ಜೀವನಯಾನ

Tuesday, November 1, 2016

ಪರೋಪಕಾರಿ ಕಾಂಡ್ಲಾವನಗಳು

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಮರಿಗಳನ್ನು ಪೋಷಿಸಿ ಬೆಳೆಸುತ್ತವೆ. ಆದರೆ, ಇದು ಕೇವಲ ಪ್ರಾಣಿಗಳಿಗಷ್ಟೇ ಸೀಮಿತವಾಗಿಲ್ಲ. ಸಮುದ್ರದ ಅಂಚಿನಲ್ಲಿ ಬೆಳೆಯುವ ಕಾಂಡ್ಲಾ ಅಥವಾ ಮ್ಯಾಂಗ್ರೋವ್ ಗಿಡಗಳು ಪ್ರಾಣಿ ಮತ್ತು ಜಲಚರಗಳಿಗೆ ಆಶ್ರಯ ನೀಡಿ ಪರೋಪಕಾರಿ ಎನಿಸಿಕೊಂಡಿವೆ. ಇವುಗಳ ಬಲಿಷ್ಠವಾದ ಬೇರುಗಳು ಸಮುದ್ರದ ಅಲೆಗಳಿಗೂ ತಡೆಯೊಡ್ಡಿ ನಿಲ್ಲುತ್ತವೆ. ಹೀಗಾಗಿ ಈ ಸಸ್ಯಕ್ಕೆ ಕಡಲ ತಡಿಯ ರಕ್ಷಕ ಎಂಬ ಬಿರುದು ನೀಡಲಾಗಿದೆ.






ಪರೋಪಕಾರಿ ಗಿಡ
ನದಿ ಇಕ್ಕೆಲಗಳಲ್ಲಿ ಬೆಳೆದು ನಿಲ್ಲುವ ಈ ಕಾಂಡ್ಲಾಗಳ ಬೇರುಗಳು ತುಂಬಾ ಆಳಕ್ಕೆ ಇಳಿಯುತ್ತವೆ. ನೀರಿನಿಂದ ಮೇಲೆ ಹಾಗೂ ನೀರಿನ ಆಳದಲ್ಲಿರುವ ಈ ಬೇರುಗಳ ನಡುವೆ ಜಲಚರಗಳು ಭಾರೀ ಪ್ರಮಾಣದಲ್ಲಿ ಬೀಡುಬಿಟ್ಟಿರುತ್ತವೆ. ಕಾಂಡ್ಲಾವನಗಳು ಹಲವಾರು ಜಾತಿಯ ಪಕ್ಷಿಗಳು ಮತ್ತು ಪ್ರಾಣಿಗಳ ಆಹಾರದ ಮೂಲ. ಈ ಗಿಡಗಳ ಮೇಲೆ ಬಂದು ಕೂರುವ ಹಕ್ಕಿಗಳ ಹಿಕ್ಕೆಗಳು ಜಲಚರಗಳಿಗೆ ಆಹಾರವಾಗುತ್ತವೆ. ಏಡಿ, ಶಿಗಡಿ, ಚಿಪ್ಪು, ಮೀನುಗಳು ಯತೇಚ್ಛವಾಗಿ ಇಲ್ಲಿ ನೆಲೆನಿಂತು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ. ಹಕ್ಕಿಗಳೂ ಅಷ್ಟೆ ತಮ್ಮ ಸಂಸಾರವನ್ನು ಬೆಳೆಸಲು ಕಾಂಡ್ಲಾವನಗಳತ್ತ ವಲಸೆ ಬರುತ್ತವೆ. ಕಾಂಡ್ಲಾ ಗಿಡಗಳು ಅತ್ಯಧಿಕ ಪ್ರಮಾಣದಲ್ಲಿ ಇಂಗಾಲವನ್ನು  ಹೀರಿಕೊಂಡು ವಾತಾವರಣವನ್ನು ತಂಪಾಗಿರಿಸುತ್ತವೆ.

