ಸುವಾಸನೆ ಸೂಸುವ ಕಸ್ತೂರಿ ಮೃಗದ ಬಗ್ಗೆ ಕೇಳದವರೇ ಇಲ್ಲ. ಅದೇರೀತಿ ಸುಗಂಧ ಹೊರಸೂಸುವ ಇನ್ನೊಂದು ಪ್ರಾಣಿ ಪುನುಗು ಬೆಕ್ಕು. ಆದರೆ, ನಿಜವಾಗಿಯೂ ಇದು ಬೆಕ್ಕಲ್ಲ. ಬೆಕ್ಕಿನಂತೆ ಕಾಣುವ ಒಂದು ಪ್ರಾಣಿ. ಪುನುಗು ಬೆಕ್ಕು ಎಂದು ಕರೆಯಲ್ಪಡುವ ಈ ವಿಶಿಷ್ಟ ಪ್ರಾಣಿ ಮುಂಗೂಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿ. ಇವು ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದೆ. ಮೈಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ.
ಮೂತ್ರದಲ್ಲಿ ಸುಗಂಧ ದ್ರವ್ಯ!
ಈ ಬೆಕ್ಕಿನ ಜನನಾಂಗದ ಗ್ರಂಥಿಯಿಂದ ಘಮಘಮ ಸುಗಂಧ ದ್ರವ್ಯ ಬಿಡುಗಡೆ ಆಗುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆ ಯುಕ್ತ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುವಾಸನೆ (ಸೆಂಟ್) ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸಯವ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಸುವಾಸನೆ ಯುಕ್ತ ಮೂತ್ರವನ್ನು ತಾನು ವಾಸಿಸುವ ಪ್ರದೇಶದ ಗಡಿಯನ್ನು ಗುರುತಿಸುವ ಸಲುವಾಗಿ ಉಪಯೋಗಿಸುತ್ತದೆ. ಮಾರುಕಟ್ಟೆಯಲ್ಲಿ ಪುನುಗು ಬೆಕ್ಕಿನ ಮೂತ್ರಕ್ಕೆ ವಿಪರೀತ ಬೇಡಿಕೆ ಇದೆ. ಅದೇರೀತಿ ಮೈ ಮೇಲಿನ ಉಣ್ಣೆಗರಿಗಳಿಂದಲೂ ಪುನುಗು ಬೆಕ್ಕು ಹೆಸರುವಾಸಿ.
ಬಿಲದಲ್ಲಿ ವಾಸಿಸುವ ನಿಶಾಚರಿ
ಜನ ವಸತಿಯಿಂದ ಮತ್ತು ಇತರೆ ಪ್ರಾಣಿಗಳ ಸಹವಾಸದಿಂದ ದೂರ ಉಳಿಯಲು ಬಯಸುವ ಈ ಪ್ರಾಣಿ ಅತ್ಯಂತ ಸಂಕೋಚ ಮತ್ತು ನಾಚಿಕೆ ಸ್ವಭಾವದ್ದು. ರಾತ್ರಿಯ ವೇಳೆಯಲ್ಲಿ ಮಾತ್ರ ಆಹಾರ ಹೆಕ್ಕಲು ತೆರಳುವ ಈ ಪುನುಗು, ಬೆಳಗಿನ ವೇಳೆಯಲ್ಲಿ ತನ್ನ ಚಟುವಟಿಕೆಗಳನ್ನು ನಿಷೇಧಿಸಿರುತ್ತದೆ. ಆದರೆ, ರಾತ್ರಿ ಮತ್ತು ಹಗಲಿನಲ್ಲಿಯೂ ಕಣ್ಣು ಸ್ಪಷ್ಟವಾಗಿ ಕಾಣಿಸುತ್ತದೆ. ಇಲಿಗಳ ತರಹ ಬಿಲ ಅಥವಾ ಪೊದೆ, ಕುರುಚಲ ಗಿಡಗಳ ಮಂದೆಯಲ್ಲಿ ವಾಸ ಮಾಡುತ್ತದೆ. ಮಳೆ ಕಾಡುಗಳಲ್ಲಿ ಕುರುಚಲ ಗಿಡಗಳ ಪೊದೆಗಳಲ್ಲಿ ಮತ್ತು ಕಲ್ಲು ಬಂಡೆಗಳ ಕೆಳಗಿನ ಪೊಟರೆಗಳನ್ನು ತನ್ನ ಮನೆಯಾಗಿಸಿಕೊಂಡು ಜೀವನ ಸಾಗಿಸುತ್ತದೆ. ಹೀಗಾಗಿ ಹಿಂದಿ ಭಾಷೆಯಲ್ಲಿ ಇದನ್ನು ಸ್ಮಶಾನ ಚೇಳು ಎಂದು ಕರೆಯಲಾಗುತ್ತದೆ.

