ಜೀವನಯಾನ

Tuesday, November 13, 2012

ಹೆಲಿಕಾಪ್ಟರ್ ಚಿಟ್ಟೆ

ಡ್ರ್ಯಾಗನ್ ಫ್ಲೈ ಆಕಾಶದಲ್ಲಿ ಹಾರುತ್ತಿದ್ದರೆ ಹೆಲಿಕಾಪ್ಟರನ್ನೇ ನೋಡಿದ ಅನುಭವ. ಗಾಳಿಯಲ್ಲಿ ನಿಂತು ಸರ್ಕಸ್ ಮಾಡುವ ಇದರ ದೇಹ ರಚನೆ, ತಲೆ, ರೆಕ್ಕೆ, ಬಾಲ ಹೀಗೆ ಎಲ್ಲವೂ ಹೆಲಿಕಾಪ್ಟರನ್ನೇ ಹೋಲುತ್ತದೆ. ಇಂಜಿನಿಯರ್ಗಳು ಏರೋಪ್ಲೇನ್, ಹೆಲಿಕಾಪ್ಟರ್ ಮುಂತಾದ ಲೋಹದ ಹಕ್ಕಿಗಳನ್ನು ಕಂಡುಹಿಡಿಯಲೂ ಡ್ರ್ಯಾಗನ್ ಫ್ಲೈ ಪ್ರೇರಣೆ ಎನ್ನುವ ಮಾತಿದೆ. ಹೀಗಾಗಿ ಇದನ್ನು ಏರೋಪ್ಲೇನ್ ಚಿಟ್ಟೆ ಎಂತಲೂ ಕರೆಯುತ್ತಾರೆ.


ಡ್ರ್ಯಾಗನ್ ಫ್ಲೈ ರೆಕ್ಕೆ ಇರುವ ಮೋದಲ ಕೀಟ ಎಂದು ತಿಳಿಯಲಾಗಿದ್ದು, ಸುಮಾರು 300 ದಶಲಕ್ಷ ವರ್ಷಗಳ ಹಿಂದೆಯೇ ಇವುಗಳ ಇರುವಿಕೆ ಗುರುತಿಸಲಾಗಿದೆ. ಆಮ್ಲಜನಕದ ಪ್ರಮಾಣ ಹೆಚ್ಚಾಗಿದ್ದ ಶಿಲಾಯುಗದ ಕಾಲದಲ್ಲಿ ದೊಡ್ಡ ಗಾತ್ರದ ಡ್ರ್ಯಾಗನ್ ಫ್ಲೈಗಳು ಇದ್ದವು ಎಂದು ವಿಜ್ಞಾನಿಗಳ ಊಹೆ. ಡ್ರ್ಯಾಗನ್ ಫ್ಲೈಗಳಲ್ಲಿ ಸುಮಾರು 5 ಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 5  ನೂರಕ್ಕೂ ಹೆಚ್ಚು ಪ್ರಕಾರಗಳು  ಭಾರತದಲ್ಲಿವೆ. ಇವುಗಳ ಜೀವಿತಾವಧಿ ತುಂಬಾ ಕಡಿಮೆ. ಒಂದು ತಿಂಗಳು ಅಥವಾ ಅದಕ್ಕಿಂತಲೂ ಕಡಿಮೆ ಜೀವಿತಾವಧಿ ಹೊಂದಿರುತ್ತದೆ. ಕೆಲವು ಜಾತಿಯ ಡ್ರ್ಯಾಗನ್ ಫ್ಲೈ ಅರ್ಧ ವರ್ಷಗಳ ತನಕ ಬದುಕಬಲ್ಲದು. ಇವು ಕೂರುವುದಕ್ಕಿಂತ ಬಾನಿನಲ್ಲಿರುವುದೇ ಹೆಚ್ಚು. ವಿಮಾನದಂತೆ ತನ್ನ ರೆಕ್ಕೆಯನ್ನು ಅಗಲವಾಗಿಟ್ಟುಕೊಂಡಿರುವುದರಿಂದ ಇದಕ್ಕೆ ಏರೋಪ್ಲೇನ್ ಚಿಟ್ಟೆಯೆಂಬ ಹೆಸರು ಬಂದಿರಬೇಕು.

ಗಾಳಿಯಲ್ಲಿ ನಿಂತು ಬೇಟೆ:

