ಜೀವನಯಾನ

Monday, November 26, 2012

ಮುಳ್ಳಂದಿಯ ಬಾಣ ಪ್ರಯೋಗ

ಇದರ ಹೆಸರೇ ಸೂಚಿಸುಂತೆ ಮೈಯಲ್ಲಾ ಮುಳ್ಳಿನದ್ದೇ ಹೊದಿಕೆ. ಮುಳ್ಳಿನ ಗರಿಗಳೇ ಇದರ ಪ್ರಮುಖ ಆಯುಧ. ಮುಳ್ಳುಹಂದಿ ಮೈ ಮೇಲೆ ಸುಮಾರು 30 ಸಾವಿರ ಮುಳ್ಳಿನ ಗರಿಗಳನ್ನು ಹೊಂದಿರುತ್ತದೆ.  ಮುಳ್ಳಿನ ಗರಿಗಳನ್ನು ಆಡು ಭಾಷೆಯಲ್ಲಿ ಅಂಬು ಎಂದು ಕರೆಯಲಾಗುತ್ತದೆ. ಇದು ಹಂದಿಯ ಸಂತತಿಗೆ ಸೇರಿದ ವಿಶಿಷ್ಟ ಪ್ರಾಣಿ. ತನ್ನ ತಂಟೆಗೆ ಬರುವವರಿಗೆ ಮುಳ್ಳಿನ ಅಂಬಿನ ಮೂಲಕವೇ ಉತ್ತರ ಕೊಡುತ್ತದೆ. ಹೀಗಾಗಿ ಯಾವ ಪ್ರಾಣಿಯೂ ಇದರ ಹತ್ತಿರವೂ ಸುಳಿಯುವುದಿಲ್ಲ. ಆದರೆ ಇದರ ಅಂಬು ಅಥವಾ ಬಾಣಗಳು ವಿಷಕಾರಿಯಲ್ಲ. 



ನಿಶಾಚರಿ: ಕಾಡಿನಲ್ಲಿ ಇವು ಓಡುವಾಗ ಅಲ್ಲಲ್ಲಿ ಮುಳ್ಳಂದಿಯ ಅಂಬುಗಳು ಬಿದ್ದಿರುತ್ತವೆ. ರಾತ್ರಿಯ ವೇಳೆ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ಹಗಲಿನ ವೇಳೆ ಮಣ್ಣಿನ ಬಿಲದೊಳಗೆ ನಿದ್ರಿಸಿರುತ್ತವೆ. ಆಹಾರ ಹುಡುಕುವ ಸಲುವಾಗಿ ಮಾತ್ರ ಹೊರಗಡೆ ಬರುತ್ತದೆ. ಹೀಗಾಗಿ ಇವು ಕಾಣಸಿಗುವುದು ಅಪರೂಪ.
 
ವೈರಿಗಳ ಮೇಲೆ ಬಾಣ ಪ್ರಯೋಗ:ತನಗೆ ಅಪಾಯ ಎದುರಾಗಿದೆ ಎಂದು ಗೊತ್ತಾದಾಗ ಮುಳ್ಳಿನ ಗರಿಗಳನ್ನು ಮೇಲಕ್ಕೆ ಎತ್ತಿ ಅಂಬುಗಳನ್ನು ಬಿಡುವ ಮುನ್ಸೂಚನೆ ರವಾನಿಸುತ್ತದೆ. ಇದರ ಹೊರತಾಗಿಯೂ ಕೆಣಕಲು ಬರುವವರಿಗೆ ಒಂದರ ಹಿಂದೆ ಒಂದು ಬಾಣ ಬಿಟ್ಟು ಕುಳುಹಿಸುತ್ತಿದೆ.  ಸಾಮಾನ್ಯವಾಗಿ ಇದರ ತಂಟೆಗೆ ಬರುವ ನಾಯಿಗಳು ಮುಳ್ಳಂದಿಯ ಅಂಬಿನಿಂದ ಹೊಡೆತ ತಿನ್ನುತ್ತವೆ. ಒಮ್ಮೆ ಅಂಬಿನಿಂದ ಚುಚ್ಚಿಸಿಕೊಂಡ ಪ್ರಾಣಿ ಮತ್ತೆ ಇದರ ತಂಟೆಗೆ ಬರುವುದಿಲ್ಲ. ಮುಳ್ಳಂದಿಯ ಮುಳ್ಳು ಚುಚ್ಚಿದರೆ ಕೀಳುವುದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ಚುಚ್ಚಿದ ಮುಳ್ಳು ಮತ್ತಷ್ಟು ದೇಹದ ಆಳಕ್ಕೆ ಹೋಗುತ್ತಲೇ ಇರುತ್ತದೆ. ಹುಲಿ, ಸಿಂಹ ಮುಂತಾದ ಬಲಶಾಲಿ ಪ್ರಾಣಿಗಳೂ ಇದರಿಂದ ಅಂಬು ಚುಚ್ಚಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನಾಗುತ್ತವೆ. 

ಮುಳ್ಳು ಖಾಲಿಯಾಗುವುದೇ ಇಲ್ಲ.
ಜಗತ್ತಿನಾದ್ಯಂತ ಮುಳ್ಳಂದಿಯ ಸುಮಾರು 29 ಪ್ರಭೇದಗಳಿವೆ. ಭಾರತದಲ್ಲಿಯೂ ಇದರ ಸಂತತಿಯನ್ನು ಕಾಣಬಹುದು. ಮುಳ್ಳಂದಿ ಸುಮಾರು 25ರಿಂದ 36 ಇಂಚು ದೊಡ್ಡದಾಗಿರುತ್ತದೆ. 8ರಿಂದ 10 ಇಂಚು ದೊಡ್ಡ ಬಾಲ ಹೊಂದಿರುತ್ತದೆ. ಇತರ ಪ್ರಾಣಿಗಳಿಂದ ಅಪಾಯ  ಎದುರಾದಾಗ ಇವು ಮೈಯನ್ನು ಕುಲುಕಿಸಿ ಅಂಬನ್ನು ಹೊರಹಾಕುತ್ತವೆ. ಆದರೆ ತಾನಾಗಿಯೇ ಯಾರ ಮೇಲೂ ಬಾಣ ಪ್ರಯೋಗಿಸಲು ಹೋಗುವುದಿಲ್ಲ. ದಾಳಿಯಿಂದ ಉದುರಿದ ಅಂಬಿನ ಜಾಗದಲ್ಲಿ ಮತ್ತೊಂದು ಅಂಬು ಹೊಟ್ಟಿಕೊಳ್ಳುತ್ತದೆ. ಹೀಗಾಗಿ ಇದರ ಮೈ ಮೇಲಿನ ಮುಳ್ಳು ಖಾಲಿಯಾಗುವುದೇ ಇಲ್ಲ. ಮುಳ್ಳು ಒಳಗಡೆ ಪೊಳ್ಳಾಗಿದ್ದು, ಗಾಳಿ ತುಂಬಿರುತ್ತದೆ. ತಿದಿಯ ಭಾಗದಲ್ಲಿ ಅತ್ಯಂತ ಹರಿತವಾಗಿರುತ್ತದೆ. ಒಂದು ಅಡಿಯಷ್ಟು ಉದ್ದದ ಮುಳ್ಳಿನ ಅಂಬನ್ನು ಹೊಂದಿರುತ್ತದೆ. ಮುಳ್ಳಿನ ಅಂಬು ಪೊಳ್ಳಾಗಿದ್ದರಿಂದ ನೀರಿನ ಮೇಲೂ ಸಹ ಸಲೀಸಾಗಿ ಚಲಿಸಬಲ್ಲದು.

ಹಂದಿಯಂತೆ ಗೆಣಸು ಕೀಳುತ್ತೆ!

ಇವು ದೊಡ್ಡ ಹಂದಿಗಳಂತೆ ಎಲೆ, ಕಾಂಡ, ತೊಗಟೆ, ಗಡ್ಡೆ, ಗೆಣಸುಗಳನ್ನು ತಿಂದು ಬದುಕುವ ಸಸ್ಯಾಹಾರಿಗಳು. ಮುಳ್ಳಂದಿಗೆ ಹುಟ್ಟುವಾಗಲೇ ಮುಳ್ಳಿನ ಗರಿಗಳು ಇರುವುದಿಲ್ಲ. ಹುಟ್ಟಿದ ಒಂದೆರಡು ದಿನಗಳ ಬಳಿಕ ಮೆತ್ತಗಿನ ಮುಳ್ಳುಗಳು ಹುಟ್ಟಿಕೊಂಡು ಕ್ರಮೇಣ ಗಟ್ಟಿಯಾಗುತ್ತದೆ. ಕಾಲಿನಿಂದ ತಾನಿರುವ ಜಾಗವನ್ನು ಕೆದಕುವುದು ಇರದ ಹವ್ಯಾಸ. ಇದು ಕೆದಕಿದ ಜಾಗದಲ್ಲಿ ಮುಳ್ಳುಗಳನ್ನು ಉದುರಿಸುತ್ತದೆ. ಮುಳ್ಳಂದಿ ಸುಮಾರು 18 ವರ್ಷಗಳ ಜೀವಿತಾವಧಿ ಹೊಂದಿದೆ. ಮುಳ್ಳುಗಳು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಕಂಡುಬರುತ್ತದೆ. ಕೊಂಬಿನ ಕೊಬ್ಬಿನಿಂದ ಇವು ಮಾಡಲ್ಲಟ್ಟಿದೆ.

ಮಳ್ಳಿನ ಬಳಕೆಯೂ ಉಂಟು

ಹಿಂದಿನ ಕಾಲದಲ್ಲಿ ಮುಳ್ಳಂದಿಯ ಅಂಬುಗಳನ್ನು ಬಟ್ಟೆಗಳ ಅಲಂಕಾರ, ಬಾಚಣಿಕೆ, ಮತ್ತು ತಲೆಯ ಅಲಂಕಾರಕ್ಕಾಗಿ ಬಳಸುತ್ತಿದ್ದರು. ಈಗಲೂ ಇದನ್ನ ಸಂಗ್ರಹಿಸುವ ಹವ್ಯಾಸವಿದೆ.

Tuesday, November 13, 2012

ಹೆಲಿಕಾಪ್ಟರ್ ಚಿಟ್ಟೆ

ಡ್ರ್ಯಾಗನ್ ಫ್ಲೈ ಆಕಾಶದಲ್ಲಿ ಹಾರುತ್ತಿದ್ದರೆ ಹೆಲಿಕಾಪ್ಟರನ್ನೇ ನೋಡಿದ ಅನುಭವ. ಗಾಳಿಯಲ್ಲಿ ನಿಂತು ಸರ್ಕಸ್ ಮಾಡುವ ಇದರ ದೇಹ ರಚನೆ, ತಲೆ, ರೆಕ್ಕೆ, ಬಾಲ ಹೀಗೆ ಎಲ್ಲವೂ ಹೆಲಿಕಾಪ್ಟರನ್ನೇ ಹೋಲುತ್ತದೆ. ಇಂಜಿನಿಯರ್ಗಳು ಏರೋಪ್ಲೇನ್, ಹೆಲಿಕಾಪ್ಟರ್ ಮುಂತಾದ ಲೋಹದ ಹಕ್ಕಿಗಳನ್ನು ಕಂಡುಹಿಡಿಯಲೂ ಡ್ರ್ಯಾಗನ್ ಫ್ಲೈ ಪ್ರೇರಣೆ ಎನ್ನುವ ಮಾತಿದೆ. ಹೀಗಾಗಿ ಇದನ್ನು ಏರೋಪ್ಲೇನ್ ಚಿಟ್ಟೆ ಎಂತಲೂ ಕರೆಯುತ್ತಾರೆ.


ಡ್ರ್ಯಾಗನ್ ಫ್ಲೈ ರೆಕ್ಕೆ ಇರುವ ಮೋದಲ ಕೀಟ ಎಂದು ತಿಳಿಯಲಾಗಿದ್ದು, ಸುಮಾರು 300 ದಶಲಕ್ಷ ವರ್ಷಗಳ ಹಿಂದೆಯೇ ಇವುಗಳ ಇರುವಿಕೆ ಗುರುತಿಸಲಾಗಿದೆ. ಆಮ್ಲಜನಕದ ಪ್ರಮಾಣ ಹೆಚ್ಚಾಗಿದ್ದ ಶಿಲಾಯುಗದ ಕಾಲದಲ್ಲಿ ದೊಡ್ಡ ಗಾತ್ರದ ಡ್ರ್ಯಾಗನ್ ಫ್ಲೈಗಳು ಇದ್ದವು ಎಂದು ವಿಜ್ಞಾನಿಗಳ ಊಹೆ. ಡ್ರ್ಯಾಗನ್ ಫ್ಲೈಗಳಲ್ಲಿ ಸುಮಾರು 5 ಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 5  ನೂರಕ್ಕೂ ಹೆಚ್ಚು ಪ್ರಕಾರಗಳು  ಭಾರತದಲ್ಲಿವೆ. ಇವುಗಳ ಜೀವಿತಾವಧಿ ತುಂಬಾ ಕಡಿಮೆ. ಒಂದು ತಿಂಗಳು ಅಥವಾ ಅದಕ್ಕಿಂತಲೂ ಕಡಿಮೆ ಜೀವಿತಾವಧಿ ಹೊಂದಿರುತ್ತದೆ. ಕೆಲವು ಜಾತಿಯ ಡ್ರ್ಯಾಗನ್ ಫ್ಲೈ ಅರ್ಧ ವರ್ಷಗಳ ತನಕ ಬದುಕಬಲ್ಲದು. ಇವು ಕೂರುವುದಕ್ಕಿಂತ ಬಾನಿನಲ್ಲಿರುವುದೇ ಹೆಚ್ಚು. ವಿಮಾನದಂತೆ ತನ್ನ ರೆಕ್ಕೆಯನ್ನು ಅಗಲವಾಗಿಟ್ಟುಕೊಂಡಿರುವುದರಿಂದ ಇದಕ್ಕೆ ಏರೋಪ್ಲೇನ್ ಚಿಟ್ಟೆಯೆಂಬ ಹೆಸರು ಬಂದಿರಬೇಕು.

ಗಾಳಿಯಲ್ಲಿ ನಿಂತು ಬೇಟೆ:

ಡ್ರ್ಯಾಗನ್ ಫ್ಲೈ ಹಾರುವುದರಲ್ಲಿ ವಿಶೇಷ ಪರಿಣತಿ ಪಡೆದಿವೆ. ಡ್ರ್ಯಾಗನ್ ಫ್ಲೈಗೆ ತೆಳ್ಳಗಿನ ನಾಲ್ಕು ರೆಕ್ಕೆಗಳಿರುತ್ತವೆ. ಕೀಟಗಳಲ್ಲಿಯೇ ಅತ್ಯಂತ ವೇಗವಾಗಿ ಇದು ಹಾರಬಲ್ಲದು. ಹಾರುವಾಗ ಗಂಟೆಗೆ 60 ಮೈಲಿ ವೇಗವನ್ನು ಡ್ರ್ಯಾಗನ್ ಫ್ಲೈ ತಲುಪುತ್ತದೆ.  ಗಾಳಿಯಲ್ಲಿರುವಾಗ ಮೇಲೆ, ಕೆಳಗೆ, ಹಿಂದೆ, ಮುಂದೆ, ಉಲ್ಟಾ ಪಲ್ಟಾ ಹೇಗೆ ಬೇಕಾದರೂ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಡ್ರ್ಯಾಗನ್ ಫ್ಲೈಗಿದೆ. ಗಾಳಿಯಲ್ಲೇ ಎಷ್ಟು ಹೊತ್ತು ಬೇಕಾದರೂ ನಿಂತು ಕೊಳ್ಳಬಲ್ಲದು. ಭೂಮಿಯ ಮೇಲೆ ಇಳಿಯದೇ  ಒಂದು ದಿನವನ್ನು ಗಾಳಿಯಲ್ಲಿಯೇ ಕಳೆಯಬಲ್ಲದು. ಇವುಗಳಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಹಾರುವಾಗಲೇ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ. ಹೀಗಾಗಿ ಇವಕ್ಕೆ ನೆಲಕ್ಕೆ ಬರುವ ಪ್ರಮೇಯವೇ ಬರುವುದಿಲ್ಲ.

ನೀರಿರುವ ಜಾಗದಲ್ಲಿ ವಾಸ:
ಇವು ಹೆಚ್ಚಾಗಿ ಕೆರೆ, ನದಿ, ಹಳ್ಳ ಕೊಳ್ಳ ಮುಂತಾದ ನೀರಿರುವ ಪ್ರದೇಶದಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಆಹಾರವನ್ನು ಹುಡುಕುವ ಸಲುವಾಗಿ ಮಾತ್ರ ಇತರ ಪ್ರದೇಶಗಳಿಗೆ ತೆರಳುತ್ತದೆ. ನಂತರ ನೀರಿರುವ ಪ್ರದೇಶಕ್ಕೆ ವಾಪಸ್ ಸಂತಾನೋತ್ಪತ್ತಿ ಮತ್ತು ಮೊಟ್ಟೆಯಿಡುತ್ತವೆ. ನೀರಿನಲ್ಲಿಯೇ ಇವುಗಳ ಜೀವನ ಆರಂಭವಾಗುತ್ತದೆ. ಲಾರ್ವಾ ಸ್ಥಿತಿಯಲ್ಲಿ ಎರಡು ವರ್ಷ ಜೀವನ ಸವೆಸಿದ ಬಳಿಕ ಮೊಟ್ಟೆಯೊಡೆದು ಕೀಟದ ರೂಪ ಪಡೆಯುತ್ತದೆ. ನಂತರ ಕೆಲವು ಗಂಟೆಯ ಬಳಿಕ ರೆಕ್ಕೆಗಳು ಬಲಿತು ಡ್ರ್ಯಾಗನ್ ಫ್ಲೈನ ಆಕಾರ ತಾಳುತ್ತದೆ. ಮುಂಗಾರು ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಡ್ರ್ಯಾಗನ್ ಫ್ಲೈ ನೋಡಲು ಸಿಗುತ್ತದೆ. 

ತಲೆಗಿಂತಲೂ ದೊಡ್ಡ ಕಣ್ಣು:
ಏರೋಪ್ಲೇನ್ ಚಿಟ್ಟೆಯ ತಲೆಯ ಬುಹುತೇಕ ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಂಪೌಂಡ್ ಐಸ್)ಗಳೆನ್ನುತ್ತಾರೆ. ಇದರ ಕಣ್ಣಿನಲ್ಲಿ 30 ಸಾವಿರ ಲೆನ್ಸ್ ಗಳು ಇರುತ್ತವೆ. ಕಣ್ಣಿನ ಗುಡ್ಡೆ ತೆಲೆಯಿಂದ ಹೊರಬಂದಿರುವುದರಿಂದ 360 ಡಿಗ್ರಿ ಕೋನದಲ್ಲಿ ತನ್ನ ಸುತ್ತಲೂ ನೋಡಬಲ್ಲದು. ಇದರ ಶೇ. 80 ರಷ್ಟು ಮಿದುಳು ಕಣ್ಣಿನ ದೃಷ್ಟಿಯನ್ನು ಗ್ರಹಿಸುವ ಸಲುವಾಗಿಯೇ ಮೀಸಲು. ಹಾಗಾಗಿ ಇವುಗಳನ್ನು ಹಿಡಿಯುವುದು ತುಂಬಾ ಕಷ್ಟ. ಅಲ್ಲದೇ ಜೇಡ, ಹಾವು ಕಪ್ಪೆ, ಹಕ್ಕಿ ಮುಂತಾದ ವೈರಿಗಳಿಂದಲೂ ಸುಲಭವಾಗಿ ಪಾರಾಗಬಲ್ಲದು. ಆದರೆ ಜೇಡನ ಬಲೆಯಲ್ಲಿ ಸಿಕ್ಕಿಬಿದ್ದು ಅವುಗಳಿಗೆ ಆಹಾರವಾಗುತ್ತವೆ.

Sunday, November 4, 2012

ಹಾರುವ ಓತಿ ಕಂಡಿದ್ದೀರಾ?

 ವಿಶ್ವದಲ್ಲೇ ಅಪರೂಪದ ಸಂತತಿ ಎನಿಸಿಕೊಂಡಿರುವ ಹಾರುವ ಓತಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತದೆ. ಸುತ್ತಮುತ್ತಲೂ ಕಂಡುಬರುವ ಇತರ ಓತಿಗಳಷ್ಟೇ ಗಾತ್ರವನ್ನು ಹಾರುವ ಓತಿ ಹೊಂದಿರುತ್ತದೆ. ಹಾರಿದಾಗ ಮಾತ್ರ ಹಾರುವ ಓತಿ ನಮ್ಮ ಗಮನಕ್ಕೆ ಬರುತ್ತದೆ. 


 ಓತಿ ಹಾರುವುದು ಹೇಗೆ?
ಓತಿಗೆ ಹಾರಲು ಹಕ್ಕಿಯಂತೆ ಅಗಲವಾದ ರೆಕ್ಕೆಗಳಿಲ್ಲ. ಹಾರಾಟದ ಆರಂಭದಲ್ಲಿ ಜಿಗಿಯುವಾಗ ಸಿಗುವ ನೂಕು ಬಲದಿಂದ ಇವು ಹಾರುತ್ತದೆ. ಇದರ ಮುಗಾಲು ಮತ್ತು ಹಿಂಗಾಲುಗಳ ಮಧ್ಯದ ತೆಳು ಚರ್ಮ ಒಂದಷ್ಟು ವಿಸ್ತರಿಸಿಕೊಂಡು ರೆಕ್ಕೆಯಂತೆ ಚಾಚಿಕೊಂಡಿರುತ್ತದೆ. ಇವು ಹಾರಾಟಕ್ಕೆ ಸಹಕಾರಿಯಾಗುತ್ತವೆ. ಇದು ಜಾರು ರೆಕ್ಕೆ ಎಂದು ಕರೆಯಲ್ಪಡುತ್ತದೆ. ಹಾವು  ಗಿಡುಗ  ಮುಂತಾದ ವೈರಿಯಿಂದ ತನಗೆ ಅಪಾಯ ಎದುರಾದಾಗ ರೆಕ್ಕೆ ಅರಳಿಸಿ ಸುರಕ್ಷಿತ ಜಾಗಕ್ಕೆ ಹಾರಿಹೋಗುತ್ತದೆ. ಹಾರುವ ಓತಿ ರೆಕ್ಕೆ ಅರಳಿಸಿ ಸುಮಾರು 60 ಮೀ. ತನಕ ಹಾರಬಲ್ಲದು.

