ಜೀವನಯಾನ

Wednesday, October 17, 2012

ನೀಲಿ ಕಂಠದ ಇಂಡಿಯನ್ ರೋಲರ್

ಆಕಾಶದಲ್ಲಿ ಗಿರಕಿ ಹೊಡೆಯುತ್ತಾ, ಎಲ್ಲೆಂದರಲ್ಲಿ ಸುತ್ತಾಡಿಕೊಂಡು ಕಾಲ ಕಳೆಯುವ ಈ ಹಕ್ಕಿ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ನೀಲಿ ಬಣ್ಣದಿಂದ ಇದಕ್ಕೆ ನೀಲಕಂಠ ಎನ್ನುವ ಹೆಸರು ಬಂದಿದೆ.  ಇಂಗ್ಲಿಷ್ನಲ್ಲಿ ಇದಕ್ಕೆ ಎರಡು ಹೆಸರುಗಳಿವೆ.  ಬ್ಲೂ ಜೇ (ನೀಲಿ ಬಣ್ಣದಿಂದ) ಮತ್ತು ಇಂಡಿಯನ್ ರೋಲರ್ (ಹಾರಾಡುವಾಗ ಪಲ್ಟಿ ಹೊಡೆಯುವ ಭಾರತೀಯ ಹಕ್ಕಿ) ಇನ್ನೊಂದು ವಿಶೇಷ ವೆಂದರೆ ಇದು ನಮ್ಮ ಕರ್ನಾಟಕ ರಾಜ್ಯದ ಪಕ್ಷಿ. ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಹಕ್ಕಿ ಆಂಧ್ರ ಪ್ರದೇಶ ಓಡಿಶಾ ರಾಜ್ಯಗಳ ಪಕ್ಷಿಯಾಗಿಯೂ ಗುರುತಿಸಲ್ಪಟ್ಟಿದೆ. ಈ ಹಕ್ಕಿ ರೋಲರ್ ಹಕ್ಕಿಗಳ ವಂಶಕ್ಕೆ ಸೇರಿದೆ. ನೀಲಕಂಠ ಹಿಂದು ಪುರಾಣದಲ್ಲಿ ಶಿವನಿಗೆ ಸಂಬಂಧಿಸಿದ ಒಂದು ಪವಿತ್ರಹಕ್ಕಿಯಾಗಿ ಪರಿಗಣಿಸಲ್ಪಟ್ಟಿದೆ. 


ಲಕ್ಷಣಗಳು
ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ. ನೆತ್ತಿ, ರೆಕ್ಕೆ ತಿಳಿ ನೀಲಿಯಾಗಿದ್ದು, ಕತ್ತು, ಎದೆ ಬೆನ್ನು ಕಂದು ಬಣ್ಣವಿದೆ. ಕಂದು ಬಣ್ಣದ ಕಣ್ಣು. ಕಪ್ಪು ಕೊಕ್ಕನ್ನು ಹೊಂದಿದೆ. ಗಾತ್ರದಲ್ಲಿ 25ರಿಂದ 28 ಸೆಂ.ಮೀ ಉದ್ದವಿದೆ. ನೋಡಲು ಗಂಡು ಹೆಣ್ಣು ಒಂದೇ ರೀತಿ. ಈ ಹಕ್ಕಿಯ ಆಯಸ್ಸು 17 ವರ್ಷ. ಕುತ್ತಿಗೆ ಮತ್ತು ಗಂಟಲಿನ ಬಳಿ ನೇರಳೆ ಬಣ್ಣದ ಮುಳ್ಳಿನಂತಹ ಗರೆಗಳಿರುವಂತೆ ಕಂಡು ಬರುತ್ತದೆ. ಇಂಡಿಯನ್ ರೋಲರ್ ಗುಂಪಾಗಿ ಹಾರಾಡುವುದು ಬಹಳ ವಿರಳ. ಆದಾಗ್ಯೂ ಇವು ಕುಟುಂಬದ ಬಳಗ ಹೊಂದಿವೆ. ಗಡುಸಾದ ಧ್ವನಿಯ ಮೂಲಕ ಒಂದಕ್ಕೊಂದು ಸಂದೇಶ ರವಾನಿಸುತ್ತವೆ. ಕಾಗೆಯಂತೆ ಗಡುಸಾ ಧ್ವನಿಹೊದಿದ್ದರೂ ಮಧುರ ಸ್ವರವನ್ನು ಹೊರಡಿಸಬಲ್ಲದು.

