ಜೀವನಯಾನ

Sunday, July 29, 2012

ಸಾಗರದ ಬುದ್ಧಿ ಜೀವಿ ಆಕ್ಟೊಪಸ್

ಸಾಗರದ ಬುದ್ಧಿ ಜೀವಿ ಎಂದು ಆಕ್ಟೊಪಸ್ ಕರೆಸಿಕೊಳ್ಳುತ್ತದೆ. ವಿಲಕ್ಷಣದ ನಡುವಳಿಕೆಯಿಂದಲೇ ತನ್ನನ್ನು ಗುರುತಿಸಿಕೊಂಡಿದೆ. ಸಾಗರದಲ್ಲಿ ತನ್ನನ್ನು ಯಾರೂ ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ಬಂಡೆಗಳ ನಡುವೆ ಅಡಗಿ ಕೂತಿರುತ್ತದೆ. ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ಇವು ವಾಸಿಸುತ್ತವೆ. ಇದು ಸೊಫಾಲೋಪೋಡಾ ವರ್ಗಕ್ಕೆ ಸೇರಿದ ಅಷ್ಟಪದಿ. ತನ್ನ ಉದ್ದನೆಯ ಎಂಟು ಬಾಹುಗಳಿಂದಲೇ ಆಕ್ಟೊಪಸ್ ಹೆಸರುವಾಸಿ. ಇದರ ಬಾಯಿ ಬಾಹುಗಳ ಮಧ್ಯದಲ್ಲಿರುತ್ತದೆ. ಮೈಯಲ್ಲಿ ಅಸ್ತಿಪಂಜರವೇ ಇಲ್ಲದ ಇದರ ಮಾಂಸದ ಮುದ್ದೆಯಂತಹ ದೇಹ ಕರಿದಾದ ಸಂದಿಯಲ್ಲೂ ನುಸುಳಬಲ್ಲದು. ಆಕ್ಟೊಪಸ್ಗಳು ಈಜುವಾಗ ತನ್ನ ಎಂಟು ಕೈಗಳನ್ನು ಹಿಂದಕ್ಕೆ ಎಳೆದುಕೊಂಡು ವೇಗವಾಗಿ ಮುಂದೆ ಸಾಗುತ್ತದೆ.

  • ಕೈಗಳೇ ಎಲ್ಲವನ್ನೂ ಮಾಡುತ್ತದೆ
ಆಕ್ಟೊಪಸ್ಳು ಆಂತರಿಕ ಅಸ್ತಿಪಂಜರ ವಿಲ್ಲದೇ ಬಹುಮಟ್ಟಿಗೆ ಮೃದು ದೇಹವನ್ನು ಹೊಂದಿದೆ. ಸಂಪೂರ್ಣ ದೇಹ ಅದರ ತಲೆಯೇ ಆಗಿರುತ್ತದೆ. ತಲೆ ಬುರುಡೆಯೇಲ್ಲಿರುವ ಕೊಕ್ಕು ಮಾತ್ರ ದೇಹದಲ್ಲಿರುವ ಗಟ್ಟಿ ಭಾಗ. ಜೀವಿಸಲು ಅಗತ್ಯವಿರುವ ಎಲ್ಲಾ ಅವಯವಗಳು ತಲೆಯ ಭಾಗದಲ್ಲಿರುತ್ತದೆ. ಇದರಲ್ಲಿ ಮೂರು ಹೃದಯಗಳೂ ಇವೆ. ಆದರೆ ನರ ಮಂಡಲ ವ್ಯವಸ್ಥೆ ಇರುವುದು ಕೈಗಳಲ್ಲಿ. ಮೂಳೆಯೇ ಇಲ್ಲದ ಕೈಗಳನ್ನು ಹೇಗೆ ಬೇಕಾದರೂ ಬಗ್ಗಿಸಬಲ್ಲದು. ಬಂಡೆಗಳ ನಡುವೆ ತೆವಳುವುದಕ್ಕೂ ಕೈಗಳು ಸಹಕಾರಿ. ಆದರೆ ಕೈಗಳು ಅಷ್ಟೇ ಬಲಿಷ್ಟ. ಪ್ರತಿ ಕೈಗಳಲ್ಲಿ ಎರಡು ಹೀರು ಕೊಳವೆಗಳಿರುತ್ತವೆ. ಬೇಟೆಯನ್ನು ಕೈಗಳಿಂದ ಸುತ್ತುವರಿದು ತಪ್ಪಿಸಿಕೊಳ್ಳದಂತೆ ಮಾಡುತ್ತದೆ. ವಸ್ತುವಿನ ರಚನೆ, ಆಕಾರ, ರುಚಿಯನ್ನು ಸ್ಪರ್ಶದ ಮೂಲಕವೇ ಗೃಹಿಸಬಲ್ಲದು. ಆಕ್ಟೊಪಸ್ ತಾನು ಕಳೆದು ಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುತ್ತದೆ.  

