ಜೀವನಯಾನ

Monday, June 23, 2014

ಫುಟ್ಬಾಲ್ ಆಗುವ ಅರ್ಮಡಿಲ್ಲೋ

ಅಪಾಯ ಬಂದಾಗ ಫುಟ್ಬಾಲ್ನಂತೆ ಸುರುಳಿಸುತ್ತಿಕೊಳ್ಳುವ ಅರ್ಮಡಿಲ್ಲೋ ಈಗ ವಿಶ್ವದ ಆಕರ್ಷಣೆಯ ಕೇಂದ್ರ ಬಿಂದು. ಏಕೆಂದರೆ, ಈ ಬಾರಿ ಬ್ರೆಜಿಲ್ ವಿಶ್ವಕಪ್ ಫುಟ್ಬಾಲ್ ಲಾಂಛನದಲ್ಲಿ ಅರ್ಮಡಿಲ್ಲೋ ಸ್ಥಾನಗಿಟ್ಟಿಸಿಕೊಂಡಿದೆ. ವಿಶ್ವಕಪ್ ಲಾಂಛನವನ್ನು ಅಳಿವಿನ ಅಂಚಿನಲ್ಲಿರುವ ಈ ಪ್ರಾಣಿಯ ರೂಪದಲ್ಲೇ ಬ್ರೆಜಿಲ್ ವಿನ್ಯಾಸಗೊಳಿಸಿದೆ. ಇದಕ್ಕೆ ಫುಲೆಕೊ ಎಂದು ಹೆಸರಿಡಲಾಗಿದೆ. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಈ ಪ್ರಾಣಿ ಬ್ರೆಜಿಲ್ನ ಗೌರವದ ಸಂಕೇತವಾಗಿದೆ. ಅಳಿವಿನ ಅಂಚಿನಲ್ಲಿರುವ ಈ  ಪ್ರಾಣಿಯ ರಕ್ಷಣೆಗೆ ಸಂಕಲ್ಪಿಸಲಾಗಿದೆ.  



ಫುಟ್ಬಾಲ್ ಆಗುವ ದೇಹ!
ಬ್ರೆಜಿಲ್ನ ಕಾಟಿಂಗಾ ಅರಣ್ಯದಲ್ಲಿ ಕಾಣಸಿಗುವ ಇಲಿ ಆಕಾರದ ಪ್ರಾಣಿ ಅರ್ಮಡಿಲ್ಲೋ. ಮೈ ಮೇಲೆ ಎಲುಬಿನಿಂದ ಮಾಡಿದ ಕವಚ ಇದಕ್ಕಿದೆ. ಕವಚ ಹೊಂದಿರುವ ಏಕೈಕ ಸಸ್ತನಿ ಇದು. ಸ್ಪಾನಿಶ್ ಭಾಷೆಯಲ್ಲಿ ಅರ್ಮಡಿಲ್ಲೋ ಅಂದರೆ, ಕವಚವಿರುವ ಸಣ್ಣ ಜೀವಿ. ಇವುಗಳ ತಲೆ, ಬೆನ್ನು, ಕಾಲುಗಳು ಮತ್ತು ಬಾಲಕ್ಕೆ ಕವಚವಿದ್ದು ನೋಡಲು ಸುಂದರ ವಿರುವುದಿಲ್ಲ. ಅಪಾಯದ ಕ್ಷಣ ಎದುರಾದಾಗ ಚಿಪ್ಪನ್ನು ಮದುಡಿಕೊಂಡು ಫುಟ್ಬಾಲ್ ಚೆಂಡಿನಂತಾಗುತ್ತದೆ. ರಕ್ಷಣಾ ಕವಚದಲ್ಲಿ ದೇಹವನ್ನು ಹುದುಗಿಸಿಕೊಳ್ಳುವ ಈ ಪ್ರಾಣಿಗಳು ಸರಾಸರಿ 5ರಿಂದ 59 ಇಂಚುಗಳಷ್ಟು ಉದ್ದ ಬೆಳೆಯುತ್ತವೆ. 2ರಿಂದ 60 ಕೆ.ಜಿ.ಯಷ್ಟು ತೂಕವಿರುತ್ತದೆ. ಕಪ್ಪು, ಕೆಂಪು, ಕಂದು ಬಣ್ಣಗಳಲ್ಲಿ ಕಾಣಿಸುತ್ತವೆ. ಚೂಪನೆಯ ಮೂತಿ ಮತ್ತು ಸಣ್ಣಗಾತ್ರದ ಕಣ್ಣುಗಳನ್ನು ಹೊಂದಿವೆ. ಇವುಗಳಲ್ಲಿ 20 ಪ್ರಭೇದಗಳಿದ್ದು, ಒಂದೇ ಒಂದು ಜಾತಿಯ ಅರ್ಮಡಿಲ್ಲೋ ಮಾತ್ರ ಉತ್ತರ ಅಮೆರಿಕದಲ್ಲಿ ಕಾಣಸಿಗುತ್ತದೆ. ಉಳಿದ 19 ಪ್ರಭೇದಗಳು ದಕ್ಷಿಣ ಅಮೆರಿಕದಲ್ಲಿವೆ. ಇವುಗಳ 11ಕ್ಕೂ ಹೆಚ್ಚು ಪ್ರಭೇದ ಬ್ರೆಜಿಲ್ವೊಂದರಲ್ಲಿಯೇ ಇದೆ. ಸುಮಾರು 15 ವರ್ಷ ಇದರ ಜೀವಿತಾವಧಿ. ಸ್ಥಳೀಯವಾಗಿ ಈ ಪ್ರಾಣಿಯನ್ನು ಟಾಟು ಬೋಲಾ ಎಂದು ಕರೆಯಲಾಗುತ್ತದೆ. ಬ್ರೆಜಿಲ್ನ ಈಶಾನ್ಯ ಭಾಗದಲ್ಲಿರುವ ಕಾಟಿಂಕಾ ಒಣ ಅರಣ್ಯ ಪ್ರದೇಶದಲ್ಲಿ ಅರ್ಮಡಿಲ್ಲೋ ಕಾಣಸಿಗುತ್ತದೆ.