ಸಂಗಾತಿ ಮೆಚ್ಚಿಸಲು
ಆಕಾಶದಲ್ಲಿ ಸರ್ಕಸ್ 
ಸಂಗಾತಿಯನ್ನು ಆಕರ್ಷಿಸಲು ಆಕಾಶದಲ್ಲಿ ಗಿರಕಿ ಹೊಡೆದು ಮಾಡುವ ಸರ್ಕಸ್ ರಮಣೀಯ. ತೀಕ್ಷ್ಣ ಸ್ವರದಲ್ಲಿ ಅರಚುತ್ತಾ, ಸುರಳಿ ಸುರಳಿಯಾಗಿ, ಉಂಗುರುಂಗುರವಾಗಿ, ಹಾರುವುದು, ದೊಪ್ಪನೆ ಬೀಳುವುದು ನೋಡಲು ಆಹ್ಲಾದ. ಗಂಡು ಹಕ್ಕಿ ಸಂತಾನೋತ್ಪತ್ತಿಯ ಋತುವಿನಲ್ಲಿ ವಿಶಿಷ್ಟ ಮತ್ತು ಚಕಿತಗೊಳಿಸುವ ಲೈ೦ಗಿಕ ಪ್ರದರ್ಶನಕ್ಕೆ ಹೆಸರುವಾಸಿ. ಈ ಸಂದರ್ಭದಲ್ಲಿ ಇಂಡಿಯನ್ ರೋಲರ್ ಎತ್ತರದಲ್ಲಿ ಹಾರಾಡುತ್ತಾ, ವೇಗವಾಗಿ ರೆಕ್ಕೆಬಡಿಯುತ್ತಾ ವೃತ್ತಾಕಾರವಾಗಿ ಕೆಳಕ್ಕೆ ಇಳಿಯುತ್ತದೆ. ಅಲ್ಲದೇ ಈ ಕ್ರಿಯೆ ನಡೆಯುವಾಗ ಜೋರಾಗಿ ಶಬ್ದ ಮಾಡುತ್ತದೆ. ಪೊಟರೆಗಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡು ಕಟ್ಟಿ 4 ಅಥವಾ 5 ಮೊಟ್ಟೆಗಳನ್ನು ಇಡುತ್ತವೆ. ಸುಮಾರು 12 ದಿನಗಳವರೆಗೆ ಕಾವುಕೊಟ್ಟು ಮರಿ ಮಾಡುತ್ತವೆ. ಕೆಲವು ಕಪ್ಪು ನೀಲಕಂಠ ಪಕ್ಷಿಗಳು ಮರಕುಟುಕ ಹಕ್ಕಿಯ ಪೊಟರೆಯಲ್ಲಿ ವಾಸ ಮಾಡುತ್ತವೆ. 

 ರೈತನ ಮಿತ್ರನೂ ಹೌದು
ನೀಲಕಂಠ ಪಕ್ಷಿ ಪ್ರಮುಖವಾಗಿ ಪರ್ಣಪಾತಿ ಕಾಡಿನ ಅಂಚು, ಕೃಷಿ ಭೂಮಿ ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಬೇಟೆಗಾರ ಪಕ್ಷಿಗಳು. ತಂತಿ, ಮರ, ಬಂಡೆ, ಹಾಗೂ  ಕಂಬಗಳಲ್ಲಿ  ಕುಳಿತು ಬೇಟೆಗಾಗಿ ಹೊಂಚು ಹಾಕುತ್ತದೆ. ನೆಲದ ಮೇಲೆ ಹರೆದಾಡುವ ಜಂತು, ಹಾರುವ ಕೀಟಗಳೆ ಇದರ ಆಹಾರ. ಹೀಗಾಗಿ ರೈತನ ಮಿತ್ರನೂ ಹೌದು. ಮೇಲಿನಿಂದ ಒಮ್ಮಲೇ ಇಳಿದು ಬಂದು ಆಹಾರ ಕಚ್ಚಿಕೊಂದು ಮೇಲಕ್ಕೆ ಹಾರುತ್ತದೆ. ಕೆಲವೊಮ್ಮೆ ಎಲ್ಲಾ ರೀತಿ ಕೀಟ, ಸರೀಸೃಪಗಳು, ಕಪ್ಪೆಗಳನ್ನೂ ಬೇಟೆಯಾಡುತ್ತದೆ. ಗಾಳಿಯಲ್ಲಿದ್ದಾಗಲೂ ಬೇಟೆಯಾಡಬಲ್ಲದು. ಇವು ಎತ್ತರದಿಂದ ನೀರಿಗೆ ಹಾರಿ ಸ್ನಾನ ಮಾಡುತ್ತವೆ. ಆದರೆ ಮೀನು ಹಿಡಿಯುವ ಕಲೆ ತಿಳಿದಿಲ್ಲ.
 ಇವುಗಳ ಫೋಟೊ ತೆಗೆಯುವುದೇ ಒಂದು ಸುಂದರ ಅನುಭವ.ನೀಲಿ ಕಂಠದ ಈ ಹಕ್ಕಿ ಇನ್ನೂ ಅಳಿವಿ ಅಂಚನ್ನು ತಲುಪಿಲ್ಲ ಎನ್ನುದೇ ನಮಗೆಲ್ಲಾ ಸಮಾಧಾನದ ವಿಷಯ.

No comments:

Post a Comment