಿ 4ರಿಂದ 30 ವರ್ಷಗಳು. ಸಾದಾರಣವಾಗಿ ಬಾವಲಿಗಳು ಗುಂಪಾಗಿ ವಾಸಿಸುತ್ತವೆ. ಬಾವಲಿಯ ರಕ್ತ ಬಿಸಿಯಾಗಿರುತ್ತದೆ. ಇವಕ್ಕೆ ಮಾನವನಂತೆ ಒಂದು ಹೆಬ್ಬೆರಳು ಮತ್ತು ನಾಲ್ಕು ತೋರು ಬೆರಳುಗಳಿರುತ್ತವೆ. ಕೈಬೆರಳುಗಳ ಮಧ್ಯೆ ತೆಳುವಾದ ಚರ್ಮದ ಪೊರೆಯಿರುತ್ತದೆ. ಹೀಗಾಗಿ ಬೆರಳುಗಳು ಗೋಚರಿಸುವುದಿಲ್ಲ. ಬೆರಳುಗಳು ದೇಹಕ್ಕಿಂತಲೂ ಬಹಳ ಉದ್ದವಾಗಿರುತ್ತವೆ. 50 ಮಿಲಿಯನ್ ವರ್ಷಗಳ ಹಿಂದೆಯೇ ಬಾವಲಿಗಳು ಬದುಕಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 
  
  • ರಕ್ತ ಹೀರುವ ಗುಣ.
ಕೆಲವು ಬಾವಲಿಗಳು ರಾತ್ರಿಯ ಊಟಕ್ಕೆ ಹಸು, ಕುದುರೆ ಮುಂತಾದ ಜಾನುವಾರುಗಳ ಮೈಮೇಲೆ ಕುಳಿತು ಅವುಗಳ ರಕ್ತವನ್ನು ಆಹಾರವಾಗಿ ಸೇವಿಸುತ್ತವೆ.  ಹರಿತವಾದ ಉಗುರಿನಿಂದ ಕಚ್ಚಿ ಪ್ರಾಣಿಗಳ ಮೈಯನ್ನು ಗಾಯ ಗೊಳಿಸುತ್ತವೆ. 70 ಪ್ರತಿಶತ  ಬಾವಲಿಗಳು ಮಂಸಾಹಾರಿಯಾಗಿದ್ದು, ಕಪ್ಪೆ, ಮೀನು, ಕೀಟ ಮುಂತಾದ ಸಣ್ಣಪುಟ್ಟ ಪ್ರಾಣಿಗಳನ್ನು ರಾತ್ರಿಯ ಹೊತ್ತಿನಲ್ಲಿ ಬೇಟೆಯಾಡಿ ತಿನ್ನುತ್ತವೆ. ಒಂದು ಬಾವಲಿ ಒಂದು ಗಂಟೆಯಲ್ಲಿ ಒಂದು  ಸಾವಿರ ಕೀಟಗಳನ್ನು ಭೇಟೆಯಾಡಿ ತಿನ್ನಬಲ್ಲದು. ಕೆಲವು ಸಸ್ಯಾಹಾರಿಗಳು ಕೇವಲ ಹಣ್ಣನ್ನು ಮಾತ್ರ ತಿನ್ನುತ್ತವೆ. ಹಣ್ಣುಗಳನ್ನು ತಿಂದ ನಂತರ ಬೀಜವನ್ನು ಬಿಸಾಡುತ್ತದೆ. ಹೀಗಾಗಿ ಮಳೆ ಕಡುಗಳ ಬೆಳವಣಿಗೆಗೆ ಕೊಡುಗೆ ನೀಡುತ್ತಿವೆ.  

  • ತನ್ನದೇ ಪ್ರತಿಧ್ವನಿಗೆ ಕಿವಿ.
ಬಾವಲಿಗಳಿಗೆ ಹಗಲಿನಲ್ಲಿ ಕಣ್ಣುಕಾಣುವುದಿಲ್ಲ ಎಂದು ಹೆಚ್ಚಿನ ಜನರಲ್ಲಿ ತಪ್ಪು ನಂಬಿಕೆಯಿದೆ. ಬಾವಲಿಗೆ ಹಗಲಿನಲ್ಲೂ ಕಣ್ಣು ಕಾಣುತ್ತದೆ. ಬಾವಲಿಗಳು ರಾತ್ರಿಯ ಹೊತ್ತು ಸಂಚರಿಸುವಾಗ ಕೇವಲ ಇರುಳುಗಣ್ಣಿನ ಮೇಲೆ ಅವಲಂಬಿತವಾಗುವುದಿಲ್ಲ. ಕೀರು ಧ್ವನಿಯನ್ನು ಹೊರಹಾಕಿ, ಅದರಿಂದ ಉಂಟಾಗುವ ಪ್ರತಿಧ್ವನಿ ಗ್ರಹಿಸಿ ವಸ್ತುವಿನ ದೂರವನ್ನು ಪತ್ತೆಹಚ್ಚುವ ಸಾಮರ್ಥ್ಯ  ಹೊಂದಿವೆ. ಪ್ರತಿಧ್ವನಿಯ ಅಂತರವನ್ನು ಊಹಿಸಿ ಬೇಟೆಯಾಡುತ್ತವೆ. ಮೂಗಿನ ಮೂಲಕ ಪ್ರತಿಧ್ವನಿಯಾಗುವ ರೀತಿಯ ವಿಚಿತ್ರವಾದ ಕೀರಲು ದ್ವನಿಯನನ್ನು ಹೊರಹಾಕುತ್ತವೆ. ಕಿವಿಗಳು ಸೂಕ್ಷ ಶಬ್ದಗಳನ್ನು ಗ್ರಹಿಸ ಬಲ್ಲವು.
  • ಕಾಣಲು ಅಪರೂಪ. 
ಪರಿಸರ ಮತ್ತು ಮಾನವ ಸ್ನೇಹಿಯಾದ ಬಾಲಿಗಳು ಅಳಿವಿನ ಅಂಚಿನಲ್ಲಿದ್ದು, ವಾಸಸ್ಥಾನದ ಕೊರತೆ, ಕಡಿಮೆ ಸಂತಾನೋತ್ಪತ್ತಿ, ಖಾಯಿಲೆಗಳಿಂದಾಗಿ  ಬಾವಲಿಯ ಸಂಖ್ಯೆ ದಿನದಿಂದ  ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಕಾಣಲು ಅಪರೂಪವಾಗುತ್ತಿದೆ .

No comments:

Post a Comment