ಒಂದು ಕಡೆ ಕಡಲು, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಿನ್ನೀರು. ದಂಡೆಗುಂಟ ಕಾಣುವ ತೆಂಗಿನ ಮರಗಳು, ಚಲಿಸುವ ಬೆತ್ತದ ಮನೆಗಳಂತೆ ಭಾಸವಾಗುವ ದೋಣಿಮನೆಗಳು... ಇವು ಪೂರ್ವದ ವೆನಿಸ್ ಅಂತಲೇ ಕರೆಯಲ್ಪಡುವ ಕೇರಳದ ಅಲೆಪ್ಪಿ ಕೊಟ್ಟಾಯಂ ಜಿಲ್ಲೆಗಳಲ್ಲಿನ ಹಿನ್ನೀರಿಗೊಮ್ಮೆ ಭೇಟಿಕೊಟ್ಟರೆ
ಕಂಡುಬರುವ ದೃಶ್ಯಾವಳಿಗಳಿವು.
ದೋಣಿಮನೆಯಲ್ಲಿ ಏನೆಲ್ಲಾ ಇದೆ ಗೊತ್ತಾ?
ಭಾರತದ ತುತ್ತತುದಿಯಲ್ಲಿರುವ ಈ ರಾಜ್ಯ ತನ್ನ ಹಿನ್ನೀರು, ದೋಣಿಮನೆಗಳಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ದೋಣಿಮನೆಯ ಒಳಹೊಕ್ಕರೆ ಬೇರೊಂದು ಪ್ರಪಂಚವೇ ತೆರೆದುಕೊಳ್ಳುತ್ತದೆ. ದೋಣಿಮನೆಗಳಲ್ಲಿ ಐಷಾರಾಮಿ ಸೇವೆ ಸಿಗುತ್ತದೆ. ಅಧ್ಬುತವಾದ ಶಯನಗೃಹಗಳು, ಆಧುನಿಕ ಶೌಚಾಲಯ, ಆಕರ್ಷಕ ಲೀವಿಂಗ್ ರೂಮ್, ಅಡುಗೆ ಮನೆ ಮತ್ತು ಹೊರಗಿನ ದೃಶ್ಯಗಳನ್ನು ಸವಿಯಲು ಬಾಲ್ಕನಿಗಳನ್ನು ಹೊಂದಿರುತ್ತವೆ. ಒಬ್ಬ ಚಾಲಕ ದೋಣಿಯನ್ನು ನಡೆಸುತ್ತಿದ್ದರೆ, ಬಾಣಸಿಗ ಅಡುಗೆ ಮೆನೆಯಲ್ಲಿ ತರಹೇವಾರಿ ಅಡುಗೆ ತಯಾರಿಸಿ ತಂದುಕೊಡುತ್ತಾನೆ. ಎಲ್ಲಾ ದೋಣಿಮನೆಗಳ ಕೊಠಡಿಗಳಿಗೂ ಹವಾನಿಯಂತ್ರಿತ ವ್ಯವಸ್ಥೆ ಸಾಮಾನ್ಯ. ಅಲೆಪ್ಪಿಯಿಂದ ಕೊಲ್ಲಂವರೆಗೆ ಹಿನ್ನೀರಿನಲ್ಲಿ ಪ್ರಯಾಣಿಸುತ್ತಾ ಮೂರುದಿನ ದೋಣಿಮನೆಯಲ್ಲೇ ಕಳೆಯಬಹುದು. 600 ವಿವಿಧ ನಮೂನೆಯ ದೋಣಿಮನೆಗಳು ಇಲ್ಲಿ ಕಾಣಸಿಗುತ್ತವೆ. ಕೇರಳವನ್ನು ಹೊರತುಪಡಿಸಿ ಜಮ್ಮು- ಕಾಶ್ಮೀರದ ದಾಲ್ ಸರೋವರದಲ್ಲಿಯೂ ದೋಣಿಮನೆಗಳ ಸಂಚಾರವನ್ನು ಕಾಣಬಹುದು.
ನಿರ್ಮಾಣದ ಸಾಂಪ್ರದಾಯಿಕ ವಿಧಾನ:
ಸಾಂಪ್ರದಾಯಿಕವಾಗಿ ದೊಣಿಮನೆಗಳನ್ನು ಕೆಟ್ಟುವಲ್ಲಮ್ ಎಂದು ಕರೆಯಲಾಗುತ್ತದೆ. ಕೆಟ್ಟುವಲ್ಲಮ್ಗಳನ್ನು ನಾರಿನ ಗಂಟಿನಿಂದ ಬಂಧಿಸಲಾಗುತ್ತದೆ. ಒಂದೆ ಒಂದು ಕಬ್ಬಿಣದ ಮೊಳೆಯನ್ನೂ ದೋಣಿಯ ನಿಮರ್ಮಾಣಕ್ಕೆ ಬಳಸುವುದಿಲ್ಲ. ದೋಣಿಯನ್ನು ಹಲಸಿನ ಮರದ ಹಲಗೆಗಳನ್ನು ನಾರಿನಿಂದ ಒಟ್ಟಾಗಿ ಸೇರಿಸಿ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಗೇರಿನ ಎಣ್ಣೆಯನ್ನು ಬಳಿಯಲಾಗುತ್ತದೆ. ಎಚ್ಚರಿಕೆಯಿಂದ ನಿರ್ವಹಣೆ ಮಾಡಿದಲ್ಲಿ ಇದನ್ನು ತಲೆಮಾರುಗಳ ಕಾಲ ಬಳಸಬಹುದು.
