ಜೀವನಯಾನ

Thursday, September 12, 2013

ಚೀಲದಲ್ಲಿ ಮರಿ ಸಾಕುವ ಕಾಂಗರೂ!

ಕಾಂಗರೂವನ್ನು ನೋಡಿದೊಡನೆ ಕಣ್ಣುಂದೆ ಬರುವುದು, ಹಿಂಗಾಲುಗಳ ಮೇಲೆ ಕುಳಿತ ತಾಯಿ; ಅದರ ಹೊಟ್ಟೆಯ ಮುಂಭಾಗದ ಚೀಲದಲ್ಲಿ ಕುಳಿತ ಮರಿಯ ಚಿತ್ರ. ಹೊಟ್ಟೆಯಲ್ಲಿ ಮರಿ ಸಾಕಣೆಯ ಚೀಲವನ್ನು ಪಡೆದಿದ್ದರಿಂದಲೇ ಕಾಂಗರೂವನ್ನು ಸಂಚಿ ಸ್ತನಿ (ಹೊಟ್ಟೆ ಚೀಲದ ಪ್ರಾಣಿ) ವರ್ಗಕ್ಕೆ ಸೇರಿಸಲಾಗಿದೆ. ಇದು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ಹೀಗಾಗಿ ಆಸ್ಟ್ರೇಲಿಯಾವನ್ನು ಕಾಂಗರೂಗಳ ನಾಡು ಎಂದು ಕರೆಯಲಾಗುತ್ತದೆ. 


  • ವೈವಿಧ್ಯಮಯ ಪ್ರಭೇದ:
ಹೊಟ್ಟೆಯಲ್ಲಿ ಚೀಲವಿರುವ ಕಾಂಗರೂಗಳ ಸುಮಾರು 40ಕ್ಕೂ ಹೆಚ್ಚು ಪ್ರಭೇದಗಳಿವೆ. ಬೆಕ್ಕಿನಷ್ಟೇ ಗಾತ್ರದಿಂದ ಹಿಡಿದು ಬಹು ವೈವಿಧ್ಯ ಗಾತ್ರದ ಕಾಂಗರೂಗಳಿವೆ. ಇವುಗಳಲ್ಲಿ ಕೆಂಪು ಕಾಂಗರೂ ಅತ್ಯಂತ ದೊಡ್ಡ ಗಾತ್ರದ್ದು. ಇವು ಮನುಷ್ಯನಿಗಿಂತ ಎತ್ತರ ಮತ್ತು 85 ಕೆ.ಜಿ.ಯಷ್ಟು ತೂಕವಿರುತ್ತವೆ. ಹೆಣ್ಣು ಕಾಂಗರೂವನ್ನು ಬೂಮರ್, ಗಂಡನ್ನು ಫ್ಲೈಯರ್ ಮತ್ತು ಮರಿಯನ್ನು ಜೋಯಿ ಎಂದು ಕರೆಯಲಾಗುತ್ತದೆ.

  • ಕುಪ್ಪಳಿಸುತ್ತಾ ಸಾಗುವ ಓಟ!
ಕಾಂಗರೂವಿನದ್ದು ವಿಶಿಷ್ಟ ರೀತಿಯ ಓಟ. ಉದ್ದನೆಯ ಶಕ್ತಿಶಾಲಿ ಹಿಂಗಾಲು. ಬಾಲವೂ ಅಷ್ಟೇ ಬಲಿಷ್ಠ. ಮುಂಗಾಲು ಚಿಕ್ಕವು. ಹೀಗಾಗಿ ಇವುಗಳಿಗೆ ವೇಗವಾಗಿ ಓಡಲು ಸಾಧ್ಯವಿಲ್ಲ. ಆದರೆ, ಬರಿ ಹಿಂಗಾಲಿನ ಮೇಲೆಯೇ ಜಿಗಿದು, ಜಿಗಿದು ಓಡುವುದು ಇದರ ಕ್ರಮ. ಆದರೂ, ಹೀಗೆ ಕುಪ್ಪಳಿಸುತ್ತಾ ಓಡಿದರೂ, ಮಂದಗಾಮಿಯೇನಲ್ಲ. ತಾಸಿಗೆ 60 ಕಿ.ಮಿ. ವೇಗದಲ್ಲಿ ಓಡಬಲ್ಲದು. ಹಾದಿಗೆ ಅಡ್ಡಬರುವ 10 ಅಡಿ ಎತ್ತರದ ಬೇಲಿಯಾಗಲೀ, 20 ಅಡಿ ಅಗಲದ ಹಳ್ಳ ಕೊರಕಲುಗಳಾಗಲೀ ಕಾಂಗರೂಗಳಿಗೆ ಲೆಕ್ಕಕ್ಕೇ ಇಲ್ಲ.

