ಜೀವನಯಾನ

Thursday, November 14, 2013

ಉದ್ದನೆಯ ಬಾಲದ ಬಾಲದಂಡೆ

ತನ್ನ ಉದ್ದನೆಯ ಬಾಲದಿಂದಲೇ ಗಮನ ಸೆಳೆಯುವ ಸುಂದರ ಹಕ್ಕಿ ಬಾಲದಂಡೆ. ಇದು ಏಷ್ಯಾಖಂಡದ ಪಕ್ಷಿ. ಇದಕ್ಕೆ ಇಂಗ್ಲೀಷ್ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎಂದು ಕರೆಯಲಾಗುತ್ತದೆ. ಟ್ರೆಪ್ಸಿಫೋನ್ ಪ್ಯಾರಡೈಸಿ ಇದರ ವೈಜ್ಞಾನಿಕ ಹೆಸರು. ಈ ಹಕ್ಕಿಯನ್ನು ಸಂಸ್ಕೃತದಲ್ಲಿ ಅರ್ಜುನಕ ಎಂದು ಕರೆಯುತ್ತಾರೆ. ಮೊನಾರ್ಚ್ ಡೇ ಕುಂಟುಂಬಕ್ಕೆ ಸೇರಿವೆ. ಉದ್ದನೆಯ ಬಾಲವೇ ಈ ಹಕ್ಕಿಯ ಪ್ರಮುಖ ಆಕರ್ಷಣೆ. ಹೀಗಾಗಿಯೇ ಇವುಗಳಿಗೆ ಬಾಲದಂಡೆ ಎನ್ನುವ ಅನ್ವರ್ಥಕ ನಾಮ ನೀಡಲಾಗಿದೆ. 



ಬಾಲನೋಡಿ ಮೋಹಗೊಳ್ಳುವ ಹೆಣ್ಣು
ಬರ್ಡ್ ಆಫ್ ಪ್ಯಾರಾಡೈಸ್ ನಂತೆ ಗಂಡು ಹಕ್ಕಿ ಹೆಣ್ಣಿಗಿಂತ ಸುಂದರ. ಗಂಡು ಹಕ್ಕಿಯ ಬಾಲವು ಸುಮಾರು 24 ರಿಂದ 40 ಸೆ.ಮೀ.ನಷ್ಟು ಉದ್ದವಾಗಿರುತ್ತದೆ. ಆದರೆ, ಹೆಣ್ಣು ಹಕ್ಕಿ ಸರ್ವೇ  ಸಾಧಾರಣವಾದ ಚಿಕ್ಕ ಬಾಲ ಹೊಂದಿರುತ್ತದೆ. ಗಂಡು ಹಕ್ಕಿ 2ನೇ ಅಥವಾ ಮೂರನೇ ವರ್ಷದ ಬಳಿಕ ಉದ್ದನೆಯ ಬಾಲವನ್ನು ಪಡೆದುಕೊಳ್ಳುತ್ತದೆ. ಹಾರಾಡುವಾಗ ಉದ್ದನೆಯ ಬಿಳಿಗರಿಗಳು ಗಾಳಿಪಟದ ಬಾಲಂಗೋಚಿಯಂತೆ ಕಾಣುತ್ತವೆ. ಇದರ ಬಾಲ ಉದ್ದವಿದ್ದರೂ ದೇಹ ಗುಬ್ಬಿಯಷ್ಟೇ ಚಿಕ್ಕದಿರುತ್ತದೆ. ಇವುಗಳ ದೇಹ ಕೇವಲ 18ರಿಂದ 21 ಸೆ.ಮೀ.ನಷ್ಟು ಉದ್ದವಿರುತ್ತದೆ. ಗಂಡು ಹಕ್ಕಿಯ ಬಾಲ ಹೆಚ್ಚು ಉದ್ದವಿದ್ದಷ್ಟೂ ಹೆಣ್ಣಿಗೆ ಇಷ್ಟ. ಗಂಡಿನ ಉದ್ದನೆಯ ಬಾಲವನ್ನು ನೋಡಿಯೇ ಹೆಣ್ಣು ಹಕ್ಕಿ ಮೋಹಗೊಳ್ಳುತ್ತದೆ.

