ಜೀವನಯಾನ

Tuesday, November 1, 2016

ಮಾಜುಲಿ ಎಂಬ ಜಗತ್ತಿನ ಅತಿದೊಡ್ಡ ನದಿ ದ್ವೀಪ

ಬ್ರಹ್ಮಪುತ್ರ ನದಿ ತನ್ನ ವಿಸ್ತಾರ ಮತ್ತು ಅಗಾಧತೆಗೆ ಹೆಸರು ಪಡೆದಿದೆ. ಇದರ ಒಂದು ದಂಡೆಯಿಂದ ಇನೊಂದು ದಂಡೆಗೆ 15 ಮೈಲಿಗಳ ಅಂತರವಿದೆ. ಈ ವಿಸ್ತಾರವಾದ ನದಿಯಲ್ಲಿ ಸಾವಿರಾರು ದ್ವೀಪಗಳಿವೆ. ಅವುಗಳಲ್ಲಿ ಅಸ್ಸಾಂನಲ್ಲಿರುವ ಮಾಜುಲಿ ಕೂಡ ಒಂದು. ಈ ದ್ವೀಪವು ಜಗತ್ತಿನಲ್ಲಿಯೇ ಅತಿದೊಡ್ಡದಾದ ನದಿ ಮಧ್ಯದ ದ್ವೀಪವಾಗಿದೆ. ಅಲ್ಲದೇ ಇದು ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ ಕೂಡ ಹೌದು. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. 

ಪ್ರವಾಹದಿಂದ ಸೃಷ್ಟಿಯಾದ ದ್ವೀಪ:
ಮಾಜುಲಿ ದ್ವೀಪ ಮೂಲದಲ್ಲಿ 1250 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿತ್ತು. ಆದರೆ ಈಗ ಅದರ ವಿಸ್ತಾರ ಕೇವಲ 500 ಚದರ ಕಿ.ಮಿ.ಗೆ ಇಳಿದಿದೆ. ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿ ನೀರಿನ ದ್ವೀಪ ಎನಿಸಿಕೊಂಡಿದೆ.
ಜೊರ್ಹತ್ ಮಾಜುಲಿಗೆ ಹತ್ತಿರವಾದ ಪ್ರದೇಶ. ಅಲ್ಲಿಂದ ದೋಣಿ ಹಾಗೂ ಫೆರ್ರಿ (ತೆಪ್ಪ)ದ ಮೂಲಕ ಮಾಜುಲಿ ತಲುಪ ಬಹುದಾಗಿದೆ. ಇಲ್ಲಿ ಅನಿವಾಸಿ ಬುಡಕಟ್ಟು ಜನರೇ ಹೆಚ್ಚಾಗಿದ್ದು, ಮಿಶಿಂಗ್, ದೇಯೋರಿ, ಸೋನೋವಾಲ್ ಕಚಾರಿಸ್ ಸಮುದಾಯಗಳನ್ನು ಕಾಣಬಹುದು. ಈ ದ್ವೀಪದಲ್ಲಿ 144 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇದೆ. ಇಲ್ಲಿ ಹಿಂದುಗಳು ಮಾತ್ರ ನೆಲೆಸಿದ್ದಾರೆ ಎನ್ನುವುದು ಕೂಡ ಈ ದ್ವೀಪದ ಇನ್ನೊಂದು ವಿಶೇಷ. 1661-1696 ರಲ್ಲಿ ಸಂಭವಿಸಿದ ಭೀಕರ ಭೂಕಂಪ ಎತ್ತರ ಮತ್ತು ತಗ್ಗು ಪ್ರದೇಶಗಳನ್ನು ನಿರ್ಮಾಣ ಮಾಡಿತ್ತು. ಆ ಬಳಿಕ 1750ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮಾಜುಲಿ ದ್ವೀಪ ಸೃಷ್ಟಿಯಾಯಿತು. ಸುಮಾರು 2 ವಾರಗಳ ಕಾಲ ನಿರಂತರ ಪ್ರವಾಹಕ್ಕೆ ಅಸ್ಸಾಂ ತುತ್ತಾಗಿತ್ತು.