ಹಾರುವ ಓತಿಯ ಲಕ್ಷಣಗಳು
  • ಹಾರುವ ಓತಿಯನ್ನು ಇಂಗ್ಲಿಷ್ನಲ್ಲಿ  ಡ್ರಾಕೊ ಎಂದು ಕರೆಯಲಾಗುತ್ತದೆ. 16 ಪ್ರಭೇದಗಳು ಇವುಗಳಲ್ಲಿವೆ. ಕಲವು ಹಾರುವ ಓತಿ 22 ಸೆ.ಮೀ.ಗಿಂತಲೂ ಉದ್ದದವಿರುತ್ತದೆ.  
  • ಹಾರುವ ಡ್ರಾಗನ್ ಮತ್ತು ಡಸ್ಸುಮೀರಿ ಎನ್ನುವ ಪ್ರಭೇದಗಳಲ್ಲಿ ಇವು ಗುರುತಿಸಲ್ಪಟ್ಟಿವೆ. ಇವು ಹೆಚ್ಚಾಗಿ ಮರದ ಪೊಟರೆಗಳಲ್ಲಿ ವಾಸಮಾಡುತ್ತವೆ.
  •  ಓತಿಯ ಬೆನ್ನಮೇಲೆ ಕಂದು ಬಿಳಿ ಮಿಶ್ರಿತ ಬಣ್ಣ ಮತ್ತು ಕೆಳಭಾಗದಲ್ಲಿ ಹಳದಿ ಹಸಿರು ಮಿಶ್ರಿತ ಬಣ್ಣ ಹೊಂದಿರುತ್ತದೆ. ರೆಕ್ಕೆಯ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಆಕರ್ಶಕ ಪಟ್ಟೆ ಇರುತ್ತದೆ. ರೆಕ್ಕೆಯ ಕೆಳಭಾಗ ಗಂಡಿನಲ್ಲಿ ನೀಲಿ ಮತ್ತು  ಹೆಣ್ಣಿನಲ್ಲಿ ಹಳದಿಯಾಗಿರುತ್ತದೆ. 
  • ಹಾರುವ ಓತಿ ಸಹಜಸ್ಥಿತಿಯಲ್ಲಿದ್ದಾಗ ಹಾರು ರೆಕ್ಕೆ ಮುಚ್ಚಿಕೊಂಡಿರುತ್ತದೆ. ಹೀಗಾಗಿ ಇವುಗಳನ್ನು ಗುರುತಿಸುವುದು ಕಷ್ಟ. ಹಾರುವ ಓತಿಯ ತಲೆಯ ಮೇಲ್ಭಾಗದಲ್ಲಿ ಗರಸದಂತಹ ಚಿಕ್ಕ ಮುಳ್ಳುಗಳು ಬೆನ್ನಿನುದ್ದಕ್ಕೂ ಇಳಿಜಾರು ಆಕಾರದಲ್ಲಿ ಇರುತ್ತವೆ.
  • ಗಲ್ಲದ ಕೆಳಗೆ ಜೋಲು ಚರ್ಮವಿದೆ. ಗಂಡಿನಲ್ಲಿ ಮಧ್ಯದ ಚರ್ಮ ಕೊಂಚ ಉದ್ದವಾಗಿರುತ್ತದೆ. 
ಅಪರೂಪದ ಜೀವಿ
ಹಾರುವ ಓತಿ ವಿಶ್ವದಲ್ಲಿಯೇ ಅವಸಾನದ ಅಂಚಿನಲ್ಲಿರುವ ಅಪರೂಪದ ಸಂತತಿ. ಹೆಚ್ಚೆಂದರೆ ಇದರ ಸಂಖ್ಯೆ 800 ರಿಂದ 1000 ಸಾವಿರ ಇರಬಹುದು ಎಂದು ವನ್ಯ ಜೀವಿ  ಸಂಶೋಧಕರ ಅಭಿಪ್ರಾಯ. ಈ ಹಾರು ಓತಿಯ ಪ್ರಭೇದ ದಕ್ಷಿಣ ಏಷ್ಯಾದ ಫಿಲಿಪೀನ್ಸ್, ಮಲೇಶಿಯಾದಿಂದ ಇಂಡೋನೇಷಿಯಾದ ವರೆಗೂ ಹರಡಿದೆ. ನಮ್ಮ ದೇಶದ ಮಳೆಕಾಡುಗಳಲ್ಲಿ ಇದನ್ನು  ಕಾಣಬಹುದು. ಅದರಲ್ಲೂ ವಿಶೇಷವಾಗಿ  ಪಶ್ಚಿಮ ಘಟ್ಟ ಪ್ರದೇಶದಲ್ಲಿಈ ಓತಿ ಕಾಣಸಿಗುತ್ತದೆ. ಇದು ಉಷ್ಣ ವಲಯದ ಜೀವಿ. ಉಷ್ಣವಲಯದ ಮಳೆ ಬೀಳುವ ಕಾಡುಗಳು ಇದರ ಆವಾಸ ಸ್ಥಾನ.


ಮರದ ಮೇಲೆಯೇ ವಾಸ

ಹಾರುವ ಓತಿ ರೆಕ್ಕೆಯ ಸಹಾಯದಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತ ಬಹುತೇಕ ಜೀವನವನ್ನು ಮರದ ಮೇಲೆಯೇ ಕಳೆಯುತ್ತವೆ.  ಇವು ಕೇವಲ ಹುಳಹಪ್ಪಟೆ ಮತ್ತು ಗೆದ್ದಲು  ಹುಳುಗಳನ್ನು ಮಾತ್ರ ತಿಂದು ಬದುಕುತ್ತವೆ.  ಇವು ನೆಲಕ್ಕೆ ಇಳಿಯುವುದೇ ಅಪರೂಪವೆನ್ನಬಹುದು. ಹೆಣ್ಣು ಓತಿಗಳು ಮೊಟ್ಟೆ ಇಡುವುದಕ್ಕಾಗಿ ಮಾತ್ರ ಭೂಮಿಗೆ ಇಳಿಯುತ್ತವೆ. ಇವು  ಭೂಮಿಯ ಮೇಲೆ ಕಳೆಯುವುದು  24 ಗಂಟೆಗಳು ಮಾತ್ರ. ತೆಲೆಯ  ಮೂಲಕ ನೆಲದಲ್ಲಿ ಒಂದು ಕುಳಿ ತೋಡಿ ಅದರಲ್ಲಿ 2ರಿಂದ 5 ಮಟ್ಟೆಇಟ್ಟರೆ ಇದರ ಭೂಮಿಯ  ಮೇಲಿನ ಋಣ ತೀರಿದಂತೆ. ತಮ್ಮ ಮರಿಗಳಿಗಾಗಿ ಮತ್ತೆ ಏನನ್ನೂ ಇವು ಮಾಟುವುದಿಲ್ಲ. ಉಳಿದ ಸಮಯದಲ್ಲಿ ಇವು ಮರದ ಮೇಲೆಯೇ ಇರುತ್ತವೆ.

 

Sunday, October 28, 2012

ದುರ್ವಾಸನೆಯ ಹೂವು


ಹೂವು ಸುಗಂಧವನ್ನಷ್ಟೇ ಅಲ್ಲ ಕೆಟ್ಟ ದುರ್ವಾಸನೆಯನ್ನೂ ಬೀರುತ್ತವೆ ಎಂದರೆ ನಂಬುತ್ತೀರಾ? ಹೌದು, ದುರ್ವಾಸನೆ ಬೀರುವ ಹೂವೊಂದಿದೆ. ಅದೇ ಟೈಟನ್ ಅರಂ ಅಥವಾ ಪಂಜರಗಡ್ಡೆಯ ಹೂ. ಜಗತ್ತಿನ ಅತ್ಯಂತ ದೊಡ್ಡ ಗಾತ್ರದ ಹೂವೆಂದು ಇದು ಗುರುತಿಸ್ಪಟ್ಟಿದೆ. ಈ ಹೂವು ಅರಳಿದರೆ ಮಳೆಗಾಲದ ಮುನ್ಸೂಚನೆ ಎಂದೇ ಭಾವಿಸಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರವೇ ಅರಳುವ ಟೈಟನ್ ಅರಂ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ.
ಆದರೆ ಇದರ ಹತ್ತಿರಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು!


  • ಹೂ ಅರಳುವುದು ಹೇಗೆ?
ಎಲ್ಲಾ ಕಾಲದಲ್ಲಿಯೂ ಈ ಹೂವು ಕಾಣ ಸಿಗುವುದಿಲ್ಲ. ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಿನಲ್ಲಿ ಮಳೆ ಬಿದ್ದೊಡನೆ ವಾತಾವರಣದಲ್ಲಿ ಆರ್ದ್ರತೆ ಉಂಟಾಗುತ್ತದೆ. ಈ ಸಮಯದಲ್ಲಿ ನೆಲದೊಳಗಿದ್ದ ಕಾಡು ಪಂಜರದ ಗಡ್ಡೆ ಮೊಗ್ಗಾಗಿ ಹೊರಬಂದು ಅರಳುತ್ತದೆ. 2 ವರ್ಷದಷ್ಟು ಹಳೆಯದಾದ ಕಾಡು ಪಂಜರ ಅಥವಾ ಸುವರ್ಣ ಗಡ್ಡೆಗೆ ಈ ಹೂವು ಅರಳುತ್ತದೆ. ಭೂಮಿಯ ಆಳದಲ್ಲಿ ಹೂತಿದ್ದ ಗಡ್ಡೆಗೆ ಮೊದಲ ಮಳೆಯ ಸ್ಪರ್ಶ ತಾಕಿದೊಡನೆ ಕಾಡು ಪಂಜರಗಡ್ಡೆಯಿಂದ ಹೂವು ಅರಳಿ ನಿಲ್ಲುತ್ತದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ದಿಢೀರನೆ ಎದ್ದು ನಿಲ್ಲುತ್ತದೆ. ಇದು ಕೆಲವೊಮ್ಮೆ 7ರಿಂದ 10 ಅಡಿ ಎತ್ತರದವರೆಗೂ ಬೆಳೆಯಬಲ್ಲದು. ಸುತ್ತಮುತ್ತಲೂ ಇದರ ವಾಸನೆ ಹರಡಿದಾಗಲೇ ಹೂವು ಅರಳಿದ್ದು ಅರಿವಾಗುತ್ತದೆ.  

  • ಎರಡು ದಿನದ ಬಾಳು!
ಎರಡು ವರ್ಷಗಳಕಾಲ ಗಡ್ಡೆ ಮಣ್ಣಿನೊಳಗೇ ಇದ್ದರೆ ಹೂ ಬಿಡುವ ಸಾದ್ಯತೆ ಹೆಚ್ಚು.ಎರಡು ವರ್ಷದ ಬಳಿಕ ಅರಳಿದರೂ ಇದರ ಬಾಳು ಎರಡೇ ಎರಡು ದಿನದ್ದು. ಅಂದರೆ ಕೇವಲ 48 ಗಂಟೆ ಮಾತ್ರ. ಕಾಡಿನ ಮಧ್ಯದಲ್ಲೆಲ್ಲೋ ಅರಳಿ ನಿಂತು ಸುತ್ತಮುತ್ತಲೂ ಕೊಳೆತ ಶವದ ವಾಸನೆ ಹರಡುತ್ತದೆ. ಹೀಗಾಗಿ ಇದನ್ನು ಶವದ ಹೂ (ಕಾರ್ಪ್ಸ್ ಫ್ಲವರ್) ಎನ್ನಯವ ಹೆಸರಿನಿಂದ ಕರೆಯಲಾಗುತ್ತದೆ. ಸಮದ್ರ ಮಟ್ಟದಿಂದ ಸುಮಾರು 120ರಿಂದ 365 ಮೀಟರ್ ಎತ್ತರದಲ್ಲಿ ಮಾತ್ರ ಹೂವು ಅರಳುತ್ತದೆ. 

  • ವೆಲ್ವೇಟ್ ಹೊದಿಕೆ
 ಇನ್ನೊಂದು ವಿಶೇಷತೆಯೆಂದರೆ ಈ ಗಿಡದಲ್ಲಿರುವುದು ಒಂದೇ ಒಂದು ದೈತ್ಯಾಕಾರದ ಎಲೆ ಮಾತ್ರ. ಈ ಎಲೆಯೇ ಹೂವಿನ ಆಕಾರದಲ್ಲಿ ಸುರುಳಿ ಸುತ್ತಿಕೊಂಡಿರುತ್ತದೆ. ಕೆಲವೊಂದು ಗಿಡದ ಎಲೆ ಸುಮಾರು 6 ಮೀಟರ್ (20 ಅಡಿ) ದೊಡ್ಡದಾಗಿರುತ್ತದೆ. ಈ ಹೂವು ತನ್ನ ದುರ್ವಾಸನೆಯಿಂದ ಪರಾಗಸ್ಪರ್ಶಕ್ಕೆ ನೆರವಾಗುವ ವಿಶಿಷ್ಟ ಜಾತಿಯ ಕೀಟಗಳನ್ನು ಆಕರರ್ಷಿಸುತ್ತದೆ. ಪರಾಗಸ್ಪರ್ಶದ ಬಳಿಕ ಹೂವು ಮರೆಯಾಗಿ ಅದೇ ಜಾಗದಲ್ಲಿ ಅರ್ಧ ಮೀಟರ್ ಎತ್ತರದ ಹಣ್ಣಿನಗೊಂಚಲಿನ ಗಿಡ ಎದ್ದುನಿಲ್ಲುತ್ತದೆ. ಭೂಮಿಯ ಒಳಗೆ ಸಂಗ್ರಹವಾದ ಇದರ ಗಡ್ಡೆ ಸುಮಾರು 75 ಕೇ.ಜಿಯ ತನಕವೂ ತೂಗುತ್ತದೆ. ಕೆಲವೊಂದು ಗಡ್ಡೆ (ಸುವರ್ಣ ಗಡ್ಡೆ) ತರಕಾರಿಯಾಗಿಯೂ ಬಳಸುತ್ತಾರೆ. ಹೂವಿನ ಮೇಲೆ ಕಂದು 
ವೆಲ್ವೆಟ್ ವಸ್ತ್ರವನ್ನು ಹೊದೆಸಿ ಇಟ್ಟಂತೆ ಕಾಣುತ್ತದೆ. ಈ ಹೂವು ಪೂರ್ಣ ಅರಳಿದ ಮೇಲೆ ವಾಸನೆ ಇರುವುದಿಲ್ಲ. ಈ ಹೂವು ಹೆಚ್ಚಾಗಿ ರಾತ್ರಿಯ  ವೇಳೆ ಅರಳುತ್ತದೆ. ಅಲ್ಲದೇ ಗಡ್ಡೆಯಲ್ಲಿದ್ದ ಬಿಸಿಗಾಳಿಯನ್ನು ಹೊರಹಾಕುತ್ತದೆ. 
 ಪಂಜರ ಗಡ್ಡೆಯ ಹೂವು ವಾಸನೆ ಸೂಸಿದರೂ, ಎರಡೇ ದಿನದ ಬದುಕಿದರೂ ಸಹಸ್ರಾರು ಜನರ ಗಮನ ಸೆಳೆಯುತ್ತದೆ.

Saturday, October 20, 2012

ಕೈಮುಗಿಯುವ ಸೊಗಸುಗಾರ

ಸದಾ ಮುಂಗಾಲನ್ನು ಕೈಮುಗಿಯುವಂತೆ ಎತ್ತಿ ಹಿಡಿಯುವುದರಿಂದ ಈ ಕೀಟಕ್ಕೆ ಪ್ರೇಯಿಂಗ್ ಮ್ಯಾಂಟಿಸ್ ಎನ್ನುವ ಹೆಸರು ಬಂದಿದೆ. ಅಲ್ಲದೇ ಇದನ್ನು ದೇವರ ಕೀಟ, ಕಡ್ಡಿ ಕುದುರೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ  ಕೀಟದ ವೈಜ್ಞಾನಿಕ ಹೆಸರು ಮಾಂಟೊಡಿಯಾ. ಮಾಂಟಿಸ್ ಜಿರಲೆಯ ನಿಕಟ ಸಂಬಂಧಿಗಳಾಗಿವೆ. ಕೆವೊಮ್ಮೆ ರಾತ್ರಿಯ ಬೆಳಕಿಗೆ ಆಕರ್ಷಣೆಗೊಂಡು ನಿಮ್ಮ ಮನೆಯ ಅತಿಥಿಯಾಗಿ ಈ ಕೈಮುಗಿಯುವ ಸೊಗಸುಗಾರ ಬಂದು ಬಿಡಬಹುದು.

ವಿಶಿಷ್ಟ ದೇಹ ರಚನೆ
ಇದರ ದೇಹ ರಚನೆಯನ್ನು ತಲೆ, ಎದೆಯ ಗೂಡು ಮತ್ತು ಹೊಟ್ಟೆ ಹೀಗೆ 3 ಭಾಗವಾಗಿ ವಿಂಗಡಿಸಬಹುದು. ತ್ರಿಕೋಣಾಕೃತಿಯ ತಲೆ, ಉದ್ದನೆಯ ಕುತ್ತಿಗೆ ಅದಕ್ಕೆ ಹೊಂದಿಕೊಂಡಂತೆ ದೊಡ್ಡ ಉರುಟು ಪಾರದರ್ಶಕ ಕಣ್ಣುಗಳು, ಸಪೂರ ಕೋರೆಹಲ್ಲುಗಳನ್ನು ಹೊಂದಿರುವ ಪುಟ್ಟ ಬಾಯಿ. ಗರಗಸದ ಹಲ್ಲುಗಳನ್ನು ಹೊಂದಿರುವ ಮುಂಗಾಲು ಹಾಗೆಯೇ ಉದ್ದನೆಯ ಹಿಂಗಾಲು ಇದರ ವಿಶೇಷತೆ.

ಗರಗಸದ ಹಲ್ಲಿನ ಮುಂಗೈ
ತನ್ನ ಕತ್ತನ್ನು 180 ಡಿಗ್ರಿ ತಿರುಗಿಸುವ ಸಾಮಥ್ರ್ಯವಿರುವುದು ಈ ಕೀಟಕ್ಕೆ ಮಾತ್ರ. ಇವು ಎಲೆ ಅಥವಾ ಪರಿಸರದ ಬಣ್ಣವನ್ನೇ ಹೋಲುವುದರಿಂದ ಹಕ್ಕಿಗಳಿಗೆ, ಕ್ರಿಮಿ ಕೀಟಗಳಿಗೆ ಗುರುತಿಸುವುದು ಅಷ್ಟು ಸುಲಭವಲ್ಲ. ಗಿಡದಲ್ಲಿ ಅಡಗಿ ತನ್ನ ಹತ್ತಿರ ಬರುವ ಚಿಟ್ಟೆ, ದುಂಬಿಗಳ ಕಣ್ತಪ್ಪಿಸಿ ತನ್ನ ಕದಂಭ ಬಾಹುವಿನ ಸಮೀಪಕ್ಕೆ ಬೇಟೆ ಬಂದಾಕ್ಷಣ ಮಿಂಚಿನಂತೆ ಕ್ಷಣಾರ್ಧದಲ್ಲಿ ತನ್ನ ಮುಂಗಾಲನ್ನು ಚಾಚಿ ಕಬಳಿಸಿಬಿಡುತ್ತದೆ. ಇವುಗಳ ಮುಂಗಾಲು ಮಾನವನ ಕಣ್ಣಿನ ದೃಷ್ಟಿಗಿಂತಲೂ ವೇಗವಾಗಿ ಬೇಟೆಯಾಡುತ್ತೆ. ಮುಂಗಾಲಿನಲ್ಲಿ ಸಣ್ಣ ಸಣ್ಣ ಗರಗಸದ ಹಲ್ಲಿನಂತಹ ರಚನೆಗಳು ಬೇಟೆಯನ್ನು ಮಿಸುಕಾಡದಂತೆ ಚುಚ್ಚಿ ಭದ್ರವಾಗಿ ಹಿಯುತ್ತವೆ. ಹೀಗಾಗಿ ಇದರ ಪ್ರರ್ಥನೆಗೆ ಒಲಿದು ಕೈಗೆ ಸಿಕ್ಕಿದ ಕೀಟ ನೇರವಾಗಿ ದೇವರ ಪಾದ ಸೇರುತ್ತದೆ. 

ಎಲೆಯ ಬಣ್ಣದ ಕೀಟ
ಮಿಡತೆಯಂತೆ ಈ ಅಪೂರ್ವ ಕೀಟ ಕೂಡ ರೈತ ಮಿತ್ರ! ಪ್ರಕೃತಿ ಸಮತೋಲನದಲ್ಲಿ ಇದರ ಪಾತ್ರ ಹಿರಿದು. ಇತರ ದೇಶಗಳಲ್ಲಿ ಕಪ್ಪೆ, ಚೇಳು, ಹಲ್ಲಿ ಹಾವು, ಸಣ್ಣ ಪಕ್ಷಿಗಳನ್ನೂ ಸಹ ತಿನ್ನುವ ಮ್ಯಾಂಟಿಸ್ಗಳಿವೆ. ಏಷ್ಯಾದಲ್ಲಿ ಕಂಡುಬರುವ ಮ್ಯಾಂಟಿಸ್ 10 ಇಂಚು ಇರುತ್ತವೆ. ನಮ್ಮಲ್ಲಿ ಇಷ್ಟೊಂದು ದೊಡ್ಡಗಾತ್ರದ ಮ್ಯಾಂಟಿಸ್ ಕಂಡುಬರದಿದ್ದರೂ, ಒಣಗಿದ ಎಲೆ, ಹಸಿರೆಲೆ, ಹುಲ್ಲಿನ ಬಣ್ಣ ಹೀಗೆ ಹತ್ತು ಹಲವಾರು ಬಣ್ಣದಲ್ಲಿ ಕಂಡುಬರುತ್ತವೆ. ಇವು ಅರ್ಧ ಇಂಚಿನಿಂದ 6 ಇಂಚಿನ ತನಕ ಉದ್ದವಾಗಿರುತ್ತವೆ. ಬಹುತೇಕ ಮ್ಯಾಂಟಿಸ್ ಗಳಿಗೆ ರೆಕ್ಕೆಯೂ ಇರುತ್ತದೆ ಮತ್ತು ಹಾರುವ ಸಾಮರ್ಥ್ಯ ಹೊಂದಿವೆ.  ಸಾಮಾನ್ಯವಾಗಿ ಹೆಣ್ಣು  ಕೀಟ ಗಂಡಿಗಿಂತಲೂ ದೊಡ್ಡದಾಗಿರುತ್ತದೆ.
ಪ್ರಪಂಚದಾದ್ಯಂತ ಸುಮಾರು 2, 400 ಜಾತಿಯ ಪ್ರೇ ಮ್ಯಾಂಟಿಸ್ಗಳಿವೆ ಎಂಬುದು ಕೀಟ ತಜ್ಞರ ಅಂದಾಜು. ಇವುಗಳ ಜೀವಿತಾವಧಿ ಸುಮಾರು ಒಂದು ವರ್ಷ. ಹೆಣ್ಣು ಕೀಟ ನೂರಾರು ಮೊಟ್ಟೆಗಳನ್ನು ಚೀಲದಂತಹ ರಚನೆಯಲ್ಲಿ ಇಡುತ್ತದೆ. ಮೊಟ್ಟೆಗಳು ನೊರೆಯ ರೂಪದಿಂದ ಗಟ್ಟಿಯಾಗುತ್ತವೆ.  ಬಾವಲಿ, ಕಪ್ಪೆ, ದಶಂಕಗಳು ಮತ್ತು  ಜೇಡರ ಹುಳ  ಮ್ಯಾಂಟಿಸ್ಗಳ ನೈಸರ್ಗಿಕ ಶತ್ರು.

ಗಂಡನ್ನೇ ಕಬಳಿಸುವ ಹೆಣ್ಣು!
ಹೆಣ್ಣು  ಪ್ರೇ ಮ್ಯಾಂಟಿಸ್ ತನ್ನ ಪ್ರಿಯಕರನ ಜತೆಗೆ ಮಿಲನ ಮಹೋತ್ಸವ ಆಚರಿಸಿ ನೀಡುವ ಪ್ರೀತಿಯ ಕಾಣಿಕೆ ಏನು ಗೊತ್ತೆ? ಗಂಡನ್ನು  ಹಾಗೆಯೇ ತನ್ನ ಕಮಂಭ ಬಾಹುಗಳಲ್ಲಿ ತಬ್ಬಿ ಹಿಡಿದು ಮೃತ್ಯು ಚುಂಬನ ನೀಡಿ ತಿಂದು ಬಿಡಬಹುದು. ಗಂಡನ್ನು ತಲೆ ಸಮೇತ ತಿಂದು ತೇಗಿದ ಹೆಣ್ಣಿಗೆ ಮೊಟ್ಟೆಯಿಡಲು ಅಗತ್ಯ ಪೋಷಕಾಂಶ ಸಿಕ್ಕಿ ಬಿಡುತ್ತವಂತೆ. ಅಂದರೆ ಗಂಡು ಹುಟ್ಟಿದ್ದೇ ಹೆಣ್ಣಿಗೆ ಆಹಾರವಾಗಲು! 

 

Wednesday, October 17, 2012

ನೀಲಿ ಕಂಠದ ಇಂಡಿಯನ್ ರೋಲರ್

ಆಕಾಶದಲ್ಲಿ ಗಿರಕಿ ಹೊಡೆಯುತ್ತಾ, ಎಲ್ಲೆಂದರಲ್ಲಿ ಸುತ್ತಾಡಿಕೊಂಡು ಕಾಲ ಕಳೆಯುವ ಈ ಹಕ್ಕಿ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ನೀಲಿ ಬಣ್ಣದಿಂದ ಇದಕ್ಕೆ ನೀಲಕಂಠ ಎನ್ನುವ ಹೆಸರು ಬಂದಿದೆ.  ಇಂಗ್ಲಿಷ್ನಲ್ಲಿ ಇದಕ್ಕೆ ಎರಡು ಹೆಸರುಗಳಿವೆ.  ಬ್ಲೂ ಜೇ (ನೀಲಿ ಬಣ್ಣದಿಂದ) ಮತ್ತು ಇಂಡಿಯನ್ ರೋಲರ್ (ಹಾರಾಡುವಾಗ ಪಲ್ಟಿ ಹೊಡೆಯುವ ಭಾರತೀಯ ಹಕ್ಕಿ) ಇನ್ನೊಂದು ವಿಶೇಷ ವೆಂದರೆ ಇದು ನಮ್ಮ ಕರ್ನಾಟಕ ರಾಜ್ಯದ ಪಕ್ಷಿ. ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಕ್ಕಿ ಆಂಧ್ರ ಪ್ರದೇಶ ಓಡಿಶಾ ರಾಜ್ಯಗಳ ಪಕ್ಷಿಯಾಗಿಯೂ ಗುರುತಿಸಲ್ಪಟ್ಟಿದೆ. ಈ ಹಕ್ಕಿ ರೋಲರ್ ಹಕ್ಕಿಗಳ ವಂಶಕ್ಕೆ ಸೇರಿದೆ. ನೀಲಕಂಠ ಹಿಂದು ಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಒಂದು ಪವಿತ್ರಹಕ್ಕಿಯಾಗಿ ಪರಿಗಣಿಸಲ್ಪಟ್ಟಿದೆ. 


