ಜೀವನಯಾನ

Friday, June 13, 2014

ಗರಗಸ ಮೀನು!

ಈ ಮೀನಿನ ಚುಂಚು ಉದ್ದವಾಗಿ ಅದಕ್ಕೆ ಗರಗಸದಂತೆ ಹಲ್ಲು ಇರುವುದರಿಂದ ಗರಗಸ ಮೀನು ಎನ್ನುತ್ತಾರೆ. ಇದರ ಸಹಾಯದಿಂದ ತನ್ನ ವೈರಿಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲ, ಬೇರೆ ಮೀನುಗಳನ್ನು ಬೇಟಿಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಅಳಿವಿನ ಅಂಚಿನಲ್ಲಿರುವ ಸಾಗರದ ಜೀವಿಗಳ ಪಟ್ಟಿಗೆ ಸೇರಿರುವ ಈ ಮೀನಿನ ವೈಜ್ಞಾನಿಕ ಹೆಸರು ಪ್ರಿಸ್ಟಸ್.  ಶಾರ್ಕ್ ಗಳ ಜಾತಿಗೆ ಸೇರಿದೆ. ಇಂಗ್ಲಿಷ್ನಲ್ಲಿ ಸಾ- ಫಿಶ್ ಎನ್ನುತ್ತಾರೆ. ಸಮಶೀತೋಷ್ಣ ವಲಯದಲ್ಲಿ ಗರಗಸ ಮೀನುಗಳು ಹೆಚ್ಚಾಗಿ ಕಂಡುಬರುತ್ತವೆ. ಇವು ಸುಮಾರು 30 ವರ್ಷಗಳ ಕಾಲ ಬದುಕುವ
ಸಾಮರ್ಥ್ಯ ಹೊಂದಿವೆ. 


ಬೇಟೆ ಆಡುವ ಗರಗಸ:
ಇದರ ಮೂತಿಯಲ್ಲಿರುವ ಗರಗಸಕ್ಕೆ ಎರಡೂ ಪಕ್ಕದಲ್ಲಿ ತಲಾ 20 ಹಲ್ಲುಗಳು ಇರುತ್ತವೆ. ಆದರೆ, ಅವು ನಿಜವಾದ ಹಲ್ಲುಗಳಲ್ಲ. ಮೀನಿನ ಕೆಳಭಾಗದಲ್ಲಿರುವ ಬಾಯಿಯಲ್ಲಿ ಅದರ ನಿಜವಾದ ಹಲ್ಲುಗಳು ಇರುತ್ತದೆ. ಈ ಹಲ್ಲುಗಳು ಚಿಕ್ಕದಾಗಿರುತ್ತವೆ.
ಗರಗಸವನ್ನು ಬೇಟೆ ಆಡಲು ಮಾತ್ರ ಬಳಸುತ್ತದೆ. ಅಲ್ಲದೆ ಬೇಟೆ ಪ್ರಾಣಿಗಳು ಹಾದುಹೋದಾಗ ಅವು ರವಾನಿಸುವ ವಿದ್ಯುತ್ಕಾಂತೀಯ ಸಂಜ್ಞೆಗಳನ್ನು ಗ್ರಹಿಸುತ್ತದೆ.
ಗರಗಸ ಮೀನಿನ ದೇಹದ ಕಾಲು ಭಾಗದಷ್ಟು ಉದ್ದವಿರುತ್ತದೆ. ಗಸಗಸ ಮೀನು 18ರಿಂದ 25 ಅಡಿಯಷ್ಟು ಉದ್ದ ಬೆಳೆಯುತ್ತದೆ. ಅದರ ಗರಗಸ ಮೂತಿ  ಮೂರರಿಂದ ನಾಲ್ಕು ಅಡಿಯಷ್ಟು ಉದ್ದವಿರುತ್ತದೆ. ಬಲಿತ ಮೀನು ಸುಮಾರು 300 ಕೆ.ಜಿ. ಭಾರವಿರುತ್ತದೆ. ಆಳವಿಲ್ಲದ ಸಮುದ್ರ ಕರಾವಳಿ ನೀರಿನಲ್ಲಿ, ನದಿಗಳು ಮರಳಿನ ತಳವಿರುವ ನದಿ ಮತ್ತು ತೊರೆಗಳಲ್ಲಿ ಇವು ಕಂಡುಬರುತ್ತವೆ. ಶಾರ್ಕ್ ಗಳಂತೆಯೇ ಅಗಲವಾದ ರೆಕ್ಕೆಗಳನ್ನು ಹೊಂದಿದೆ. ಅಲ್ಲದೆ ಅದರಂತೆಯೇ ಬಾಲವನ್ನು ಹೊಂದಿದೆ. ಮೀನಿನ ಮೇಲ್ಮೈ ಮಣ್ಣನ್ನು ಹೋಲುವ ಕಂದುಬಣ್ಣವಿರುತ್ತದೆ.

