ಅಲ್ಲಿ ಮೈಕೊರೆಯುವ -50 ಡಿಗ್ರಿ ತಾಪಮಾನ. ಸಮುದ್ರ ಮಟ್ಟದಿಂದ 18,875 ಅಡಿ ಎತ್ತರ. ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ. ಕೊಂಚ ಇತ್ತ ಸರಿದರೆ ಪಾಕಿಸ್ತಾನ, ಚೀನಾದ ಗಡಿ. ಈ ಪುಟ್ಟ ಭೂಮಿಯನ್ನು ಭಾರತೀಯ ಯೋಧರು ಪ್ರಾಣ ಒತ್ತೆಇಟ್ಟು ಕಾಯುತ್ತಿದ್ದಾರೆ. ಅದೇ ರೌದ್ರ ಸೌಂದರ್ಯದ ಸಿಯಾಚಿನ್ ನೀರ್ಗಲ್ಲು.
ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಯಲ್ಲಿ ಇರುವ ಸಿಯಾಚಿನ್, ಪರ್ವತಾರೋಹಿಗಳ ನೆಚ್ಚಿನ ತಾಣವೂ ಹೌದು. ಈ ಸುಂದರ ಜಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತ್ತು. ಆದರೆ, 1984ರಲ್ಲಿ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತ ಬಿಡಿಸಿಕೊಂಡಿತ್ತು. ಸಿಯಾಚಿನ್ ಅಂದರೆ ಕಾಡು ಗುಲಾಬಿಗಳು ಇರುವ ಸ್ಥಳ ಎಂದರ್ಥ. ಇಲ್ಲಿ ಗುಲಾಬಿ ಮಾತಿರಲಿ ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತನೋಡಿದರೂ ಕಣ್ಣಿಗೆ ರಾಚುವ ಹಿಮ. ಅದು ಅಷ್ಟೇ ಭೀಕರ. ಅಲ್ಲಿ ಮದ್ದುಗುಂಡಿಗಿಂತ ಹೆಚ್ಚಾಗಿ ಸೈನಿಕರು ಸಾಯುವುದು ವಾತಾವರಣದ ವೈಪರೀತ್ಯದಿಂದಾಗಿ. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಪಾತದ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಇದೀಗ ಸೈನಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದ್ದು, ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಲಿ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್ ಮೂಲಕವೇ ತಲುಪಿಸಬೇಕಾಗುತ್ತದೆ. ಸಕರ್ಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ 10 ಲಕ್ಷದಿಂದ 2 ಕೋಟಿ ರೂ. ವರೆಗೂ ವೆಚ್ಚ ತಗುಲುತ್ತದೆ.
1984ರ ಯುದ್ಧ:
ಸಿಯಾಚಿನ್ ಪ್ರದೇಶಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ 1984ರಲ್ಲಿ ಯುದ್ಧ ನಡೆದಿತ್ತು. ಅದು ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿಯಲ್ಲಿ ನಡೆದ ಕಾಳಗವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಸೈನಿಕರು ಸಿಯಾಚಿನ್ ಅನ್ನು ಏರಿ ಪರಸ್ಪರ ಕಾದಾಡಿದ್ದರು. ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತ ಆಪರೇಷನ್ ಮೇಘದೂತ ಕಾಯರ್ಾಚರಣೆಯನ್ನು ನಡೆಸಿತ್ತು. ಇದರ ಪರಿಣಾಮ ಭಾರತಕ್ಕೆ ಸಿಯಾಚಿನ್ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಸಿಯಾಚಿನ್ನಲ್ಲಿ ಯೋಧರನ್ನು ಹಿಂಪಡೆದುಕೊಳ್ಳುವುದುಕ್ಕೆ ಭಾರತ ಒಪ್ಪಿದೆ. ಆದರೆ, ಪಾಕಿಸ್ತಾನ ಪದೇ ಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಬಂದಿರುವುದರಿಂದ ಅದು ಸಾಧ್ಯವಾಗಿಲ್ಲ. ಸಿಯಾಚಿನ್ನಲ್ಲಿ ಇತ್ತೀಚಿನ ದಿನಗಳಲ್ಲಿ ಚಾರಣಕ್ಕೂ ಅವಕಾಶ ನೀಡಲಾಗಿದೆ. ಸಾಹಸಪ್ರಿಯರು ಪರ್ವತಾರೋಹಣ ಕೈಗೊಳ್ಳಬಹುದು. ಆದರೆ, ಗುಂಡಿಗೆ ಗಟ್ಟಿ ಇರಬೇಕಷ್ಟೆ.