ಲಕ್ಷಣಗಳು
ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ. ನೆತ್ತಿ, ರೆಕ್ಕೆ ತಿಳಿ ನೀಲಿಯಾಗಿದ್ದು, ಕತ್ತು, ಎದೆ ಬೆನ್ನು ಕಂದು ಬಣ್ಣವಿದೆ. ಕಂದು ಬಣ್ಣದ ಕಣ್ಣು. ಕಪ್ಪು ಕೊಕ್ಕನ್ನು ಹೊಂದಿದೆ. ಗಾತ್ರದಲ್ಲಿ 25ರಿಂದ 28 ಸೆಂ.ಮೀ ಉದ್ದವಿದೆ. ನೋಡಲು ಗಂಡು ಹೆಣ್ಣು ಒಂದೇ ರೀತಿ. ಈ ಹಕ್ಕಿಯ ಆಯಸ್ಸು 17 ವರ್ಷ. ಕುತ್ತಿಗೆ ಮತ್ತು ಗಂಟಲಿನ ಬಳಿ ನೇರಳೆ ಬಣ್ಣದ ಮುಳ್ಳಿನಂತಹ ಗರೆಗಳಿರುವಂತೆ ಕಂಡು ಬರುತ್ತದೆ. ಇಂಡಿಯನ್ ರೋಲರ್ ಗುಂಪಾಗಿ ಹಾರಾಡುವುದು ಬಹಳ ವಿರಳ. ಆದಾಗ್ಯೂ ಇವು ಕುಟುಂಬದ ಬಳಗ ಹೊಂದಿವೆ. ಗಡುಸಾದ ಧ್ವನಿಯ ಮೂಲಕ ಒಂದಕ್ಕೊಂದು ಸಂದೇಶ ರವಾನಿಸುತ್ತವೆ. ಕಾಗೆಯಂತೆ ಗಡುಸಾ ಧ್ವನಿಹೊದಿದ್ದರೂ ಮಧುರ ಸ್ವರವನ್ನು ಹೊರಡಿಸಬಲ್ಲದು.

ಸಂಗಾತಿ ಮೆಚ್ಚಿಸಲು
ಆಕಾಶದಲ್ಲಿ ಸರ್ಕಸ್ 
ಸಂಗಾತಿಯನ್ನು ಆಕರ್ಷಿಸಲು ಆಕಾಶದಲ್ಲಿ ಗಿರಕಿ ಹೊಡೆದು ಮಾಡುವ ಸರ್ಕಸ್ ರಮಣೀಯ. ತೀಕ್ಷ್ಣ ಸ್ವರದಲ್ಲಿ ಅರಚುತ್ತಾ, ಸುರಳಿ ಸುರಳಿಯಾಗಿ, ಉಂಗುರುಂಗುರವಾಗಿ, ಹಾರುವುದು, ದೊಪ್ಪನೆ ಬೀಳುವುದು ನೋಡಲು ಆಹ್ಲಾದ. ಗಂಡು ಹಕ್ಕಿ ಸಂತಾನೋತ್ಪತ್ತಿಯ ಋತುವಿನಲ್ಲಿ ವಿಶಿಷ್ಟ ಮತ್ತು ಚಕಿತಗೊಳಿಸುವ ಲೈ೦ಗಿಕ ಪ್ರದರ್ಶನಕ್ಕೆ ಹೆಸರುವಾಸಿ. ಈ ಸಂದರ್ಭದಲ್ಲಿ ಇಂಡಿಯನ್ ರೋಲರ್ ಎತ್ತರದಲ್ಲಿ ಹಾರಾಡುತ್ತಾ, ವೇಗವಾಗಿ ರೆಕ್ಕೆಬಡಿಯುತ್ತಾ ವೃತ್ತಾಕಾರವಾಗಿ ಕೆಳಕ್ಕೆ ಇಳಿಯುತ್ತದೆ. ಅಲ್ಲದೇ ಈ ಕ್ರಿಯೆ ನಡೆಯುವಾಗ ಜೋರಾಗಿ ಶಬ್ದ ಮಾಡುತ್ತದೆ. ಪೊಟರೆಗಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡು ಕಟ್ಟಿ 4 ಅಥವಾ 5 ಮೊಟ್ಟೆಗಳನ್ನು ಇಡುತ್ತವೆ. ಸುಮಾರು 12 ದಿನಗಳವರೆಗೆ ಕಾವುಕೊಟ್ಟು ಮರಿ ಮಾಡುತ್ತವೆ. ಕೆಲವು ಕಪ್ಪು ನೀಲಕಂಠ ಪಕ್ಷಿಗಳು ಮರಕುಟುಕ ಹಕ್ಕಿಯ ಪೊಟರೆಯಲ್ಲಿ ವಾಸ ಮಾಡುತ್ತವೆ. 

 ರೈತನ ಮಿತ್ರನೂ ಹೌದು
ನೀಲಕಂಠ ಪಕ್ಷಿ ಪ್ರಮುಖವಾಗಿ ಪರ್ಣಪಾತಿ ಕಾಡಿನ ಅಂಚು, ಕೃಷಿ ಭೂಮಿ ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಬೇಟೆಗಾರ ಪಕ್ಷಿಗಳು. ತಂತಿ, ಮರ, ಬಂಡೆ, ಹಾಗೂ  ಕಂಬಗಳಲ್ಲಿ  ಕುಳಿತು ಬೇಟೆಗಾಗಿ ಹೊಂಚು ಹಾಕುತ್ತದೆ. ನೆಲದ ಮೇಲೆ ಹರೆದಾಡುವ ಜಂತು, ಹಾರುವ ಕೀಟಗಳೆ ಇದರ ಆಹಾರ. ಹೀಗಾಗಿ ರೈತನ ಮಿತ್ರನೂ ಹೌದು. ಮೇಲಿನಿಂದ ಒಮ್ಮಲೇ ಇಳಿದು ಬಂದು ಆಹಾರ ಕಚ್ಚಿಕೊಂದು ಮೇಲಕ್ಕೆ ಹಾರುತ್ತದೆ. ಕೆಲವೊಮ್ಮೆ ಎಲ್ಲಾ ರೀತಿ ಕೀಟ, ಸರೀಸೃಪಗಳು, ಕಪ್ಪೆಗಳನ್ನೂ ಬೇಟೆಯಾಡುತ್ತದೆ. ಗಾಳಿಯಲ್ಲಿದ್ದಾಗಲೂ ಬೇಟೆಯಾಡಬಲ್ಲದು. ಇವು ಎತ್ತರದಿಂದ ನೀರಿಗೆ ಹಾರಿ ಸ್ನಾನ ಮಾಡುತ್ತವೆ. ಆದರೆ ಮೀನು ಹಿಡಿಯುವ ಕಲೆ ತಿಳಿದಿಲ್ಲ.
 ಇವುಗಳ ಫೋಟೊ ತೆಗೆಯುವುದೇ ಒಂದು ಸುಂದರ ಅನುಭವ.ನೀಲಿ ಕಂಠದ ಈ ಹಕ್ಕಿ ಇನ್ನೂ ಅಳಿವಿ ಅಂಚನ್ನು ತಲುಪಿಲ್ಲ ಎನ್ನುದೇ ನಮಗೆಲ್ಲಾ ಸಮಾಧಾನದ ವಿಷಯ.

Sunday, October 7, 2012

ಮುದ್ದು ಮುಖದ ಕಾಡುಪಾಪ

ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಕಾಡಿನ ಮಗು ಎಂದು ಕರೆಸಿಕೊಳ್ಳುವ ಪ್ರಾಣಿ ಕಾಡುಪಾಪ. ಇಂಗ್ಲಿಷ್ನಲ್ಲಿ ಇದನ್ನು ಸ್ಲೆಂಡರ್ ಲೋರಿಸ್ ಅಥವಾ ಸ್ಲೋ ಲೋರಿಸ್ ಎಂದು ಕರೆಯುತ್ತಾರೆ. ಕನ್ನಡದ ಪಾಪೆ ಎಂಬುದು ಕಣ್ಣನ್ನು ಸೂಚಿಸುತ್ತದೆ. ದೊಡ್ಡ ಕಣ್ಣುಗಳ ಇದನ್ನು ಕನ್ನಡದಲ್ಲಿ ಈ ಅರ್ಥದಲ್ಲಿ
ಕಾಡುಪಾಪ ಎನ್ನುವರು. 

  
ತುಂಬಾ ಆಳಿಸಿ ಸ್ವಭಾವದವು
ಮೂಲತಃ ಶಾಂತ ಸ್ವಭಾವದ ಕಾಡು ಪಾಪ ಅಪೂರ್ವ ಲಕ್ಷಣಗಳನ್ನು ಹೊಂದಿದೆ. ದುಂಡು ತಲೆ, ಗಿಡ್ಡಮೂತಿ. ಉದ್ದನೆಯ ಮೂಗು, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಂದು ಬಣ್ಣದ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲು ಚಿಕ್ಕವು ಹಾಗೂ ಬಾಲವಿಲ್ಲ. ಇದರ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು, ಮನುಷ್ಯನ ಹೋಲಿಕೆಯನ್ನು ಕಾಡು ಪಾಪನಲ್ಲಿ ಕಾಣಬಹುದು. ಇವುಗಳಲ್ಲಿ ಕಂದು ಮತ್ತು ಕಿತ್ತಳೆ ಬಣ್ಣದ ಎರಡು ಜಾತಿಗಳಿವೆ. ಮರದ ಮೇಲೆಯೇ ತನ್ನ ಬಹುತೇಕ ಜೀವನವನ್ನು ಕಳೆಯುತ್ತದೆ. ಆದರೆ ಸ್ವಭಾವದಲ್ಲಿ  ತುಂಬಾ ಆಳಸಿ. ಮಂಗನ ಚುರುಕುತನವಾಗಲಿ, ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುವ ಸಾಮರ್ಥ್ಯ  ಕಾಡುಪಾಪಕ್ಕೆ ಇಲ್ಲ. ಆದರೆ ತನ್ನ ಉದ್ದನೆಯ ತೋಳಿನಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಸಾಗಬಲ್ಲದು. ನಿಶಾಚರಿ ಜೀವಿಯಾಗಿದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ. 


ಕರ್ನಾಟಕದಲ್ಲೂ ಕಂಡುಬರುತ್ತದೆ
ಕಾಡುಪಾಪದ ಸಂತತಿ ಶ್ರೀಲಂಕಾ, ಜಾವಾ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡುಬರುತ್ತವೆ. ಅಲ್ಲಿಯೇ ಇದರ ಮೂಲ ನೆಲೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಾಡುಪಾಪ ಹೆಚ್ಚಾಗಿ ಕಂಡುಬರುತ್ತದೆ ಎನ್ನುವುದೇ ವಿಶೇಷ. ನೀಲಗಿರಿ, ಆಲದ ಮರ, ಅರಳಿಮರ, ಉಣಸೇ ಹಣ್ಣಿನ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಮಳೆ ಕಾಡು ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ  ಕಂಡುಬರುತ್ತವೆ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ ಹಕ್ಕಿಗಳ ಮೊಟ್ಟೆಗಳು ಹೀಗೆ ಸುಲಭದಲ್ಲಿ ದೊರೆಯುವುದನ್ನೆಲ್ಲಾ ತಿನ್ನುತ್ತವೆ.

ಆಕಾರ ಚಿಕ್ಕದು ಬಳಗವೂ ಚಿಕ್ಕದು

ಕಾಡುಪಾಪ ಆಕಾರದಲ್ಲಿ ಕೇವಲ 24 ರಿಂದ 38 ಸೆಂ.ಮೀ ದೊಡ್ಡದು ಮತ್ತು ತೂಕದಲ್ಲಿ ಎರಡು ಕೆ.ಜಿ ಗಿಂತಲೂ ಹಗುರ. ಕಾಡು ಪಾಪ ಸುಮಾರು 15 ವರ್ಷ ಬದುಕ ಬಲ್ಲದು. ಮುಂಗೈನಿಂದ ಮರದ ಕೊಂಬೆಗಳನ್ನು ಬಲವಾಗಿ ಹಿಡಿದುಕೊಳ್ಳುತ್ತವೆ. ತನ್ನದೇ ಆದ ಚಿಕ್ಕ ಬಳಗ ರಚಿಸಿಕೊಂಡಿರುತ್ತದೆ. ಆದರೆ, ಹೆಚ್ಚಾಗಿ ಏಕಾಂತದಲ್ಲಿ ಜೀವಿಸುತ್ತವೆ. ಲೈಂಗಿಕ ಕ್ರಿಯೆಯಲ್ಲಿ ಮಾತ್ರ ಸಂಗಾತಿಯೊಂದಿಗೆ ಇರುತ್ತದೆ. ಹುಟ್ಟಿದ ಮುಗು ಎರಡು ವಾರಗಳ ಕಾಲ ತಾಯಿಯನ್ನು ತಬ್ಬಿಕೊಂಡು ಬೆಳೆಯುತ್ತದೆ. ಕಾಡು ಪಾಪ ಚೆಂಡಿಂತೆ ತನ್ನನ್ನು ಸುತ್ತಿಕೊಂಡು ನಿದ್ರಿಸುತ್ತದೆ.

ಕೀಟದ ರಕ್ಷಣೆಗೆ ಸ್ವ ಮೂತ್ರ ಸ್ನಾನ
ಕಾಡುಪಾಪ ಸ್ವ ಮೂತ್ರವನ್ನು ತನ್ನ ದೇಹಕ್ಕೆ ಬಳಿದುಕೊಳ್ಳುತ್ತದೆ. ತನ್ನ ಮೂತ್ರವನ್ನು ಕೈಗಳಿಂದ ಕಾಲು ಮತ್ತು ಮುಖಗಳಿಗೆ ಉಜ್ಜಿಕೊಳ್ಳುತ್ತದೆ. ಅಪಾಯಕಾರಿ  ಕೀಟಗಳ ಕಡಿತದಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡುತ್ತವೆ ಎಂದುಭಾವಿಸಲಾಗಿದೆ.

ಅಪಾಯದ ಅಂಚಿನಲ್ಲಿರುವ ಜೀವಿ
ತಮಗೆ ಅಪಾಯ ಎದುರಾಗಿದೆ ಎಂದು ಕಂಡುಬಂದಾಗ ಎರಡೂ ಕೈಗಳನ್ನು ತಲೆಗಳಿಗಿಂತ ಮೆಲಕ್ಕೆ ಎತ್ತಿ ನಿಂತುಕೊಳ್ಳುತ್ತದೆ. ಮೊಣಕೈನಲ್ಲಿರುವ ವಿಷದ ಮಚ್ಚೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ವೈರಿಗೆ ಕಚ್ಚಲು ಪ್ರಯತ್ನಿಸುತ್ತದೆ! ಕಾಡುಪಾಪ ಔಷಧಿಯ ಗುಣ ಹೊಂದಿದೆ. ಹೀಗಾಗಿ ಸಾಂಪ್ರದಾಯಿಕ ಔಷಧಿ ಮತ್ತು ಹಣದಾಸೆಗಾಗಿ ಇವುಗಳ ಹಲ್ಲುಗಳನ್ನು ಕಿತ್ತು ಮಾರಲಾಗುತ್ತಿದೆ. ಇದರಿಂದಾಗಿ ಮುದ್ದು ಮುಖದ ಕಾಡುಪಾಪ ಅಳಿವಿನ ಅಂಚಿನಲ್ಲಿದೆ.

 

Monday, October 1, 2012

ಗಾಂಧೀಜಿಯ ಸಾಬರಮತಿ ಆಶ್ರಮ

ಗಾಂಧೀಜಿ ಸ್ಥಾಪಿಸಿದ ಸಾಬರಮತಿ ಆಶ್ರಮ ಸತ್ಯ, ಅಹಿಂಸೆಗಳ ಪ್ರಯೋಗಶಾಲೆಯಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಸಾಬರಮತಿ ಆಶ್ರಮ. ಅನೇಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ತರಬೇತಿ, ನಿರ್ಭಯದ ಶಿಕ್ಷಣ, ಉತ್ತಮ ಸಂಸ್ಕಾರಗಳನ್ನು ಇಲ್ಲಿ ಕಲಿಸಲಾಗುತ್ತಿತ್ತು.ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡುವ ಗರಡಿಮನೆ ಎಂದೇ ಪ್ರಸಿದ್ಧಿ ಪಡೆದಿತ್ತು. 



ಗುರುಕುಲ ಪದ್ಧತಿ ಶಿಕ್ಷಣ
ಭಾರತೀಯ ಗುರುಕುಲ ಪದ್ಧತಿಯನ್ನು  ಆಶ್ರಮದಲ್ಲಿ ಅಳವಡಿಸಲಾಗಿತ್ತು. ಪ್ರತಿಭಾವಂತ ಕಾಕಾ ಕಾಲೇಲ್ಕರ್, ಕಿಶೋರಿಲಾಲ ಮಶ್ರೂವಾಲಾ, ಮಹದೇವ ದೇಸಾಯಿ ಮಗನಲಾಲ್  ಗಾಂಧಿ, ವಿನೋಬಾ ಭಾವೆ ಮುಂತಾದವರು ಆಶ್ರಮದ ಮಕ್ಕಳಿಗೆ ಶಿಕ್ಷಕರಾಗಿದ್ದರು. ಆಶ್ರಮದಲ್ಲಿ ವಿದ್ಯಾರ್ಥಿಗಳು ಕಠಿಣ ನಿಯಮ ಪಾಲಿಸಬೇಕಾಗಿತ್ತು. ಬೀಸುವುದು, ನೀರು ತುಂಬುವುದು, ಪಾತ್ರೆ ತಿಕ್ಕುವುದು, ಕಸ ಗುಡಿಸುವುದು,  ಅಡಿಗೆ ಮಾಡುವುದು, ನೂಲು ತೆಗೆಯುವುದು ಮುಂತಾದ ಕೆಲಸಕಾರ್ಯಗಳನ್ನು ತಪ್ಪದೇ ಮಾಡಬೇಕಾಗಿತ್ತು. ಈ ಕೆಲಸದಿಂದ ಶಿಕ್ಷಕರೂ ಹೊರತಾಗಿರಲಿಲ್ಲ. ಮಕ್ಕಳ ಶಿಕ್ಷಣದ ಪೂರ್ಣ ಜವಾಬ್ದಾರಿ ವಿನೋಬಾರದು. ಬೆಳಕು ಹರಿಯುವುದಕ್ಕೂ ಮುದಲು ನಾಲ್ಕು ಗಂಟೆಯ ಮಬ್ಬುಗತ್ತಲೆಯಲ್ಲೇ ಆಶ್ರಮದ ಗಂಟೆ ಬಾರಿಸುತ್ತಿತ್ತು. ವಿನೋಬಾ ಮಕ್ಕಳನ್ನು ಎಬ್ಬಸಿ ಉಪನಿಷತ್  ಅಧ್ಯಯನಕ್ಕೆ ಕರೆದೊಯ್ಯುತ್ತಿದ್ದರು.

  ಆಶ್ರಮ ಸ್ಥಾಪನೆ
20 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಬಳಿಕ 1915ರಲ್ಲಿ ಗಾಂಧೀಜಿ ಭಾರತಕ್ಕೆ ಮರಳಿದ್ದರು. ಅದು ಆಗತಾನೆ ಸ್ವಾತಂತ್ರ್ಯ ಚಳವಳಿ ಕಾವು  ಪಡೆಯುತ್ತಿದ್ದ ಕಾಲ. ಹೀಗಾಗಿ ಗಾಂಧೀಜಿ ಆಶ್ರಮ ಸ್ಥಾಪನೆಗೆ ಮುಂದಾದರು. ಪ್ರಾರಂಭದಲ್ಲಿ ಗಾಂಧೀಜಿ ಅಹಮದಾಬಾದ್ನ ಕೊಚ್ರಬ್ನಲ್ಲಿರುವ ಸ್ನೇಹಿತ ಜೀವನ್ಲಾಲ್ ದೇಸಾಯಿಯ ಮನೆಯಲ್ಲಿ ಮೇ 25 1915ರಂದು ಆಶ್ರಮ ಸ್ಥಾಪಿಸಿದರು. ಆಗ ಆಶ್ರಮದಲ್ಲಿ 25 ವಿದ್ಯಾರ್ಥಿಗಳಿದ್ದರು. ಆದರೆ ಆಶ್ರಮದ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ಲೇಗ್ ಕಾಣಿಸಿಕೊಂಡಿದ್ದರಿಂದ ಎರಡು ವರ್ಷದಲ್ಲಿ ಆಶ್ರಮವನ್ನು ಬೇರೆಡೆಗೆ ಸ್ಥಳಾಂರಿಸುವ ಅನಿವಾರ್ಯತೆ ಎದುರಾಯಿತು. ನಂತರ ಸಾಬರಮತಿ ನದಿಯ ದಂಡೆಯ ಮೇಲೆ ಆಶ್ರಮ ಸ್ಥಾಪಿಸಲು ಗಾಂಧೀಜಿ ನಿರ್ಧರಿಸಿದರು. 1917 ಜುಲೈನಲ್ಲಿ ಸಾಬರಮತಿ ಆಶ್ರಮ ಆರಂಭವಾಯಿತು.

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ.
ಸಾಬರಮತಿ ಆಶ್ರಮ ಸತ್ಯಾಗ್ರಹದ ತವರುಮನೆ ಎಂದೇ ಕರೆಸಿಕೊಳ್ಳುತ್ತದೆ. ಈ ಆಶ್ರಮಕ್ಕೆ ಹರಿಜನರಿಗೂ ಮುಕ್ತ ಪ್ರವೇಶವಿತ್ತು. ಹಿಗಾಗಿ ಗಾಂಧೀಜಿ ಸಾಂಪ್ರದಾಯಿಕ ಮೇಲ್ವರ್ಗದ ಹಿಂದುಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಗಾಂಧೀಜಿ 13 ವರ್ಷಗಳ ಕಾಲ ಆಶ್ರಮದಲ್ಲಿ ವಾಸವಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಾಬರಮತಿ ಆಶ್ರಮ ವಿಶೇಷ ಸ್ಥಾನ ಪಡೆದುಕೊಂಡಿದೆ. ಮಾರ್ಚ್ 12 1930ರಲ್ಲಿ ಗಾಂಧೀಜಿ ಸಾಬರಮತಿ ಆಶ್ರಮದಿಂದ ಐತಿಹಾಸಿಕ ದಂಡಿಯಾತ್ರೆ ಕೈಗೊಂಡಿದ್ದರು. ಈ ಯಾತ್ರೆ ಭಾರತ ಸ್ವಾತಂತ್ರ್ಯಹೋರಾಟಕ್ಕೆ ಮುನ್ನುಡಿ ಬರೆಯಿತು. 1933ರಲ್ಲಿ ಸಾಬರಮತಿ ಆಶ್ರಮವನ್ನು ಗಾಂಧೀಜಿ ವಿಸರ್ಜಿಸಿ ಸ್ವಾತಂತ್ರ್ಯ ಚಳವಳಳಿಯಲ್ಲಿ ಧುಮುಕಿದರು.


ಆಶ್ರಮ ಈಗ ವಸ್ತುಸಂಗ್ರಹಾಲಯ
ಒಂದು ಕಾಲದಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಮಾಣ ಮಾಡಿದ್ದ ಸಾಬರಮತಿ ಆಶ್ರಮ ಈಗ ಗಾಂಧಿ ಸ್ಮಾರಕ ಸಂಗ್ರಹಾಲಯವಾಗಿ ಪರಿವರ್ತನೆಯಾಗಿದೆ. 1963ರಲ್ಲಿ ಆಶ್ರಮದ ಮೂಲ ವಸ್ತುಗಳನ್ನು ಸುಸಜ್ಜಿತವಾದ ಕಟ್ಟಡಕ್ಕೆ ವರ್ಗಾಯಿಸಲಾಗಿದೆ.

