ಪಕ್ಷಿ ಸಂಕುಲದಲ್ಲಿ ಈ ಆಸ್ಟ್ರಿಚ್ ಅತ್ಯಂತ ಶಕ್ತಿಶಾಲಿ. ಗಾತ್ರದಲ್ಲಿ ಇದನ್ನು ಮೀರಿಸುವವರು ಯಾರೂ ಇಲ್ಲ. ಇದನ್ನು ಕೇವಲ ಪಕ್ಷಿ ಎಂದು ತಿಳಿದುಕೊಳ್ಳುವ ಹಾಗಿಲ್ಲ. ಇದು ತನಗಿಂತ ಹತ್ತು ಪಟ್ಟು ದೊಡ್ಡದಾದ ಪ್ರಾಣಿಯನ್ನೂ ಸಹ ಹೆದರಿಸಬಲ್ಲದು! ಆಸ್ಟ್ರಿಚ್ ಗೆ ಹಾರಲು ಬರುವುದಿಲ್ಲ ನಿಜ. ಆದರೆ ಅದರ ಬಲವೇನಿದ್ದರೂ ಕಾಲುಗಳಲ್ಲಿ. ಉದ್ದನೆಯ ಕಾಲುಗಳ ಮೇಲೆ ನಿಂತಾಗ ಸುಮಾರು 8 ಅಡಿಗಳಷ್ಟು ಎತ್ತರಕ್ಕೆ ಕತ್ತೆತ್ತಿ ನೋಡುತ್ತದೆ. ಕತ್ತು ಸಹ ಬಲು ಉದ್ದವಾಗಿದೆ.
- ಹೊಟ್ಟೆಯೊಳಗೆ ಬೀಸುಕಲ್ಲು
ಆಸ್ಟ್ರಿಚ್ಗಳಿಗೆ ನೀರಿನ ಅವಶ್ಯಕತೆ ಕಡಿಮೆ. ಅಪರೂಪಕ್ಕೆ ಎಂಬಂತೆ ನೀರು ಕುಡಿಯುತ್ತವೆ. ಅವು ತಿನ್ನುವ ಸಸ್ಯಗಳಿಂದಲೇ ದೇಹಕ್ಕೆ ಬೇಕಾದ ನೀರಿನ ಅಂಶ ಪಡೆದುಕೊಳ್ಳುತ್ತವೆ. ಇವುಗಳ ಬಾಯಲ್ಲಿ ಹಲ್ಲಿಲ್ಲ. ಆದರೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಬಾಯಿಚಪಲ. ಸೊಪ್ಪು, ಚಿಕ್ಕಪುಟ್ಟ ಸಸ್ಯ. ಸಸ್ಯದ ಬೇರು, ಕ್ರಿಮಿಕೀಟ, ಹಲ್ಲಿ, ಮಿಡತೆ ಏನಾದರೂ ಸರಿ. ತಿಂದು ಹೊಟ್ಟೆಯಲ್ಲಿನ ಚೀಲದಲ್ಲಿ ಸಂಗ್ರಹಿಸುತ್ತದೆ. ಇದರ ಜತೆ ಚಿಕ್ಕ ಕಲ್ಲಿನ ಹರಳುಗಳನ್ನು ಇನ್ನುತ್ತದೆ. ಕಲ್ಲುಗಳ ಸಹಾಯದಿಂದ ಆಹಾರವನ್ನು ಬೀಸುಕಲ್ಲಿನಂತೆ ಅರೆದು ಪಚನ ಗೊಳಿಸುತ್ತದೆ. ವಯಸ್ಸಿಗೆ ಬಂದ ಆಸ್ಟ್ರಿಚ್ ಹಕ್ಕಿಯ ಹೊಟ್ಟೆಯಲ್ಲಿ ಒಂದು ಕೆ.ಜಿಯಷ್ಟು ಕಲ್ಲು ಸಂಗ್ರಹವಾಗಿರುತ್ತದೆ.
- ತಂಟೆಗೆ ಬಂದರೆ ಹುಷಾರ್!
