ಜೀವನಯಾನ

Monday, July 16, 2012

ಲಂಡನ್ ಗೋಪುರ ಸೇತುವೆ

ಲಂಡನ್ ಗೋಪುರ ಸೇತುವೆ ಇಂಗ್ಲೆಂಡ್ ನಗರದ ಪ್ರಮುಖ ಹೆಗ್ಗುರುತು. ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸಮತೋಲನದ ತೂಗು ಸೇತುವೆ. ಸಮಭಾಗವಾಗಿ ವಿಭಾಗಿಸಬಹುದಾದ ಜಗತ್ತಿನ ಏಕೈಕ ಸೇತುವೆ ಎನ್ನುವ ಪ್ರಸಿದ್ಧಿ ಪಡೆದಿದೆ. ಈ ಬ್ರಿಡ್ಜ್ ತನ್ನ ಸೌಂದರ್ಯದಿಂದಲೇ ಹೆಸರುವಾಸಿ. ಅದ್ಭುತ ಎನಿಸುವಂತ ಇದರ ಇಂಜನಿಯರಿಂಗ್ ವಿನ್ಯಾಸ. ಈ ಎಲ್ಲಾ ಕಾರಣಕ್ಕಾಗಿ ಈ ಸೇತುವೆ ಲಂಡನ್ ನಗರದ ಮೂರ್ತಿವೆತ್ತ ಲಾಂಛನವಾಗಿ ಕಂಗೊಳಿಸುತ್ತಿದೆ. 

 


ನಿರ್ಮಾಣ ವಿನ್ಯಾಸ:
ಇದು ಲಂಡನ್ ಗೋಪುರಕ್ಕೆ ಸನಿಹ ಇರುವ ಕಾರಣ ಇದಕ್ಕೆ ಗೋಪುರ ಸೇತುವೆ ಎಂಬ ಹೆಸರು ಬಂದಿದೆ. ಆದರೆ ಇದನ್ನೇ ಲಂಡನ್ ಸೇತುವೆ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಈ ಸೇತುವೆಯ ನಿರ್ಮಾಣ ಕಾರ್ಯ 1886ರಲ್ಲಿ ಆರಂಭವಾಗಿ 8 ವರ್ಷಗಳ ಕಾಲ ಮುಂದುವರಿದು 1894ರಲ್ಲಿ ಪೂರ್ಣಗೊಂಡಿತು. 19ನೇ ಶತಮಾನದ ಅಂತ್ಯದ ವೇಳೆಗೆ ವ್ಯಾಪಾರ ಅಭಿವೃದ್ಧಿ ಸಾಧಿಸಿದ್ದ ಇಂಗ್ಲೆಂಡ್ಗೆ ಸಂಪರ್ಕ ಕಲ್ಪಿಸಲು ಇನ್ನೊಂದು ಸೇತುವೆಯ ಅಗತ್ಯ ವಿದ್ದುದರಿಂದ ಗೋಪುರ ಸೇತುವೆ ನಿರ್ಮಿಸಲಾಯಿತು.
 ಆದರೆ ಥೇಮ್ಸ್ ನದಿಯಲ್ಲಿನ ಹಡಗು ಸಂಚಾರಕ್ಕೂ ಅವಕಾಶ ಕಲ್ಪಿಸುವ ಅಗತ್ಯವಿತ್ತು. ಹಿಗಾಗಿ ಎರಡೂ ರೀತಿಯಲ್ಲೂ ಅನುಕೂಲವಾಗುವಂತೆ ಸೇತುವೆಯ ವಿನ್ಯಾಸ ರೂಪಿಸಲಾಯಿತು. ಇದರ ನಿರ್ಮಾಣಕ್ಕೆ ಸುಮಾರು 11 ಸಾವಿರ ಟನ್ನಷ್ಟು ಸ್ಟೀಲ್ ಬಳಸಲಾಗಿದೆ. ಈ ಸೇತುವೆಯ ಎರಡೂ ತುದಿಗಳಲ್ಲಿ ಎರಡು ಗೋಪುರಗಳಿವೆ. ಸೇತುವೆ 244 ಮೀಟರ್ ಉದ್ದವಾಗಿದೆ. ಮೂರು ಭಾಗವಾಗಿ ಈ ಸೇತುವೆಯನ್ನು ವಿಭಾಗಿಸಲಾಗಿದೆ. ಸೇತುವೆಯ ಮೇಲ್ಬಾಗದಲ್ಲಿ ನಡೆದು ಹೋಗಲು ಎರಡು ಸಮಾನಾಂತರ ಕಾಲುದಾರಿಗಳನ್ನು ನಿರ್ಮಿಸಲಾಗಿದೆ.