ವಸ್ತು ಸಂಗ್ರಹಾಲಯದ ವಿಶೇಷತೆಗಳು
  •  ಗಾಂಧೀಜಿಯ ಅಪರೂಪದ 250ಕ್ಕೂ ಹೆಚ್ಚು ಛಾಯಾಚಿತ್ರ ಮತ್ತು 8 ಚಿತ್ರಪಟಗಳನ್ನು ಒಳಗೊಂಡ ''ನನ್ನ ಜೀವನವೇ ನನ್ನ ಸಂದೇಶ'' ಗ್ಯಾಲಿರಿ.
  • ಗಾಂಧೀಜಿಯ ಹೇಳಿಕೆಗಳು, ಕೃತಿಗಳು ಮತ್ತು ಇತರ ಸ್ಮಾರಕಗಳು. 
  •  ಮಹಾತ್ಮಾ ಗಾಂಧೀಜಿಗೆ ಸಂಬಂಧಿಸಿದ ಸುಮಾರು 35 ಸಾವಿರ ಪುಸ್ತಕಗಳು, ಕೃತಿಗಳು, ಭಾರತ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಘಟನೆಗಳನ್ನು ವಿವರಿಸುವ ನಿಯತಕಾಲಿಕೆಗಳನ್ನು ಒಳಗೊಂಡ ಲೈಬ್ರಿರಿ.
  •  ಗಾಂಧೀಜಿ ತಾವು ಆರಂಭಿಸಿದ ಹರಿಜನ, ಹರಿಜನ ಸೇವಕ, ಹರಿಜನಬಂಧು ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದ ಸುಮಾರು  8,781 ಪುಟಗಳ ಹಸ್ತ ಪ್ರತಿ ಮತ್ತು ಗಾಂಧೀಜಿ ಇರುವ 6 ಸಾವಿರ ಛಾಯಾಚಿತ್ರ. ಅಲ್ಲದೇ ಗಾಂಧೀಜಿ ಬರೆದ 34, 117 ಮೂಲ ಪತ್ರಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯ.
  •  ಗಾಂಧೀಜಿ ನೂಲು ತೆಗೆಯಲುಬಳಸುತ್ತಿದ್ದ ಚರಕ ಮತ್ತು ಇನ್ನಿತರ ಸಲಕರಣೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.


Thursday, September 27, 2012

ವಾಲಿ ನಿಂತರೂ ಬೀಳದ ಪಿಸಾ ಗೋಪುರ!

 ಪಿಸಾ ಗೋಪುರ ಆಧುನಿಕ  ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿದೆ. ಇದು ಮಧ್ಯ ಇಟಲಿಯ ಪಿಸಾ ನಗರದಲ್ಲಿರುವ ಗೋಪುರ. ಈ ಗೋಪುರದ ನಿರ್ಮಾಣ 1173ರಲ್ಲಿ ಆರಂಭವಾಗಿ 14ನೇ ಶತಮಾನ, 1350 ವೇಳೆಗೆ ಮುಕ್ತಾಯವಾಯಿತು. ಅಂದರೆ ಸುಮಾರು 2 ಶತಮಾನಗಳಷ್ಟು ಸಮಯವನ್ನು ಕಟ್ಟಡ ನಿರ್ಮಾಣಕ್ಕೆ ವ್ಯಯ ಮಾಡಲಾಗಿದೆ. 800 ವರ್ಷಗಳಿಂದ ಪಿಸಾ ಗೋಪುರ ವಾಲಿಕೊಂಡೇ ನಿಂತಿದೆ. ಇನ್ನೂ ವಾಲುತ್ತಲೇ ಇದೆ..!



 ಪಿಸಾದಲ್ಲಿನ ಬ್ಯಾಪ್ಟಿಸ್ಟ್ರಿ ಇಗರ್ಜಿಯ ಪಕ್ಕದಲ್ಲಿದಲ್ಲಿ ಘಂಟೆ ಗೋಪುರವಾಗಿ ಇದನ್ನು ಕಟ್ಟಲಾಯಿತು. ಪ್ರಾರಂಭದಲ್ಲಿ ಇದನ್ನು 16 ಅಂತಸ್ತಿನ ಗೋಪುರವಾಗಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಎಂಟನೇ ಮಹಡಿಯ ಕಾರ್ಯ ನಿರ್ಮಾಣವಾಗುವ ವೇಳೆಗೆ ಕೇಂದ್ರ ಅಕ್ಷದಿಂದ ಸುಮಾರು 2.1 ಮೀ. ವಾಲಿದ್ದರಿಂದ ನಿರ್ಮಾಣವನ್ನು ಅಲ್ಲಗೇ ನಿಲ್ಲಿಸಲಾಯಿತು. ನಿರ್ಮಾಣ ಅರ್ಧದಲ್ಲೇ ನಿಂತರೂ ಇದರ ಬಗ್ಗೆ ಆಕರ್ಷಣೆ ಮಾತ್ರ ಕಡಿಮೆಯಾಗಿಲ್ಲ. ಇದು ಪ್ರತಿ ವರ್ಷ 2. ಸೆ. ಮೀ. ವಾಲುತ್ತಾ ಈಗ "ಪಿಸಾ ವಾಲು ಗೋಪುರ" ಎಂದು ಪ್ರಖ್ಯಾತವಾಗಿದೆ. ಪ್ರತಿ 20 ವರ್ಷದಲ್ಲಿ ಕಟ್ಟಡ 1 ಇಂಚು ವಾಲುತ್ತದೆ ಎಂದು ಅಂದಾಜಿಸಲಾಜಿದೆ.

ವಾಲುವುದಕ್ಕೆ  ಏನು ಕಾರಣ?
ಪಿಸಾ ಗೋಪುರ ಸುಮಾರು 55.86 ಮೀಟರ್ (187 ಅಡಿ) ಎತ್ತರವಾಗಿದೆ. ಇದರ ಅಡಿಪಾಯ ಕೇವಲ ಮೂರು ಮೀಟರ್ ಆಳ ಇರುವುದೇ ಅದು ವಾಲುವುದಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಾರೆ. ವಾಸ್ತವವಾಗಿ  ಪಿಸಾ ಗೋಪುರ ನಿಂತಿರುವುದು ಗಟ್ಟಿ ಕಲ್ಲಿನ ನೆಲದ ಮೇಲಲ್ಲ. ಬದಲಾಗಿ ತೀರಾ ಜಾಳಾಗಿ ಸಂಚಯ ಗೊಂಡಿರುವ ಶಿಲಾ ಪದರದ ಮೇಲೆ. ಪಿಸಾ ಗೋಪುರ ವಾಲಲು ಇದೇ ಕಾರಣ ಎನ್ನುವವರೂ ಇದ್ದಾರೆ.

ವಾಲಿ ನಿಂತಿರುವುದೇ ಚೆಂದ

ಗೋಪುರ ಒಂದು ಕಡೆ 56.67 ಮೀ.ಎತ್ತರ ವಿದ್ದರೆ ವಾಲಿದ ಭಾಗದಲ್ಲಿ 55. 86 ಮೀಟರ್ ಎತ್ತರವಾಗಿದೆ. ಭಾರ ತಾಳಲಾರದೇ ಗೋಪುರ ಬೀಳುವ ಸಾಧ್ಯತೆ ಇರುವುದರಿಂದ 1990ರಲ್ಲಿ ಪಿಸಾ ಗೋಪುರ ಏರುವುದಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಆದರೂ ಇದು ವಾಲಿ ನಿಂತಿರುವ ದೃಶ್ಯ ನೋಡಲು ಪ್ರವಾಸಿಗರು ಬರುತ್ತಲೇ ಇರುತ್ತಾರೆ.

ಗೋಪುರ ನಿರ್ಮಾಣ ಇತಿಹಾಸ

1173ರಲ್ಲಿ  ಕಟ್ಟಡದ ನಿರ್ಮಾಣ ಆರಂಭಗೊಂಡು 1178ರಲ್ಲಿ 3 ಅಂತಸ್ತುಗಳು ಪೂರ್ಣಗೊಂಡಾಗ ಇಟಲಿಯಲ್ಲಿ ಯುದ್ಧ ಆರಂಭವಾಗಿದ್ದರಿಂದ ಕಟ್ಟಡ ನಿರ್ಮಾಣ ಕಾರ್ಯ ನಿಂತುಹೋಯಿತು. ನಂತರ 1275ರಲ್ಲಿ ಗೋಪುರ ನಿರ್ಮಾಣ ಮತ್ತೆ ಆರಂಭವಾಗಿ 3 ಅಂತಸ್ತುಗಳನ್ನು ಕಟ್ಟಲಾಯಿತು. ಮತ್ತೆ 1319ರ ತನಕ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿತು. ಅಂತಿಮವಾಗಿ 1319ರಿಂದ 1350ರಲ್ಲಿ ಕೊನೆಯ ಎರಡು ಅಂತಸ್ತುಗಳನ್ನು ನಿರ್ಮಿಸಲಾಯಿತು.

ಗೋಪುರ ಏಕೆ ಬೀಳಲಿಲ್ಲ?
ಕಟ್ಟಡ ನಿರ್ಮಾಣವಾಗಲು ಸುದೀರ್ಘ ಅವಧಿ ತೆಗೆದುಕೊಂಡಿದ್ದೇ ಗೋಪುರ ಬೀಳದೇ ಇರಲು ಪ್ರಮುಖ ಕಾರಣವಾಗಿದೆ. ಕಟ್ಟಡ ನಿಮಾಣ ಸ್ಥಗಿತಗೊಂಡಿದ್ದ ಸಮಯದಲ್ಲಿ ಇದರ ತಳಪಾಯ ತನ್ನಷ್ಟಕ್ಕೇ ಗಟ್ಟಿಯಾಗಿದೆ. ಅಲ್ಲದೇ ಗೋಪುರವನ್ನು ಬಿಳಿಯ ಕಲ್ಲಿನ ಶಿಲೆಯಲ್ಲಿ ನಿರ್ಮಿಸಲಾಗಿದ್ದು, ಅವು ಬಾಗುವ ಮತ್ತು ಹೊಂದಿಕೊಳ್ಳುವ ಗುಣಹೊಂದಿವೆ. ಹೀಗಾಗಿ ಕಟ್ಟಡ ವಾಲಿದರೂ ಬೀಳುವುದಿಲ್ಲ.

ಕಟ್ಟಡದ ವಿಶೇಷತೆಗಳು
  • ಸಂಗೀತದ ಸ್ವರಗಳನ್ನು ನುಡಿಸಬಲ್ಲ 7 ಘಂಟೆಗಳನ್ನು ಗೋಪುರದಲ್ಲಿ ಅಳವಡಿಸಲಾಗಿದೆ.
  • ಪಿಸಾ ಗೋಪುರ ಒಟ್ಟೂ 14.453 ಟನ್ ತೂಕವುದೆ ಎಂದು ಅಂದಾಜು ಮಾಡಲಾಗಿದೆ.
  • ಗೋಪುರದ ಕೆಳಗಿನಿಂದ ಮೇಲಿನ ಅಂತಸ್ತಿನವರೆಗೆ 297 ಮಟ್ಟಿಲುಗಳಿವೆ.
  • ವಾಲುವ ಪಿಸಾ ಗೋಪುರ ಮಧ್ಯ ಯುಗದದ ರೊಮಾನೆಸ್ಕ್ಯೂ ಮಾದರಿ ವಾಸ್ತುಶಿಲ್ಪ ವಿನ್ಯಾಸ ಒಳಗೊಂಡಿದೆ.




 

Sunday, September 16, 2012

ವಿಶ್ವ ವ್ಯಾಪಿ ಗಣಪನಿಗೆ ಎಲ್ಲಡೆಯೂ ಪೂಜೆ

ಗಣಪತಿ ಜಾಗತಿಕ ವಾಗಿ ಪೂಜಿಸಲ್ಪಡುವ ದೇವತೆ. ಹೀಗಾಗಿಯೇ ಜಗತ್ತಿನ ಮೂಲೆ ಮೂಲೆಯಲ್ಲಿಯೂ ಗಣೇಶನಿಗೊಂದು ಸ್ಥಾನವಿದೆ. ಮಧ್ಯಯುಗದ ಸಮಯದಲ್ಲಿ ದೂರದ ದೇಶಗಳಾದ ದಕ್ಷಿಣ ಮತ್ತು ಮಧ್ಯ  ಅಮೆರಿಕ, ಮ್ಯಾಕ್ಸಿಕೊ, ಕಾಂಬೊಡಿಯಾ,   ಜಪಾನ್ ಮತ್ತು ಇರಾನ್ಗಳಲ್ಲಿ ಗಣೇಶ ದೇವಾಲಯಗಳನ್ನು ನಿರ್ಮಾಣಮಾಡಲಾಗಿತ್ತು. ಅಲ್ಲದೇ ಹಿಂದೂ ಧರ್ಮದ ಪ್ರಭಾವ ಉತ್ತುಂಗದಲ್ಲಿದ್ದ ಕಾಲದಲ್ಲಿ ಶ್ರೀಲಂಕಾ, ತೈಲ್ಯಾಂಡ್, ಇಂಡೋನೇಶಿಯಾ, ಚೀನಾದಲ್ಲಿಯೂ ಹಲವಾರು ಗಣೇಶ ದೇವಾಲಯಗಳು ಸ್ಥಾಪನೆಯಾಗಿದ್ದವು. ಆಧುನಿಕ 21ನೇ ಶತಮಾನದಲ್ಲಿ ಬ್ರಿಟನ್, ಕೆನಡಾ ಆಸ್ಟ್ರೇಲಿಯಾ, ಪ್ರಾನ್ಸ್, ಜರ್ಮನಿ ಮತ್ತು ಅಮೆರಿಕದಲ್ಲಿ ಬ್ರಹದಾಕಾರದ ಗಣೇಶ ದೇವಾಲಯಗಳು ನಿರ್ಮಾಣ ಗೊಂಡಿವೆ.



ಭಾರತದಲ್ಲಿ ಕೇವಲ ಹಿಂದುಗಳಷ್ಟೇ ಅಲ್ಲ ಸರ್ವ ಜನಾಂಗದವರೂ ಗಣೇಶನ ಚತುರ್ಥಿಯ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಗಣೇಶೋತ್ಸವ ಸಾರ್ವತ್ರಿಕ ಉತ್ಸವದ ರೂಪ ಪಡೆಯುತ್ತದೆ. ಬಹುತೇಕ ಭಾರತೀಯರಿಗೆ ಗಣೇಶ ದೈವತ್ವದ ಸಂಕೇತ. ವಿದೇಶಗಳಲ್ಲಿ ನೆಲೆಸಿದವರಿಂದ ಭಾರತೀಯತೆಯ ಗುರುತಾಗಿ ಗಣೇಶ ಆರಾಧಿಸಲ್ಪಡುತ್ತಾನೆ.
  • ವಿದೇಶಗಳಲ್ಲಿನ ಗಣೇಶ ದೇವಾಲಯ
ಅಕ್ಕ ಪಕ್ಕದ ದೇಶಗಳಲ್ಲಿ
 ಭಾರತದ ಪಕ್ಕದ ದೇಶ ಶ್ರೀಲಂಕಾದಲ್ಲಿ 14 ಪುರಾತನ ಗಣೇಶ ದೇವಾಲಯಗಳಿವೆ. ಕೊಲಂಬೊಗೆ ಹತ್ತಿರದಲ್ಲರುವ ಕೆಲನಿಯಾ ಬೌದ್ಧ ದೇವಾಲಯದದಲ್ಲಿ ಗಣೇಶನ ಶಿಲ್ಪ ಕಲಲಾಕೃತಿಗಳನ್ನು ನೋಡಬಹುದು. ಅದೇರೀತಿ ನೇಪಾಳ, ಬಾಂಗ್ಲಾ ದೇಶದಲ್ಲಿಯೂ ಗಣೇಶ ದೇವಾಲಯವಿದೆ.
ಪೂರ್ವಾತ್ಯ ರಾಷ್ಟ್ರಗಳಲ್ಲಿ
ಭಾರತದ ಪೂರ್ವಕ್ಕಿರುವ ಬರ್ಮಾ ಕಾಂಬೊಡಿಯಾ, ಸಿಯಾಂ, ಇಂಡೋನೇಶಿಯಾ, ಮಲಯಾ ಪೆನೆಸುಲಾ ದೇಶಗಳ  ಪ್ರಾಚೀನ ನಾಗರಿಕತೆಯ ಪಾರಂಪರಿಕ ತಾಣಗಳಲ್ಲಿ 12ನೇ ಶತಮಾನದ ಅಪರೂಪದ ಗಣೇಶದೇವಾಲಯ ಮತ್ತು ಶಿಲ್ಪಕಲಾಕೃತಿಗಳು ಲಭ್ಯವಾಗಿವೆ. ಬರ್ಮಾವನ್ನು ಆಳುತ್ತಿದ್ದ ಬಗನ್ ಸಾಮಾಜ್ಯದ ದೊರೆಗಳು ಅಂದು ಭಾರತದಲ್ಲಿ ಆಳ್ವಿಕೆ ನಡೆಸುತ್ತಿದ್ದ ಚೋಳ ದೊರೆಗಳಿಂದ ಪ್ರಭಾವಿತರಾಗಿ ಸಾವಿರಾರು ಹಿಂದು  ದೇವಾಲಯಗಳನ್ನು ನಿರ್ಮಾಸಿದ್ದರು.  ಚೋಳರು  ಗಣೇಶ ದೇವರ ಆರಾಧ್ಯ ಭಕ್ತರಾಗಿದ್ದರು. ಆದರೆ ಅವು  ಕಾಲಕ್ರಮೇಣ ನಾಶವಾಗಿ ಭೂಮಿಯ ಗರ್ಭಸೇರಿವೆ.

 ಬರ್ಮಾದ  ದೊರೆ ಅನವರತ ಮತ್ತು ಬದ್ಧನ ಅನುಯಾಯಿಗಳು 1057ನೇ ಇಸವಿಯಲ್ಲಿ ಬಗನ್ನಲ್ಲಿ ನಿರ್ಮಿಸಿದ ಗಣೇಶ ದೇವಾಲಯ. ಈ ದೇವಾಲಯದ ಪ್ರತಿಯೊಂದು  ಮೂಲೆಯಲಲ್ಲಿಯೂ ಗಣೇಶನ ಮೂರ್ತಿ ಸ್ಥಾಪಿಸಲಾಗಿತ್ತು.
ಜಾವಾ-ಸುಮಾತ್ರಾ, ಬಾಲಿ ಮತ್ತು ಇಂಡೋನೇಶಿಯಾ ದೇಶಗಳು ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದವು. ಬಾಲಿ ದ್ವೀಪದಲ್ಲಿ ಈಗಲೂ ಸಹ ಅನೇಕ  ಹಿಂದು ದೇವಾಲಯಗಳು  ಉಳಿದುಕೊಂಡಿವೆ. ಜಾವಾದಲ್ಲಿ ಹಿಂದುಗಳು ಮತ್ತು ಬೌದ್ಧ ಧರ್ಮೀಯರು 12ನೇ  ಶತಮಾನದಲ್ಲಿ 3 ಮೀಟರ್ ಎತ್ತರದ ಗಣೇಶ ಮೂರ್ತಿ ನಿರ್ಮಿಸಿದ್ದರು. ಇಂಡೋನೇಶಿಯಾ ಇಂದು ಸಂಪೂರ್ಣ ಇಸ್ಲಾಮಿಕ್ ದೇಶವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಈ ದೇಶ ಹಿಂದು ದೇವಾಲಯಗಳಿಂದ ತುಂಬಿಕೊಂಡಿತ್ತು. ತೈಲ್ಯಾಂಡ್ ಈಗಲೂ ಹಿಂದು ಧರ್ಮದ ಪ್ರಭಾವ ಉಳಿಸಿಕೊಂಡಿದೆ. ಇಲ್ಲಿನ ಹೆಚ್ಚಿನವರು ಬೌದ್ಧರಾಗಿದ್ದರೂ ಬ್ಯಾಂಕಾಕ್ ನಲ್ಲಿನ ಗಣೇಶ ದೇವಾಲಯದಲ್ಲಿ ಎಂದಿನಂತೆ  ಪೂಜೆ ನಡೆಯುತ್ತಿದೆ.


ಪಾರಂಪತಿಕ ಪಟ್ಟಿಗೆ ಸೇರ್ಪಡೆ
ಯುನೆಸ್ಕೊದ ಜಾಗತಿಕ ಪಾರಂಪರಿಕ ತಾಣದಲ್ಲಿ ಸೇರ್ಪಡೆಗೊಂಡಿರುವ ಕಾಂಬೋಡಿಯಾದ ಆಂಗ್ಕರ್ ವಾಟ್ ದೇವಾಲಯಗಳಲ್ಲಿ 14ನೇ ಶತಮಾನದ ನಿರ್ಮಾಣಗೊಂಡ ವಿಷ್ಣು, ಶಿವ ಮತ್ತು ಗಣೇಶ ದೇವರ ಮೂರ್ತಿಗಳನ್ನು ನೋಡಬಹುದು. ಆಂಗ್ಕರ್ ವಾಟ್ ಜಗತ್ತಿನ ಅತ್ಯಂತ ದೊಡ್ಡ ಹಿಂದು ದೇವಾಲಯ ಸಮುಚ್ಚಯ ಎನಿಸಿಕೊಂಡಿದೆ. ಈ ದೇವಾಲಯ  2800 ಅಡಿ ಉದ್ದ ಮತ್ತು 2800 ಅಡಿ ಅಗಲವಾಗಿದೆ.

  ಪಾಶ್ಚಿಮಾತ್ಯ ದೇಶದಲ್ಲಿ 

ಭಾರತದ ಸುತ್ತಮುತ್ತಲಿನ ದೇಶಗಳಷ್ಟೇ ಅಲ್ಲ ಮೆಕ್ಸಿಕೊ, ಗೌಟೆಮ್ಲಾ, ಪೆರು, ಬೊಲಿವಿಯಾ ದೇಶಗಲ್ಲಿಯೂ ಹಿಂದೂ ದೇವಾಲಯಗಳಿವೆ. ಮೆಕ್ಸಿಕೊದ ಡಿಜಿಗೊ ರಿವೆರಿಯಾ ನಗರ ಗಣೇಶ ಮೂರ್ತಿತಯಾರಿಕೆಗೆ  ಪ್ರಸಿದ್ಧಿಪಡೆದಿತ್ತು ಎಂಬುದು ಉತ್ಕಲನದಿಂದ ತಿಳಿದುಬಂದಿದೆ. ಇಂಗ್ಲೆಂಡ್ನಲ್ಲಿ ನೆಲೆಸಿದ ಕೆಲವು ಭಾರತೀಯ ಕುಟುಂಬಗಳು 1979ರಲ್ಲಿ ವಿಂಬಲ್ಡನ್ನಲ್ಲಿನ ಗಣೇಶನ ಹಾಲ್ ನಿರ್ಮಿಸಿವೆ. ಎಲ್ಲರೂ ಅಲ್ಲಿ ಸೇರಿ ಪೂಜೆ ನಡೆಸುತ್ತಾರೆ. ಅಮೆರಕದ ನ್ಯಾಶ್ವಿಲ್ಲೆಯಲ್ಲಿ ಹಿಂದುಗಳ ಸಾಂಸ್ಕೃತಿಕ ಕೇಂದ್ರದ ಸಂಕೇತವಾಗಿ 1985ರಲ್ಲಿ ಗಣೇಶ ದೇವಾಲಯ ನಿರ್ಮಿಸಲಾಗಿದೆ.

ಆಯಾಯ ದೇಶ ಮತ್ತು ಸಂಸ್ಕೃತಿಗೆ ತಕ್ಕಂತೆ ಗಣೇಶ ಮರ್ತಿಯ ರೂಪ ಮತ್ತು ಆಕಾರದಲ್ಲಿಯೂ ಬದಲಾವಣೆಯಾಗಿದೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ 5ನೇ ಶತಮಾನದಲ್ಲಿ ನಿರ್ಮಾಣಗೊಂಡ ಗಣೇಶನ ವಿಗ್ರಹ ಗ್ರೀಕ್ ಶಿಲ್ಪಕಲೆಯ ಪ್ರಭಾವಕ್ಕೆ ಒಳಗಾಗಿದೆ.

 

Thursday, September 13, 2012

ಥ್ರೀ ಇನ್ ಒನ್ ಸಮುದ್ರ ಕುದುರೆ!

ಮುಖ-ಕುದುರೆಯಂತೆ, ದೇಹ-ಕಂಬಳಿ ಹುಳುವಿನಂತೆ, ಬಾಲ-ಹಲ್ಲಿಯಂತೆ ಇರುವ ಕಡಲ ಪ್ರಪಂಚದ ಅಪಪರೂಪದ ಜೀವಿ. ಹೆರಿಗೆ ನೋವು ಅನುಭವಿಸಿ ಮಕ್ಕಳನ್ನು ಹೆತ್ತು, ಹೆರುವ ಗಂಡು, ಅದೂ ಏಕ ಪತ್ನಿ ವೃತಸ್ಥ ಎನಿಸಿಕೊಂಡಿರುವ ಸಮುದ್ರ ಕುದುರೆ- ಸೀ ಹಾರ್ಸ್ ಅಥವಾ ಹಿಪ್ಪೊ ಕೆಂಪಸ್. ಇದೊಂದು ಜಾತಿಯ ಮೀನು. 


