ಜೀವನಯಾನ

Sunday, February 5, 2012

ಅಣಬೆ..

ಅರಳಿ ಮರೆಯಾಗುವ ಬಣ್ಣದ ಕೊಡೆಗಳು

ಅರಣ್ಯದ ಮಧ್ಯೆ ಚಿಕ್ಕದಾದ ಬಣ್ಣದ ಕೊಡೆ ಅರಳೀಸಿದಂತೆ ಕಾಣುವ ಅಣಬೆಗಳು ಶಿಲೀಂಧ್ರ ಜಾತಿಗೆ ಸೇರಿವೆ. ಇವು ಸಸ್ಯ, ಪ್ರಾಣಿ, ಬ್ಯಾಕ್ಟೀರಿಯಾಗಳಿಂದ ಭಿನ್ನವಾಗಿರುತ್ತವೆ. ಜಗತ್ತಿನಾದ್ಯಂತ ಹೇರಳವಾಗಿರುವ ಶಿಲೀಂಧ್ರಗಳು ರಹಸ್ಯ ಜೀವನ ಶೈಲಿಯಿಂದಾಗಿ ಬರಿಗಣ್ಣಿಗೆ ಗೋಚರಿಸದೇ ನಿರ್ಜೀವ ವಸ್ತುಗಳು, ಪ್ರಾಣಿ, ಸಸ್ಯಗಳಲ್ಲಿ ಅಡಗಿರುತ್ತದೆ. ಮೊಳಕೆಯೊಡೆಯುವ ಸಮಯದಲ್ಲಿ ಅಣಬೆಗಳಾಗಿ ( ಮಶ್ರೂಮ್ ) ರೂಪಾಂತರ ಹೊಂದುತ್ತದೆ. ಭೂಮಿಯ ಮೇಲೆ ಸಸ್ಯಗಳು ಹುಟ್ಟುವ ಮೊದಲೆ ಶಿಲೀಂಧ್ರಗಳು ವಾಸವಾಗಿವೆ. ಅಲ್ಲದೇ ದೀರ್ಘಕಾಲ ದಿಂದಲೂ ನೇರವಾದ ಆಹಾರದ ಮೂಲವಾಗಿ ಬಳಕೆಯಲ್ಲಿವೆ.

ಗುರುತಿಸುವುದು ಹೇಗೆ ?

ಅಣಬೆಗಳು ಬರಿಗಣ್ಣಿಗೆ ಕಾಣುವ ರೀತಿಯ ಸ್ಥೂಲ ರಚನೆ ಹೊಂದಿರುತ್ತವೆ. ಇದರ ಮೈಮೇಲೆ ಚೆಲ್ಲಿಕೊಂಡಿರುವ, ಕೈಗೆ ಅಂಟುವ ಪುಡಿಗಳು ಅಣಬೆಯನ್ನು ಗುತಿಸಲು ಸಹಾಯಕ. ಇವು ಕಪ್ಪು, ಕಂದು, ಹಳದಿ, ನಸುಗೆಂಪು ಹೀಗೆ ನಾನಾ ಬಣ್ಣದಲ್ಲಿ ಕಂಡುಬರುತ್ತವೆ. ಎಲ್ಲಾ ಅಣಬೆಯಲ್ಲಿಯೂ ಬಿಳಿ ಬಣ್ಣ ಸಾಮಾನ್ಯ. ಆದರೆ ಎಲ್ಲಿಯೂ ಕೆಂಪು, ನೀಲಿ ಅಥವಾ ಹಸಿರು ಬಣ್ಣದಲ್ಲಿ ಇವು ಗೋಚರಿಸುವುದಿಲ್ಲ. ಮೃದುವಾದ ಸುಲಭವಾಗಿ ತುಂಡಾಗುವ ಇದರ ಕೋಶಗಳು ತೀರಾ ಹಗುರವಾಗಿರುತ್ತದೆ.