ಭಾಗಗೊಳ್ಳುವ ಸೇತುವೆ
ಗೋಪುರಗಳ ನಡುವಿನ ಸೇತುವೆಯನ್ನು ಎರಡು ಭಾಗವಾಗಿ ವಿಭಾಗಿಸಲಾಗಿದೆ. ಥೇಮ್ಸ್ ನದಿಯಲ್ಲಿ ದೊಡ್ಡ ಹಡಗುಗಳು ಬಂದಾಗ ಮಧ್ಯದ ಸೇತುವೆಯನ್ನು ಸಮಭಾಗದಲ್ಲಿ ವಿಭಾಗಿಸಿ ಮೇಲಕ್ಕೆ ಏರಿಸಲಾಗುತ್ತದೆ. ಗೋಪುರ ಸೇತುವೆಯನ್ನು 82 ಡಿಗ್ರಿಯಷ್ಟು ಮೇಲೇರಿಸಿ ಹಡಗು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮುಂಚೆಎಲ್ಲಾ ಪ್ರತಿದಿನವೂ ಈ ಸೇತುವೆಯನ್ನು ಮೇಲಕ್ಕೆ ಎತ್ತಲಾಗುತ್ತಿತ್ತು. ಆದರೆ ಇತ್ತೀಚಿಗೆ ಹಡಗು ಸಂಚಾರ ವಿರಳವಾಗಿರುವುದರಿಂದ ವಾರದಲ್ಲಿ ಎರಡುಬಾರಿ ಮಾತ್ರ ಮೇಲಕ್ಕೆ ಎತ್ತಲಾಗುತ್ತಿದೆ. 24 ಗಂಟೆಗಳ ಮೊದಲೇ ಈ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ತಲಾ ಒಂದು ಸಾವಿರ ಟನ್ ತೂಕವಿರುವ ಸೇತುವೆಯ ಎರಡೂ ಕಮಾನುಗಳನ್ನು 5 ನಿಮಿಷದಲ್ಲಿ ಮೇಲಕ್ಕೆ ಎತ್ತಲಾಗುತ್ತದೆ. ಸೇತುವೆಯನ್ನು ಮೇಲಕ್ಕೆ ಎತ್ತಿದಾಗ ಗೋಪುರದ ಮೇಲಿರುವ ಕಾಲುದಾರಿಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಗೋಪುರದ ಮೇಲೆ ನಿಂತು ಇಂಗ್ಲೆಂಡಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಸೇತುವೆಯ ಸೌಂದರ್ಯ ವೀಕ್ಷಿಸಲು ಮತ್ತು ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಇಂಗ್ಲೆಂಡಿಗೆ ಆಗಮಿಸುತ್ತಾರೆ.


ಉಗಿ ಯಂತ್ರಗಳ ಅಳವಡಿಕೆ
ಸೇತುವೆಯನ್ನು ಮೇಲಕ್ಕೆ ಎತ್ತಲು ಪ್ರಾರಂಭದಲ್ಲಿ ಬೃಹತ್ ಹಬೆಯಂತ್ರ ಅಳವಡಿಸಲಾಗಿತ್ತು. 1974ರಲ್ಲಿ ಇದನ್ನು ಬದಲಿಸಿ ವಿದ್ಯುತ್ ಚಾಲಿತ ಮತ್ತು ಇಂಧನ ಬಳಕೆಯ ಹೈಡ್ರಾಲಿಕ್ ಉಗಿಯಂತ್ರ ಅಳವಡಿಸಲಾಗಿದೆ. ಗೋಪುರ ಸೇತುವೆ ಮೇಲೆತ್ತುವ ಯಂತ್ರ ಇಂಜನಿಯರಿಂಗ್ ಚಮತ್ಕಾರಗಳಲ್ಲಿ ಸೇರ್ಪಡೆಗೊಂಡಿದೆ.

ಸೇತುವೆಯ ನವೀಕರಣ:
2008ರಲ್ಲಿ ಸುಮಾರು 4 ದಶಲಕ್ಷ ಪೌಂಡ್ ವೆಚ್ಚದಲ್ಲಿ ಸೇತುವೆಯ ನವೀಕರಣ ಕಾರ್ಯ ಆರಂಭಿಸಲಾಗಿದೆ. 2012ರಲ್ಲಿ ಈ ಕಾರ್ಯಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೇತುವೆಗೆ ಹೊಸದಾಗಿ ಲೋಹದ ಲೇಪನ ಮಾಡಲಾಗುತ್ತಿದೆ.

ಗೋಪುರ ವಸ್ತು ಪ್ರದರ್ಶನ:
ಇಲ್ಲಿ ಬರುವ ಪ್ರವಾಸಿಗರಿಗೆ ಸೇತುವೆಯ ವಿಕ್ಟೋರಿಯಾ ಯಂತ್ರ ಕೊಠಡಿಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಚಲನಚಿತ್ರಗಳು, ಸ್ಥಬ್ದಚಿತ್ರಗಳು, ಮತ್ತು ಗೋಪುರ ವಿನ್ಯಾಸದ ಕುರಿತು ವಿವರಿಸಲಾಗುತ್ತದೆ. 1982ರಲ್ಲಿ ಆರಂಭಗೊಂಡ ಈ ವಸ್ತು ಪ್ರದರ್ಶನ 2007ರಲ್ಲಿ 25 ವರ್ಷ ಪೂರೈಸಿದೆ.

ಬಣ್ಣದ ಸೇತುವೆ
ಸೇತುವೆಯ ಈಗಿರುವ ಕೆಂಪು ಬಿಳಿ ಮತ್ತು ನೀಲಿಬಣ್ಣವನ್ನು ಇಂಗ್ಲೆಂಡ್ ರಾಣಿಯ ರಜತ ಮಹೋತ್ಸವದ ಅಂಗವಾಗಿ 1977ರಲ್ಲಿ ಬಳಿಯಲಾಯಿತು. ಮೂಲತಃ ಇದಕ್ಕೆ ಚಾಕಲೇಟಿನ ಕಂದು ಬಣ್ಣ ಬಳಿಯಲಾಗಿತ್ತು.

ರಸ್ತೆ ಸಂಚಾರ
ಗೋಪುರ ಸೇತುವೆ ಇಂದಿಗೂ ಥೇಮ್ಸ್ ನದಿಯಲ್ಲಿ ಜನನಿಬಿಡ ಮತ್ತು ಮಹತ್ವದ ಹಾದಿಯಾಗಿದೆ. ಈ ಸೇತುವೆಯ ಮೇಲೆ ಪ್ರತಿನಿತ್ಯ ಸುಮಾರು 40 ಸಾವಿರ ವಾಹನಗಳು ಸಂಚರಿಸುತ್ತವೆ.

No comments:

Post a Comment