ಸಮುದ್ರ ಕುದುರೆಯ ಎತ್ತರ 2ರಿಂದ 30 ಸೆಂ.ಮೀ. ಆಯಸ್ಸು-1ರಿಂದ 5 ವರ್ಷ. ಸಮುದ್ರದಲ್ಲಿನ ಗಿಡ ಎಲೆಗಳ ಹಿನ್ನೆಲೆಗೆ ಹೊಂದಿಕೊಂಡು ಮೈ ಬಣ್ಣ ಮತ್ತು ವಿನ್ಯಾಸವನ್ನು ಉಸರವಳ್ಳಿಯಂತೆ ಬದಲಿಸುವ ವಿಶಿಷ್ಟ ಸಾಮಥ್ರ್ಯ ಸಮುದ್ರ ಮೀನಿಗೂ ಇದೆ. ಸಮುದ್ರ ಕುದುರೆಗಳಲ್ಲಿ ಸುಮಾರು 40 ರಿಂದ 50 ವಿಧಗಳಿವೆ. ಸಮುದ್ರ ಹುಲ್ಲು ಹವಳದ ದ್ವೀಪ ಇವುಗಳಿಗೆ ಇಷ್ಟದ ತಾಣ. ಇವು ಹೆಚ್ಚಾಗಿ ಉಷ್ಣ ಮತ್ತು ಸಮಶೀತೋಷ್ಣ ಹವೆ ಇರುವ ಸಮುದ್ರದಲ್ಲಿ ಕಂಡುಬರುತ್ತದೆ.
 
  • ಮಕ್ಕಳನ್ನು ಹೆರುವ ಗಂಡು
ಗಂಡು ಸಮುದ್ರ ಕುದರೆ ಹೆಣ್ಣಿನಂತೆಯೇ ಗರ್ಭಧರಿಸಿ ಮರಿಗಳನ್ನು ಹೆರುತ್ತದೆ. ಗಂಡು ಸಮುದ್ರ ಕುದುರೆಯ ಹೊಟ್ಟೆಯ ಭಾಗ ಚೀಲದಂತಹ ಗರ್ಭಕೋಶ ಹೊಂದಿರುತ್ತದೆ. ಹೆಣ್ಣು ಗಂಡಿನೊಡನೆ ಮಿಲನದ ಬಳಿಕ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡವನ್ನು ಫಲಗೊಳಿಸುತ್ತದೆ. ಭ್ರೂಣದ  ಬೆಳವಣಿಗೆಗೆ ಬೇಕಾದ ಎಲ್ಲಾ ಜೀವಸತ್ವಗಳನ್ನು ಪೂರೈಸಿ ಮೂರುವಾರಗಳ ಬಳಿಕ ಪೂರ್ಣರೂಪದಲ್ಲಿ ಬೆಳವಣಿಗೆಯಾದ 50 ರಿಂದ 1000 ಮರಿಗಳಿಗೆ ಗಂಡು ಜನ್ಮ ನೀಡುತ್ತದೆ. ಹೆಣ್ಣು ಕುದುರೆ ಪ್ರತಿದಿನ ಗರ್ಭಹೊತ್ತ ಗಂಡಿನ ಕುಶಲೋಪರಿ ವಿಚಾರಿಸುತ್ತದೆ. ಪ್ರಸವದ ಎರಡುದಿನಗಳ ಬಳಿಕ ಗಂಡುಕುದರೆ ಮತ್ತೆ ಗರ್ಭಧರಿಸಲು ತಯಾರಾಗುತ್ತಾನೆ. ತನ್ನ ಗರ್ಭಕೋಶ ಬರಿದಾಗಿದೆ ಎಂದು ತೋರಿಸಲು ಚೀಲದಿಂದ ನೀರನ್ನು ಹೊರ ಚಿಮ್ಮಿಸಿ, ನೃತ್ಯಮಾಡಿ ಸಂಪ್ರದಾಯಂತೆ ಸಂಗಾತಿಯನ್ನು ಒಲಿಸಿಕೊಳ್ಳುತ್ತದೆ.

ಹೊಟ್ಟೆಯಿಲ್ಲದಿದ್ದರೂ ತಿಂಡಿ ಪೋತ 
ಸಮುದ್ರ ಕುದುರೆಗೆ ಹೊಟ್ಟೆ ಇಲ್ಲ. ಹೀಗಾಗಿ ಏನಾದರೂ ತಿನ್ನುತ್ತಲೇ ಇರಬೇಕು. ಸಮಾನ್ಯವಾಗಿ ಸಮುದ್ರ ಕುದುರೆಗಳು ಮೀನಿನ ಮೊಟ್ಟೆ ಮತ್ತು ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಸತ್ತ ಪ್ರಾಣಿಗಳನ್ನು ಇವು ತಿನ್ನುವುದಿಲ್ಲ. ಸಮುದ್ರ ಮೀನಿಗೆ ಬೇಟೆಯಾಡಲು ಬರುವುದಿಲ್ಲ. ಅಡಗಿ ಕುಳಿತು ನುಂಗುವ ಸಮುದ್ರ ಮೀನು ಬರೀ ತಿಂಡಿಪೋತ. ಇವುಗಳ ಮೈ ಇತರ ಮೀನುಳಂತೆ ನುಣುಪಾದ ಪೊರೆಯ ಬದಲಾಗಿ ಒರಟಾದ ಚರ್ಮದಿಂದ ಮಾಡಲ್ಪಟ್ಟಿವೆ.ಇವುಗಳ ದೇಹ ಒರಟಾಗಿರುವ ಕಾರಣ ಮೀನು ಹಾಗೂ ಪ್ರಾಣಿಗಳು ಇದನ್ನು ತಿನ್ನಲು ಇಷ್ಟ ಪಡುವುದಿಲ್ಲ.  
ಒತ್ತಡಗಳಿಗೆ ಒಳಗಾದಾಗ ಮತ್ತು ಪರಿಸರದಿಂದ ಮರೆಮಾಚಿಕೊಳ್ಳಲು ಮೈಬಣ್ಣ ಬದಲಿಸಿಕೊಳ್ಳುತ್ತವೆ. ಅಲ್ಲದೇ ಹವಳದ ದಂಡೆಗಳಲ್ಲಿ ಮತ್ತು ಸಮುದ್ರ ಹುಲ್ಲುಗಲ್ಲಿ ಅಡಗಿಕೊಳ್ಳಲ್ಲವು. ಆದುದರಿಂದಲೇ ಇವು ಸುರಕ್ಷಿತ ಜೀವಿಗಳು. 


  • ಓಡಲು ಬಾರದ ಕುದುರೆ
ಈ ಸಮುದರ ಜೀವಿ ಶಾಂತಿ ಪ್ರೀಯ. ಬೇಗನೆ ಈಜಲು ಬಾರದವ. ಕುದುರೆ ಎಂಬ ಹೆಸರಿದ್ದರೂ ಓಟದಲ್ಲಿ ಇವು ಭಾರೀ ಹಿಂದೆ. ಕಡಲ ಜೀವಿಗಳಲಲ್ಲಿ ಸಮುದ್ರ ಕುದುರೆಗಳ ಚಲನೆ ಅತ್ಯಂತ  ನಿಧಾನ. ಗಂಟೆಗೆ ಕೇವಲ 5 ಅಡಿ ದೂರರನ್ನು ಮಾತ್ರ ಚಲಿಸಬಲ್ಲದು. ಕೆಲವು ಸಮದ್ರ ಕುದುರೆಗಳು ಅಷ್ಟು ದೂರವನ್ನೂ  ಕ್ರಮಿಸಲಾರವು.
  • ಭಾರೀ ಬೇಡಿಕೆ
ಔಷಧಕ್ಕಾಗಿ ಆಗ್ನೇಯ ಏಷ್ಯಾ ಮತ್ತು ಚೀನಾದಲ್ಲಿ ಸಮುದ್ರ ಮೀನಿಗೆ ಭಾರೀ ಬೇಡಿಕೆ. ಅಕ್ವೇರಿಯಂನಲ್ಲಿ ಅಂದದ ಮೀನುಗಳನ್ನು ಸಾಕುವಂತೆ ಇವುಗಳನ್ನು ಸಾಕಲಾಗುತ್ತದೆ. ವಿಷಾದದ ಸಂಗತಿಯೆಂದರೆ ಹೆರುವ ಹೊರುವ ವಿಶಿಷ್ಟ ಸ್ವಭಾವದ ಈ ಗಂಡು ಅಪಾಯದ ಅಂಚಿನಲ್ಲಿದ್ದಾನೆ. 

Sunday, September 2, 2012

ಮರುಭೂವಿಯ ಹಸಿರು ಕ್ಯಾಕ್ಟಸ್ ಸಸ್ಯ

ಪಾಪಸ್ಕಳ್ಳಿಯನ್ನು ನಾವೆಲ್ಲಾ ನೋಡಿರುತ್ತೇವೆ. ಇದರ ಮೈ ಎಲೆಗಳ ಬದಲು ಬರೀ ಮುಳ್ಳುಗಳಿಂದ ತುಂಬಿರುತ್ತದೆ. ಆದರೆ, ಅದು ಮರವಾಗಿ ಬೆಳೆದಿರುವದನ್ನು ನೋಡಿರುವುದಿಲ್ಲ. ಈ ಜಾತಿಗೆ  ಸೇರಿದ ಸಾಗುರೊ ಕ್ಯಾಕ್ಟಸ್ ಸಸ್ಯ ಎಲ್ಲಾ ಮರಗಳಂತೆ ಆಳೆತ್ತರಕ್ಕೆ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಕಾರ್ನೆಜಿಯಾ ಗಿಗಾಂಟಿಯಾ. ಕ್ಯಾಕ್ಟಸ್ ಉತ್ತರ ಅಮೆರಿಕದ ದಕ್ಷಿಣದಲ್ಲಿರುವ ಸೊನೊರದ ಮರುಭೂಮಿಯಲ್ಲಿ ಮಾತ್ರ ಕಂಡುಬರುವ ಅಪರೂಪದ ಸಸ್ಯಸಂಕುಲ.


 
ಕ್ಯಾಕ್ಟಸ್ ವಿಶೇಷತೆಗಳು

ಕ್ಯಾಕ್ಟಸ್ ಗಿಡದ ಬೆಳವಣಿಗೆ ತುಂಬಾ ನಿಧಾನ. 10 ವರ್ಷದ ಕ್ಯಾಕ್ಟಸ್ ಗಿಡ ಬೆಳೆಯುವುದು ಕೇವಲ 1.5 ಇಂಚು. ಇತರ ಮರಗಳಂತೆ ಇದು ಕೂಡಾ 40ರಿಂದ 60 ಅಡಿ (12--18 ಮೀಟರ್) ಎತ್ತರಕ್ಕೆ ಬೆಳೆಯಬಲ್ಲದು. ಒಂದು ಮರ ಸುಮಾರು 2117 ಕೆ.ಜಿ ತೂಕ ಹೊಂದಿರುತ್ತದೆ. 75 ವರ್ಷದ ಬಳಿಕ ಮೊದಲನೇ ಕೊಂಬೆ ಕವಲೊಡೆಯುತ್ತದೆ. ಒಂದರಿಂದ 25 ಕೊಂಬೆಗಳವರಗೂ ಬಿಡುತ್ತವೆ. ಕೆಲವೊಂದಕ್ಕೆ ಕೊಂಬೆಗಳೇ ಇರುವುದಿಲ್ಲ. ಕೊಂಬೆಗಳು ಹೂ ಬಿಡುವ ಮೂಲಕ ಸಸ್ಯದ ಪುನರುತ್ಪಾದನೆಗೆ ನೆರವಾಗುತ್ತವೆ.  ಕ್ಯಾಕ್ಟಸ್ ಗಿಡದ ಮೈ ಸಂಪೂರ್ಣ ಮುಳ್ಳುಗಳಿಂದ ತುಂಬಿರುತ್ತದೆ. ಇದರ ಕೊಂಬೆ ಮತ್ತು ಕಾಂಡಗಳು ಯಾವಾಗಲೂ ಹಸಿರಾಗಿರುತ್ತದೆ. ಉತ್ತರ ಅಮೆರಿಕಾದ ಮ್ಯಾಕ್ಸಿಕೊ. ದಕ್ಷಿಣ ಅರಿಜೊನಾ, ಪಶ್ಚಿಮ ಸೊನೊರ ಮರುಭೂಮಿಯಲ್ಲಿ ಕ್ಯಾಕ್ಟಸ್ ಗಿಡದ ಅರಣ್ಯವನ್ನು ಕಾಣಬಹುದು. ಮಳೆಯ ಪ್ರಮಾಣವನ್ನು ಅನುಸರಿಸಿ ಕ್ಯಾಕ್ಟಸ್ ಬೆಳವಣಿಗೆ ಹೊಂದುತ್ತದೆ. ನೀರು ಮತ್ತು ಚಳಿಯಪ್ರಮಾಣ ಹೆಚ್ಚಿದ್ದರೆ ಸಸ್ಯ ಬೆಳವಣಿಗೆ ಹೊಂದುವುದಿಲ್ಲ. ಉತ್ತಮ ವಾತಾವರಣವಿದ್ದರೆ 150 ರಿಂದ 200 ವರ್ಷಗಳವರೆಗೆ ಕ್ಯಾಕ್ಟಸ್ ಬದುಕಿರುತ್ತದೆ. 

ಹೂ ಹಣ್ಣನ್ನೂ ಕೊಡುತ್ತದೆ
ಮರುಭೂಮಿಯಲ್ಲಿದ್ದರೂ ಕ್ಯಾಕ್ಟಸ್ ಹೂ ಹಣ್ಣುನ್ನು ಬಿಡುತ್ತದೆ.  ಸಾಮಾನ್ಯವಾಗಿ ಎಪ್ರಿಲ್ನಿಂದ ಜೂನ್ತಿಂಗಳ ತನಕ ರಾತ್ರಿಯಲ್ಲಿ ಮಾತ್ರ ಅರಳುವ ಬಿಳಿಯ ಹೂವನ್ನು ಬಿಡುತ್ತದೆ. ಹೂವುಗಳು ತಾವಾಗಿಯೇ ಹಣ್ಣನ್ನು ಉತ್ಪಾದಿಸಲಾರವು. ಅಪಾರ ಸಂಖ್ಯೆ ಪರಾಗಸ್ಪರ್ಶದ ಬಳಿಕ ಜೂನ್ ತಿಂಗಳ ಕೊನೆಯಲ್ಲಿ ಸಿಹಿಯಾದ, ಕೆಂಪು ಬಣ್ಣದ ಹಣ್ಣನ್ನು ಬಿಡುತ್ತದೆ. ಉತ್ತಮವಾದ ಹಣ್ಣಿನಲ್ಲಿ ಎರಡು ಸಾವಿದಷ್ಟು ಬೀಜಗಳಿರುತ್ತವೆ. 

ಅಲಂಕಾರಿಕ ಸಸ್ಯ
ಇದು ಅಪರೂಪದ ಸಸ್ಸ ಸಂಕುಲಕ್ಕೆ ಸೇರದ್ದರೂ ಅಳಿವಿನ ಅಂಚಿಗೆ ತಲುಪಿದ ಸಸ್ಯವನ್ನಾಗಿ ಗುರುತಿಸಲಾಗಿಲ್ಲ. ಕ್ಯಾಕ್ಟಸ್ ಅಲಂಕಾರಿಕ ಗಿಡವಾಗಿ ಭಾರೀ ಬೇಡಿಕೆ ಹೊಂದಿದೆ. ಹೀಗಾಗಿ ಈ ಸಸ್ಯವನ್ನು ಮಾರಾಟಮಾಡಲು ಮತ್ತು ಬೆಳೆಸಲು ಅಮೆರಿಕದ ಅರಿಜೊನಾ ರಾಜ್ಯ  ಕಠಿಣ ನಿಯಮಗಳನ್ನು ರೂಪಿಸಿದೆ. ಅಮೆರಿಕದಲ್ಲಿ ಬೆಳೆಯುವ ಕಳ್ಳಿಗಿಡಗಳಲ್ಲಿ ಕ್ಯಾಕ್ಟಸ್ ಹೆಚ್ಚಿನ  ಸಂಖ್ಯೆಯಲ್ಲಿದೆ.

ಸತ್ತಬಳಿಕವೂ ಉಪಯೋಗ

ಈ ಸಸ್ಯದ ಬೇರುಗಳು 4 ರಿಂದ 6 ಇಂಚಿನ ತನಕ ಇಳಿದಿರುತ್ತದೆ. ಬೇರುಗಳು ಮರದ ಎತ್ತರಕ್ಕೆ ತಕ್ಕಂತೆ ಹರಡಿಕೊಂಡಿರುತ್ತದೆ. ಒಂದು ಪ್ರಧಾನ ಬೇರು 2 ಅಡಿ ಆಳದವರೆಗೆ ಇರುತ್ತದೆ.  ಮರ ಸತ್ತ ಬಳಿಕ ಮನೆಯ ಛಾವಣಿ ನಿರ್ಮಿಸಲು, ಬೇಲಿಗಳನ್ನು ನಿರ್ಮಾಣ ಮಾಡಲು ಮತ್ತು ಚಿಕ್ಕ ಪುಟ್ಟ ಪೀಠೋಪಕರಣಗಳನ್ನು ತಯಾರಿಸಲಲು ಬಳಸಲಾಗುತ್ತದೆ. ಒಣಗಿದ ಮರದ ಪೊಳ್ಳಾದ ಕಾಂಡಗಳಲ್ಲಿ ಹಕ್ಕಿಗಳು ಗೂಡುಕಟ್ಟುತ್ತವೆ.

 




 

Thursday, August 30, 2012

ಭೂಮಿಯ ಮೇಲಿನ ಸ್ವರ್ಗ ದುಬೈನ ಪಾಮ್ ಐಲ್ಯಾಂಡ್

ದುಬೈನ ಪಾಮ್ ದ್ವೀಪ ಸಮೂಹ  ಭೂಮಿಯ ಮೇಲಿನ ಸ್ವರ್ಗ, ಜಗತ್ತಿನ 8ನೇ ಅದ್ಭುತ ಎಂದು ಕರೆಸಿಕೊಂಡಿದೆ.  ಪ್ರಸಿದ್ಧ ಎಮಿರೇಟ್ ಸಮುದ್ರ ದಂಡೆಯ ಮೇಲೆ ಇದನ್ನು ನಿರ್ಮಿಸಲಾಗಿದೆ. ಮೂರು ದ್ವೀಪಗಳು ಸೇರಿ ನಿರ್ಮಾಣಗೊಂಡಿರುವ ಪಾಮ್ ದ್ವೀಪ ಸಮೂಹ ಮಾನವ ನಿರ್ಮಿತ ದ್ವೀಪಗಳಲ್ಲಿಯೇ ಅತ್ಯಂತ ದೊಡ್ಡದು. ಬೃಹದಾಕಾರದ ಪಾಮ್ ಮರದ ಆಕಾರದಲ್ಲಿ ನಿರ್ಮಿಸಿರುವುದರಿಂದ ಪಾಮ್ ಐಲ್ಯಾಂಡ್ ಎಂದು ಕರೆಯಲಾಗುತ್ತದೆ. 


ನಿಮರ್ಮಾಣಗೊಂಡಿದ್ದು ಹೇಗೆ?
  • ಅರಬ್ ವ್ಯಾಪಾರಿ ಶೇಕ್ ಮೊಹಮ್ಮದ್ ಪರಿಕಲ್ಪನೆಯಲ್ಲಿ ಪಾಮ್ ದ್ವೀಪ ಜನ್ಮತಳೆದಿದೆ. ಪಾಮ್ ದ್ವೀಪ ನಿರ್ಮಾಣಕಾರ್ಯ 2001ರಲ್ಲಿ ಆರಂಭವಾಯಿತು.
  •  ಮೊದಲು 10-15 ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಅದಕ್ಕಿಂತ ಮುಂಚೆಯೇ ಇದರ ನಿಮಾಣಕಾರ್ಯ ಪೂರ್ಣಗೊಂಡಿದೆ.   
  • ಪಾಮ್ ದ್ವೀಪ ನಿರ್ಮಿಸುವ ಸಲುವಾಗಿ ಅರೇಬಿಯನ್ ಗಾಲ್ಫ್ ಸಮುದ್ರವನ್ನು 6.5 ಕಿ.ಮೀ. ದೂರದ ವರೆಗೆ ವಿಸ್ತರಿಸಲಾಗಿದೆ. 70 ಲಕ್ಷ ಚದರ್ ಮೀಟರ್ ವಿಸ್ತೀರ್ಣವನ್ನು ಪಾಮ್ ದ್ವೀಪ ಒಳಗೊಂಡಿದೆ. ಸಮುದ್ರದ ನೀರು ಒಳನುಗ್ಗದಂತೆ 70 ಲಕ್ಷ ಟನ್ ಕಲ್ಲನ್ನು ಬಳಸಿ ಅರ್ಧ ಚಂದ್ರಾಕೃತಿಯಲ್ಲಿ ದ್ವೀಪದ ಸುತ್ತಲು 12 ಕಿ.ಮೀ. ಉದ್ದದ ತಡೆಗೋಡೆ ನಿರ್ಮಿಸಲಾಗಿದೆ. 
  • ನಾಲ್ಕು ಮೀಟರ್ನಷ್ಟು ಎತ್ತರದ ಸಮುದ್ರದ ಅಲೆಯನ್ನು ತಡೆಯುವ ಸಾಮಥ್ರ್ಯ ಈ ತಡೆ ಗೋಡೆಗೆ ಇದೆ. 90 ಲಕ್ಷ ಕ್ಯುಬಿಕ್ ಮೀಟರ್ ಮೀಟರ್ಗಿಂತಲೂ ಹೆಚ್ಚು ಮರಳನ್ನು ದ್ವೀಪದ ನಿರ್ಮಾ ಣಕ್ಕೆ ಬಳಸಲಾಗಿದೆ.
  •  ಪಾಮ್ ದ್ವೀಪ ನಿರ್ಮಾಣಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಯುಎಇ ನಿಂದಲೇ ಸಂಗ್ರಹಿಸಲಾಗಿದೆ. ಪಾಮ್ ದ್ವೀಪ ನಿರ್ಮಾಣದಿಂದ ದುಬೈ ನಗರಕ್ಕೆ 520 ಕಿ.ಮೀ. ಸಮುದ್ರ ದಂಡೆ ಹೆಚ್ಚವರಿಯಾಗಿ ಸೇರ್ಪಡೆಯಾಗಿದೆ. 

ಮೂರು ದ್ವೀಪಗಳು
1.ಪಾಮ್ ಜುಮೆರಿಶ್. 2.ಪಾಮ್ ಜೆಬೆಲ್ ಅಲಿ. 3 ಪಾಮ್ ದೈರಾ. 

ಭೂಮಿಯ ಮೇಲಿನ ಸ್ವರ್ಗ

50 ಐಷಾರಾಮಿ ಹೊಟೇಲ್, 2,500 ವಸತಿ ಸಮುಚ್ಛಯಗಳು, 2,400 ಅಪಾರ್ಟ್ಮೆಂಟ್ಸ್, 2 ಪ್ರವಾಸಿ ಬಂದರು, ರೆಸ್ಟೋರೆಂಟ್, ವಾಟರ್ ಪಾರ್ಕ್, ಕ್ರೀಡಾಂಗಣ ಹೀಗೇ ಎಲ್ಲವನ್ನೂ ಪಾಮ್ ಐಲ್ಯಾಂಡ್ ಒಂದರಲ್ಲಿಯೇ ಕಾಣಬಹುದಾಗಿದೆ. ಇನ್ನೂ ಕುತೂಹಲದ ಅಂಶವೆಂದರೆ ಪಾಮ್ ಐಲ್ಯಾಂಡ್  ಬಾಹ್ಯಾಕಾಶದಿಂದಲೂ ಬರಿಗಣ್ಣಿನಲ್ಲಿ ನೋಡಬಹುದು. ನಿರ್ಮಾಣದ ಮೊದಲೇ ಪಾಮ್ ಐಲ್ಯಾಂಡಿನ ಎಲ್ಲಾ ಕಟ್ಟಡಗಳು ಮಾರಾಟವಾಗಿವೆ. ಪಾಮ್ ಐಲ್ಯಾಂಡ್ ಜಗತ್ತಿನ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಪ್ರವಾಸಿ ತಾಣ ಎನಿಸಿಕೊಂಡಿದೆ.



 

Sunday, August 26, 2012

ಇದು ಹೂವಲ್ಲ ಜೆಲ್ಲಿ ಫಿಶ್!

