ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ ಈ ಸುಂದರಬನವನ್ನು ಒಮ್ಮೆಯಾದರೂ ನೋಡಲೇಬೇಕು. ಅಷ್ಟೊಂದು ನಯನ ಮನೋಹರ ಈ ಅರಣ್ಯ! ಸುಂದರ್ಬನ್ಸ್ ಅಥವಾ ಸುಂದರಬನ ವಿಶ್ವದ ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯ ಎನಿಸಿಕೊಂಡಿದೆ. ಇಲ್ಲಿ ಎಲ್ಲಿ ಕಣ್ಣು ಹೊರಳಿಸಿದರೂ ಅಚ್ಚಹಸಿರೇ ಕಾಣಿಸುತ್ತದೆ. ಗಂಗಾ ನದಿ ಸಮುದ್ರವನ್ನು ಸೇರುವ ಮುಖಜ ಭೂಮಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಸುಂದರಬನ ವಿಸ್ತಾರವಾಗಿ ಹರಡಿಕೊಂಡಿದೆ. ಸಾಗರದಂಚಿನಲ್ಲಿ ವ್ಯಾಪಿಸಿರುವ ಸುಂದರಬನದ ಒಟ್ಟು ವಿಸ್ತೀರ್ಣ 10 ಸಾವಿರ ಚದರ ಕಿ.ಮೀ. ಬನದ ಹೆಚ್ಚಿನ ಭಾಗ ಬಾಂಗ್ಲಾದೇಶಕ್ಕೆ ಸೇರಿದ್ದರೆ, ಶೇ.40ರಷ್ಟು ಅರಣ್ಯ ಮಾತ್ರ ಭಾರತದಲ್ಲಿದೆ. ಸುಂದರ್ಬನ್ಸ್ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಸುಂದರಬನದ ಅರ್ಥ ಸುಂದರವಾದ ಕಾಡು ಎಂಬುದಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಸಿಗುವ ಸುಂದರಿ ಮರಗಳಿಂದ ಈ ಹೆಸರು ಬಂದಿದೆ.
ಬಂಗಾಳ ಹುಲಿಗಳ ತವರು:
ಸುಂದರಬನವು ಅತಿ ವಿಸ್ತಾರವಾದ ಕಡಲ್ಗಾಲುವೆಯನ್ನು ಹೊಂದಿದೆ. ಜತೆಗೆ ಬಂಗಾಳ ಹುಲಿಗಳ ತವರು. ಜಿಂಕೆ, ಮೊಸಳೆ, ಉರಗಳು ಮತ್ತು ಹತ್ತುಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ಸುಮಾರು 500 ಹುಲಿಗಳು ಇವೆ ಎಂದು ಅಂದಾಜಿಸಲಾಗಿದೆ. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ ಅನ್ನು ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ ಎಂದು ಗುರುತಿಸಲಾಗಿದೆ.
ಬೋಟ್ನಲ್ಲಿ ಸಫಾರಿ
ಭಾರತದ ಭಾಗದಲ್ಲಿರುವ ಸುಂದರ್ಬನ್ಸ್ ಅರಣ್ಯ 4000 ಚದರ ಕಿ.ಮೀ.ಯಷ್ಟು ವಿಸ್ತಾರವಾಗಿದ್ದು, 54 ಚಿಕ್ಕಪುಟ್ಟ ದ್ವೀಪ ಸಮೂಹಗಳಿವೆ. ಇಲ್ಲಿನ ಮ್ಯಾಂಗ್ರೋವ್ ಅರಣ್ಯಗಳು ಸಮುದ್ರದ ಉಪ್ಪು ನೀರನ್ನು ಹೀರಿಕೊಂಡು ಬೆಳೆಯುತ್ತವೆ. ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಇಲ್ಲಿನ ಅರಸರು ಸುಂದರಬನವನ್ನು ಗುತ್ತಿಗೆ ನೀಡುತ್ತಿದ್ದರು. 1757ರಲ್ಲಿ ಮೊಘಲ್ ಸಾಮ್ರಾಟ ಆಲಂಗೀರನಿಂದ ಈಸ್ಟ್ ಇಂಡಿಯಾ ಕಂಪನಿ ಸುಂದರಬನವನ್ನು ಗುತ್ತಿಗೆ ಪಡೆಯಿತು. ಮುಂದೆ 1860ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅರಣ್ಯ ಇಲಾಖೆ ಸ್ಥಾಪನೆಯಾಗಿ ಸುಂದರಬನದ ವ್ಯವಸ್ಥಿತ ನಿರ್ವಹಣೆ ಸಾಧ್ಯವಾಯಿತು. ಉಳಿದ ಸಫಾರಿಗಳಂತಲ್ಲದೇ, ಬೋಟ್ ಮತ್ತು ಫೆರ್ರಿಗಳ ಮೂಲಕ ಸಫಾರಿಯ ಆನಂದವನ್ನು ಇಲ್ಲಿ ಅನುಭವಿಸಬಹುದು.