ಈ ಹಕ್ಕಿ ರಟೀಟ್ ಎಂಬ ಗುಂಪಿಗೆ ಸೇರಿವೆ. ಬೆಳೆದ ಆಸ್ಟ್ರಿಚ್ ಸುಮಾರು 93ರಿಂದ 130 ಕೆ.ಜಿಗಳಷ್ಟು ತೂಗುತ್ತದೆ. ಆಸ್ಟ್ರಿಚ್ 75 ವರ್ಷಗಳ ಕಾಲ ಬದುಕಬಲ್ಲದು. ಆಸ್ಟ್ರಿಚ್ ನಕಣ್ಣು ಇತರ ಎಲ್ಲಾ ಪ್ರಾಣಿಗಳಿಗಿಂತಲೂ ದೊಡ್ಡದು. ಇದರ ಕಣ್ಣು 2 ಇಂಚು ಇರುತ್ತದೆ. ಮೈಮೇಲೆ ಸುಂದರ ಗರಿಗಳನ್ನು ಹೊಂದಿರುತ್ತದೆ. ಇವುಗಳ ದೃಷ್ಟಿ ಮತ್ತು ಸಂವೇದನೆ ತುಂಬಾ ತೀಕ್ಷ್ಣ. ದೂರದಿಂದಲೇ ತನ್ನ ವೈರಿಯನ್ನು ಅಥವಾ ತನಗೆ ಎದುರಾಗುವ ಅಪಾಯ ಗುರುತಿಸುತ್ತದೆ. ರೆಕ್ಕೆಗಳು ಅದರ ದೇಹದ ಗಾತ್ರಕ್ಕೆ ಹೋಲಿಸಿದರೆ ತೀರಾ ಚಿಕ್ಕವು. ಇವು ತಮ್ಮ ರೆಕ್ಕೆಗಳಿಂದ ದೇಹದ ಸಮತೋಲನ ಕಾಯ್ದು ಕೊಳ್ಳುತ್ತವೆ. ಭಾವನೆಗಳನ್ನು ಮತ್ತು ಸಾಂಗತ್ಯ ಬೇಕೆಂಬ ಸೂಚನೆ ನೀಡುವುದು ರೆಕ್ಕೆಯಿಂದಲೇ. ಅಲ್ಲದೇ ದೇಹದ ಭಾರ ಕೂಡಾ ವಿಪರೀತ. ಹೀಗಾಗಿಯೇ ಆಸ್ಟ್ರಿಚ್ ಗೆಹಾರಲು ಬರುವುದಿಲ್ಲ. ಆದರೆ ಗಂಟೆಗೆ 70 ಕಿ.ಮೀ ವೇಗದಲ್ಲಿ ಓಡುವ ಶಕ್ತಿ ಹೊಂದಿದೆ. ಎಷ್ಟು ದೂರ ಕ್ರಮಿಸಿದರೂ ಓಟದ ವೇಗ ಕಡಿಮೆಯಾಗುವುದಿಲ್ಲ. ಇವು ಹೆಚ್ಚೆ ಇಡುವುದೇ 10 ರಿಂದ 15 ಅಡಿ ದೂರಕ್ಕೆ! ಪ್ರತಿ ಪಾದಕ್ಕೆ 2 ಗೊರಸನ್ನು ಹೊಂದಿರುವ ಇವುಗಳ ಒದೆತ ತುಂಬಾ ಅಪಾಯಕಾರಿ. ಆಸ್ಟ್ರಿಚ್ ಗಳ ಒದೆತ ಮನುಷ್ಯರನ್ನೂ ಸಾಯಿಸುತ್ತದೆ. ತನ್ನ ಬದ್ಧ ವೈರಿ ಸಿಂಹನ್ನೂ ಒದ್ದು ಸಾಯಿಸುತ್ತದೆ. ಹಿಗಾಗಿ ಇದರ ತಂಟೆಗೆ ಯಾರೂ ಹೋಗುವುದಿಲ್ಲ.
- ಬಲು ದೊಡ್ಡ ಇದರ ಮೊಟ್ಟೆ
ಆಸ್ಟ್ರಿಚ್ಗಳ ಮೊಟ್ಟೆ ಪಕ್ಷಿಗಳ ಮೊಟ್ಟೆಗಳಲ್ಲೇ ಅತ್ಯಂತ ದೊಡ್ಡ ಗಾತ್ರದ್ದು. ಕೋಳಿಮೊಟ್ಟೆಗಿಂತ 10 ಪಟ್ಟು ದೊಡ್ಡದಾಗಿರುತ್ತದೆ. ಇದರ ಸುತ್ತಳತೆ 15 ರಿಂದ 18 ಇಂಚು. 1 ರಿಂದ 1.5 ಕೆ.ಜಿಯಷ್ಟು ತೂಕವಿರುತ್ತದೆ. ಮೊಟ್ಟೆಯಿಟ್ಟ 35 ರಿಂದ 45 ದಿನಗಳ ನಂತರ ಮರಿ ಹೊರಬರುತ್ತದೆ. ಮೊಟ್ಟೆಗಳಿಗೆ ಕಾವು ನೀಡಿ ಆರೈಕೆ ಮಾಡುವುದು ಕೇವಲ ಹೆಣ್ಣು ಆಸ್ಟ್ರಿಚ್ ಗಳ ಕೆಲಸವಲ್ಲ. ಈ ಕಾರ್ಯದಲ್ಲಿ ಗಂಡು ಆಸ್ಟ್ರಿಚ್ ಗಳೂ ಸಹಕರಿಸಿ ರಾತ್ರಿ ಸಮಯದಲ್ಲಿ ಮೊಟ್ಟೆಗೆ ಕಾವು ನೀಡುತ್ತವೆ. ಮೊಟ್ಟೆಯೊಡೆದು ಮರಿಯಾದ ನಂರತವೂ ಆರೈಕೆಯಲ್ಲಿ ಇಬ್ಬರಿಗೂ ಸಮಪಾಲು. ಆಸ್ಟ್ರಿಚ್ ಮೊಟ್ಟೆಗಳನ್ನು ಆಹಾರವಾಗಿಯೂ ಬಳಸಬಹುದು. ಒಂದು ಮಟ್ಟೆ 2 ಸಾವಿರ ಕೆಲೊರಿಯಷ್ಟು ಶಕ್ತಿ ಒದಗಿಸುತ್ತದೆ.
ಆಫ್ರಿಕಾದ ಮರುಭೂಮಿಯಲ್ಲಷ್ಟೇ ವಾಸಮಾಡುವ ಆಸ್ಟ್ರಿಚ್ ಚರ್ಮ ಮತ್ತು ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ. ಇಂದು ಆಸ್ಟ್ರಿಚ್ ಸಾಕಣೆ ಒಂದು ಉದ್ಯಮವಾಗಿ ಬೆಳೆಯುತ್ತದೆ. ಆತಂಕದ ವಿಷಯವೆಂದರೆ ಶಕ್ತಿಶಾಲಿ ಎನಿಸಿಕೊಂಡ ಈ ಪಕ್ಷಿಯ ಸಂಕುಲ ಅಪಾಯದ ಅಂಚಿನಲ್ಲಿದೆ.
No comments:
Post a Comment