ಬಲೆಗೆ ಸಿಲುಕುವ ಮೂತಿ:
ಇದು ಸದಾ ಮಣ್ಣಿನಲ್ಲಿ ಅಡಗಿ ಕುಳಿತು ವೈರಿಗಳ ಮೇಲೆ ಗರಗಸದ ಮೂತಿಯಿಂದ ದಾಳಿ ಮಾಡುತ್ತದೆ. ಒಂದುವೇಳೆ ದಾಳಿ ಮಾಡುವಾಗ ಹಲ್ಲುಗಳು ಮುರಿದುಹೋದರೆ, ಅವುಗಳನ್ನು ಮತ್ತೆ ಪುನಃ ಪಡೆದುಕೊಳ್ಳುತ್ತವೆ. ಆದರೆ, ಗರಗಸದಂತಹ ಚುಂಚೇ ಈ ಮೀನಿನ ಪ್ರಾಣಕ್ಕೆ ಎರವಾಗಿದೆ. ದೇಹದ ಯಾವುದೇ ಭಾಗ ಬಲೆಯಲ್ಲಿ ಸಿಕ್ಕಿಹಾಕಿಕೊಂಡರೆ ಅದನ್ನು ಹರಿದು ತುಂಡು ಮಾಡುವ ಸಾಮರ್ಥ್ಯ ಈ ಮೀನಿಗೆ ಇದೆ.  ಆದರೆ, ಮೀನಿನ ಚುಂಚು ಬಲೆಗಳಿಗೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳುವುದರಿಂದ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ ಈ ಮೀನಿಗೆ ವೇಗವಾಗಿ ಈಜಲು ಬರುವುದಿಲ್ಲ. ಅತಿಯಾದ ಮೀನುಗಾರಿಕೆ ಮತ್ತು ಸಂತಾನ ನಷ್ಟದಿಂದಾಗಿ ಈ ಮೀನು ಅಳಿವಿನ ಅಂಚಿಗೆ ತಲುಪಿದೆ.

ಬಾಲಕ್ಕೆ ಭಾರಿ ಬೇಡಿಕೆ:
ಶಾರ್ಕ್  ಮೀನಿನಷ್ಟೇ ಬೆಲೆಯಿರುವ ಇದರ ಬಾಲವನ್ನು ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಚೀನಾದಲ್ಲಿ ಈ ಮೀನಿನ ಬಾಲದ ಸೂಪಿಗೆ ಅತಿ ಬೇಡಿಕೆ ಇದೆ. ಈ ಮೀನಿನ ಮೇಲೆ ನಾಮ ಇರುವ ಗುರುತು ಕಂಡುಬಂದರೆ, ದೇವರ ಮೀನು ಎನ್ನುವ ನಂಬಿಕೆ ಮೀನುಗಾರರಲ್ಲಿದೆ. ಅವು ಸಿಕ್ಕರೆ, ಮರಳಿ ಸಮುದ್ರಕ್ಕೆ ಬಿಟ್ಟು, ತಮ್ಮ ವೃತ್ತಿಯಲ್ಲಿ ಯಾವುದೇ ತೊಂದರೆ ಆಗದೇ ಇರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರಂತೆ. 

 

No comments:

Post a Comment