ಚಿತ್ತಾಕರ್ಷಕ ರೂಪ, ಹೊಳಪು ಬಣ್ಣ, ಮಿನುಗುವ ಮೈ... ಇದನ್ನು ಹೂವೆಂದು ತಿಳಿದು ಮುಟ್ಟಲು ಮನಸ್ಸು ಮಾಡಿದಿರೋ ಮುಗಿಯಿತು. ನಿಮ್ಮನ್ನೇ ನುಂಗಿ ಬಿಡುತ್ತದೆ ಜೆಲ್ಲಿ ಫಿಶ್! ಸಮುದ್ರದ ತುಂಬೆಲ್ಲಾ ಬಣ್ಣ ಬಣ್ಣದ ಹೂ ಹಿಂಡುಗಳಂತೆ ತುಂಬಿ ಕೊಂಡಿರುವ ಜೆಲ್ಲಿ ಮೀನುಗಳ ಚಲನವಲನ ವಿಸ್ಮಯಕಾರಿ. ಫಿಶ್ ಎಂದಮಾತ್ರಕ್ಕೆ ಇವುಗಳನ್ನು ಮೀನಿಗೆ ಹೋಲಿಸಲು ಸಾಧ್ಯವಿಲ್ಲ. ಇದಕ್ಕೆ ಮೀನಿನ ಹೋಲಿಕೆ ಕೂಡಾ ಇಲ್ಲ. 
 
 ಎಲ್ಲಾ ಸಮುದ್ರಗಳಲ್ಲಿ ಮೇಲೈಯಿಂದ ಸಮುದ್ರದ ಆಳದವರೆಗೂ ಜೆಲ್ಲಿ ಮೀನುಗಳು ಕಂಡುಬರುತ್ತವೆ. ಕೆಲವು ಮೀನುಗಳು ಅಳತೆಯಲ್ಲಿ ಮನುಷ್ಯರಷ್ಟೇ ದೊಡ್ಡ  ಗಾತ್ರದಲ್ಲಿದ್ದರೆ ಇನ್ನು ಕೆಲವು ಪಿನ್ಹೆಡ್ಗಿಂತ ಚಿಕ್ಕದಾಗಿರುತ್ತದೆ. ಸ್ನಿಡಾರಿಯನ್ ಎಂಬ ವರ್ಗಕ್ಕೆ ಸೇರಿದ ಇವು, ಸ್ಟೌರೋಜೋವಾ, ಕ್ಯೂಬೋಜೊವಾ, ಹೈಡ್ರೋಜೋವಾ ಮುಂತಾದ ಅನೇಕ ವರ್ಗಗಳಲ್ಲಿ 100-150 ಗುಂಪುಗಳಲ್ಲಿ ಗುರುತಿಸಲ್ಪಟ್ಟಿವೆ.  ಜೆಲ್ಲಿ ಮೀನು ಮುಖ್ಯವಾಗಿ ನೀರು ಮತ್ತು ಪ್ರೊಟೀನ್ನಿಂದ ಮಾಡಲ್ಪಟ್ಟಿವೆ. ಡೈನೊಸಾರ್ಗಳಿಗಿಂತ ಲಕ್ಷಾಂತರ ವರ್ಷಗಳ ಮೊದಲೇ ಜೆಲ್ಲಿ ಫಿಶ್ಗಳು ಭೂಮಿಯ ಮೇಲಿವೆ. 

ಗುಣ ಲಕ್ಷಣಗಳು:

ಕೆಲವೊಮ್ಮೆ ಕೊಡೆಯಂತೆ ಮತ್ತೆಕೆಲವೊಮ್ಮೆ ಅಣಬೆಯಂತೆ ಕಾಣುವ ಜೆಲ್ಲಿಫಿಶ್ನ ಬಾಲ ದೊಡ್ಡದು. ನೀರಿನಿಂದ ಹೊರಬಂದ ಜೆಲ್ಲಿ ಬಣ್ಣ ರಹಿತ. ಇದು ತನ್ನ ದೇಹವನ್ನು ತೆರೆದುಕೊಂಡು, ಮುಚ್ಚಿಕೊಂಡು ನೀರಿನಲ್ಲಿ ಈಜುತ್ತದೆ. ಜೆಲ್ಲಿ ಮೀನು ಮೆದುಳನ್ನು ಹೊಂದಿಲ್ಲ. ಆದರೆ, ಕೆಲವು ರೀತಿಯ ಕಣ್ಣುಗಳಿವೆ. ಚರ್ಮದ  ಹೊರಮೇಲೈಯಲ್ಲಿ ಇರುವ ನರಜಾಲದ ಮೂಲಕ ಇತರ ವಸ್ತು, ಪ್ರಾಣಿಗಳ ಸ್ಪರ್ಶವನ್ನು ಗ್ರಹಿಸುತ್ತವೆ. ಇವುಗಳಲ್ಲಿ ಉಸಿರಾಟಕ್ಕೆಂದೇ ಪ್ರತ್ಯೇಕ ಅಂಗವಿಲ್ಲ ತೆಳುವಾದ ಚರ್ಮವೇ ಆ ಕೆಲಸ ಪೂರೈಸುತ್ತದೆ. ಇತರ ಮೀನುಗಳಿಗಿಂತ ಕಡಿಮೆ ಪ್ರಮಾಣದ ಆಮ್ಲಜನಕದೊಂದಿಗೆ ಬದುಕಬಲ್ಲದು. ಜೆಲ್ಲಿ ಮೀನುಗಳು ಉಭಯಲಿಂಗಿಗಳಾಗಿವೆ. ಜೆಲ್ಲಿ ಫೀಶ್ಗಳು ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಲ್ಲಿ ಕಂಡುಬರುತ್ತವೆ.  

ಆಕ್ರಮಣಕಾರಿ ಸ್ವಭಾವ
ಸ್ವಭಾವತಃ ಇವು ಆಕ್ರಮಣಕಾರಿಗಳು. ತಮ್ಮ ಪ್ರದೇಶಕ್ಕೆ ಯಾವುದೇ ಹೊಸಜೀವಿ ಪ್ರವೇಶಿಸಿದರೂ ಗುಂಪಾಗಿ ಆಕ್ರಮಣ ನಡೆಸುತ್ತವೆ. ಅಪಾಯದ ಸ್ಥಿತಿಯಲ್ಲಿ ಎದುರಾಳಿಯನ್ನು ಕುಟುಕುವ ಮೂಲಕ ಕಂಗೆಡಿಸುತ್ತವೆ. ಕ್ಯೂಬೋಜೊವಾ ವರ್ಗಕ್ಕೆ ಸೇರಿದ ಜೆಲ್ಲಿಗಳ ಕುಟುಕು ವಿಷಪೂರಿತ ವಾಗಿರುತ್ತದೆ. ಅಸಹನೀಯ ವಾಗಿರುವ ಇವುಗಳ ಕಚ್ಚುವಿಕೆ ಹಲವುಬಾರಿ ಮಾರಣಾಂತಿಕ ವಾಗಿರುತ್ತದೆ. ಬಿಡಿಸಲ್ಪಟ್ಟ ಕೊಡೆಯ ಆಕಾರ ಹೊಂದಿರುವ ಇವು ಪಾರದರ್ಶಕ ಮತ್ತು ಅರೆಪಾರದರ್ಶಕವಾಗಿಯೂ ಇರುತ್ತವೆ. ಜೆಲ್ಲಿಗಳ ಗುಂಪನ್ನು ಸ್ಮ್ಯಾಕ್ ಎಂದು ಕರೆಯಲಾಗುತ್ತದೆ. ಕುಟುಕುವ ಜಾತಿಯ ಜೆಲ್ಲಿ ಫಿಶ್ ಗಳನ್ನು ಮೆಡ್ಯುಸಾ ಎಂದು ಕರೆಯಲಾಗುತ್ತದೆ.

ಆಹಾರವಾಗಿಯೂ ಬಳಕೆ:
ಇವುಗಳ ಜೀವಿತಾವಧಿಯೂ ವಿಶಿಷ್ಠ. ಕೆಲ ಜೆಲ್ಲಿಗಳು ಜನಿಸಿದ ಕೆಲ ಗಂಟೆಗಳಲ್ಲಿಯೇ ಮರಣ ಹೊಂದಿದರೆ ಇನ್ನು ಕೆಲವು ಎರಡರಿಂದ ಆರು ತಿಂಗಳು ಜೀವಿಸುತ್ತವೆ. ಕಾಲಕಾಲಕ್ಕೆ ಸರಿಯಾಗಿ  ಆಹಾರ ದೊರಕುತ್ತಿದ್ದರೆ ನಿತ್ಯವೂ ಮೊಟ್ಟೆಯಿಡುವ ವಿಶಿಷ್ಠಜೀವಿ ಜೆಲ್ಲಿಫಿಶ್. ಚೀನಾದಂತ ದೇಶದಲ್ಲಿ ರೈಜಾಸ್ಟೋಮ್ ವರ್ಗಕ್ಕೆ ಸೇರಿದ ವಿಷರಹಿತ ಜೆಲ್ಲಿ ಮೀನುಗಳನ್ನು ಸಂಸ್ಕರಿಸಿ ಆಹಾರವಾಗಿಯೂ ಬಳಸುತ್ತಾರೆ.

  • ಜೆಲ್ಲಿ ಫಿಶ್ ಅಂದರೇನು?
ಜಿಲೆಟಿನ್ ಅಥವಾ ಲೋಳೆಯಂಥಹ ವಸ್ತುಗಳಿಂದ ಉಂಟಾದ ಪ್ರಾಣಿಗನ್ನು ಜೆಲ್ಲಿ ಎಂದು ಕರೆಯುವರು. ಇವುಗಳನ್ನು ಒಣಗಿಸಿದಾಗ ಅಂಟು ಅಂಟಾದ ಪದಾರ್ಥವಾಗಿ ಮಾರ್ಪಡುತ್ತದೆ.

  • ಜೆಲ್ಲಿ ಮೀನುಗಳ ವಿಕಾಸ ಹೇಗೆ?
ಜೆಲ್ಲಿ ಫಿಶ್ಗಳ ವಿಕಸನ ಒಂದು ಕ್ಷಿಷ್ಟಕರ ಪ್ರಕ್ರಿಯೆ. ಸಮುದ್ರದ ಪ್ರವಾಹ, ಪೋಷಕಾಂಶ ತಾಪಮಾನ, ಲವಣಾಂಶ, ಸೂರ್ಯನ ಬೆಳಕು, ಆಮ್ಲಜನಕದ ಸಾಂದ್ರೆತೆಯ ಮೇಲೆ ಅವಲಂಬಿತವಾಗಿದೆ. ಸಹಸ್ರಾರು ಸಂಖ್ಯೆಯ ಮೊಟ್ಟೆಗಳು ಒಂದೆಡೆ ಸೇರಿ ಜೆಲ್ಲಿ ಫಶ್ಗಳ ನಿರ್ಮಾಣ ವಾಗುತ್ತದೆ.

 

Tuesday, August 7, 2012

ಬರ್ಮುಡಾ ತ್ರಿಕೋನದ ನಿಗೂಢ ರಹಸ್ಯ!

ಒಮ್ಮೆ ಯೋಚಿಸಿ ಯಾವುದೋ ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋದೊಡನೆ ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತೇವೆ ಅಂದರೆ ಎಷ್ಟು ವಿಚಿತ್ರದ ಸಂಗತಿ ಅಲ್ವಾ. ಊಹಿಸಿಕೊಳ್ಳಲೂ ಅಸಾಧ್ಯ. ಆದರೆ ನಂಬಲೇ  ಬೇಕಾಗಿರುವಂತದ್ದು. ಜಗತ್ತಿನ ಸಾವಿರಾರು  ಹಡಗು ಮತ್ತು ವಿಮಾನಗಳನ್ನು  ನುಂಗಿ ತನಗೆ ಏನು ತಿಳಿದಿಲ್ಲವೇನೋ ಎನ್ನುವ ರೀತಿ ತನ್ನಪಾಡಿಗೆ ತಾನು ಇರುವ ಜಾಗವೇ ಬರ್ಮುಡಾ ತ್ರಿಕೋಣ!


ಕಳೆದ ಒಂದು ಶತಮಾನದಲ್ಲಿ ಬರ್ಮುಡಾ ಟ್ರೈಯಾಂಗಲ್ ಒಂದು ಸಾವಿರ ಜೀವಗಳನ್ನು ಬಲಿತೆಗೆದುಕೊಂಡಿದೆ. ಜಗತ್ತಿನಲ್ಲಿ ಹೀಗೆ ಹೇಳದೇ ಕೇಳದೇ ಕಾಣೆಯಾಗುವ ಹಲವಾರು ಜಾಗಗಳಿದ್ದರೂ ದೊಡ್ಡ ಮೊತ್ತದಲಲ್ಲಿ ಕಾಣೆಯಾದ ಘಟನೆಗಳು ಇಲ್ಲಿ ನಡೆದಿರುವುದರಿಂದ ಈ ಪ್ರದೇಶ ಜಗದ್ವಿಖ್ಯಾತಿ ಗಳಿಸಿಕೊಂಡಿದೆ.
 
ಭೇದಿಸಲಾಗದ ರಹಸ್ಯ:
ಇದುವರೆಗೂ ಭೇದಿಸಲಾಗದ ನೈಸರ್ಗಿಕ ನಿಗೂಢಗಳಲ್ಲಿ ಬರ್ಮುಡಾ ಟ್ರೈಯಾಂಗಲ್ ಕೂಡಾ ಒಂದೆನಿಸಿದೆ. ಈ ತ್ರಿಕೋಣದ ಗಡಿ ಅಮೆರಿಕದ ಸ್ಟೇಟ್ಸ್ ಆಫ್ ಫ್ಲೋರಿಡಾ, ಬಹಾಮ ಮತ್ತು ಸಂಪೂರ್ಣ ಕೆರೆಬಿಯನ್ ದ್ವೀಪ ಮತ್ತು ಪೂರ್ವ ಅಟ್ಲಾಂಟಿಕ್ ವ್ಯಾಪ್ತಿಯ ಮಿಯಾಮಿ, ಪ್ರೋಟೋರಿಕೊ ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪ ವಾಗಿರುವ ಬರ್ಮುಡಾ ಪ್ರದೇಶಗಳನ್ನು ಒಳಗೊಂಡಿದೆ. ಇದು ನೋಡಲು ತಿಭುಜಾಕೃತಿಯಲ್ಲಿರುವುದರಿಂದ ಇದಕ್ಕೆ ಬರ್ಮುಡಾ ಟ್ರೈಯಾಂಗಲ್ ಎನ್ನುವ ಹೆಸರು ಬಂದಿದೆ.
ಬರ್ಮುಡಾ ಟ್ರೈಯಾಗಲ್ ಎನ್ನುವ ಪದ ಮೊಟ್ಟ ಮೊದಲಬಾರಿಗೆ ಬಳಕೆಯಾದ್ದು ವಿನ್ಸಂಟ್ ಗಡ್ಡೀಸ್ 1964ರಲ್ಲಿ ಬರೆದ "ದಿ ಡೆಡ್ಲಿ ಬರ್ಮುಡಾ ಟ್ರೈಯಾಂಗಲ್" ಎನ್ನುವ ಪುಸ್ತಕದಲ್ಲಿ. ಇದರ ಕಾರ್ಯ ನಿರಂತರವಾಗಿ ಸಾಗುತ್ತಾ ಇದ್ದರೂ ಜಗತ್ತಿನ ಅರಿವಿಗೆ ಬಂದಿದ್ದು ಸ್ವಲ್ಪ ನಿಧಾವನಾಗಿಯೇ. ಅದು ಡಿಸೆಂಬರ್ 5 1945ರ 2ನೇ ವಿಶ್ವ ಮಹಾಯುದ್ಧದ ಸಂದರ್ಭ. ಆವಾಗಲೇ ಈ ಕಾಣದ ಕೈ ತನ್ನ ಮೊಟ್ಟಮೊದಲ ಬೇಟೆಯಾಡಿ ಜಗತ್ತಿಗೆ ತನ್ನ ಇರುವನ್ನು ತೋರಿಸಿದ್ದು. ಅಭ್ಯಾಸಕ್ಕೆಂದು ಹೋದ ಎಫ್ 19 ಸರಣಿಯ ಯುದ್ಧ ವಿಮಾನ ಮತ್ತು ತರುವಾಯ ಅದನ್ನು ಹುಡುಕಲು ಹೋದ ಇನ್ನೊಂದು ವಿಮನವನ್ನೂ ಆಹುತಿಗೆ ತೆಗೆದು ಕೊಂಡಿತ್ತು ಬರ್ಮುಡಾ ಟ್ರೈಯಾಗಲ್.

ಕಣ್ಮರೆಗೆ ಏನು ಕಾರಣ?

  • ಗಲ್ಫ್ ಸ್ಟ್ರೀಮ್:
ಬರ್ಮುಡಾ ಟ್ರೈಯಾಂಗಲ್ನಲ್ಲಿ ವಸ್ತುಗಳು ನಿಗೂಢವಾಗಿ  ಕಾಣೆಯಾಗುವುದಕ್ಕೆ  ಗಲ್ಫ್ ಸ್ಟ್ರೀಮ್ ಕಾರಣ ಎಂದು  ಹೇಳಲಾಗುತ್ತದೆ. ಇದೊಂದು ಸಾಗರ ಪ್ರವಾಹವಾಗಿದ್ದು ಗಲ್ಫ ಆಫ್ ಮ್ಯಾಕ್ಸಿಕೊದಲ್ಲಿ ಹುಟ್ಟುತ್ತದೆ. ಮೂಲತಃ ಇದು ಸಮದ್ರದೊಳಗಿನ ನದಿ.  ಮೇಲ್ಮುಖವಾದ ಇದರ ಚಲನೆ ಸಾಗರದ  ಮೇಲೆ ತೇಲುವ ವಸ್ತುಗಳನ್ನು ತನ್ನತ್ತ  ಸೆಳೆದು ಕೊಳ್ಳುತ್ತದೆ. ಅಲ್ಲದೇ ಪುಟ್ಟ ವಿಮಾನಗಳನ್ನೂ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರವಾಹದ ಅಲೆಗಳಿಗೆ ಇವೆ.
  • ನೈಸರ್ಗಿಕ ವಿದ್ಯುತ್ ಕಾಂತೀಯ ದಿಕ್ಸೂಚಿ:
ಹಡಗಿನ ಅಥವಾ ವಿಮಾನದ ದಿಕ್ಸೂಚಿಯಲ್ಲಿ ಕಂಡುಬರುವ ದೋಷಗಳು ಇಲ್ಲಿ ನಡೆಯುವ ಕೆಲವು ಘಟನೆಗಳಿಗೆ ಕಾರಣವಾಗಿವೆ. ಈ ಜಾಗದಲ್ಲಿ ನೈಸರ್ಗಿಕ ವಿದ್ಯುತ್ ಕಾಂತೀಯ ಶಕ್ತಿ ಪ್ರಬಲವಾಗಿರುವುದರಿಂದ ಹಡಗು ಮತ್ತು ವಿಮಾನಗಳು ದಿಕ್ಕು ತಪ್ಪುವ ಸಾಧ್ಯತೆಗಳಿವೆ. ಹೀಗಾಗಿ ವಸ್ತುಗಳು ಕಣ್ಮರೆ ಯಾಗುವುದಕ್ಕೆ ನೈಸರ್ಗಿಕ ವಿದ್ಯುತ್ ಕಾಂತೀಯ ದಿಕ್ಸೂಚಿ ಕಾರಣ  ಎಂದು ಹೇಳಲಾಗುತ್ತಿದೆ. ಏನೇ ಇದ್ದರೂ ಇಲ್ಲಿ ನಡೆಯುವ ಹೆಚ್ಚಿನ ದುರಂತಗಳಿಗೆ ಮಾನವನ ಸ್ವಯಂಕೃತ ಪ್ರಮಾದಗಗಳೂ ಕಾರಣ ಎನ್ನುವುದೂ ಸಹ ಅಷ್ಟೇ ಸತ್ಯ.
   
ಬೇರೆಡೆಯೂ ಹೀಗೆ ಆಗುತ್ತೆ.
  • ಅವುಗಳೆಂದರೆ:
1. ಟೋಕಿಯೋ ಹತ್ತಿರವಿರುವ ಮಿಯಾಕೆ ಐಸ್ಲ್ಯಾಂಡ್ ಸುತ್ತಮುತ್ತ ಬರುವ ಡೆವಿಲ್ ಸೀ ಅಥವಾ ಪೈಶಾಚಿಕ ಸಮುದ್ರ.
2 ಬರ್ಮುಡಾ ಟ್ರೈಯಾಂಗಲ್ ಪೂರ್ವಕ್ಕೆ  ಬರುವ ಸಾರ್ಗ್ಯಾಸೊ ಸಮುದ್ರ.
3 ಮಿಚಗನ್ ಸಮೀಪ ಬರುವ ದಿ ಮಿಚಗನ್ ಟ್ರೈಯಾಂಗಲ್.
4 ಥೈವಾನ್ ಸಮೀಪ  ಬರುವ ಫಾರ್ಮೋಸ್ ಟ್ರೈಯಾಂಗಲ್. 


Sunday, July 29, 2012

ಸಾಗರದ ಬುದ್ಧಿ ಜೀವಿ ಆಕ್ಟೊಪಸ್

ಸಾಗರದ ಬುದ್ಧಿ ಜೀವಿ ಎಂದು ಆಕ್ಟೊಪಸ್ ಕರೆಸಿಕೊಳ್ಳುತ್ತದೆ. ವಿಲಕ್ಷಣದ ನಡುವಳಿಕೆಯಿಂದಲೇ ತನ್ನನ್ನು ಗುರುತಿಸಿಕೊಂಡಿದೆ. ಸಾಗರದಲ್ಲಿ ತನ್ನನ್ನು ಯಾರೂ ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ಬಂಡೆಗಳ ನಡುವೆ ಅಡಗಿ ಕೂತಿರುತ್ತದೆ. ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ಇವು ವಾಸಿಸುತ್ತವೆ. ಇದು ಸೊಫಾಲೋಪೋಡಾ ವರ್ಗಕ್ಕೆ ಸೇರಿದ ಅಷ್ಟಪದಿ. ತನ್ನ ಉದ್ದನೆಯ ಎಂಟು ಬಾಹುಗಳಿಂದಲೇ ಆಕ್ಟೊಪಸ್ ಹೆಸರುವಾಸಿ. ಇದರ ಬಾಯಿ ಬಾಹುಗಳ ಮಧ್ಯದಲ್ಲಿರುತ್ತದೆ. ಮೈಯಲ್ಲಿ ಅಸ್ತಿಪಂಜರವೇ ಇಲ್ಲದ ಇದರ ಮಾಂಸದ ಮುದ್ದೆಯಂತಹ ದೇಹ ಕರಿದಾದ ಸಂದಿಯಲ್ಲೂ ನುಸುಳಬಲ್ಲದು. ಆಕ್ಟೊಪಸ್ಗಳು ಈಜುವಾಗ ತನ್ನ ಎಂಟು ಕೈಗಳನ್ನು ಹಿಂದಕ್ಕೆ ಎಳೆದುಕೊಂಡು ವೇಗವಾಗಿ ಮುಂದೆ ಸಾಗುತ್ತದೆ.

  • ಕೈಗಳೇ ಎಲ್ಲವನ್ನೂ ಮಾಡುತ್ತದೆ
ಆಕ್ಟೊಪಸ್ಳು ಆಂತರಿಕ ಅಸ್ತಿಪಂಜರ ವಿಲ್ಲದೇ ಬಹುಮಟ್ಟಿಗೆ ಮೃದು ದೇಹವನ್ನು ಹೊಂದಿದೆ. ಸಂಪೂರ್ಣ ದೇಹ ಅದರ ತಲೆಯೇ ಆಗಿರುತ್ತದೆ. ತಲೆ ಬುರುಡೆಯೇಲ್ಲಿರುವ ಕೊಕ್ಕು ಮಾತ್ರ ದೇಹದಲ್ಲಿರುವ ಗಟ್ಟಿ ಭಾಗ. ಜೀವಿಸಲು ಅಗತ್ಯವಿರುವ ಎಲ್ಲಾ ಅವಯವಗಳು ತಲೆಯ ಭಾಗದಲ್ಲಿರುತ್ತದೆ. ಇದರಲ್ಲಿ ಮೂರು ಹೃದಯಗಳೂ ಇವೆ. ಆದರೆ ನರ ಮಂಡಲ ವ್ಯವಸ್ಥೆ ಇರುವುದು ಕೈಗಳಲ್ಲಿ. ಮೂಳೆಯೇ ಇಲ್ಲದ ಕೈಗಳನ್ನು ಹೇಗೆ ಬೇಕಾದರೂ ಬಗ್ಗಿಸಬಲ್ಲದು. ಬಂಡೆಗಳ ನಡುವೆ ತೆವಳುವುದಕ್ಕೂ ಕೈಗಳು ಸಹಕಾರಿ. ಆದರೆ ಕೈಗಳು ಅಷ್ಟೇ ಬಲಿಷ್ಟ. ಪ್ರತಿ ಕೈಗಳಲ್ಲಿ ಎರಡು ಹೀರು ಕೊಳವೆಗಳಿರುತ್ತವೆ. ಬೇಟೆಯನ್ನು ಕೈಗಳಿಂದ ಸುತ್ತುವರಿದು ತಪ್ಪಿಸಿಕೊಳ್ಳದಂತೆ ಮಾಡುತ್ತದೆ. ವಸ್ತುವಿನ ರಚನೆ, ಆಕಾರ, ರುಚಿಯನ್ನು ಸ್ಪರ್ಶದ ಮೂಲಕವೇ ಗೃಹಿಸಬಲ್ಲದು. ಆಕ್ಟೊಪಸ್ ತಾನು ಕಳೆದು ಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುತ್ತದೆ.  