ಇವುಗಳನ್ನು ಹಿಡಿದು ತೀವ್ರ ಹಿಂಸೆಗೆ ಒಳಪಡಿಸಿ ಮೂತ್ರದ ಸ್ರಾವ ಹೆಚ್ಚುವಂತೆ ಬಾಹ್ಯ ಒತ್ತಡ ಹೇರಲಾಗುತ್ತದೆ. ಅಲ್ಲದೇ ಇದರ ಉಣ್ಣೆ ಕೂದಲನ್ನು ಪಡೆಯುವ ಸಲುವಾಗಿ ಪುನುಗು ಬೆಕ್ಕನ್ನು ಬೇಟೆಯಾಡಲಾಗುತ್ತದೆ. ಜತೆಗೆ ಇದು ತಿನ್ನುವ ಹಣ್ಣಿನ ಗಿಡಗಳ ನಾಶದಿಂದಾಗಿ ಅಪರರೂಪ ಸಂತತಿಗೆ ಸೇರಿದ ಪುನುಗು ಬೆಕ್ಕು ನಮ್ಮಿಂದ ಕಣ್ಮರೆಯಾಗುವ ಅಪಾಯ ಎದುರಾಗಿದೆ.
ಸ್ವಭಾವ ಮತ್ತು ಲಕ್ಷಣಗಳು:
- ವಿವಿರಿಡೇ ಕುಟುಂಬಕ್ಕೆ ಸೇರಿದ ಪುನುಗಿಗೆ ಇಗ್ಲಿಷ್ನಲ್ಲಿ ಸಿವೆಟ್ ಕ್ಯಾಟ್ (civet cat) ಎಂದು ಕರೆಯಲಾಗುತ್ತದೆ.
- ಪುನುಗು ಬೆಕ್ಕು ಆಫ್ರಿಕ ಮತ್ತು ಏಷಿಯಾ ಖಂಡಗಳಲ್ಲಿ ಕಂಡು ಬರುತ್ತದೆ.
- ಪ್ರಾಯಕ್ಕೆ ಬಂದ ಒಂದು ಪುನುಗು ಬೆಕ್ಕು ಒಂದರಿಂದ ಮೂರು ಪೌಂಡ್ ತೂಕವಿರುತ್ತದೆ.
- ಇದರ ದೇಹ 30 ಇಂಚು, ಬಾಲ 20 ಇಂಚು ಉದ್ದವಾಗಿರುತ್ತದೆ. 15 ಇಂಚಿನಷ್ಟು ಎತ್ತರವಿರುತ್ತದೆ.
ಹಣ್ಣೆಂದರೆ ಪುನುಗು ಬೆಕ್ಕಿಗೆ ತೀರಾ ಇಷ್ಟ. - ಅದರಲ್ಲೂ ಕಾಫಿ ತೋಟದ ಕೆಂಪು ಕಾಫಿ ಹಣ್ಣುಗಳೆಂದರೆ ಅಚ್ಚು ಮೆಚ್ಚು. ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುವ ಪುನುಗು ಬೆಕ್ಕು- ಇಲಿ, ಹಲ್ಲಿ, ಚಿಕ್ಕ ಪಕ್ಷಿಗಳು, ಹಕ್ಕಿಗೂಡಿನ ತತ್ತಿಗಳು ಮತ್ತು ಕೀಟಗಳನ್ನು ಸಹ ತಿನುತ್ತವೆ. ಇವು ಭೂಮಿಯ ಮೇಲೆ ವಾಸಿಸುವುದೇ ಹೆಚ್ಚು.
- ಕುಟುಂಬದಲ್ಲಿ ತಮ್ಮದೇ ಆದ ವಿಶಿಷ್ಟ ಗುಂಪನ್ನು ರಚಿಸಿಕೊಂಡಿರುತ್ತವೆ. ಬಿಸಲು ಈ ಪ್ರಾಣಿಗಳಿಗೆ ಅಷ್ಟಕ್ಕಷ್ಟೆ. ಮೇಲಿಂದ ಮೇಲೆ ನೀರು ಕುಡಿಯುವುದು ಈ ಪ್ರಾಣಿಗಳ ಸ್ವಭಾವ.
ನಮಸ್ಕಾರ, ಲೇಖನ ಮತ್ತು ವಿಷಯ ಸಂಗ್ರಹ ಉತ್ತಮವಾಗಿದೆ. ಬಯಲು ಸೀಮೆಯವನಾದ ನನಗೆ ಇದರ ಜ್ಞಾನವೂ ಇರಲಿಲ್ಲ. ಮತ್ತಷ್ಟು ವಿಚಾರವನ್ನು ಸಂಗ್ರಹ ಮಾಡಿ ಸಾಧ್ಯವಾದರೆ ಪುಸ್ತಕ ರೂಪದಲ್ಲಿ ಪ್ರಕಟಿಸಿ. ಶುಭವಾಗಲಿ
ReplyDeleteನಾನು ಇದನ್ನು ಹತ್ತಿರದಿಂದ ನೋಡಿರುವೆ.. ಆದರೆ ಇದರ ಮೂತ್ರದಲ್ಲಿ ಸುವಾಸನೆಯ ದ್ರವ್ಯ ವಿಸರ್ಜಿಸುವುದಿಲ್ಲ. ಬದಲಾಗಿ ಇದರ ಗುದ ದ್ವಾರಕ್ಕಿಂತ ತುಸು ಮೇಲ್ಭಾಗದಲ್ಲಿರುವ ಒಂದು ವಿಶಿಷ್ಟ ಗ್ರಂಥಿಯಿಂದ ತಿಳಿ ಹಳದಿ ಬಣ್ಣದ ದ್ರವ್ಯವೊಂದನ್ನು ವಿಸರ್ಜಿಸುತ್ತದೆ. ಅದರಿಂದ ಸುವಾಸನೆ ಹೊರಹೊಮ್ಮುತ್ತದೆ..
ReplyDelete