ಕವಚದಿಂದ ವಾದ್ಯ ತಯಾರಿ
ಈ ಪ್ರಾಣಿಯ ಚಿಪ್ಪಿನಿಂದ ಚರಂಗೋ ಎಂಬ ವಾದ್ಯ ಸಲಕರಣೆಯನ್ನು ತಯಾರಿಸುತ್ತಾರೆ. ಅರ್ಮಡಿಲ್ಲೋ ವರ್ಷಕ್ಕೆ ಒಂದೇ ಮರಿಗೆ ಜನ್ಮ ನೀಡುತ್ತದೆ. ವಿಪರೀತ ಭೇಟೆಯಿಂದಾಗಿ ಇವುಗಳ ಸಂತತಿ ಕ್ಷೀಣಿಸುತ್ತಿದೆ. ಮೂರು ಹಂತದ ಕವಚ ಹೊಂದಿರುವ ಅರ್ಮಡಿಲ್ಲೋ ಮಾತ್ರ ತನ್ನ ರಕ್ಷಣೆಗೆ ಚೆಂಡಿನಂತೆ ಮುದುಡಿಕೊಳ್ಳುತ್ತದೆ. ಆದರೆ, ಇತರ ಪ್ರಭೇದಗಳು ಅಪಾಯ ಎದುರಾದರೆ ಮಣ್ಣಿನಲ್ಲಿ ಕುಳಿಯನ್ನು ತೋಡಿ ಅದರೊಳಗೆ ಅಡಗಿ ಕೂರುತ್ತವೆ. ಇವು ಮಣ್ಣನ್ನು ಬಗೆಯಲು ಉದ್ದನೆಯ ಕಾಲು ಮತ್ತು ಉಗುರುಗಳನ್ನು ಹೊಂದಿವೆ. ನೆಲದ ಒಳಗೆ  ಸುರಂಗದ ಸಂಪರ್ಕ ಜಾಲವನ್ನೇ ನಿರ್ಮಿಸಿಕೊಂಡಿರುತ್ತವೆ. ಆಹಾರವನ್ನು ಹುಡುಕುವ ಸಲುವಾಗಿಯೂ ಇವು ನೆಲವನ್ನು ಬಗೆಯುತ್ತವೆ. ಚಿಕ್ಕ ಸಸ್ತನಿಗಳು, ಹಕ್ಕಿಯ ಮರಿ,  ಮೊಟ್ಟೆಗಳು ಇದರ ಆಹಾರ. ದಿನದಲ್ಲಿ 16ರಿಂದ 18  ತಾಸು ಬಿಲದಲ್ಲಿ ನಿದ್ರೆ ಮಾಡುವುದರಲ್ಲಿಯೇ ಕಳೆಯುತ್ತವೆ. ಇವುಗಳ ದೃಷ್ಟಿ ಅಷ್ಟೇನೂ ಚುರುಕಾಗಿಲ್ಲ. ಆದರೆ, ವಾಸನೆಯ ಮೂಲಕವೇ ಬೇಟೆಯನ್ನು ಪತ್ತೆಮಾಡುತ್ತದೆ. ಇವುಗಳಿಗೆ ಲೀಲಾಜಾಲವಾಗಿ ಈಜಲೂ ಬರುತ್ತದೆ. ನೀರಿನಲ್ಲಿ ಮುಳುಗಿದಾಗ 6 ನಿಮಿಷಗಳ ಕಾಲ ಉಸಿರಾಡದೇ ಇರಬಲ್ಲದು. ಇವುಗಳಿಗೆ ಮರ ಹತ್ತಲೂ ಬರುತ್ತದೆ. ನೆಲದಲ್ಲಿ ಬಿಲ ತೋಡಲು ಸಾಧ್ಯವಾಗದಿದ್ದರೆ, ಮರ ಏರಿ ರಕ್ಷಣೆ ಪಡೆಯುತ್ತದೆ.

No comments:

Post a Comment