ಸಿಂಧು ನದಿಗೆ ನೀರಿನ ಮೂಲ
ಸಿಯಾಚಿನ್ನಲ್ಲಿ ಶೇಖರವಾಗಿರುವ ನೀರ್ಗಲ್ಲು ಅಥವಾ ಹಿಮ ನದಿ ಕರಗಿ ಲಡಾಖ್ ಪ್ರದೇಶದಲ್ಲಿ ಹರಿಯುವ ನುಬ್ರಾ ನದಿಗೆ ನೀರನ್ನು ಒದಗಿಸುತ್ತದೆ. ಅದು ಶೋಕ್ ನದಿಯ ಕಾಲುವೆ ಮೂಲಕ 3000 ಕಿ.ಮೀ. ಉದ್ದದ ಸಿಂಧು ನದಿಯನ್ನು ಹೋಗಿ ಸೇರುತ್ತದೆ. ಹೀಗಾಗಿ ಸಿಂಧು ನದಿಗೆ ಸಿಯಾಚಿನ್ ಪ್ರಮುಖ ನೀರಿನ ಮೂಲ.
ಕರಗುತ್ತಿರುವ ನೀರ್ಗಲ್ಲು
ಇಂಥ ಅದ್ಭುತವಾದ ನೀರ್ಗಲ್ಲು ಅಪಾಯಕಾರಿಯಾದ ರೀತಿಯಲ್ಲಿ ಕರಗುತ್ತಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ. ಸೆಟಲೈಟ್ ಆಧಾರಿತ ಚಿತ್ರದಲ್ಲಿ ನೀರ್ಗಲ್ಲು ವರ್ಷಕ್ಕೆ 110 ಮೀಟರ್ನಷ್ಟು ಕ್ಷೀಣಿಸುತ್ತಿರುವುದು ಕಂಡು ಬಂದಿದೆ. ಅಂದರೆ ನೀರ್ಗಲ್ಲಿನ ಎತ್ತರ ಶೇ.35ರಷ್ಟು ಇಳಿಕೆಯಾಗಿದೆಯಂತೆ. ಇದರ ಪ್ರಮಾಣ ಹೀಗೆಯೇ ಮುಂದುವರಿದರೆ ಇನ್ನು 10 ವರ್ಷದಲ್ಲಿ ನೀರ್ಗಲ್ಲು 800 ಮೀಟರ್ನಷ್ಟು ಕರಗಿ ಹೋಗುವ ಅಪಾಯವಿದೆ. ಇನ್ನೊಂದು ಕಳವಳಕಾರಿ ಅಂಶವೆಂದರೆ ಪರ್ವತಾರೋಹಿಗಳು ಅಮೋನಿಯಂ ಶೆಲ್ಗಳು, ಪ್ಯಾರಾಚೂಟ್ಗಳನ್ನು ನೀರ್ಗಲ್ಲಿನಲ್ಲಿಯೇ ಎಸೆದುಬರುತ್ತಾರೆ. ಇದರಿಂದ ಅಲ್ಲಿ ಅಪಾರ ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ಅಲ್ಲದೇ ಯೋಧರು ಅಲ್ಲಿ ಕಾವಲು ಕಾಯುವುದರಿಂದ, ಆಗಾಗ ಗುಂಡಿನ ಕಾಳಗ ನಡೆಯುವುದರಿಂದ ಅಪರೂಪದ ಸಸ್ಯ ಮತ್ತು ಜೀವ ಸಂಕುಲಕ್ಕೆ ಧಕ್ಕೆ ಉಂಟಾಗಿದೆ.
No comments:
Post a Comment