ಜೀವನಯಾನ

Friday, June 13, 2014

ಗುಲಗಂಜಿ

ವಿಷತುಂಬಿದ ಸೌಂದರ್ಯ!

ಗುಲಗಂಜಿಯೊಂದಿಗೆ ಮಕ್ಕಳು ಆಟವಾಡುತ್ತಾರೆ. ಹಿರಿಯರು ಅದರ ಬಗ್ಗೆ ನಾನಾ ಕತೆಗಳನ್ನು ಹೇಳುತ್ತಾರೆ. ಅಕ್ಕಸಾಲಿಗರು ಅದನ್ನು ಸಾಲಾಗಿ ಪೋಣಿಸಿ ಹಾರಕಟ್ಟುತ್ತಾರೆ. ನೋಡಲು ಕೃತಕ ವಸ್ತುವಿನಂತೆ ಕಂಡರೂ, ಇದೊಂದು ಪ್ರಕೃತಿದತ್ತವಾಗಿ ಬಂದ ಸಂಪತ್ತು. ಕಡು ಕೆಂಪಗಿನ ತುದಿಯಲ್ಲಿ ಕಪ್ಪು ಟೋಪಿಯಿರುವ ಈ ಸಣ್ಣ ಬೀಜ ಎಷ್ಟು ಸುಂದವೋ, ಅಷ್ಟೇ ಭಯಾನಕ ವಿಷವನ್ನು ತನ್ನೊಳಗೆ ತುಂಬಿಕೊಂಡಿದೆ! 


ಗುಲಗಂಜಿ ದ್ವಿದಳ ಸಸ್ಯಗಳಲ್ಲಿ ಬಿಡುವ ಒಂದು ಬೀಜ. ಇವುಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಹೀಗೆ ಮೂರು ಪ್ರಕಾರಗಳಿವೆ. ಗುಲಗಂಜಿ ಮನಮೋಹಕ ಬಣ್ಣವುಳ್ಳದ್ದಾಗಿದ್ದು, ಇದರ ಗಾತ್ರ ತೊಗರಿ/ಹಲಸಂದೆ ಕಾಳಿನಷ್ಟಿರುತ್ತದೆ. ಕಡುಕೆಂಪಿನ ತುದಿಯಲ್ಲಿ ಕಪ್ಪು ಚುಕ್ಕೆ ಇರುವ ಇದರ ಸೌಂದರ್ಯಕ್ಕೆ ಮನಸೋಲದ ಮಕ್ಕಳಿಲ್ಲ. ಆದರೆ, ಇದು ನೋಡಲು ಎಷ್ಟು ಸುಂದರವೋ ಅಷ್ಟೇ ವಿಷಕಾರಿ ಕೂಡ! ಗುಲಗಂಜಿಯಲ್ಲಿ ಅಬ್ರಿನ್ ಎನ್ನುವ ಅಪಾಯಕಾರಿಯಾದ ಅಂಶವಿದೆ. ಇದು ನಾಗರಹಾವಿನ ವಿಷಕ್ಕಿಂತಲೂ ತೀಕ್ಷ್ಣವಾಗಿದೆ! ಏಬ್ರಸ್ ಪ್ರಿಕಟೋರಿಯಸ್- ಗುಲಗಂಜಿಯ ಸಸ್ಯ ಶಾಸ್ತ್ರೀಯ ಹೆಸರು. ಇಂಗ್ಲಿಷ್ ನಲ್ಲಿ ಇದಕ್ಕೆ ಇಂಡಿಯನ್ ಲಿಕೋರಿಸ್ ಎನ್ನುತ್ತಾರೆ.


 ಚೀನಿಯರ ಪ್ರೇಮದ ಸಂಕೇತ.
ಭಾರತ, ಮಲೇಷ್ಯಾ, ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು. ಚೀನಾದೇಶದಲ್ಲಿ ಗುಲಗಂಜಿಯು ಪ್ರೀತಿಯ ಸಂಕೇತವಾಗಿದೆ. ಅಕ್ಕಸಾಲಿಗರು ಹಿಂದಿನ ಕಾಲದಲ್ಲಿ ಬಂಗಾರವನ್ನು ತೂಕಮಾಡಲು ಗುಲಗಂಜಿಯ ಬೀಜವನ್ನು ಬಳಸುತ್ತಿದ್ದರು. ವಿಶೇಷವೆಂದರೆ, ಗುಲಗಂಜಿಯ ಬೀಜದಲ್ಲಿ ಮಾತ್ರ ವಿಷವಿದ್ದು, ಕಾಂಡ ಎಲೆಗಳಲ್ಲಿ ವಿಷವಿರುವುದಿಲ್ಲ. ಗುಲಗಂಜಿಯನ್ನು ಕಡಿಯದೇ ಹಾಗೆಯೇ ನುಂಗಿದರೆ, ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಮಲವಿಸರ್ಜನೆಯ ಮೂಲಕ ದೇಹದಿಂದ ಹೊರಹೋಗುತ್ತದೆ. ಜಗಿದು ಇಲ್ಲವೇ ಪುಡಿಮಾಡಿ ತಿಂದರೆ,  ಅಪಾಯ ತಪ್ಪಿದ್ದಲ್ಲ. ಇದರ 3 ಮೈಕ್ರೋಗ್ರಾಂ ವಿಷ ಪ್ರಾಣಿಗಳನ್ನು ಬಲಿಪಡೆಯಬಲ್ಲದು. ವಿಶ್ವಯುದ್ಧದ ಸಂದರ್ಭದಲ್ಲಿ ಗುಲಗಂಜಿ ಬೀಜಗಳನ್ನು ಶತ್ರು ಸೈನಿಕರನ್ನು ಕೊಲ್ಲಲು ಬಳಸುತ್ತಿದ್ದರು ಎಂಬ ಬಗ್ಗೆ ದಾಖಲೆಗಳಿವೆ.
ಗುಲಗಂಜಿಯ ವಿಷಭಾದೆಯನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟ. ಅದನ್ನು ತಿಂದ ಬಳಿಕ ಕಂಡುಬರುವ ಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ವಿಷದ ನಿಖರತೆಯನ್ನು ಪತ್ತೆಮಾಡಬಹುದು. ಇದಕ್ಕೆ ನಿಖರ ಚಿಕಿತ್ಸೆ ಇಲ್ಲ. ಆದರೂ, ಕೂಡಲೇ ವಾಂತಿ ಅಥವಾ ಭೇದಿ ಮಾಡಿಸುವ ಮೂಲಕ ವಿಷ ಏರುವ ಪ್ರಮಾಣವನ್ನು ಕಡಿಮೆ ಮಾಡಬಹುದು.


