ಮೀನು ನೀರಿನಲ್ಲಿ ನಾನಾ ರೀತಿಯ ಕಸರತ್ತು ಮಾಡುವುದರಲ್ಲಿ ಆಶ್ಚರ್ಯ ಏನೂ ಅನಿಸುವುದಿಲ್ಲ. ಆದರೆ, ಎಂದೂ ನೀರನ್ನೇ ಬಿಟ್ಟಿರದ ಅದು ನೀರನ್ನು ಬಿಟ್ಟು ಹಾರಿದರೆ ಹೇಗಿರುತ್ತೆ? ಹೌದು, ನೀರನ್ನು ಬಿಟ್ಟು ಹಾರಬಲ್ಲ ಮೀನುಗಳೂ ಇವೆ. ಪಕ್ಷಿಗಳ ರಚನೆಯಂತಹುದೇ ರೆಕ್ಕೆಯನ್ನು ಹೊಂದಿರುವ ಹಾರುವ ಮೀನು ಅವುಗಳಂತೆಯೇ ಹಾರಲೂಬಲ್ಲದು! ಇಂಗ್ಲಿಷ್ ನಲ್ಲಿ ಇದಕ್ಕೆ ಫ್ಲೈಯಿಂಗ್ ಫಿಶ್ ಎನ್ನಲಾಗುತ್ತದೆ. ಈ ಮೀನುಗಳ ಕುಟುಂಬಕ್ಕೆ ಶಾಸ್ತ್ರೀಯವಾಗಿ ಎಕ್ಸೋಕೋಟಿಡೇ ಎಂಬ ಹೆಸರು. ಉಷ್ಣವಲಯದ ಸಮುದ್ರಗಳಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ.
ಇದಕ್ಕಿದೆ ಹಕ್ಕಿಯಂತೆಯೇ ರೆಕ್ಕೆ |
ಶತ್ರುಗಳು ಆಕ್ರಮಣ ಮಾಡಿದಾಗ ಈ ಮೀನುಗಳು ರೆಕ್ಕೆಯ ಸಹಾಯದಿಂದ 50 ಮೀಟರ್ ದೂರದವರೆಗೂ ಹಾರಬಲ್ಲವು. ಸಮುದ್ರದಲ್ಲಿ ದೊಡ್ಡ ಅಲೆಗಳು ಎದ್ದಾಗ ಉಂಟಾಗುವ ಗಾಳಿಯ ಒತ್ತಡವನ್ನು ಬಳಸಿ 400 ಮೀಟರ್ವರೆಗೆ ನೀರಿನ ಮೇಲೆ ತೇಲಿಕೊಂಡು ಹೋಗಬಲ್ಲದು.
ನೀರಿನಿಂದ ಹಾರುವುದಕ್ಕೂ ಮುನ್ನ ನೀರಿನ ಒಳಗಡೆ ಈಜುವ ವೇಗವನ್ನು ವೃದ್ಧಿಸಿಕೊಳ್ಳತ್ತದೆ. ಬಳಿಕ ಬಾಲವನ್ನು ಬಡಿಯುತ್ತಾ ನೀರಿನ ಮೇಲೆ ಜಾರಿಕೊಂಡು ಸಾಗಿ ಮೇಲಕ್ಕೆ ಜಿಗಿಯುತ್ತದೆ. ಸಾಧ್ಯವಾದಷ್ಟು ದೂರ ಹಾರಿದ ಮೇಲೆ ಮತ್ತೆ ಪುನಃ ಇದೇ ಪ್ರಕ್ರಿಯೆಯನ್ನು ಮುಂದುವರಿಸಿ ಮುಂದಕ್ಕೆ ಹೋಗುತ್ತದೆ. ನೀರಿನ ಒಳಕ್ಕೆ ಇಳಿಯದೇ ಮೇಲಿಂದ ಮೇಲೆಯೇ ಸುಮಾರು 400 ಮೀಟರ್ ದೂರಕ್ಕೆ ಸಾಗಬಲ್ಲದು. ಹಾರಿದಾಗ 4 ರಿಂದ 20 ಅಡಿ ಎತ್ತರವನ್ನು ತಲುಪುತ್ತದೆ. ಕೆಲವೊಮ್ಮೆ ಹಡಗಿನ ಮೇಲೆ ಇಳಿದ ಉದಾಹರಣೆಗಳೂ ಇವೆ.
