ಬೆಕ್ಕಿನ ಮೀಸೆ ಎಲ್ಲರಿಗೂ ಚಿರಪರಿಚಿತ. ಅದೇ ರೀತಿ, ಟಮಾರಿನ್ ಮಂಗಕ್ಕೆ ಮುಖದ ಮೇಲೆ ಭರ್ಜರಿಯಾದ ಮೀಸೆ ಇದೆ. ಬೆಳ್ಳಗಿನ ಕೂದಲಿನ ಉದ್ದನೆಯ ಮೀಸೆಗೆ ಇದು ಫೇಮಸ್. ಇದರ ಮೀಸೆ ಜರ್ಮನ್ ದೊರೆ ಎರಡನೇ ವಿಲಿಯಂ ಅವರನ್ನು ನೆನಪಿಸುವುದರಿಂದ ಎಂಪರರ್ ಟಮಾರಿನ್ ಎಂದೇ ಈ ಮಂಗವನ್ನು ಕರೆಯುತ್ತಾರೆ.
ಮುಖಕ್ಕೆ ಮೀಸೆಯೇ ಅಂದ!
ಪಶ್ಚಿಮ ಅಮೇಜಾನ್ ಕಾಡುಗಳಲ್ಲಿ ಎಂಪರರ್ ಟಮಾರಿನ್ಗಳು ಕಂಡುಬರುತ್ತವೆ. ಬ್ರೆಜಿಲ್ನ ಮಳೆ ಕಾಡು, ಪೆರು ಮತ್ತು ಬೊಲಿವಿಯಾಗಳಲ್ಲಿ ಇವು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಇತರ ಗಾತ್ರದಲ್ಲಿ ಚಿಕ್ಕದಾಗಿವೆ. ಇವುಗಳ ದೇಹ 9ರಿಂದ 10 ಇಂಚು ಉದ್ದವಿದ್ದು, ಬಾಲ 15 ಇಂಚು ಉದ್ದವಿರುತ್ತದೆ. 450 ಗ್ರಾಂ ತೂಕವಿರುತ್ತದೆ. ಕಾಲಿನಲ್ಲಿ ಪಂಜು ಇದ್ದು, ಉದ್ದನೆಯ ಉಗುರುಗಳಿವೆ.
ಇವು ಹೆಚ್ಚಾಗಿ ಬೂದು ಬಣ್ಣದಲ್ಲಿ ಕಂಡುಬರುತ್ತವೆ. ಎದೆಯ ಮೇಲೆ ಹಳದಿ ಬಣ್ಣದ ಮಚ್ಚೆಗಳಿವೆ. ಕೈ ಮತ್ತು ಪಾದಗಳು ಕಪ್ಪು ಬಣ್ಣದಲ್ಲಿದ್ದು, ಬಾಲ ಕಂದು ಬಣ್ಣವಿರುತ್ತದೆ. ಇದೆಕ್ಕೆಲ್ಲಕ್ಕಿಂತ ಎದ್ದು ಕಾಣುವುದು ಅದರ ಬೆಳ್ಳನೆಯ ಮೀಸೆ. ಎರಡೂ ಭುಜದಿಂದ ಹೊರಚಾಚಿದ ಅವುಗಳನ್ನು ನೋಡುವುದೇ ಚೆಂದ. ಕೇವಲ ಗಂಡು ಮಂಗಕ್ಕೆ ಮಾತ್ರವಲ್ಲ ಹೆಣ್ಣು ಮಂಗಕ್ಕೂ ಮೀಸೆ ಇರುತ್ತದೆ.
ಸುಗಂಧ ದ್ರವ್ಯ ಸೂಸುತ್ತವೆ:
ಇವು ಕುಟುಂಬದೊಂದಿಗೆ ಒಂದು ಸೀಮಿತ ಪ್ರದೇಶದಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ 75ರಿಂದ 100 ಎಕರೆ ಪ್ರದೇಶಕ್ಕೆ ಇವು ಸೀಮಿತವಾಗಿರುತ್ತವೆ. ಎದೆ ಮತ್ತು ಜನನಾಂಗದಲ್ಲಿರುವ ಗ್ರಂಥಿಯ ಮೂಲಕ ಸುಗಂಧ ದ್ರವ್ಯವನ್ನು ಹೊರ ಸೂಸುತ್ತವೆ. ಸುಗಂಧ ದ್ರವ್ಯ ಬಳಸಿ ಗಡಿಗಳನ್ನು ಗುರುತಿಸಿಕೊಳ್ಳುತ್ತವೆ.