ಅತಿದೊಡ್ಡ ನದಿಮುಖಜ ಭೂಮಿ:
ಸುಂದರಬನ ಹಿನ್ನೀರಿನ ಮೀನುಗಾರಿಕೆಗೆ ಪ್ರಸಿದ್ಧವಾಗಿದೆ. ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಮೀನು ಉತ್ಪಾದನೆಯನ್ನು ಮಾಡಲಾಗುತ್ತದೆ. ಭಾರತದ ಅತಿದೊಡ್ಡ ಮೀನು ಉತ್ಪಾದನಾ ಮಂಡಳಿಗಳಲ್ಲಿ ಸುಂದರ್ಬನ್ಸ್ ಕೂಡ ಒಂದಾಗಿದೆ. ಸುಂದರಬನ ವಿಶ್ವದ ಅತಿದೊಡ್ಡ ನದಿ ಮುಖಜಭೂಮಿ ಭೂಮಿ ಕೂಡ ಹೌದು. ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಒಟ್ಟುಗೂಡುವ ಈ ಪ್ರದೇಶ ಬಂಗಾಳ ನಡುಗಡ್ಡೆ ಎಂದು ಹೆಸರಾಗಿದೆ. 1330 ಚದರ ಕಿ.ಮೀ.ಯಷ್ಟು ನದಿ ಮುಖಜಭೂಮಿಯನ್ನು ಈ ಪ್ರದೇಶ ಒಳಗೊಂಡಿದೆ. ಸುಂದರಬನದಲ್ಲಿ 245 ಸಸ್ಯವಂಶಗಳಿಗೆ ಸೇರಿದ 334 ತಳಿಗಳ ಮರಗಳನ್ನು ಗುರುತಿಸಲಾಗಿದೆ. ಸುಂದರಬನವನ್ನು ತೇವಭರಿತ ಉಷ್ಣವಲಯದ ಕಾಡೆಂದು ವrniಸಲಾಗುತ್ತದೆ. ಸುಂದರಬನದಲ್ಲಿ ಪ್ರಾಣಿವೈವಿಧ್ಯ ವ್ಯಾಪಕವಾಗಿದೆ. ಬಂಗಾಳದ ಹುಲಿ ಮತ್ತು ಡಾಲ್ಫಿನ್ಗಳು ಬಲು ಪ್ರಸಿದ್ಧ. ಇಲ್ಲಿ ಹಲವು ವನ್ಯಧಾಮಗಳನ್ನು ರಚಿಸಲಾಗಿದ್ದು, ಬೇಟೆ ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹವನ್ನು ನಿಷೇಧಿಸಲಾಗಿದೆ.
ಛಾಯಾಗ್ರಾಹಕರ ಸ್ವರ್ಗ
ಸುಂದರಬನ ತನ್ನ ಸೌಂದರ್ಯದಿಂದ ಛಾಯಾಗ್ರಾಹಕರ ಸ್ವರ್ಗ ಎನಿಸಿಕೊಂಡಿದೆ. ಹಲವಾರು ವಲಸೆ ಹಕ್ಕಿಗಳಿಗೆ ಸುಂದರ್ಬನ್ಸ್ ಅರಣ್ಯ ಆಶ್ರಯ ತಾಣವಾಗಿದೆ. ಹಳದಿ ದಾಸರಿ ಹಕ್ಕಿ, ವುಡ್ ಸ್ಯಾಂಡ್ಪೈಪರ್, ಯುರೇಷಿಯನ್ ಗೋಲ್ಡ್ ಒರಿಯೋಲ್ ಹಕ್ಕಿಗಳು ಇಲ್ಲಿಗೆ ವಲಸೆ ಬರುತ್ತವೆ. ಅವುಗಳನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯುವುದೇ ಒಂದು ರೋಚಕ ಅನುಭವ. ಸುಂದರಬನದಲ್ಲಿ ಸರೀಸೃಪಗಳು ಹೇರಳ ಸಂಖ್ಯೆಯಲ್ಲಿವೆ. ಹೀಗಾಗಿ ಸುಂದರಬನದಲ್ಲಿ ಓಡಾಡುವಾಗ ಎಚ್ಚರಿಕೆ ಅಗತ್ಯ. ನದಿಯ ದಂಡೆಗಳ ಮೇಲೆ ಮೊಸಳೆಗಳು ಬೇಟೆಗಾಗಿ ಹೊಂಚುಹಾಕುತ್ತಿರುತ್ತವೆ.