ಜೀವನಯಾನ

Sunday, August 26, 2012

ಇದು ಹೂವಲ್ಲ ಜೆಲ್ಲಿ ಫಿಶ್!

ಚಿತ್ತಾಕರ್ಷಕ ರೂಪ, ಹೊಳಪು ಬಣ್ಣ, ಮಿನುಗುವ ಮೈ... ಇದನ್ನು ಹೂವೆಂದು ತಿಳಿದು ಮುಟ್ಟಲು ಮನಸ್ಸು ಮಾಡಿದಿರೋ ಮುಗಿಯಿತು. ನಿಮ್ಮನ್ನೇ ನುಂಗಿ ಬಿಡುತ್ತದೆ ಜೆಲ್ಲಿ ಫಿಶ್! ಸಮುದ್ರದ ತುಂಬೆಲ್ಲಾ ಬಣ್ಣ ಬಣ್ಣದ ಹೂ ಹಿಂಡುಗಳಂತೆ ತುಂಬಿ ಕೊಂಡಿರುವ ಜೆಲ್ಲಿ ಮೀನುಗಳ ಚಲನವಲನ ವಿಸ್ಮಯಕಾರಿ. ಫಿಶ್ ಎಂದಮಾತ್ರಕ್ಕೆ ಇವುಗಳನ್ನು ಮೀನಿಗೆ ಹೋಲಿಸಲು ಸಾಧ್ಯವಿಲ್ಲ. ಇದಕ್ಕೆ ಮೀನಿನ ಹೋಲಿಕೆ ಕೂಡಾ ಇಲ್ಲ. 
 
 ಎಲ್ಲಾ ಸಮುದ್ರಗಳಲ್ಲಿ ಮೇಲೈಯಿಂದ ಸಮುದ್ರದ ಆಳದವರೆಗೂ ಜೆಲ್ಲಿ ಮೀನುಗಳು ಕಂಡುಬರುತ್ತವೆ. ಕೆಲವು ಮೀನುಗಳು ಅಳತೆಯಲ್ಲಿ ಮನುಷ್ಯರಷ್ಟೇ ದೊಡ್ಡ  ಗಾತ್ರದಲ್ಲಿದ್ದರೆ ಇನ್ನು ಕೆಲವು ಪಿನ್ಹೆಡ್ಗಿಂತ ಚಿಕ್ಕದಾಗಿರುತ್ತದೆ. ಸ್ನಿಡಾರಿಯನ್ ಎಂಬ ವರ್ಗಕ್ಕೆ ಸೇರಿದ ಇವು, ಸ್ಟೌರೋಜೋವಾ, ಕ್ಯೂಬೋಜೊವಾ, ಹೈಡ್ರೋಜೋವಾ ಮುಂತಾದ ಅನೇಕ ವರ್ಗಗಳಲ್ಲಿ 100-150 ಗುಂಪುಗಳಲ್ಲಿ ಗುರುತಿಸಲ್ಪಟ್ಟಿವೆ.  ಜೆಲ್ಲಿ ಮೀನು ಮುಖ್ಯವಾಗಿ ನೀರು ಮತ್ತು ಪ್ರೊಟೀನ್ನಿಂದ ಮಾಡಲ್ಪಟ್ಟಿವೆ. ಡೈನೊಸಾರ್ಗಳಿಗಿಂತ ಲಕ್ಷಾಂತರ ವರ್ಷಗಳ ಮೊದಲೇ ಜೆಲ್ಲಿ ಫಿಶ್ಗಳು ಭೂಮಿಯ ಮೇಲಿವೆ. 

ಗುಣ ಲಕ್ಷಣಗಳು:

ಕೆಲವೊಮ್ಮೆ ಕೊಡೆಯಂತೆ ಮತ್ತೆಕೆಲವೊಮ್ಮೆ ಅಣಬೆಯಂತೆ ಕಾಣುವ ಜೆಲ್ಲಿಫಿಶ್ನ ಬಾಲ ದೊಡ್ಡದು. ನೀರಿನಿಂದ ಹೊರಬಂದ ಜೆಲ್ಲಿ ಬಣ್ಣ ರಹಿತ. ಇದು ತನ್ನ ದೇಹವನ್ನು ತೆರೆದುಕೊಂಡು, ಮುಚ್ಚಿಕೊಂಡು ನೀರಿನಲ್ಲಿ ಈಜುತ್ತದೆ. ಜೆಲ್ಲಿ ಮೀನು ಮೆದುಳನ್ನು ಹೊಂದಿಲ್ಲ. ಆದರೆ, ಕೆಲವು ರೀತಿಯ ಕಣ್ಣುಗಳಿವೆ. ಚರ್ಮದ  ಹೊರಮೇಲೈಯಲ್ಲಿ ಇರುವ ನರಜಾಲದ ಮೂಲಕ ಇತರ ವಸ್ತು, ಪ್ರಾಣಿಗಳ ಸ್ಪರ್ಶವನ್ನು ಗ್ರಹಿಸುತ್ತವೆ. ಇವುಗಳಲ್ಲಿ ಉಸಿರಾಟಕ್ಕೆಂದೇ ಪ್ರತ್ಯೇಕ ಅಂಗವಿಲ್ಲ ತೆಳುವಾದ ಚರ್ಮವೇ ಆ ಕೆಲಸ ಪೂರೈಸುತ್ತದೆ. ಇತರ ಮೀನುಗಳಿಗಿಂತ ಕಡಿಮೆ ಪ್ರಮಾಣದ ಆಮ್ಲಜನಕದೊಂದಿಗೆ ಬದುಕಬಲ್ಲದು. ಜೆಲ್ಲಿ ಮೀನುಗಳು ಉಭಯಲಿಂಗಿಗಳಾಗಿವೆ. ಜೆಲ್ಲಿ ಫೀಶ್ಗಳು ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಲ್ಲಿ ಕಂಡುಬರುತ್ತವೆ.  