  • ವೈರಿಗೆ ಮಂಕುಬೂದಿ ಎರಚುವ ಗುಣ  
ಆಕ್ಟೊಪಸ್ ತನ್ನ ಎದುರಾಳಿಯ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತನ್ನ ರಕ್ಷಣೆಗಾಗಿ ಹಲವಾರು ತಂತ್ರಗಳನ್ನು ಅನುಸರಿಸುತ್ತದೆ. ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತವೆ. ಮಬ್ಬು ಕವಿಯುವ ಒಂದು ರೀತಿಯ ಬಣ್ಣ ಉಗುಳಿ ಅಥವಾ ಮೈ ಬಣ್ಣ ಬದಲಾಯಿಸಿ ವೈರಿಯಿಂದ ತಪ್ಪಿಸಿಕೊಳ್ಳುತ್ತವೆ. ಆಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ಗಾಢವಾದ ಕಪ್ಪುಶಾಯಿಯನ್ನು ದಟ್ಟವಾದ ಮೋಡದಂತೆ ಹೊರಹಾಕುತ್ತದೆ. ವೈರಿಗೆ ಮಂಕುಬೂದಿ ಎರಚಿ ಅದರ ಕಾರ್ಯಕ್ಷಮತೆ ಕಡಿಮೆ ಮಾಡುತ್ತವೆ. ಆಕ್ಟೊಪಸ್ಗಳು ಹೊಡೆದಾಡುವದಕ್ಕಿಂತಲೂ ವೈರಿಯಿಂದ ನುಣುಚಿಕೊಳ್ಳುವುದೇ ಹೆಚ್ಚು. ಅಪಾಯ ಎದುರಾದರೆ 25 ಮೈಲಿ ವೇಗದಲ್ಲಿ ಅವು ಪಾರಾಗುತ್ತದೆ. ಅಕ್ಟೊಪಸ್ ಗಳು ಚುರುಕು ಬುದ್ಧಿ ಉಳ್ಳವುಗಳು. ಕಡಿಮೆ ಮತ್ತು ದೀರ್ಘಕಾಲಿಕ ನೆನಪಿನ ಶಕ್ತಿ ಹೊಂದಿವೆ. ಹುಟ್ಟಿನಿಂದ ಬಂದಿದ್ದಕ್ಕಿಂತ ಸ್ವಂತದ್ದಾದ ಏನನ್ನಾದರೂ ಅಕ್ಟೊಪಸ್ ಕಲಿಯುತ್ತದೆ. ತಂದೆ ತಾಯಿಗಳಿಂದ ಬೇಗನೆ ದೂರವಾಗುವ ಇವು ಅವುಗಳಿಂದ ಏನನ್ನೂ  ಕಲಿಯುವುದಿಲ್ಲ. ಕಡಿಮೆ ಆಯಸ್ಸೇ ಇವುಗಳ ಕಲಿಕಾ ಸಾಮರ್ಥ್ಯಕ್ಕೆ ಮಿತಿ ಒಡ್ಡಿದೆ. ಆಕ್ಟೊಪಸ್ಗಳು ಸಾಮಾನ್ಯವಾಗಿ 2 ವರ್ಷವಷ್ಟೇ ಬದುಕುತ್ತವೆ. ಗಂಡು ಆಕ್ಟೊಪಸ್ ಸಂತಾನೋತ್ಪತ್ತಿಗೆ ಕಾರಣವಾಗುವ ಹಾಮರ್ಮೋನನ್ನು ಸೃವಿಸಿದ 2 ತಿಂಗಳಲ್ಲೇ ಪ್ರಾಣ ಬಿಡುತ್ತದೆ. ಆಕ್ಟೊಪಸ್ಗಳು ತೀರಾ ಸೂಕ್ಷ್ಮ ದೃಷ್ಟಿ ಹೊಂದಿವೆ. ಇವು ನೀಲಿ ರಕ್ತದ ಜೀವಿಗಳು. ಆಕ್ಟೊಪಸ್ನಲ್ಲಿ ಸುಮಾರು 200 ಜಾತಿಗಳಿವೆ.
  • ಭವಿಷ್ಯಕಾರನ ಬಿರುದು
ಆಕ್ಟೊಪಸ್ ಭವಿಷ್ಯಕಾರ ಎಂದು ಹೆಸರುಗಳಿಸಿದೆ. ಇವು ತಮ್ಮ ಅತಿಮಾನುಷ ಬುದ್ಧಿ ಶಕ್ತಿಯಿಂದಾಗಿ ಮುಂದಿನದನ್ನು ಪೂರ್ವದಲ್ಲೇ ಗ್ರಹಿಸುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಆಕ್ಟೊಪಸ್ ಗಳ ಕಲಿಕಾ ಸಾಮರ್ಥ್ಯ ವಿಜ್ಞಾನಿಗಳನ್ನೂ ಅಚ್ಚರಿಗೊಳಿಸಿದೆ

Monday, July 23, 2012

ಆಸ್ಟ್ರಿಚ್ ಎಂಬ ಪರಾಕ್ರಮಿ

ಪಕ್ಷಿ ಸಂಕುಲದಲ್ಲಿ ಈ ಆಸ್ಟ್ರಿಚ್ ಅತ್ಯಂತ ಶಕ್ತಿಶಾಲಿ. ಗಾತ್ರದಲ್ಲಿ ಇದನ್ನು ಮೀರಿಸುವವರು ಯಾರೂ ಇಲ್ಲ. ಇದನ್ನು ಕೇವಲ ಪಕ್ಷಿ ಎಂದು ತಿಳಿದುಕೊಳ್ಳುವ ಹಾಗಿಲ್ಲ. ಇದು ತನಗಿಂತ ಹತ್ತು ಪಟ್ಟು ದೊಡ್ಡದಾದ ಪ್ರಾಣಿಯನ್ನೂ ಸಹ ಹೆದರಿಸಬಲ್ಲದು! ಆಸ್ಟ್ರಿಚ್ ಗೆ ಹಾರಲು ಬರುವುದಿಲ್ಲ ನಿಜ. ಆದರೆ ಅದರ ಬಲವೇನಿದ್ದರೂ ಕಾಲುಗಳಲ್ಲಿ. ಉದ್ದನೆಯ ಕಾಲುಗಳ ಮೇಲೆ ನಿಂತಾಗ ಸುಮಾರು 8 ಅಡಿಗಳಷ್ಟು ಎತ್ತರಕ್ಕೆ ಕತ್ತೆತ್ತಿ ನೋಡುತ್ತದೆ. ಕತ್ತು ಸಹ ಬಲು ಉದ್ದವಾಗಿದೆ.

 
  • ಹೊಟ್ಟೆಯೊಳಗೆ ಬೀಸುಕಲ್ಲು
ಆಸ್ಟ್ರಿಚ್ಗಳಿಗೆ ನೀರಿನ ಅವಶ್ಯಕತೆ ಕಡಿಮೆ. ಅಪರೂಪಕ್ಕೆ ಎಂಬಂತೆ ನೀರು ಕುಡಿಯುತ್ತವೆ. ಅವು ತಿನ್ನುವ ಸಸ್ಯಗಳಿಂದಲೇ ದೇಹಕ್ಕೆ ಬೇಕಾದ ನೀರಿನ ಅಂಶ ಪಡೆದುಕೊಳ್ಳುತ್ತವೆ. ಇವುಗಳ ಬಾಯಲ್ಲಿ ಹಲ್ಲಿಲ್ಲ. ಆದರೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಬಾಯಿಚಪಲ. ಸೊಪ್ಪು, ಚಿಕ್ಕಪುಟ್ಟ ಸಸ್ಯ. ಸಸ್ಯದ ಬೇರು, ಕ್ರಿಮಿಕೀಟ, ಹಲ್ಲಿ, ಮಿಡತೆ ಏನಾದರೂ ಸರಿ. ತಿಂದು ಹೊಟ್ಟೆಯಲ್ಲಿನ ಚೀಲದಲ್ಲಿ ಸಂಗ್ರಹಿಸುತ್ತದೆ. ಇದರ ಜತೆ ಚಿಕ್ಕ ಕಲ್ಲಿನ ಹರಳುಗಳನ್ನು ಇನ್ನುತ್ತದೆ. ಕಲ್ಲುಗಳ ಸಹಾಯದಿಂದ ಆಹಾರವನ್ನು ಬೀಸುಕಲ್ಲಿನಂತೆ ಅರೆದು ಪಚನ ಗೊಳಿಸುತ್ತದೆ. ವಯಸ್ಸಿಗೆ ಬಂದ ಆಸ್ಟ್ರಿಚ್ ಹಕ್ಕಿಯ ಹೊಟ್ಟೆಯಲ್ಲಿ ಒಂದು ಕೆ.ಜಿಯಷ್ಟು ಕಲ್ಲು ಸಂಗ್ರಹವಾಗಿರುತ್ತದೆ.
  • ತಂಟೆಗೆ ಬಂದರೆ ಹುಷಾರ್!
ಈ ಹಕ್ಕಿ ರಟೀಟ್ ಎಂಬ ಗುಂಪಿಗೆ ಸೇರಿವೆ. ಬೆಳೆದ ಆಸ್ಟ್ರಿಚ್ ಸುಮಾರು 93ರಿಂದ 130 ಕೆ.ಜಿಗಳಷ್ಟು ತೂಗುತ್ತದೆ. ಆಸ್ಟ್ರಿಚ್ 75 ವರ್ಷಗಳ ಕಾಲ ಬದುಕಬಲ್ಲದು. ಆಸ್ಟ್ರಿಚ್ ನಕಣ್ಣು  ಇತರ ಎಲ್ಲಾ ಪ್ರಾಣಿಗಳಿಗಿಂತಲೂ ದೊಡ್ಡದು. ಇದರ ಕಣ್ಣು 2 ಇಂಚು ಇರುತ್ತದೆ. ಮೈಮೇಲೆ ಸುಂದರ ಗರಿಗಳನ್ನು ಹೊಂದಿರುತ್ತದೆ. ಇವುಗಳ ದೃಷ್ಟಿ ಮತ್ತು ಸಂವೇದನೆ ತುಂಬಾ ತೀಕ್ಷ್ಣ. ದೂರದಿಂದಲೇ ತನ್ನ ವೈರಿಯನ್ನು ಅಥವಾ ತನಗೆ ಎದುರಾಗುವ ಅಪಾಯ ಗುರುತಿಸುತ್ತದೆ. ರೆಕ್ಕೆಗಳು ಅದರ ದೇಹದ ಗಾತ್ರಕ್ಕೆ ಹೋಲಿಸಿದರೆ ತೀರಾ ಚಿಕ್ಕವು. ಇವು ತಮ್ಮ ರೆಕ್ಕೆಗಳಿಂದ ದೇಹದ ಸಮತೋಲನ ಕಾಯ್ದು ಕೊಳ್ಳುತ್ತವೆ. ಭಾವನೆಗಳನ್ನು ಮತ್ತು ಸಾಂಗತ್ಯ ಬೇಕೆಂಬ ಸೂಚನೆ ನೀಡುವುದು ರೆಕ್ಕೆಯಿಂದಲೇ. ಅಲ್ಲದೇ ದೇಹದ ಭಾರ ಕೂಡಾ ವಿಪರೀತ. ಹೀಗಾಗಿಯೇ ಆಸ್ಟ್ರಿಚ್ ಗೆಹಾರಲು ಬರುವುದಿಲ್ಲ. ಆದರೆ ಗಂಟೆಗೆ 70 ಕಿ.ಮೀ ವೇಗದಲ್ಲಿ ಓಡುವ ಶಕ್ತಿ ಹೊಂದಿದೆ. ಎಷ್ಟು ದೂರ ಕ್ರಮಿಸಿದರೂ ಓಟದ ವೇಗ ಕಡಿಮೆಯಾಗುವುದಿಲ್ಲ. ಇವು ಹೆಚ್ಚೆ ಇಡುವುದೇ 10 ರಿಂದ 15 ಅಡಿ ದೂರಕ್ಕೆ! ಪ್ರತಿ ಪಾದಕ್ಕೆ 2 ಗೊರಸನ್ನು ಹೊಂದಿರುವ ಇವುಗಳ  ಒದೆತ ತುಂಬಾ ಅಪಾಯಕಾರಿ. ಆಸ್ಟ್ರಿಚ್ ಗಳ ಒದೆತ ಮನುಷ್ಯರನ್ನೂ ಸಾಯಿಸುತ್ತದೆ. ತನ್ನ ಬದ್ಧ ವೈರಿ ಸಿಂಹನ್ನೂ ಒದ್ದು ಸಾಯಿಸುತ್ತದೆ. ಹಿಗಾಗಿ ಇದರ ತಂಟೆಗೆ ಯಾರೂ ಹೋಗುವುದಿಲ್ಲ.   

  • ಬಲು ದೊಡ್ಡ ಇದರ ಮೊಟ್ಟೆ
ಆಸ್ಟ್ರಿಚ್ಗಳ ಮೊಟ್ಟೆ ಪಕ್ಷಿಗಳ ಮೊಟ್ಟೆಗಳಲ್ಲೇ ಅತ್ಯಂತ ದೊಡ್ಡ ಗಾತ್ರದ್ದು. ಕೋಳಿಮೊಟ್ಟೆಗಿಂತ 10 ಪಟ್ಟು ದೊಡ್ಡದಾಗಿರುತ್ತದೆ. ಇದರ ಸುತ್ತಳತೆ 15 ರಿಂದ 18 ಇಂಚು. 1 ರಿಂದ 1.5 ಕೆ.ಜಿಯಷ್ಟು ತೂಕವಿರುತ್ತದೆ. ಮೊಟ್ಟೆಯಿಟ್ಟ 35 ರಿಂದ 45 ದಿನಗಳ ನಂತರ ಮರಿ ಹೊರಬರುತ್ತದೆ. ಮೊಟ್ಟೆಗಳಿಗೆ ಕಾವು ನೀಡಿ ಆರೈಕೆ ಮಾಡುವುದು ಕೇವಲ ಹೆಣ್ಣು ಆಸ್ಟ್ರಿಚ್ ಗಳ ಕೆಲಸವಲ್ಲ. ಈ ಕಾರ್ಯದಲ್ಲಿ ಗಂಡು ಆಸ್ಟ್ರಿಚ್ ಗಳೂ ಸಹಕರಿಸಿ ರಾತ್ರಿ ಸಮಯದಲ್ಲಿ ಮೊಟ್ಟೆಗೆ ಕಾವು ನೀಡುತ್ತವೆ. ಮೊಟ್ಟೆಯೊಡೆದು ಮರಿಯಾದ ನಂರತವೂ ಆರೈಕೆಯಲ್ಲಿ  ಇಬ್ಬರಿಗೂ ಸಮಪಾಲು. ಆಸ್ಟ್ರಿಚ್ ಮೊಟ್ಟೆಗಳನ್ನು ಆಹಾರವಾಗಿಯೂ ಬಳಸಬಹುದು. ಒಂದು ಮಟ್ಟೆ 2 ಸಾವಿರ ಕೆಲೊರಿಯಷ್ಟು ಶಕ್ತಿ ಒದಗಿಸುತ್ತದೆ.

ಆಫ್ರಿಕಾದ ಮರುಭೂಮಿಯಲ್ಲಷ್ಟೇ ವಾಸಮಾಡುವ ಆಸ್ಟ್ರಿಚ್ ಚರ್ಮ ಮತ್ತು ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ. ಇಂದು ಆಸ್ಟ್ರಿಚ್ ಸಾಕಣೆ ಒಂದು ಉದ್ಯಮವಾಗಿ ಬೆಳೆಯುತ್ತದೆ. ಆತಂಕದ ವಿಷಯವೆಂದರೆ ಶಕ್ತಿಶಾಲಿ ಎನಿಸಿಕೊಂಡ ಈ ಪಕ್ಷಿಯ ಸಂಕುಲ ಅಪಾಯದ ಅಂಚಿನಲ್ಲಿದೆ.




Monday, July 16, 2012

ಲಂಡನ್ ಗೋಪುರ ಸೇತುವೆ

ಲಂಡನ್ ಗೋಪುರ ಸೇತುವೆ ಇಂಗ್ಲೆಂಡ್ ನಗರದ ಪ್ರಮುಖ ಹೆಗ್ಗುರುತು. ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸಮತೋಲನದ ತೂಗು ಸೇತುವೆ. ಸಮಭಾಗವಾಗಿ ವಿಭಾಗಿಸಬಹುದಾದ ಜಗತ್ತಿನ ಏಕೈಕ ಸೇತುವೆ ಎನ್ನುವ ಪ್ರಸಿದ್ಧಿ ಪಡೆದಿದೆ. ಈ ಬ್ರಿಡ್ಜ್ ತನ್ನ ಸೌಂದರ್ಯದಿಂದಲೇ ಹೆಸರುವಾಸಿ. ಅದ್ಭುತ ಎನಿಸುವಂತ ಇದರ ಇಂಜನಿಯರಿಂಗ್ ವಿನ್ಯಾಸ. ಈ ಎಲ್ಲಾ ಕಾರಣಕ್ಕಾಗಿ ಈ ಸೇತುವೆ ಲಂಡನ್ ನಗರದ ಮೂರ್ತಿವೆತ್ತ ಲಾಂಛನವಾಗಿ ಕಂಗೊಳಿಸುತ್ತಿದೆ. 

 


ನಿರ್ಮಾಣ ವಿನ್ಯಾಸ:
ಇದು ಲಂಡನ್ ಗೋಪುರಕ್ಕೆ ಸನಿಹ ಇರುವ ಕಾರಣ ಇದಕ್ಕೆ ಗೋಪುರ ಸೇತುವೆ ಎಂಬ ಹೆಸರು ಬಂದಿದೆ. ಆದರೆ ಇದನ್ನೇ ಲಂಡನ್ ಸೇತುವೆ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಈ ಸೇತುವೆಯ ನಿರ್ಮಾಣ ಕಾರ್ಯ 1886ರಲ್ಲಿ ಆರಂಭವಾಗಿ 8 ವರ್ಷಗಳ ಕಾಲ ಮುಂದುವರಿದು 1894ರಲ್ಲಿ ಪೂರ್ಣಗೊಂಡಿತು. 19ನೇ ಶತಮಾನದ ಅಂತ್ಯದ ವೇಳೆಗೆ ವ್ಯಾಪಾರ ಅಭಿವೃದ್ಧಿ ಸಾಧಿಸಿದ್ದ ಇಂಗ್ಲೆಂಡ್ಗೆ ಸಂಪರ್ಕ ಕಲ್ಪಿಸಲು ಇನ್ನೊಂದು ಸೇತುವೆಯ ಅಗತ್ಯ ವಿದ್ದುದರಿಂದ ಗೋಪುರ ಸೇತುವೆ ನಿರ್ಮಿಸಲಾಯಿತು.
 ಆದರೆ ಥೇಮ್ಸ್ ನದಿಯಲ್ಲಿನ ಹಡಗು ಸಂಚಾರಕ್ಕೂ ಅವಕಾಶ ಕಲ್ಪಿಸುವ ಅಗತ್ಯವಿತ್ತು. ಹಿಗಾಗಿ ಎರಡೂ ರೀತಿಯಲ್ಲೂ ಅನುಕೂಲವಾಗುವಂತೆ ಸೇತುವೆಯ ವಿನ್ಯಾಸ ರೂಪಿಸಲಾಯಿತು. ಇದರ ನಿರ್ಮಾಣಕ್ಕೆ ಸುಮಾರು 11 ಸಾವಿರ ಟನ್ನಷ್ಟು ಸ್ಟೀಲ್ ಬಳಸಲಾಗಿದೆ. ಈ ಸೇತುವೆಯ ಎರಡೂ ತುದಿಗಳಲ್ಲಿ ಎರಡು ಗೋಪುರಗಳಿವೆ. ಸೇತುವೆ 244 ಮೀಟರ್ ಉದ್ದವಾಗಿದೆ. ಮೂರು ಭಾಗವಾಗಿ ಈ ಸೇತುವೆಯನ್ನು ವಿಭಾಗಿಸಲಾಗಿದೆ. ಸೇತುವೆಯ ಮೇಲ್ಬಾಗದಲ್ಲಿ ನಡೆದು ಹೋಗಲು ಎರಡು ಸಮಾನಾಂತರ ಕಾಲುದಾರಿಗಳನ್ನು ನಿರ್ಮಿಸಲಾಗಿದೆ.


ಭಾಗಗೊಳ್ಳುವ ಸೇತುವೆ
ಗೋಪುರಗಳ ನಡುವಿನ ಸೇತುವೆಯನ್ನು ಎರಡು ಭಾಗವಾಗಿ ವಿಭಾಗಿಸಲಾಗಿದೆ. ಥೇಮ್ಸ್ ನದಿಯಲ್ಲಿ ದೊಡ್ಡ ಹಡಗುಗಳು ಬಂದಾಗ ಮಧ್ಯದ ಸೇತುವೆಯನ್ನು ಸಮಭಾಗದಲ್ಲಿ ವಿಭಾಗಿಸಿ ಮೇಲಕ್ಕೆ ಏರಿಸಲಾಗುತ್ತದೆ. ಗೋಪುರ ಸೇತುವೆಯನ್ನು 82 ಡಿಗ್ರಿಯಷ್ಟು ಮೇಲೇರಿಸಿ ಹಡಗು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮುಂಚೆಎಲ್ಲಾ ಪ್ರತಿದಿನವೂ ಈ ಸೇತುವೆಯನ್ನು ಮೇಲಕ್ಕೆ ಎತ್ತಲಾಗುತ್ತಿತ್ತು. ಆದರೆ ಇತ್ತೀಚಿಗೆ ಹಡಗು ಸಂಚಾರ ವಿರಳವಾಗಿರುವುದರಿಂದ ವಾರದಲ್ಲಿ ಎರಡುಬಾರಿ ಮಾತ್ರ ಮೇಲಕ್ಕೆ ಎತ್ತಲಾಗುತ್ತಿದೆ. 24 ಗಂಟೆಗಳ ಮೊದಲೇ ಈ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ತಲಾ ಒಂದು ಸಾವಿರ ಟನ್ ತೂಕವಿರುವ ಸೇತುವೆಯ ಎರಡೂ ಕಮಾನುಗಳನ್ನು 5 ನಿಮಿಷದಲ್ಲಿ ಮೇಲಕ್ಕೆ ಎತ್ತಲಾಗುತ್ತದೆ. ಸೇತುವೆಯನ್ನು ಮೇಲಕ್ಕೆ ಎತ್ತಿದಾಗ ಗೋಪುರದ ಮೇಲಿರುವ ಕಾಲುದಾರಿಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಗೋಪುರದ ಮೇಲೆ ನಿಂತು ಇಂಗ್ಲೆಂಡಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಸೇತುವೆಯ ಸೌಂದರ್ಯ ವೀಕ್ಷಿಸಲು ಮತ್ತು ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಇಂಗ್ಲೆಂಡಿಗೆ ಆಗಮಿಸುತ್ತಾರೆ.


ಉಗಿ ಯಂತ್ರಗಳ ಅಳವಡಿಕೆ
ಸೇತುವೆಯನ್ನು ಮೇಲಕ್ಕೆ ಎತ್ತಲು ಪ್ರಾರಂಭದಲ್ಲಿ ಬೃಹತ್ ಹಬೆಯಂತ್ರ ಅಳವಡಿಸಲಾಗಿತ್ತು. 1974ರಲ್ಲಿ ಇದನ್ನು ಬದಲಿಸಿ ವಿದ್ಯುತ್ ಚಾಲಿತ ಮತ್ತು ಇಂಧನ ಬಳಕೆಯ ಹೈಡ್ರಾಲಿಕ್ ಉಗಿಯಂತ್ರ ಅಳವಡಿಸಲಾಗಿದೆ. ಗೋಪುರ ಸೇತುವೆ ಮೇಲೆತ್ತುವ ಯಂತ್ರ ಇಂಜನಿಯರಿಂಗ್ ಚಮತ್ಕಾರಗಳಲ್ಲಿ ಸೇರ್ಪಡೆಗೊಂಡಿದೆ.