ದೋಣಿಯ ಒಂದು ಭಾಗವನ್ನು ಬಿದಿರು ಹಾಗೂ ನಾರಿನಿಂದ ಹೊದಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ದೋಣಿಯು ದೊಡ್ಡದಾಗಿದ್ದು, ಬಿಡುಬಿನ ಪ್ರಯಾಣಕ್ಕಾಗಿ ನಿಧಾನ ಚಲಿಸುವ ಹಾಯಿಗಳನ್ನು ಬಳಸಲಾಗುತ್ತದೆ. ಹೆಚ್ಚಿನ ದೋಣಿಗಳು 40 ಎಚ್.ಪಿ. ಎಂಜಿನ್ನ ಶಕ್ತಿಯನ್ನು ಹೊಂದಿವೆ. ಎರಡು ಅಥವಾ ಹೆಚ್ಚು ದೋಣಿಗಳನ್ನು ಸೇರಿಸಿ ಮಾಡಿದ ದೋಣಿ ಟ್ರೈನ್ಗಳನ್ನು ಸಹ ಪ್ರವಾಸಿಗರ ದೊಡ್ಡಗುಂಪಿದ್ದಾಗ ಬಳಸಲಾಗುತ್ತದೆ. ಮೂಲದಲ್ಲಿ ಕೆಟ್ಟುವೆಲ್ಲಮ್ಗಳ್ನು ಟನ್ಗಟ್ಟಲೆ ಅಕ್ಕಿ ಮತ್ತು ಮಸಾಲೆಗಳನ್ನು ತರಲು ಬಳಸಲಾಗುತ್ತಿತ್ತು. ದೊಡ್ಡದಾದ ಒಂದು ದೋಣಿಮನೆ ಕಟ್ಟನಾಡಿನಿಂದ ಕೊಚ್ಚಿಬಂದರಿಗೆ ಸುಮಾರು 30 ಟನ್ ಸರಕನ್ನು ತರುತ್ತಿತ್ತು.
ಒಂದು ದಿನದ ಪ್ರಯಾಣಕ್ಕೆ 10 ಸಾವಿರ ರೂ.
ಶತಮಾನಗಳ ಹಿಂದೆ ಕೇರಳದ ರಾಜರು ಮತ್ತು ವ್ಯಾಪಾರಿಗಳು ಸಾರಿಗೆ ಸೇವೆಗೆ ದೋಣಿ ಮನೆಗಳನ್ನೇ ಅವಲಂಬಿಸಿದ್ದರು. ಈಗ ಇದು ಪ್ರವಾಸೋದ್ಯಮವಾಗಿ ಮಾರ್ಪಟ್ಟಿದೆ. ಹಿನ್ನೀರ ದಂಡೆಯ ಸಣ್ಣ ಹಳ್ಳಿಗಳ ಜನಜೀವನ, ಸಂಸ್ಕೃತಿ, ಸಂಚಾರ ವ್ಯವಸ್ಥೆ ಕೃಷಿ ಪದ್ಧತಿಯ ದರ್ಶನವೂ ಈ ನೀರಯಾನದಲ್ಲಿ ಆಗುತ್ತದೆ. ಐಷಾರಾಮಿ ದೋಣಿಮನೆಗಳ ನಿರ್ಮಾಣಕ್ಕೆ ಲಕ್ಷದಿಂದ ಕೋಟಿಗಟ್ಟಲೆ ಬಂಡವಾಳ ಬೇಕಾಗುತ್ತದೆ. ಕೇರಳದಲ್ಲಿ 1,200 ದೋಣಿಮನೆಗಳಿವೆ. ಇದರಲ್ಲಿ ವಿಹರಿಸಲು ಡಿಸೆಂಬರ್ನಿಂದ ಮಾರ್ಚ್ ಅವಧಿಯಲ್ಲಿ ವಿದೇಶಿಗರ ದಂಡೇ ಹರಿದುಬರುತ್ತದೆ. ಅಂದಹಾಗೆ ಒಂದು ಕೊಠಡಿಯ ದೋಣಿಮನೆಯಲ್ಲಿ ಒಂದು ದಿನ ವಿಹರಿಸಬೇಕೆಂದರೆ 10 ರಿಂದ 20 ಸಾವಿರ ರೂ. ನೀಡಬೇಕು. ದೋಣಿ ಮನೆಗಳಿಂದ ಕೇರಳ ಗಳಿಸುವ ವಾಷರ್ಿಕ ವರಮಾನ 164 ಕೋಟಿ ರೂ. ಅದರಲ್ಲಿ 120 ಕೋಟಿ ರೂ. ವರಮಾನ ಅಲೆಪ್ಪಿಯ ದೋಣಿ ಮೆನಗಳಿಂದಲೇ ಬರುತ್ತವೆ.
No comments:
Post a Comment