ಪಕ್ಷಿ ಪ್ರಿಯರ ಸ್ವರ್ಗ
ಈ ದ್ವೀಪದಲ್ಲಿ ಅಪಾರವಾದ ಜಲರಾಶಿ ಇರುವುದರಿಂದ ಮತ್ತು ಜೀವ ವೈವಿಧ್ಯ ವ್ಯವಸ್ಥೆಯಿಂದಾಗಿ ಸಸ್ಯ  ಮತ್ತು ಪ್ರಾಣಿ ಸಂಕುಲಗಳು ಅಪಾರ ಪ್ರಮಾಣದಲ್ಲಿವೆ. ಚಳಿಗಾಲದಲ್ಲಿ ವಲಸೆ ಹಕ್ಕಿಗಳಿಗೆ ಮಾಜುಲಿ  ನೆಚ್ಚಿನ ತಾಣ. ಸೈಬೇರಿಯಾದ ವೈಟ್ ಕ್ರೇನ್, ಬಾತುಕೋಳಿ ಮತ್ತು ಪೆಲಿಕಾನ್ ಹಕ್ಕಿಗಳು ಇಲ್ಲಿಗೆ ವಲಸೆ ಕೈಗೊಳ್ಳುತ್ತವೆ. ಈ ಕಾರಣಕ್ಕೆ ಹಕ್ಕಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಮಾಜುಲಿ ಸ್ವರ್ಗ ಎನಿಸಿಕೊಂಡಿದೆ. ಅಕ್ಟೋಬರ್ ಮತ್ತು ಮಾರ್ಚ್ ಮಾಜುಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲ. ದೋಣಿಯಲ್ಲಿ ವಿಹರಿಸುತ್ತಾ ಪರಿಸರ ಸೌಂದರ್ಯವನ್ನು ಸವಿಯಬಹುದು.

ಸಂಸ್ಕೃತಿಯ ತವರು
ಕಲೆ, ಸಂಗೀತ,  ನೃತ್ಯ, ಜ್ಯೋತಿಷ್ಯ ಶಾಸ್ತ್ರ, ಇಲ್ಲಿನ ಜನರ ಪ್ರಮುಖ ಚಟುವಟಿಕೆ. ಇಲ್ಲಿ ದೊಡ್ಡ ದೊಡ್ಡ ದೇವಾಲಯಗಳಿಲ್ಲ, ಚಿನ್ನ ಮತ್ತು ಬೆಳ್ಳಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಸರಳತೆಯೇ ಇಲ್ಲಿನ ಜನರ ವಿಶೇಷತೆ. ಹಿಂದಿನಿಂದ ಅನುಸರಿಸಿಕೊಂಡು ಬಂದ ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮೀನುಗಾರಿಕೆ, ಮತ್ತು ದೋಣಿ ನಡೆಸುವುದು ಇಲ್ಲಿನ ಜನರ ಪ್ರಮುಖ ಉದ್ಯೋಗ.

ಮುಳುಗುತ್ತಿರುವ ದ್ವೀಪ
1853ರಲ್ಲಿ ಮಾಜುಲಿ ದ್ವೀಪ  1,150 ಕಿ.ಮೀ. ವ್ಯಾಪ್ತಿಗೆ ವಿಸ್ತಿರಿಸಿಕೊಂಡಿತ್ತು. 20ನೇ ಶತಮಾನದಲ್ಲಿ ದ್ವೀಪ ಶೇ.33ರಷ್ಟು ಭೂ ಪ್ರದೇಶವನ್ನು ಕಳೆದುಕೊಂಡಿದೆ. 1991ರ ವರೆಗೆ ಸುಮಾರು 35 ಗ್ರಾಮಗಳು ನೀರುಪಾಲಾಗಿವೆ. ಸಮೀಕ್ಷೆಯೊಂದರ ಪ್ರಕಾರ ಮುಂದಿನ 15ರಿಂದ 20 ವರ್ಷಗಳಲ್ಲಿ ದ್ವೀಪ ಪ್ರವಾಹ ಮತ್ತು ತಾಪಮಾನ ಏರಿಕೆಯ ಪರಿಣಾಮವಾಗಿ ದ್ವೀಪ ಸಂಪೂರ್ಣ ಮುಳುಗಿ ಹೋಗುವ ಅಪಾಯ ಎದುರಿಸುತ್ತಿದೆ. 

No comments:

Post a Comment