ಉಪ್ಪು- ಸಿಹಿ ನೀರಿನಲ್ಲಿ ಬೆಳೆಯುವ ಸಸ್ಯ
ಈ ಸಸ್ಯದ ವಿಶೇಷತೆಯೆಂದರೆ ಉಪ್ಪು ಮತ್ತು ಸಿಹಿ ನೀರು ಎರಡರಲ್ಲಿಯೂ ಬೆಳೆಯುತ್ತದೆ. ಇವು ಸಮಾನ್ಯವಾಗಿ ಸಮುದ್ರದ ಉಪ್ಪು ನೀರು ಹಾಗೂ ಸಿಹಿ ನೀರು ಒಂದಕ್ಕೊಂದು ಕೂಡುವ ಅಳಿವೆ ಅಥವಾ ಜೌಗು ಪ್ರದೇಶಗಲ್ಲಿ ಹೇರಳವಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಪ್ರಮುಖವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಿನ್ನೀರಿನ ಪ್ರದೇಶದಲ್ಲಿ ಕಾಂಡ್ಲಾವನಗಳನ್ನು ಕಾಣಬಹುದು. ಪಶ್ಚಿಮ ಬಂಗಾಳದ  ಸುಂದರ ಬನದಲ್ಲಿ ವಿವಿಧ ಜಾತಿಯ ಕಾಂಡ್ಲಾ ಸಸ್ಯಗಳಿವೆ. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಹೇರಳವಾಗಿ ಇವುಗಳನ್ನು ಕಾಣಬಹುದು.
 ಇಂತಹ ಪ್ರದೇಶಗಳಲ್ಲಿ ನೀರು ಹಾಗೂ ಮಣ್ಣು ಹೆಚ್ಚಿನ ಉಪ್ಪಿನ ಅಂಶವನ್ನು ಹೊಂದಿದ್ದು, ನೀರಿನ ಉಬ್ಬರ ಇಳಿತದ  ತೀವ್ರ ಹೊಡೆತಕ್ಕೆ ಒಳಪಟ್ಟಿರುತ್ತವೆ. ಹೀಗಾಗಿ ಇಲ್ಲಿ ಇತರ ಯಾವುದೇ ಸಸ್ಯಗಳು ಬೆಳೆಯುವುದಿಲ್ಲ. ಆದರೆ, ಕಾಂಡ್ಲಾಗಳು ತನ್ನ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಎಲ್ಲಾ ಸಸ್ಯ ವರ್ಗಕ್ಕಿಂತ ವಿಶಿಷ್ಟ ಸ್ವರೂಪವನ್ನು ಹೊಂದಿದ ಸ್ವಾವಲಂಬಿ ಸಸ್ಯ. ಇದನ್ನು ಮ್ಯಾಂಗ್ರೋವ್ ಗಿಡ ಎಂತಲೂ ಕರೆಯುತ್ತಾರೆ. 

ಸುನಾಮಿ ಅಲೆಗಳಿಂದ ರಕ್ಷಣೆ
ಕಾಂಡ್ಲಾ ಸಸ್ಯಗಳು ನೀರಿನಲ್ಲಿನ ನೈಟ್ರೇಟ್ ಅಂಶವನ್ನು ಹೀರಿಕೊಂಡು ಬೆಳೆಯುತ್ತವೆ. ನೀರಿನ ಹರಿವು ಇರುವ ಜಾಗದಲ್ಲಿ ಹಿಂಡು ಹಿಂಡಾಗಿ ಬೆಳೆದು ಜೌಗು ಸವೆತವನ್ನು ತಡೆಯುತ್ತವೆ. ಚಂಡಮಾರುತ ಎದ್ದಾಗ, ಸುಂಟರಗಾಳಿ ಬಂದಾಗ, ಸುನಾಮಿ ಏಳುವ ಸಂದರ್ಭದಲ್ಲಿಯೂ ಪ್ರತಿರೋಧ ಒಡ್ಡಿ ಭೀಕರ ಅಲೆಗಳ ವೇಗಕ್ಕೆ ಕಡಿವಾಣ ಹಾಕುತ್ತವೆ. ನದಿ ನೀರಿನಿಂದ ಕೊಚ್ಚಿಹೋಗುವ ಭೂಭಾಗಗಳ ರಕ್ಷಣೆಯಲ್ಲಿ ಕಾಂಡ್ಲಾಗಳ ಪಾತ್ರ ಮಹತ್ವದ್ದು. ತಮಿಳುನಾಡಿನ ಪಿಚ್ಚವರಂನಲ್ಲಿ ಕಾಂಡ್ಲಾಗಿಡಗಳು ಹಳ್ಳಿಗಳನ್ನು ಸುನಾಮಿ ಅಲೆಗಳ ಹೊಡೆತದಿಂದ ರಕ್ಷಿಸಿದ್ದವು.
ಈ ಸಸ್ಯಗಳು ಹೂವು ಹಣ್ಣುಗಳನ್ನು ನೀಡುವುದರಿಂದ ಕಾಂಡ್ಲಾ ಬೆಳೆಯುವ ಪ್ರದೇಶಗಳಲ್ಲಿ ಜೇನುಗಳ ಸಂಖ್ಯೆಯೂ ಅಧಿಕ. ಉರುವಲಿಗೆ, ಇದ್ದಿಲಿಗಾಗಿ, ಹಸಿರು ಸೊಪ್ಪಿಗಾಗಿ ಜನರು ಕಾಂಡ್ಲಾಗಿಡಗಳನ್ನೇ ಆಶ್ರಯಿಸಿದ್ದಾರೆ. ಕಾಂಡ್ಲಾ ಕೇವಲ ಭಾರತ ಮಾತ್ರವಲ್ಲ ಜಗತ್ತಿನ ಸುಮಾರು 118 ದೇಶಗಳಲ್ಲಿ ಕಂಡು ಬರುತ್ತವೆ. ಜುಲೈ 26 ಅನ್ನು ವಿಶ್ವ ಕಾಂಡ್ಲಾ ದಿನವನ್ನಾಗಿ ಆಚರಿಸಲಾಗುತ್ತದೆ.



No comments:

Post a Comment