ಕೂಗಿನ ಮೂಲಕ ಎಚ್ಚರಿಕೆ:
ಟಮಾರಿನ್ ಧ್ವನಿ ಭಾಷೆಯನ್ನು ಹೆಚ್ಚಾಗಿ ಬಳಸುತ್ತದೆ. ದಟ್ಟವಾದ ಕಾಡಿನಲ್ಲಿ ಇನ್ನೊಂದು ಮೂಲೆಯಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಕೀರಲು ಧ್ವನಿಯಿಂದ ಕೂಗಿ ಕರೆಯುತ್ತದೆ. ಅಪಾಯ ಎದುರಾದರೆ ವಿವಿಧ ರೀತಿಯ ಕೂಗಿನ ಮೂಲಕ ಎಚ್ಚರಿಕೆಯ ಸಂದೇಶ ನೀಡುತ್ತದೆ.
ಒಂದು ಕುಟುಂಬದಲ್ಲಿ 2 ರಿಂದ 10 ಸದಸ್ಯರಿದ್ದು, ಹಿರಿಯ ಹೆಣ್ಣುಮಂಗ ಕುಟುಂಬವನ್ನು ಮುನ್ನಡೆಸುತ್ತದೆ.
ಅವಳಿ ಮರಿಗಳಿಗೆ ಜನನ:
ಇವು ರಾತ್ರಿಯಲ್ಲಿ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ನಿದ್ರಿಸುತ್ತವೆ. ಹಗಲಿನಲ್ಲಿ ಆಹಾರ ಅರಸಿ ಮರದಿಂದ ಮರಕ್ಕೆ ಅಲೆಯುತ್ತವೆ. ಹಣ್ಣು, ಹೂವಿನ ಮಕರಂದ, ಪಕ್ಷಿ, ಹಲ್ಲಿ, ಮೊಟ್ಟೆಗಳು ಇವುಗಳ ಪ್ರಮುಖ ಆಹಾರ. 145 ದಿನಗಳ ಗರ್ಭಧಾರಣೆಯ ಬಳಿಕ ಹೆಣ್ಣು ಅವಳಿ ಮರಿಗಳಿಗೆ ಜನ್ಮನೀಡುತ್ತದೆ. ಗುಂಪಿನ ಎಲ್ಲ ಸದಸ್ಯರೂ ಮರಿಗಳ ಕಾಳಜಿ ವಹಿಸುತ್ತವೆಮರಿಗಳನ್ನು ಬೆನ್ನಮೇಲೆ ಹೊತ್ತುಕೊಂಡು ಕಾಡೆಲ್ಲಾ ಸುತ್ತುತ್ತದೆ. ಸಮಯಸಿಕ್ಕಾಗಲೆಲ್ಲಾ ಮರಿಗಳೊಂದಿಗೆ ಆಟವಾಡುವುದರಲ್ಲಿ ಕಳೆಯುತ್ತದೆ.
ಅಳಿವಿನ ಅಂಚು:
ಸಾಮಾನ್ಯವಾಗಿ ಇವುಗಳ ಜೀವಿತಾವಧಿ 15 ವರ್ಷ. 20 ವರ್ಷ ಬದುಕಿದ ಉದಾಹರಣೆಯೂ ಇದೆ. ಸಂತಾನ ನಾಶದಿಂದಾಗಿ ಇಂದು ಟಮಾರಿನ್ಗಳ ಸಂತತಿ ತೀವ್ರವಾಗಿ ಕ್ಷೀಣಿಸುತ್ತಿದೆ. ಪೇಗನ್ಟನ್ ಪ್ರಾಣಿಸಂಗ್ರಹಾಲಯ ಇವುಗಳನ್ನು ಸಂರಕ್ಷಣೆ ಮಾಡುತ್ತಿದೆ.