  • 5 ವರ್ಷಕ್ಕೆ ಹೊಸ ದಂತಪಂಕ್ತಿ!
ಕಾಂಗರೂ ಶುದ್ಧ ಸಸ್ಯಾಹಾರಿ. ಹುಲ್ಲು ಎಲೆಗಳೇ ಇದರ ಆಹಾರ. ಹೀಗಾಗಿ ಮಧ್ಯ ಆಸ್ಟ್ರೇಲಿಯಾದ ಹುಲ್ಲು ಬಯಲು ಮತ್ತು ಅರೆ ಮರುಭೂಮಿ ಪ್ರದೇಶದಲ್ಲಿ ಇದರ ಪ್ರಧಾನ ವಾಸ್ತವ್ಯ. ನೀರು ಮೇವು ಇಲ್ಲದೆ ಮೂರು-ನಾಲ್ಕುದಿನ ಇರುವ ಸಾಮಥ್ರ್ಯ ಕೂಡ ಇದಕ್ಕಿದೆ. ಹುಲ್ಲು  ಎಲೆ ಸೊಪ್ಪುಗಳನ್ನು ಕೇವಲ ಮುಂದಿನ ಹಲ್ಲುಗಳಲ್ಲೇ ಜಗಿದು ಜಗಿದು ಆ ಹಲ್ಲುಗಳು ನಾಲ್ಕು-ಐದು  ವರ್ಷಗಳಲ್ಲಿ ಸಂಪೂರ್ಣ ಸವೆದುಹೋಗುತ್ತವೆ. ಹಾಗಾದಾಗ ಅವು  ಬಿದ್ದುಹೋಗಿ ಅಲ್ಲೇ ಹೊಸ ಹಲ್ಲುಗಳು ಹುಟ್ಟಿಕೊಳ್ಳುತ್ತವೆ. ಕಾಂಗರೂಗಳ 20-25 ವರ್ಷಗಳ ಜೀವಿತಾವಧಿಯಲ್ಲಿ ನಾಲ್ಕೈದುಬಾರಿ ದಂತಪಕ್ತಿಗಳು ನವೀಕರಣಗೊಳ್ಳುತ್ತವೆ. 