ಇದರ ಗುಣಲಕ್ಷಣಗಳೆನು ?
  •  ಹಲವಾರು ಸಸ್ಯ, ಪ್ರಾಣಿ ಮತ್ತು ಇತರ ಶಿಲೀಂಧ್ರಗಳ ಮೆಲೆ ಅವಲಂಬಿತವಾಗಿರುವ ಪರಾವಲಂಬಿಗಳಗಿವೆ.  
  • ಸಕ್ಕೆರೆ, ಆಲ್ಕೊಹಾಲ್, ಡೈಸಕರೈಡ್, ಪಾಲಿಸಕರೈಡ್ ಮುಂತಾದ ನೀರಿನಲ್ಲಿ ಕರಗಬಲ್ಲ ಕಾಬೋಹೈಡ್ರೇಡ್ ಹೊಂದಿದೆ.
  • ಕ್ಲೋರೋಪ್ಲಾಸ್ಟಗಳ ಕೊರತೆ ಹೊಂದಿರುತ್ತವೆ ಮತ್ತು ಕರ್ಯನಿರ್ವಹಿಸಲ್ಪಟ್ಟ ಜೀವಿಗಳ ಮಿಶ್ರಣವನ್ನು ಶಕ್ತಿಮೂಲವಾಗಿ ಬಳಸಿಕೊಳ್ಳುತ್ತದೆ.
  • ಇವು ಲೈಂಗಿಕ ಮತ್ತು ಅಲೈಂಗಿಕ ಎರಡೂ ವಿಧಾನದಿಂದ ಸಂತಾನೋತ್ಪತ್ತಿ ಮಾಡುತ್ತವೆ.
  •  ಕೆಲವು ಶಿಲೀಧ್ರಗಳು ತದ್ರೂಪಿ ವಿದಳನದ ಮೂಲಕ ಪುನರುತ್ಪತ್ತಿಯಾಗುವ ಏಕಕೋಶೀಯ ಯೀಷ್ಟಗಳ ರೂಪದಲ್ಲಿರುತ್ತವೆ.
ಪೌಷ್ಟಿಕ ಆಹಾರ : ಅಣಬೆಗಳು ಹೇರವಾದ ಬಿ. ವಿಟಾಮಿನ್ ಹೊಂದಿರುತ್ತದೆ. ಇದು ಕಡಿಮೆ ಕ್ಯಾಲರಿ ಇರುವ ಆಹಾರವಾಗಿದ್ದು, ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು. ಇದನ್ನು ಸಸ್ಯ ಲೋಕದ ಮಾಂಸ ಎಂದು ಪರಿಗಣಿಸಲಾಗುತ್ತದೆ. ಅಣಬೆ ತಯಾರಿಕೆ ಹಾಗೂ ಸಂಗ್ರಹಣೆ ಹಲವು ದೇಶಗಳಲ್ಲಿ ಉದ್ಯಮವಾಗಿದೆ. ಜಗತ್ತಿನಲ್ಲಿ ಚೀನಾ ಅತೀಹೆಚ್ಚು ಅಣಬೆ ಉತ್ಪಾದಿಸುವ ದೇಶವಾಗಿದೆ. ಇತ್ತೀಚಿನ ದಿಗಳಲ್ಲಿ ಅಣಬೆಗೆ ಭಾರೀ ಬೇಡಿಕೆ ಬಂದಿರುವುದರಿಂದ ವ್ಯಪಾರಿ ಉದ್ದೇಶಕ್ಕಾಗಿ ಇದನ್ನು ಕೃತಕವಾಗಿ  ಬೆಳೆಸಲಾಗುತ್ತಿದೆ. ಕೆಲವು ಕೀಟಗಳು ಸಹ ಶಿಲೀಂಧ್ರಗಳ ಜತೆ ಪರಸ್ಪರ ಸಂಬಂಧ ಹೊಂದಿವೆ. ಇರುವೆಗಳ ಹಲವಾರು ಗುಂಪುಗಳು ತಮ್ಮ ಪಾಥಮಿಕ ಆಹಾರದ ಮೂಲವಾಗಿ ಶಿಲೀಂಧ್ರಗಳನ್ನು ವಿಕಾಸಗೊಳಿಸುತ್ತವೆ. ಕೆಲವು ಜಾತಿಯ ಅಣಬೆಗಳು ಮಾನವನಲ್ಲಿ ಅಪಾಯಕಾರಿ ರೋಗಗಳನ್ನು ಉಂಟುಮಾಡ ಬಲ್ಲವು.  ಇವುಗಳಲ್ಲಿ ಕೆಲವು ರೋಗಗಳಿಗೆ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗುವ ಅಪಾಯವಿದೆ.

ವೈವಿಧ್ಯತೆ : ಶಿಲೀಂದ್ರ ಸಸ್ಯಗಳು ಎಂತಹ ವಿಪರೀತ ಸನ್ನಿವೇಶದಲ್ಲೂ  ಬೆಳೆಯಬಲ್ಲವು . ವ್ಯತಿರಿಕ್ತ ವಾತಾವರಣಗಳಾದ ಮರುಭೂಮಿ, ವಿಕಿರಣ ಪ್ರದೇಶ, ಆಳ ಸಮುದ್ರಗಳಲ್ಲಿಯೂ ತಲೆ ಎತ್ತಬಲ್ಲವು. ಸುಮಾರು ಒಂದು ಲಕ್ಷಜಾತಿಯ ಶಿಲೀಂಧ್ರಗಳ ವರ್ಗೀಕರಣ  ಮಾಡಲಾಗಿದೆ.

ಹುಟ್ಟಿದ ದಿನವೇ ಸಾವು.

ಬಹುತೇಕ ಅಣಬೆಗಳು ರಾತ್ರೋರಾತ್ರಿ ಸುರಿಯುವ ಮಳೆಗೆ ಜನ್ಮತಾಳಿ ಮರುದಿನ ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದಂತೆ ನಮ್ಮಿಂದ ಕಣ್ಮರೆಯಾಗುತ್ತವೆ. ಅಣಬೆ ಒಂದೇ ದಿನದಲ್ಲಿ ಮರೆಯಾದರೂ ಅದರ ಸಂತತಿ ಮಾತ್ರ ಬಹುದಿನಗಳವರೆಗೆ ಅಲ್ಲಿಯೇ ಇರುತ್ತದೆ. ಮುಂದಿನ  ವರ್ಷ ಮತ್ತೆ ಮಳೆ ಸುರಿದಾಗ ದಿಢೀರ್ ಪ್ರತ್ಯಕ್ಷವಾಗುತ್ತದೆ. ಶಿಲೀಧ್ರಗಳು ಸತ್ತ ಮರಗಳು, ವಸ್ತುಗಳಲ್ಲಿ ಕಣ್ಣಿಗೆ ಕಾಣದಂತೆ ಅಡಗಿಕೊಂಡಿರುತ್ತದೆ. ಇವುಗಳ ಇರುವಿಕೆ ಗೋಚರಿಸುವುದು ಇವು ಅರಳಿ ನಿಂತಾಗಲೆ.
 

No comments:

Post a Comment