ಪ್ರಾಣಿಗಳ ಮೇಲೆ ಪರಿಣಾಮ:
ಜಾನುವಾರುಗಳು ಗುಲಗಂಜಿಯನ್ನು ತಿಂದ ತಕ್ಷಣ ಸಾಯುವುದಿಲ್ಲ. ಮೇವನ್ನು ತಿಂದು ಮೆಲಕುಹಾಕುವ ಸಂದರ್ಭದಲ್ಲಿ ವಿಷ ನಿಧಾನವಾಗಿ ದೇಹವನ್ನು ಪಸರಿಸುತ್ತದೆ. ಬಾಯಲ್ಲಿ ಜೊಲ್ಲು ಹೆಚ್ಚುತ್ತದೆ. ಮೂಗಿನಲ್ಲಿ ಅತಿಯಾದ ಸಿಂಬಳ, ರಕ್ಷ ಮಿಶ್ರಿತ ಭೇದಿ, ಬಾಯಲ್ಲಿ ಹುಣ್ಣು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು. ಬಾಯಾರಿಕೆ, ನಿತ್ರಾಣ ಮತ್ತಿತರ ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಕಂಡುಬಂದರೆ ರಾಸುಗಳಿಗೆ ನಡೆದಾಡಲೂ ಆಗುವುದಿಲ್ಲ. ಪಾಶ್ರ್ವವಾಯುವುಗೆ ತುತ್ತಾಗುತ್ತವೆ. ಅಂತಿಮವಾಗಿ ಸಾವಿನದವಡೆಯತ್ತ ಸಾಗುತ್ತವೆ.

ವಿಷವಾಗಿದ್ದು ಹೇಗೆ?
ಗುಲಗಂಜಿ ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಕಳೆ ಸಸ್ಯ. 10 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗುಲಗಂಜಿ ಗಿಡ ಹಳದಿ ಬಣ್ಣದ್ದಾಗಿದ್ದು, ಕೆಂಪು ಹೂವುಗಳನ್ನು ಬಿಡುತ್ತದೆ. ಹೂವು ಮೂರರಿಂದ ಐದು ಸತ್ತು ಬೀಜಗಳನ್ನು ಬಿಡುತ್ತದೆ. ಈ ಸಸ್ಯಗಳು ನೀರು, ಗಾಳಿ ಮತ್ತು ಮಣ್ಣಿನಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೀರಿ ಬೆಳೆಯುತ್ತದೆ. ಹೀಗಾಗಿ ಗುಲಗಂಜಿ ಬೀಜದಲ್ಲಿ ಬರಿ ವಿಷವೇ ತುಂಬಿಕೊಂಡಿದೆ.

ಜಾನಪದ ಕತೆ:

ಗುರಗಂಜಿಯ ಕುರಿತು ಅನೇಕ ಜಾನಪದ ಕತೆಗಳು ಹುಟ್ಟಿಕೊಂಡಿವೆ. ಗುಲಗಂಜಿ ಬೀಜವನ್ನು ಒಂದನ್ನೊಂದು ಪೋಣಿಸಿ ಆಭರಣಗಳನ್ನು ತಯಾರಿಸುತ್ತಿದ್ದರು.

4 comments:

  1. ಸಾಕಷ್ಟು ಮಾಹಿತಿ ಕಲೆ ಹಾಕಿದ್ದೀರಿ.........

    ReplyDelete
  2. ಹಸಿರು ಗುಲಗುಜಿ ಎಲ್ಲಿ ಸಿಗುತ್ತದೆ

    ReplyDelete
  3. ಹಸಿರು ಗುಲಗುಜಿ ಎಲ್ಲಿ ಸಿಗುತ್ತದೆ

    ReplyDelete
  4. ಹಸಿರು ಗುಲಗುಂಜಿ ಎಲ್ಲಿ ಸಿಗುತ್ತದೆ

    ReplyDelete