  • ವೈರಿಗೆ ಮಂಕುಬೂದಿ ಎರಚುವ ಗುಣ  
ಆಕ್ಟೊಪಸ್ ತನ್ನ ಎದುರಾಳಿಯ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತನ್ನ ರಕ್ಷಣೆಗಾಗಿ ಹಲವಾರು ತಂತ್ರಗಳನ್ನು ಅನುಸರಿಸುತ್ತದೆ. ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತವೆ. ಮಬ್ಬು ಕವಿಯುವ ಒಂದು ರೀತಿಯ ಬಣ್ಣ ಉಗುಳಿ ಅಥವಾ ಮೈ ಬಣ್ಣ ಬದಲಾಯಿಸಿ ವೈರಿಯಿಂದ ತಪ್ಪಿಸಿಕೊಳ್ಳುತ್ತವೆ. ಆಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ಗಾಢವಾದ ಕಪ್ಪುಶಾಯಿಯನ್ನು ದಟ್ಟವಾದ ಮೋಡದಂತೆ ಹೊರಹಾಕುತ್ತದೆ. ವೈರಿಗೆ ಮಂಕುಬೂದಿ ಎರಚಿ ಅದರ ಕಾರ್ಯಕ್ಷಮತೆ ಕಡಿಮೆ ಮಾಡುತ್ತವೆ. ಆಕ್ಟೊಪಸ್ಗಳು ಹೊಡೆದಾಡುವದಕ್ಕಿಂತಲೂ ವೈರಿಯಿಂದ ನುಣುಚಿಕೊಳ್ಳುವುದೇ ಹೆಚ್ಚು. ಅಪಾಯ ಎದುರಾದರೆ 25 ಮೈಲಿ ವೇಗದಲ್ಲಿ ಅವು ಪಾರಾಗುತ್ತದೆ. ಅಕ್ಟೊಪಸ್ ಗಳು ಚುರುಕು ಬುದ್ಧಿ ಉಳ್ಳವುಗಳು. ಕಡಿಮೆ ಮತ್ತು ದೀರ್ಘಕಾಲಿಕ ನೆನಪಿನ ಶಕ್ತಿ ಹೊಂದಿವೆ. ಹುಟ್ಟಿನಿಂದ ಬಂದಿದ್ದಕ್ಕಿಂತ ಸ್ವಂತದ್ದಾದ ಏನನ್ನಾದರೂ ಅಕ್ಟೊಪಸ್ ಕಲಿಯುತ್ತದೆ. ತಂದೆ ತಾಯಿಗಳಿಂದ ಬೇಗನೆ ದೂರವಾಗುವ ಇವು ಅವುಗಳಿಂದ ಏನನ್ನೂ  ಕಲಿಯುವುದಿಲ್ಲ. ಕಡಿಮೆ ಆಯಸ್ಸೇ ಇವುಗಳ ಕಲಿಕಾ ಸಾಮರ್ಥ್ಯಕ್ಕೆ ಮಿತಿ ಒಡ್ಡಿದೆ. ಆಕ್ಟೊಪಸ್ಗಳು ಸಾಮಾನ್ಯವಾಗಿ 2 ವರ್ಷವಷ್ಟೇ ಬದುಕುತ್ತವೆ. ಗಂಡು ಆಕ್ಟೊಪಸ್ ಸಂತಾನೋತ್ಪತ್ತಿಗೆ ಕಾರಣವಾಗುವ ಹಾಮರ್ಮೋನನ್ನು ಸೃವಿಸಿದ 2 ತಿಂಗಳಲ್ಲೇ ಪ್ರಾಣ ಬಿಡುತ್ತದೆ. ಆಕ್ಟೊಪಸ್ಗಳು ತೀರಾ ಸೂಕ್ಷ್ಮ ದೃಷ್ಟಿ ಹೊಂದಿವೆ. ಇವು ನೀಲಿ ರಕ್ತದ ಜೀವಿಗಳು. ಆಕ್ಟೊಪಸ್ನಲ್ಲಿ ಸುಮಾರು 200 ಜಾತಿಗಳಿವೆ.
  • ಭವಿಷ್ಯಕಾರನ ಬಿರುದು
ಆಕ್ಟೊಪಸ್ ಭವಿಷ್ಯಕಾರ ಎಂದು ಹೆಸರುಗಳಿಸಿದೆ. ಇವು ತಮ್ಮ ಅತಿಮಾನುಷ ಬುದ್ಧಿ ಶಕ್ತಿಯಿಂದಾಗಿ ಮುಂದಿನದನ್ನು ಪೂರ್ವದಲ್ಲೇ ಗ್ರಹಿಸುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಆಕ್ಟೊಪಸ್ ಗಳ ಕಲಿಕಾ ಸಾಮರ್ಥ್ಯ ವಿಜ್ಞಾನಿಗಳನ್ನೂ ಅಚ್ಚರಿಗೊಳಿಸಿದೆ

No comments:

Post a Comment