  • ಚೀಲದಲ್ಲಿ ಮರಿ ಸಾಕುವ ತಾಯಿ!
ಕಾಂಗರೂಗಳ ಸಂತಾನ ವಿಧಾನವೇ ಒಂದು ಸೋಜಿಗ. ಕಾಂಗರೂ ಮರಿ ಗರ್ಭದಿಂದ ಹೊರಬಂದಾಗ ಒಂದು ಚಿಕ್ಕ ಹುಳುವಿನಂತಿರುತ್ತದೆ. ಅದರ ಉದ್ದ ಒಂದಂಗುಲಕ್ಕಿಂತ ಕಡಿಮೆ. ತೂಕವಂತೂ ಒಂದೆರಡೇ ಗ್ರಾಂ!  ಕಣ್ಣುಗಳು ಇಲ್ಲದ ಕೇವಲ ಮೊಳಕೆಯಂತಹ ಹಿಂಗಾಲು, ರೋಮರಹಿತ ಬೋಳು ತಲೆ. ಇನ್ನೂ ಭ್ರೂಣದಲ್ಲೇ ಇರುವ ಶರೀರ ಅದರದು. ತಾಯಿಯನ್ನು ಕಿಂಚಿತ್ತೂ ಹೋಲದ ಸ್ವರೂಪ. ಅಲ್ಲಿಂದ ಅದರ ಮುಂದಿನ ಎಲ್ಲ ಬೆಳವಣಿಗೆಗಳೂ ಚೀಲದ ಒಳಗೇ ಜರುಗುತ್ತದೆ. ತಾಯಿಯ ಹಾಲು ಕುಡಿಯುತ್ತಾ ಅಲ್ಲೇ ಉಳಿದು ಆರು ತಿಂಗಳ ಅವಧಿಯಲ್ಲಿ ಪ್ರೌಢವಾಗಿ ಚೀಲದಿಂದ ಹೊರಕ್ಕೆ ಇಣುಕುತ್ತದೆ. ಒಂದು ಮರಿ ಪ್ರೌಢವಾಗಿ ಚೀಲವನ್ನು ತೊರೆದ ಒಂದೆರಡು ದಿನಗಳಲ್ಲೇ ಇನ್ನೊಂದು ಹೊಸ ಮರಿ  ಪ್ರಸವಗೊಂಡು ಚೀಲಕ್ಕೆ ಬಂದು  ಸೇರುತ್ತದೆ. ಕುಡಲೇ ತಾಯಿ ಮತ್ತೆ ಗರ್ಭಧರಿಸುತ್ತದೆ. ಹೀಗೆ ಚೀಲದಿಂದ ಹೊರಗಿದ್ದು ಹಾಲು ಕುಡಿಯುವ ಒಂದು ಮರಿ, ಗರ್ಭದೊಳಗೊಂದು  ಭ್ರೂಣ, ಚೀಲದೊಳಗೊಂದು ಮರಿ. ಈ ರೀತಿ ನಿರಂತರವಾಗಿ ಬೇರೆ ಬೇರೆ ವಯಸ್ಸಿನ ಮೂರು ಮರಿಗಳನ್ನು ಏಕಕಾಲಕ್ಕೆ ಪೋಷಿಸುವ ಅತಿ ವಿಶಿಷ್ಟ ಮಾತೆ ಕಾಂಗರೂ.

ಆಹಾರಕ್ಕಾಗಿ ನಿರಂತರ ಬೇಟೆ:

ಇಂಥ ಅವಿರತ ಸಂತಾನ ವರ್ಧನಾ ಕ್ರಮದಿಂದಾಗಿ ಕಾಂಗರೂಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಪ್ರತಿವರ್ಷ ಚರ್ಮಕ್ಕಾಗಿ ಸಾಕು ಪ್ರಾಣಿಗಳ ಆಹಾರಕ್ಕಾಗಿ ಲಕ್ಷಾಂತರ ಕಾಂಗರೂಗಳನ್ನು ಕೊಲ್ಲಲಾಗುತ್ತಿದೆ. ಇದರಿಂದ ಕಾಂಗರೂಗಳ ಕುಬ್ಜ ಪ್ರಭೇದಗಳು ಮನುಷ್ಯರ ಮತ್ತು ಬೇಟೆಪ್ರಾಣಿಗಳ ದುರಾಕ್ರಮಣದಿಂದ ಅಳಿದು ಹೋಗಿವೆ. ಮತ್ತೂ ಕೆಲವು ಪ್ರಭೇದಗಳು ಅತ್ಯಲ್ಪ ಸಂಖ್ಯೆಗೆ ಇಳಿದಿದೆ.
 

No comments:

Post a Comment