ಆಕ್ರಮಣಕಾರಿ ಸ್ವಭಾವ
ಸ್ವಭಾವತಃ ಇವು ಆಕ್ರಮಣಕಾರಿಗಳು. ತಮ್ಮ ಪ್ರದೇಶಕ್ಕೆ ಯಾವುದೇ ಹೊಸಜೀವಿ ಪ್ರವೇಶಿಸಿದರೂ ಗುಂಪಾಗಿ ಆಕ್ರಮಣ ನಡೆಸುತ್ತವೆ. ಅಪಾಯದ ಸ್ಥಿತಿಯಲ್ಲಿ ಎದುರಾಳಿಯನ್ನು ಕುಟುಕುವ ಮೂಲಕ ಕಂಗೆಡಿಸುತ್ತವೆ. ಕ್ಯೂಬೋಜೊವಾ ವರ್ಗಕ್ಕೆ ಸೇರಿದ ಜೆಲ್ಲಿಗಳ ಕುಟುಕು ವಿಷಪೂರಿತ ವಾಗಿರುತ್ತದೆ. ಅಸಹನೀಯ ವಾಗಿರುವ ಇವುಗಳ ಕಚ್ಚುವಿಕೆ ಹಲವುಬಾರಿ ಮಾರಣಾಂತಿಕ ವಾಗಿರುತ್ತದೆ. ಬಿಡಿಸಲ್ಪಟ್ಟ ಕೊಡೆಯ ಆಕಾರ ಹೊಂದಿರುವ ಇವು ಪಾರದರ್ಶಕ ಮತ್ತು ಅರೆಪಾರದರ್ಶಕವಾಗಿಯೂ ಇರುತ್ತವೆ. ಜೆಲ್ಲಿಗಳ ಗುಂಪನ್ನು ಸ್ಮ್ಯಾಕ್ ಎಂದು ಕರೆಯಲಾಗುತ್ತದೆ. ಕುಟುಕುವ ಜಾತಿಯ ಜೆಲ್ಲಿ ಫಿಶ್ ಗಳನ್ನು ಮೆಡ್ಯುಸಾ ಎಂದು ಕರೆಯಲಾಗುತ್ತದೆ.

ಆಹಾರವಾಗಿಯೂ ಬಳಕೆ:
ಇವುಗಳ ಜೀವಿತಾವಧಿಯೂ ವಿಶಿಷ್ಠ. ಕೆಲ ಜೆಲ್ಲಿಗಳು ಜನಿಸಿದ ಕೆಲ ಗಂಟೆಗಳಲ್ಲಿಯೇ ಮರಣ ಹೊಂದಿದರೆ ಇನ್ನು ಕೆಲವು ಎರಡರಿಂದ ಆರು ತಿಂಗಳು ಜೀವಿಸುತ್ತವೆ. ಕಾಲಕಾಲಕ್ಕೆ ಸರಿಯಾಗಿ  ಆಹಾರ ದೊರಕುತ್ತಿದ್ದರೆ ನಿತ್ಯವೂ ಮೊಟ್ಟೆಯಿಡುವ ವಿಶಿಷ್ಠಜೀವಿ ಜೆಲ್ಲಿಫಿಶ್. ಚೀನಾದಂತ ದೇಶದಲ್ಲಿ ರೈಜಾಸ್ಟೋಮ್ ವರ್ಗಕ್ಕೆ ಸೇರಿದ ವಿಷರಹಿತ ಜೆಲ್ಲಿ ಮೀನುಗಳನ್ನು ಸಂಸ್ಕರಿಸಿ ಆಹಾರವಾಗಿಯೂ ಬಳಸುತ್ತಾರೆ.

  • ಜೆಲ್ಲಿ ಫಿಶ್ ಅಂದರೇನು?
ಜಿಲೆಟಿನ್ ಅಥವಾ ಲೋಳೆಯಂಥಹ ವಸ್ತುಗಳಿಂದ ಉಂಟಾದ ಪ್ರಾಣಿಗನ್ನು ಜೆಲ್ಲಿ ಎಂದು ಕರೆಯುವರು. ಇವುಗಳನ್ನು ಒಣಗಿಸಿದಾಗ ಅಂಟು ಅಂಟಾದ ಪದಾರ್ಥವಾಗಿ ಮಾರ್ಪಡುತ್ತದೆ.

  • ಜೆಲ್ಲಿ ಮೀನುಗಳ ವಿಕಾಸ ಹೇಗೆ?
ಜೆಲ್ಲಿ ಫಿಶ್ಗಳ ವಿಕಸನ ಒಂದು ಕ್ಷಿಷ್ಟಕರ ಪ್ರಕ್ರಿಯೆ. ಸಮುದ್ರದ ಪ್ರವಾಹ, ಪೋಷಕಾಂಶ ತಾಪಮಾನ, ಲವಣಾಂಶ, ಸೂರ್ಯನ ಬೆಳಕು, ಆಮ್ಲಜನಕದ ಸಾಂದ್ರೆತೆಯ ಮೇಲೆ ಅವಲಂಬಿತವಾಗಿದೆ. ಸಹಸ್ರಾರು ಸಂಖ್ಯೆಯ ಮೊಟ್ಟೆಗಳು ಒಂದೆಡೆ ಸೇರಿ ಜೆಲ್ಲಿ ಫಶ್ಗಳ ನಿರ್ಮಾಣ ವಾಗುತ್ತದೆ.

 

No comments:

Post a Comment