ಫ್ಲೈಯಿಂಗ್ ಫಿಶ್ಗಳು ಗಂಟೆಗೆ 60 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತವೆ. ಈ ಮೀನಿಗೆ ನಾಲ್ಕು ರೆಕ್ಕೆಗಳಿವೆ. ಮುಂದಿನ ಎರಡು ರೆಕ್ಕೆಗಳು ದೊಡ್ಡದಾರೆ, ಹಿಂದಿನ ಎರಡು ಚಿಕ್ಕವು. ನೀರಿನಿಂದ ಮೇಲೆ ಹೋದಂತೆ ರೆಕ್ಕೆಗಳು ಬಿಚ್ಚಿಕೊಳ್ಳುತ್ತವೆ. ರೆಕ್ಕೆಗಳು ತಂತಾನೇ ಬಡಿದು ಮೀನು ಮುಂದಕ್ಕೆ ಹೋಗುತ್ತದೆ. ಮತ್ತೆ ನೀರಿಗೆ ಮರಳಿದ ಬಳಿಕ ರೆಕ್ಕೆಗಳು ಮಡಿಸಿಕೊಳ್ಳುತ್ತವೆ. ನೀರಿನ ಮೇಲ್ಮುಖವಾಗಿ ಜಾರುವಾಗ ಅದರ ಬಾಲ ಸೆಕೆಂಡಿಗೆ 70 ಬಾರಿ ಚಲಿಸುತ್ತದೆ. ಹಕ್ಕಿಯ ಹಾಗೆ ರೆಕ್ಕೆಯನ್ನು ಬಾಗಿಸಿ ತನಗೆ ಬೇಕಾದ ದಿಕ್ಕಿನತ್ತ ದೇಹವನ್ನು ಹೊರಳಿಸುತ್ತದೆ.
ಹಕ್ಕಿಗಳಿಗೆ ಆಹಾರ:
ಇವು ಹೆಚ್ಚಾಗಿ ಸಮುದ್ರದ ಮೇಲ್ಭಾಗದಲ್ಲೇ ವಾಸಿಸುತ್ತವೆ. ಹಾರುವ ಮೀನುಗಳಲ್ಲಿ ಸುಮಾರು 40 ತಳಿಗಳಿವೆ. ದೇಹ 7ರಿಂದ 12 ಇಂಚು ಉದ್ದವಿರುತ್ತವೆ. ಇವು ಹಾರುವುದು ಸಮುದ್ರದಲ್ಲಿನ ದೊಡ್ಡ ದೊಡ್ಡ ಮೀನುಗಳಿಂದ ರಕ್ಷಣೆಗಾದರೂ, ನೀರಿನ ಮೇಲಿದ್ದಾಗ ಹಕ್ಕಿಗಳಿಗೆ ಆಹಾರವಾಗುವುದೂ ಇದೆ. ಅಲ್ಲದೆ ಮೀನುಗಾರರು ಇವುಗಳನ್ನು ಸುಲಭವಾಗಿ ಹಿಡಿಯುತ್ತಾರೆ. ಬೆಳಕಿಗೆ ಆಕರ್ಷಿತವಾಗುವ ಇವು ಹುಣ್ಣಿಮೆ ಚಂದ್ರನನ್ನು ಕಂಡು ಮೇಲಕ್ಕೆ ಜಿಗಿಯುತ್ತವಂತೆ.
2008ರ ಮೇನಲ್ಲಿ ಒಂದು ಹಾರುವ ಮೀನು 45 ಸೆಕೆಂಡುಗಳ ಕಾಲ ಗಾಳಿಯಲ್ಲಿ ತೇಲಿಕೊಂಡು ಸಾಗಿದ್ದನ್ನು ಚಿತ್ರೀಕರಿಸಲಾಯಿತು ಸದ್ಯಕ್ಕೆ ಇದು ದಾಖಲೆ ಎನಿಸಿದೆ.
No comments:
Post a Comment