ಡ್ರ್ಯಾಗನ್ ಫ್ಲೈ ಹಾರುವುದರಲ್ಲಿ ವಿಶೇಷ ಪರಿಣತಿ ಪಡೆದಿವೆ. ಡ್ರ್ಯಾಗನ್ ಫ್ಲೈಗೆ ತೆಳ್ಳಗಿನ ನಾಲ್ಕು ರೆಕ್ಕೆಗಳಿರುತ್ತವೆ. ಕೀಟಗಳಲ್ಲಿಯೇ ಅತ್ಯಂತ ವೇಗವಾಗಿ ಇದು ಹಾರಬಲ್ಲದು. ಹಾರುವಾಗ ಗಂಟೆಗೆ 60 ಮೈಲಿ ವೇಗವನ್ನು ಡ್ರ್ಯಾಗನ್ ಫ್ಲೈ ತಲುಪುತ್ತದೆ.  ಗಾಳಿಯಲ್ಲಿರುವಾಗ ಮೇಲೆ, ಕೆಳಗೆ, ಹಿಂದೆ, ಮುಂದೆ, ಉಲ್ಟಾ ಪಲ್ಟಾ ಹೇಗೆ ಬೇಕಾದರೂ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಡ್ರ್ಯಾಗನ್ ಫ್ಲೈಗಿದೆ. ಗಾಳಿಯಲ್ಲೇ ಎಷ್ಟು ಹೊತ್ತು ಬೇಕಾದರೂ ನಿಂತು ಕೊಳ್ಳಬಲ್ಲದು. ಭೂಮಿಯ ಮೇಲೆ ಇಳಿಯದೇ  ಒಂದು ದಿನವನ್ನು ಗಾಳಿಯಲ್ಲಿಯೇ ಕಳೆಯಬಲ್ಲದು. ಇವುಗಳಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಹಾರುವಾಗಲೇ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ. ಹೀಗಾಗಿ ಇವಕ್ಕೆ ನೆಲಕ್ಕೆ ಬರುವ ಪ್ರಮೇಯವೇ ಬರುವುದಿಲ್ಲ.

ನೀರಿರುವ ಜಾಗದಲ್ಲಿ ವಾಸ:
ಇವು ಹೆಚ್ಚಾಗಿ ಕೆರೆ, ನದಿ, ಹಳ್ಳ ಕೊಳ್ಳ ಮುಂತಾದ ನೀರಿರುವ ಪ್ರದೇಶದಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಆಹಾರವನ್ನು ಹುಡುಕುವ ಸಲುವಾಗಿ ಮಾತ್ರ ಇತರ ಪ್ರದೇಶಗಳಿಗೆ ತೆರಳುತ್ತದೆ. ನಂತರ ನೀರಿರುವ ಪ್ರದೇಶಕ್ಕೆ ವಾಪಸ್ ಸಂತಾನೋತ್ಪತ್ತಿ ಮತ್ತು ಮೊಟ್ಟೆಯಿಡುತ್ತವೆ. ನೀರಿನಲ್ಲಿಯೇ ಇವುಗಳ ಜೀವನ ಆರಂಭವಾಗುತ್ತದೆ. ಲಾರ್ವಾ ಸ್ಥಿತಿಯಲ್ಲಿ ಎರಡು ವರ್ಷ ಜೀವನ ಸವೆಸಿದ ಬಳಿಕ ಮೊಟ್ಟೆಯೊಡೆದು ಕೀಟದ ರೂಪ ಪಡೆಯುತ್ತದೆ. ನಂತರ ಕೆಲವು ಗಂಟೆಯ ಬಳಿಕ ರೆಕ್ಕೆಗಳು ಬಲಿತು ಡ್ರ್ಯಾಗನ್ ಫ್ಲೈನ ಆಕಾರ ತಾಳುತ್ತದೆ. ಮುಂಗಾರು ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಡ್ರ್ಯಾಗನ್ ಫ್ಲೈ ನೋಡಲು ಸಿಗುತ್ತದೆ. 

ತಲೆಗಿಂತಲೂ ದೊಡ್ಡ ಕಣ್ಣು:
ಏರೋಪ್ಲೇನ್ ಚಿಟ್ಟೆಯ ತಲೆಯ ಬುಹುತೇಕ ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಂಪೌಂಡ್ ಐಸ್)ಗಳೆನ್ನುತ್ತಾರೆ. ಇದರ ಕಣ್ಣಿನಲ್ಲಿ 30 ಸಾವಿರ ಲೆನ್ಸ್ ಗಳು ಇರುತ್ತವೆ. ಕಣ್ಣಿನ ಗುಡ್ಡೆ ತೆಲೆಯಿಂದ ಹೊರಬಂದಿರುವುದರಿಂದ 360 ಡಿಗ್ರಿ ಕೋನದಲ್ಲಿ ತನ್ನ ಸುತ್ತಲೂ ನೋಡಬಲ್ಲದು. ಇದರ ಶೇ. 80 ರಷ್ಟು ಮಿದುಳು ಕಣ್ಣಿನ ದೃಷ್ಟಿಯನ್ನು ಗ್ರಹಿಸುವ ಸಲುವಾಗಿಯೇ ಮೀಸಲು. ಹಾಗಾಗಿ ಇವುಗಳನ್ನು ಹಿಡಿಯುವುದು ತುಂಬಾ ಕಷ್ಟ. ಅಲ್ಲದೇ ಜೇಡ, ಹಾವು ಕಪ್ಪೆ, ಹಕ್ಕಿ ಮುಂತಾದ ವೈರಿಗಳಿಂದಲೂ ಸುಲಭವಾಗಿ ಪಾರಾಗಬಲ್ಲದು. ಆದರೆ ಜೇಡನ ಬಲೆಯಲ್ಲಿ ಸಿಕ್ಕಿಬಿದ್ದು ಅವುಗಳಿಗೆ ಆಹಾರವಾಗುತ್ತವೆ.

No comments:

Post a Comment