ವಲಸಿಗ ಹಕ್ಕಿ:
ಬಾಲದಂಡೆ ಹಕ್ಕಿಗಳಲ್ಲಿ ಪ್ರಮುಖವಾಗಿ 2 ಜಾತಿಗಳಿವೆ. ಒಂದು ಕಡು ನೀಲಿ ತಲೆಯ ನಸುಗೆಂಪು ಬಣ್ಣದ ಹಕ್ಕಿ. ಇನ್ನೊಂದು ಕಪ್ಪು ತಲೆಯ ಸಂಪೂರ್ಣ ಬಿಳಿ  ಮೈಹೊಂದಿರುವ ಹಕ್ಕಿ. ಬಾಲದಂಡೆಯಲ್ಲಿನ ನೀಲಿ ಬಣ್ಣದ ಇನ್ನೊಂದು ಪ್ರಭೇದ ಫಿಲಿಪ್ಪೀನ್ಸ್ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಈ ಹಕ್ಕಿ ರಾಜ ಹಕ್ಕಿ ಎಂದು ಕರೆಸಿಕೊಂಡಿದೆ. ಬಾಲದಂಡೆಗಳಲ್ಲಿ ನಸುಗೆಂಪು ಬಣ್ಣದ ಹಕ್ಕಿ ವಲಸೆಹೋಗುವುದಿಲ್ಲ. ಆದರೆ, ಬಿಳಿ ಬಣ್ಣದ ಪಕ್ಷಿ ಚಳಿಗಾಲದ ಪ್ರಾರಂಭದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಹಿಂತಿರುಗುತ್ತವೆ. ಬಾಲದಂಡೆ ಹಕ್ಕಿಗಳು ಟರ್ಕಿಸ್ತಾನ್, ಮಂಚೂರಿಯಾ, ಶ್ರೀಲಂಕಾ, ಮಲಯಾ, ಕೋರಿಯಾ, ಮಾಲ್ಡೀವ್ಸ್, ಸಿಂಗಾಪುರ ಮತ್ತು ಭಾರತದಾದ್ಯಂತ ಕಂಡುಬರುತ್ತದೆ.


ಏಷ್ಯನ್ ಪ್ಯಾರಡೈಸ್:  ಬರ್ಡ್  ಆಫ್ ಪ್ಯಾರಾಡೈಸ್ ಹಕ್ಕಿಗಳಿಗೂ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ (ಬಾಲದಂಡೆ)ಗಳಿಗೆ ಗುಣ ಮತ್ತು ರೂಪದಲ್ಲಿ ಹಲವಾರು ಸಾಮ್ಯತೆಗಳಿವೆ. ಅವುಗಳಂತೆ ಬಾಲದಂಡೆ ಕೂಡಾ ಆಕರ್ಷಕ ನೃತ್ಯಮಾಡಿ, ಹಾಡನ್ನು ಹಾಡಿ ಹೆಣ್ಣನ್ನು ವಲಿಸಿಕೊಳ್ಳುತ್ತದೆ. ಗೂಡು ಕಟ್ಟುವ ಕ್ರಿಯೆಯಲ್ಲಾಗಲಿ, ಮೊಟ್ಟೆಗಳಿಗೆ ಕಾವುಕೊಟ್ಟು ಮರಿಗಳಿಗೆ ಗುಟುಕು ನೀಡಿ ಬೆಳೆಸುವ ಕಾರ್ಯದಲ್ಲಾಗಲಿ ಸಾಮಾನ್ಯವಾಗಿ ಎರಡೂ ಹಕ್ಕಿಗಳು ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳಯತ್ತವೆ.
ಈ ಹಕ್ಕಿಗಳ ಜೋಡಿಯನ್ನು ಹಸಿರು ಕಾಡುಗಳಲ್ಲಿ ಕಾಣಬಹುದು. ಇವು ರೆಂಬೆಗಳ ಕವಲುಗಳ ನಡುವೆ ಹುಲ್ಲುನಾರನ್ನು ಬಳಸಿ ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಅದರ ಹೊರ ಮೈಗೆ ಜೇಡರ ಬಲೆಯನ್ನು  ಸುತ್ತಿ ಗೂಡನ್ನು ಭದ್ರಪಡಿಸಿಕೊಳ್ಳುತ್ತದೆ. ಫೇಬ್ರವರಿಯಿಂದ ಜುಲೈ ತಿಂಗಳ ಅವಧಿಯಲ್ಲಿ ಕೆಂಪು ಮಿಶ್ರಿತ ಕಂದು ಚುಕ್ಕೆಗಳಿರುವ ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತದೆ.

ಹಾರುವಾಗಲೇ ಬೇಟೆ:
ಬಾಲದಂಡೆ ಹಾರಾಡುವಾಗಲೇ ಹುಳ ಹಪ್ಪಟೆಗಳನ್ನು ಬೇಟೆಯಾಡಿ ಹೊಟ್ಟೆತುಂಬಿಸಿಕೊಳ್ಳುತ್ತದೆ. ಹೀಗಾಗಿ ಇವುಗಳಿಗೆ ಫ್ಲೈಕ್ಯಾಚರ್ ಎನ್ನುವ ಹೆಸರು ಬಂದಿದೆ. ಬಾಲದಂಡೆ ದಿನದಲ್ಲಿ ಹಲವಾರು ಕರೆ, ನದಿಯಲ್ಲಿ ಮುಳುಗಿ ಸ್ನಾನ ಮಾಡಿ ಮೈಯನ್ನು ಕೊಕ್ಕಿನಿಂದ ಸ್ವಚ್ಛಗೊಳಿಸಿಕೊಳ್ಳುತ್ತದೆ. 


 

No comments:

Post a Comment