ಸೇತುವೆಯ ನವೀಕರಣ:
2008ರಲ್ಲಿ ಸುಮಾರು 4 ದಶಲಕ್ಷ ಪೌಂಡ್ ವೆಚ್ಚದಲ್ಲಿ ಸೇತುವೆಯ ನವೀಕರಣ ಕಾರ್ಯ ಆರಂಭಿಸಲಾಗಿದೆ. 2012ರಲ್ಲಿ ಈ ಕಾರ್ಯಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೇತುವೆಗೆ ಹೊಸದಾಗಿ ಲೋಹದ ಲೇಪನ ಮಾಡಲಾಗುತ್ತಿದೆ.

ಗೋಪುರ ವಸ್ತು ಪ್ರದರ್ಶನ:
ಇಲ್ಲಿ ಬರುವ ಪ್ರವಾಸಿಗರಿಗೆ ಸೇತುವೆಯ ವಿಕ್ಟೋರಿಯಾ ಯಂತ್ರ ಕೊಠಡಿಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಚಲನಚಿತ್ರಗಳು, ಸ್ಥಬ್ದಚಿತ್ರಗಳು, ಮತ್ತು ಗೋಪುರ ವಿನ್ಯಾಸದ ಕುರಿತು ವಿವರಿಸಲಾಗುತ್ತದೆ. 1982ರಲ್ಲಿ ಆರಂಭಗೊಂಡ ಈ ವಸ್ತು ಪ್ರದರ್ಶನ 2007ರಲ್ಲಿ 25 ವರ್ಷ ಪೂರೈಸಿದೆ.

ಬಣ್ಣದ ಸೇತುವೆ
ಸೇತುವೆಯ ಈಗಿರುವ ಕೆಂಪು ಬಿಳಿ ಮತ್ತು ನೀಲಿಬಣ್ಣವನ್ನು ಇಂಗ್ಲೆಂಡ್ ರಾಣಿಯ ರಜತ ಮಹೋತ್ಸವದ ಅಂಗವಾಗಿ 1977ರಲ್ಲಿ ಬಳಿಯಲಾಯಿತು. ಮೂಲತಃ ಇದಕ್ಕೆ ಚಾಕಲೇಟಿನ ಕಂದು ಬಣ್ಣ ಬಳಿಯಲಾಗಿತ್ತು.

ರಸ್ತೆ ಸಂಚಾರ
ಗೋಪುರ ಸೇತುವೆ ಇಂದಿಗೂ ಥೇಮ್ಸ್ ನದಿಯಲ್ಲಿ ಜನನಿಬಿಡ ಮತ್ತು ಮಹತ್ವದ ಹಾದಿಯಾಗಿದೆ. ಈ ಸೇತುವೆಯ ಮೇಲೆ ಪ್ರತಿನಿತ್ಯ ಸುಮಾರು 40 ಸಾವಿರ ವಾಹನಗಳು ಸಂಚರಿಸುತ್ತವೆ.

Wednesday, July 11, 2012

ಕಡಲ ಚಿಪ್ಪಿನ ಆಭರಣ

ಸಮುದ್ರದ ತಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಡಲ ಚಿಪ್ಪುಗಳು ಬಿದ್ದಿರುತ್ತವೆ. ಜಗತ್ತಿನ ಎಲ್ಲಾ ಸಮುದ್ರ ತೀರದಲ್ಲೂ ಕಡಲ ಚಿಪ್ಪುಗಳು ಕಾಣಸಿಗುತ್ತವೆ. ಮಣ್ಣಿನಲ್ಲಿ ಹೂತು ಬಿದ್ದಿದ್ದರೂ ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುತ್ತದೆ. ಅವುಗಳನ್ನು ಕಂಡೊಡನೆಯೇ ತೆಗೆದು ಕಿಸೆಯಲ್ಲಿ ಬಚ್ಚಿಟ್ಟುಕೊಳ್ಳಬೇಕು ಎಂದು ಅನಿಸುತ್ತದೆ. ಇವು ಸಮುದ್ರದ ಜಲಚರಗಳಾದ ಚಿಪ್ಪು ಮೀನು, ಬಸವನ ಹುಳು, ಕವಡೆ ಜೀವಿ, ಬೆಳಚು ಮುಂತಾದ ಜೀವಿಗಳ ಹೊರ ಮೇಲ್ಮೈ. ಈ ಪ್ರಾಣಿಗಳು ಸತ್ತನಂತರ ಅಥವಾ ಇತರ ಪ್ರಾಣಿಗಳು ತಿಂದರೆ ಅವುಗಳ ಮೈಗೆ ಅಂಟಿದ್ದ ಚಿಪ್ಪುಗಳು ಕಳಚಿಕೊಂಡು ಸಮುದ್ರ ತಟಕ್ಕೆ ಬಂದು ಬೀಳುತ್ತವೆ. ಈ ಜಲಚರಗಳ ದೇಹ ತುಂಬಾ ಮೃದುವಾಗಿದ್ದರಿಂದ ತಮ್ಮ ರಕ್ಷಣೆಗಾಗಿ ಚಿಪ್ಪನ್ನು ನಿರ್ಮಿಸಿ ಕೊಂಡಿರುತ್ತವೆ.
 
ಕಡಲ ಚಿಪ್ಪಿನ ಜಲಚರಗಳು ಅತ್ಯಂತ ವೈವಿಧ್ಯಮಯ. ಅಷ್ಟೇ ವಿಭಿನ್ನವಾದ ಚಿಪ್ಪುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜಾತಿಗಳಿವೆ ಎಂದು ಅಂದಾಜಿಸಲಾಗಿದೆ. ಇವು ಮೃದ್ವಂಗಿ ಜಾತಿಗೆ ಸೇರಿದ ಕಡಲ ಜೀವಿಗಳು. ಸಾಮಾನ್ಯವಾಗಿ ಇವು ಒಂದೇ ಕವಾಟ ಹೊಂದಿರುತ್ತವೆ. ಆದರೆ ಬಳಚು ಚಿಪ್ಪಿನ ಜೀವಿಗೆ ಎರಡು ಕವಾಟ. ಒಳಗಿನ ಮಾಂಸವನ್ನು ಭದ್ರವಾಗಿ ಮುಚ್ಚಿರುತ್ತವೆ.

ಚಿಪ್ಪುಗಳು ಹೇಗೆ ನಿರ್ಮಾಣವಾಗುತ್ತವೆ?
ಚಿಪ್ಪುಗಳ ಮೇಲಿನ ಹೊದಿಕೆ ಅತ್ಯಂತ ಸಂಕೀರ್ಣ ರಚನೆ ಹೊಂದಿರುತ್ತದೆ. ಚಿಪ್ಪುಗಳನ್ನು ಕ್ಯಾಲ್ಸಿಯಂ ಕಾಬರ್ೊನೇಟ್, ಆಮ್ಲಜನಕದ ಕೋಶಗಳು ಮತ್ತು ಇತರ ಮಿನರಲ್ಗಳನ್ನು ಬಳಸಿಕೊಂಡು ನಿರ್ಮಿಸುತ್ತವೆ. ತನ್ನ ಸಂಪೂರ್ಣ ದೇಹವನ್ನು ಚಿಪ್ಪಿನೊಳಗೆ ಬಚ್ಚಿಟ್ಟು ಕೊಂಡಿರುತ್ತವೆ. ಕೆಲವೊಮ್ಮೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಚಿಪ್ಪುಗಳನ್ನು ನಿರ್ಮಿಸಿಕೊಂಡಿರುತ್ತವೆ. ಚಿಪ್ಪುಗಳು 1 ಸೆಂಟಿಮೀಟರ್ 20 ಸೆಂಟಿಮೀಟರ್ ನಷ್ಟು ದೊಡ್ಡ ಗಾತ್ರದಲ್ಲಿರುತ್ತವೆ. ಈ ಪ್ರಾಣಿಗಳು ತಿನ್ನುವ ಆಹಾರದ ಮೇಲೆ ಚಿಪ್ಪಿನ ಬಣ್ಣ ಮತ್ತು ರಚನೆ ಇರುತ್ತದೆ. ಅತ್ಯಂತ ಆಳ ಸಮುದ್ರಗಳಲ್ಲಿಯೂ ಕಡಲ ಚಿಪ್ಪುಗಳು ಸಿಗುತ್ತವೆ. ಕಡಲ ಚಿಪ್ಪುಗಳನ್ನು ಹುಡುಕುತ್ತಾ ಹೋದಂತೆ ಅಸಂಖ್ಯಾತ  ವಿನ್ಯಾಸದ ಚಿಪ್ಪುಗಳು ಕಾಣಸಿಗುತ್ತವೆ. ಚಿಪ್ಪುಗಳು ಒಂದೇ ಸಮನೆ ಬೆಳವಣಿಗೆ ಹೊಂದುವುದಿಲ್ಲ. ಬದಲಾಗಿ ಜೀವಿಗಳ ದೇಹಕ್ಕೆ ತಕ್ಕಂತೆ ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತವೆ.   

ಆಭರಣಗಳ ತಯಾರಿಕೆ
ಕಡಲ ಚಿಪ್ಪುಗಳನ್ನು ಬಹಳ ಹಿಂದಿನಿಂದಲೂ ಆಭರಣಗಳನ್ನಾಗಿ ಬಳಸಲಾಗುತ್ತಿದೆ. ಶಿಲಾಯುಗದಲ್ಲಿಯೇ ಚಿಪ್ಪುಗಳನ್ನು ಆಭರಣವಾಗಿ ಬಳಸಿದ ಕುರುಹುಗಳು ಸಿಕ್ಕಿವೆ. ಈ ಚಿಪ್ಪುಗಳಿಂದ ಅತೀ ಕಡಿಮೆ ವೆಚ್ಚದಲ್ಲಿ ಅತ್ಯಂತ ಸುಂದರ ಆಭರಣಳನ್ನು ನಾವೇ ತಯಾರಿಸಿ ಕೊಳ್ಳಬಹುದು. ಚಿಪ್ಪುಗಳನ್ನು ಕಲಾಕೃತಿಗಳ ನಿಮರ್ಾಣಕ್ಕೂ ಬಳಸಲಾಗುತ್ತದೆ. ಮೆನೆಗಳ ಗೋಡೆ, ಬಾಗಿಲುಗಳ ಅಲಂಕಾರಕ್ಕೂ ಇವುಗಳನ್ನು ಬಳಸಲಾಗುತ್ತದೆ. ಕಡಲ ಚಿಪ್ಪಿನ ಕಲಾಕೃತಿಗಳಿಗೆ ಮಾರುಟ್ಟೆಯಲ್ಲಿ ಭಾರೀ ಬೇಡಿಕೆ.

ಚಿಪ್ಪುಗಳ ಬಳಕೆ

 ಆದಿ ಮಾನವರು ಹಣಕ್ಕೆ ಪರ್ಯಾಯವಾಗಿ ಕಡಲ ಚಿಪ್ಪುಗಳನ್ನು ಬಳಸುತ್ತಿದ್ದರು. ಚಿಪ್ಪುಗಳ ಒಳಗೆ ಎಣ್ಣೆಗಳನ್ನು ತುಂಬಿ ದೀಪಗಳನ್ನು ಉರಿಸಲಾಗುತ್ತಿತ್ತು. ಆಯುಧವಾಗಿಯೂ ಇವುಗಳನ್ನು ಬಳಸುತ್ತಿದ್ದರು. ಕಡಲ ಚಿಪ್ಪುಗಳ ಅಘಾದ ರಾಶಿಯಲ್ಲಿ ದೇವಾಲಯಲ್ಲಿ ವಾದ್ಯ ನುಡಿಸಲು ಬಳಸುವ ಶಂಖ ಕೂಡಾ ಒಂದು. ಶಂಖಗಳ ಉಪಯೋಗ ಬಹಳ ಹಿಂದಿನಿಂದಲೂ ಇದೆ. ಬಳಚು ಚಿಪ್ಪಿಗಳ ಮಾಂಸವನ್ನು ಬಳಸಿದ ನಂತರ ಅವುಗಳಿಂದ ಸುಣ್ಣ ತಯಾರಿಸಲಾಗುತ್ತದೆ. ಕಡಲ ಚಿಪ್ಪುಗಳಲ್ಲಿ ಕೆಲವೊಮ್ಮೆ ಮುತ್ತುಗಳೂ ಸೃಷ್ಟಿಯಾಗುತ್ತವೆ. ಕಡಲ ಮುತ್ತುಗಳು ಅತ್ಯಂತ ವಿರಳ ಮತ್ತು ಅಷ್ಟೇ ದುಬಾರಿ. ಚಿಪ್ಪುಗಳು ಅತ್ಯಂತ ದೀರ್ಘಕಾದವರೆಗೂ ಮಣ್ಣಿನಲ್ಲಿ ಹಾಗೆಯೇ ಇರುತ್ತವೆ. 600 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಕಡಲ ಚಿಪ್ಪನ್ನು  ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಮ್ಯಸಿಯಂಗಲ್ಲಿ ಕಡಲ ಚಿಪ್ಪಿನ ವಿವಿಧ ಆಕೃತಿಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಪಗಡೆ ಆಟಕ್ಕೆ ಮತ್ತು ಜ್ಯೋತಿಷವನ್ನು ಹೇಳುವ ಸಲುವಾಗಿ ಕವಡೆಗಳನ್ನು ಉಪಯೋಗಿಸಲಾಗುತ್ತದೆ. ಇವುಗಳ ಮಾಂಸವನ್ನು ಹಸಿಯಾಗಿಯೇ ತನ್ನಬಹುದು. ಮೀನಿನಂತಯೇ ಕಡಲ ಚಿಪ್ಪುಗಳ ಮಾಂಸಕ್ಕೂ ಭಾರೀ ಬೇಡಿಕೆ ಇದೆ.

 

Sunday, July 8, 2012

ಸಾಗರದಲ್ಲಿನ ನಕ್ಷತ್ರಗಳು

ಸಮುದ್ರದ ಜೀವಿಗಳಲ್ಲಿಯೇ ಅತ್ಯಂತ ಆಕರ್ಶಕ ಜೀವಿಯೆಂದರೆ ಅವು ನಕ್ಷತ್ರ ಮೀನುಗಳು. ನಕ್ಷತ್ರ ಮೀನುಗಳನ್ನು ಸಾಗರದಲ್ಲಿನ ನಕ್ಷತ್ರ-ಸೀ ಸ್ಟಾರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇವು ನೋಡಲು ನಕ್ಷತ್ರಗಳಂತೆಯೇ ಕಾಣಿಸುತ್ತವೆ. ದ್ರುವ ಸಮುದ್ರ ಸೇರಿದಂತೆ ಜಗತ್ತಿನ ಎಲ್ಲಾ ಸಮುದ್ರಗಳಲ್ಲಿಯೂ ನಕ್ಷತ್ರ ಮೀನುಗಳು ಇವೆ. ಇವುಗಳಲ್ಲಿ ಸುಮಾರು 2 ಸಾವಿರ ಜಾತಿಗಳಿವೆ. ನಕ್ಷತ್ರ ಮೀನುಗಳು ಉಪ್ಪು ನೀರಿನಲ್ಲಿ ಮಾತ್ರ ವಾಸಿಸುತ್ತವೆ. ಹೀಗಾಗಿ ಸಿಹಿನೀರಿನ ನದಿ, ಕೊಳಗಳಲ್ಲಿ ಕಾಣಸಿಗುವುದಿಲ್ಲ. ತೀರಪ್ರದೇಶ, ಹವಳದ ದಿಬ್ಬಗಳು ಮತ್ತು ಆಳವಿಲ್ಲದ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. 


ನಕ್ಷತ್ರ ಮೀನುಗಳಿಗೆ ಬೆನ್ನಿನ ಮೂಳೆ ಇರುವುದಿಲ್ಲ. ಬದಲಾಗಿ ಬೆನ್ನಿನ ಮೇಲೊಂದು ಮುಳ್ಳಿನ ಕವಚವಿರುತ್ತದೆ. ಹರಿತವಾದ ಚಿಕ್ಕ ಚಿಕ್ಕ ಮೂಳೆಗಳಿಂದ ಮಾಡಲ್ಪಟ್ಟ ಇವು ಶತ್ರುಗಳಿಂದ ರಕ್ಷಣೆ ನೀಡುತ್ತದೆ. ದೇಹದ ಮೇಲ್ಮೈ ಕ್ಯಾಲ್ಶಿಯಂ ಕಾರ್ಬೋನೇಟ್ ಪ್ಲೇಟ್ಗಳಿಂದ ನಿರ್ಮಾಣವಾಗಿರುತ್ತವೆ. ವೈವಿಧ್ಯಮಯ ಬಣ್ಣದ, ತರಹೇವಾರಿ ನಮೂನೆಯ ನಕ್ಷತ್ರ ಮೀನುಗಳು ಇವೆ.   

ನಕ್ಷತ್ರ ಮೀನು ಹುಟ್ಟುವುದು ಹೇಗೆ?

 ನಕ್ಷತ್ರಮೀನುಗಳ ಸರಾಸರಿ ಬೆಳವಣಿಗೆ 8 ಇಂಚು.  ಕೆಲವು ಮೀನುಗಳು 3 ಮೀಟರ್ ಉದ್ದ ಬೆಳೆದ ಉದಾಹರಣೆಗಳಿವೆ. ಹೆಣ್ಣು ನಕ್ಷತ್ರ ಮೀನು 20 ಲಕ್ಷ ಮೊಟ್ಟೆಗಳನ್ನು ಇಡಬಲ್ಲದು. ಆದರೆ ಎಲ್ಲಾ ಮೊಟ್ಟೆಗಳೂ ಜೀವತಾಳುವುದಿಲ್ಲ. ಹೆಚ್ಚಿನವು ಇತರ ಮೀನುಗಳಿಗೆ ಆಹಾರವಾಗುತ್ತವೆ. ಲಾವ್ರಾ ಸ್ಥಿತಿಯಲ್ಲರುವ ಮೊಟ್ಟಗಳನ್ನು ಗಂಡು ಮೀನುಗಳು ಅಭಿವೃದ್ಧಿಪಡಿಸಿ ನಕ್ಷತ್ರದ ಆಕಾರ ಪಡೆಯುವಂತೆ ಮಾಡುತ್ತವೆ. 

ಕೈಗಳನ್ನು ಪುನಃ ಪಡೆಯುತ್ತದೆ
ಬಹುತೇಕ ನಕ್ಷತ್ರ ಮೀನುಗಳಿಗೆ ಐದು ಕೈಗಳು ಇರುತ್ತವೆ. ಈ ಕೈಗಳು ಮಧ್ಯದ ತಟ್ಟೆಯಾಕೃತಿಯ ದೇಹದಿಂದ ಹೊರಚಾಚಿ ಕೊಳ್ಳುತ್ತವೆ. ಕೆಲವು ಜಾತಿಯ ನಕ್ಷತ್ರ ಮೀನುಗಳಿಗೆ ಆರು ಅಥವಾ ಅದಕ್ಕಿಂತ ಹೆಚ್ಚಿನ ಕೈಗಳಿರುತ್ತವೆ. ಸೊಲಾಸ್ಟರಿಡೇ ನಕ್ಷತ್ರ ಮೀನಿಗೆ 10-15 ಕೈಗಳಿದ್ದರೆ, ಸನ್ಸ್ಟಾರ್ ಎಂಬ ನಕ್ಷತ್ರ ಮೀನಿಗೆ 40 ಕೈಗಳಿವೆ! ವೈರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೈಗಳನ್ನು ಕಡಿದುಕೊಳ್ಳತ್ತದೆ. ಆದರೆ ಕಡಿದುಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುವುದೇ ನಕ್ಷತ್ರ ಮೀನಿನ ವಿಶೇಷತೆ. ಕೈಗಳನ್ನು ಮರಳಿ ಪಡೆಯಲು ಒಂದು ವರ್ಷ ಬೇಕಾಗುತ್ತದೆ. ಕತ್ತರಿಸಿದ ಕೈಗಳಿಂದ ಇನ್ನೊಂದು ನಕ್ಷತ್ರ ಮೀನೇ ಬೆಳೆಯುತ್ತದೆ.

ಈಜಲು ಬರುವುದಿಲ್ಲ
ನೀರಿನಲ್ಲೇ ಇದ್ದರೂ ನಕ್ಷತ್ರ ಮೀನಿಗೆ ಈಜಲು ಬರುವುದಿಲ್ಲ. ಕೈಗಳ ಸಹಾಯದಿಂದ ನೀರಿನಲ್ಲಿ ಚಲಿಸುತ್ತದೆ. ಪ್ರತಿಯೊಂದು ಕೈಯ ಕೊನೆಯಲ್ಲಿ ಪುಟ್ಟ ಕಣ್ಣು ಇದ್ದು ಅವುಗಳ ಮೂಲಕ ಕತ್ತಲು ಮತ್ತು ಬೆಳಕನ್ನು ಗುರುತಿಸುತ್ತದೆ. ದೇಹದ ತುಂಬೆಲ್ಲಾ ಇರುವ ಕೋಶಗಳ ಮೂಲಕ ಗಾಳಿಯಲ್ಲಿ ಉಸಿರಾಡುತ್ತದೆ. ತನ್ನ ದೇಹದ ಮಧ್ಯ ಭಾಗದಲ್ಲಿರುವ ಬಾಯಿಯ ಮೂಲಕ ಆಹಾರ ತಿನ್ನುತ್ತದೆ. ಆಹಾರ ತಿನ್ನುವುದು ಕೈಗಳಿಂದಲೇ. ಇದಕ್ಕೆ ಎರಡು ಹೊಟ್ಟೆಗಳಿದ್ದು, ದೊಡ್ಡ ಹೊಟ್ಟೆಯನ್ನು ಹೊರ ಚಾಚಿ ತನಗಿಂತಲೂ ದೊಡ್ಡ ಜೀವಿಗಳನ್ನು ಬೇಟೆಯಾಡಿ ತಿನ್ನಬಲ್ಲದು. ರಕ್ತದ ಬದಲಾಗಿ ಇವು ನೀರಿನ ನರಮಂಡಲ ವ್ಯವಸ್ಥೆ ಹೊಂದಿವೆ. ಕಾಲಿನ ಕೆಳ ಭಾಗದಲ್ಲಿರುವ ಕೊಳವೆಯ ಮೂಲಕ ನೀರನ್ನು ಹೀರಿ ನರಗಳಿಗೆ ಕಳುಹಿಸುತ್ತದೆ. ಕೊಳವೆಯ ಮುಖಾಂತವೇ ನೀರನ್ನು ಹೊರಹಾಕುತ್ತದೆ.  
ನಕ್ಷತ್ರ ಮೀನಿನ ಜೀವಿತಾವಧಿಯಲ್ಲಿ ವ್ಯತ್ಯಾಸವಿದೆ. 
ಹೆಕ್ಸಾಕ್ಟಿಸ್ ಎಂಬ ಮೀನು 10 ವರ್ಷ ಜೀವಿಸಿದರೆ ಒಕ್ರೇಶಿಯಸ್ ಎಂಬ ದೊಡ್ಡಗಾತ್ರದ ಮೀನು 35 ವರ್ಷಗಳ ಕಾಲ ಬದುಕುತ್ತದೆ. ವಿವಿಧ ಬಗೆಯ ಆಹಾರವನ್ನು ನಕ್ಷತ್ರ ಮೀನು ತಿನ್ನುತ್ತದೆ. ದಕ್ಷಿಣ ಏಷ್ಯಾದ ಒಂದು ಮೀನು ಹವಳವನ್ನು ಮಾತ್ರ ತಿನ್ನುತ್ತದೆ. ಕೆಲವು ಮೀನುಗಳು ಶುದ್ಧ ಸಸ್ಯಾಹಾರಿಯಾಗಿರುತ್ತವೆ. ಪಿಸಾಸ್ಟರ್ ಎಂಬ ನಕ್ಷತ್ರಮೀನು ಕೈಗಳಿಂದ ಕಡಲ ಚಿಪ್ಪುಗಳನ್ನು ಅಗಲಿಸಿ ನಂತರ ತನ್ನ ಹೊಟ್ಟೆಯನ್ನು ಚಿಪ್ಪಿನೊಳಗೆ ಇಳಿಸಿ ತಿನ್ನುತ್ತದೆ. ನಕ್ಷತ್ರ ಮೀನುಗಳಲ್ಲಿ ಔಷಧಿಯ ಗುಣಗಳಿವೆ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ.