ಟಿಬೆಟ್ ಜಗತ್ತಿನ ಚಾವಣಿ ಎಂದೇ ಕರೆಸಿಕೊಂಡಿದೆ. ಎಲ್ಲಿ ನೋಡಿದರೂ ಗುಡ್ಡ ಬೆಟ್ಟಗಳೇ ತುಂಬಿರುವ ಟಿಬೆಟ್ನಲ್ಲಿ ಸಮತಟ್ಟಾದ ಪ್ರಸ್ಥಭೂಮಿಗಳೂ ಕಾಣಸಿಗುತ್ತವೆ. ಅವು ಟಿಬೆಟ್ ಪ್ರಸ್ಥಭೂಮಿ ಅಂತಲೇ ಕರೆಸಿಕೊಂಡಿವೆ. ಇದನ್ನು ಏಷ್ಯನ್ ವಾಟರ್ ಟವರ್ ( ಏಷ್ಯಾದ ನೀರಿನ ಗೋಪುರ), ಮೂರನೇ ಧ್ರುವ ಎಂತಲೂ ಕರೆಯಲಾಗುತ್ತದೆ. ಅವುಗಳಲ್ಲಿ ಚಾಂಗ್ ತಾಂಗ್ ಪ್ರಸ್ಥಭೂಮಿ ಅತ್ಯಂತ ವಿಶಾಲ ಮತ್ತು ಯಾರೂ ತಲುಪಲಾಗದ ಸ್ಥಳ ಎನಿಸಿಕೊಂಡಿದೆ.
ಏಷ್ಯಾದ ನೀರಿನ ಮೂಲ
ಟಿಬೆಟ್ ಪ್ರಸ್ಥಭೂಮಿ ಒಂದು ಸ್ವಾಯತ್ತ ಪ್ರದೇಶವೆನಿಸಿಕೊಂಡಿದ್ದರೂ ಅದು ಸಂಪೂರ್ಣವಾಗಿ ಚೀನಾದ ನಿಯಂತ್ರಣದಲ್ಲಿದೆ. ಸುಮಾರು 14ರಿಂದ 16 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ 2,500,000 ಚದರ ಕಿ.ಮೀ.ಯಷ್ಟು ವಿಶಾಲವಾದ ಪ್ರದೇಶಕ್ಕೆ ಚಾಚಿಕೊಂಡಿದೆ. ಹೀಗಾಗಿ ಇದನ್ನು ಜಗತ್ತಿನ ಚಾವಣಿ ಎಂತಲೂ ಕರೆಯಲಾಗುತ್ತದೆ. ಪ್ರಸ್ಥಭೂಮಿ ಸುತ್ತಲೂ ಎತ್ತರದ ಪರ್ವತಗಳು ಮತ್ತು ಗಡಿಯಲ್ಲಿ ಹಿಮಾಲಯದ ಪರ್ವತ ಶ್ರೇಣಿಯನ್ನು ಒಳಗೊಂಡಿದೆ. ಇದು ಸಾವಿರಾರು ನೀರ್ಗಲ್ಲುಗಳು, ತೊರೆಗಳ ಆಗರ. ಏಷ್ಯಾದ ಅರ್ಧಭಾಗಕ್ಕೆ ಟಿಬೆಟ್ ಪ್ರಸ್ಥಭೂಮಿ ನೀರಿನ ಮೂಲವೆನಿಸಿಕೊಂಡಿದೆ. ಎತ್ತರದ ಗೋಪುರಗಳು ನೀರನ್ನು ಹಿಡಿದಿಟ್ಟುಕೊಂಡು ನೀರಿನ ಹರಿವನ್ನು ನಿಯಂತ್ರಿಸುತ್ತವೆ. ಗಂಗಾ, ಚೀನಾದಲ್ಲಿ ಹರಿಯುವ ಮೆಕಾಂಗ್ ಮತ್ತು ಯಾಂಗ್ಟ್ಜ್ ನದಿಗಳಿಗೆ ಟಿಬೇಟಿಯನ್ ಪ್ರಸ್ಥಭೂಮಿಯೇ ನೀರಿನ ಮೂಲ. ಅಲ್ಪೈನ್ ಟುಂಡ್ರಾ, ತೋಳ, ರಣ ಹದ್ದುಗಳು, ಕಾಡು ಕತ್ತೆ. ದ ಹಾಕ್ಸ್ ಮತ್ತಿತರ ಅಪರೂಪದ ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದೆ. ಟಿಬೇಟ್ ಪ್ರಸ್ಥಭೂಮಿ ಭೂಮಿಯ ಮೂರನೇ ಒಂದರಷ್ಟು ಹಿಮವನ್ನು ಹಿಡಿದಿಟ್ಟುಕೊಂಡಿದೆ.
ಕೈಗೆಟುಕದ ಚಾಂಗ್ ತಾಂಗ್ ಪ್ರಸ್ಥಭೂಮಿ
ಚಾಂಗ್ ತಾಂಗ್ ಪ್ರಸ್ಥಭೂಮಿ 1600 ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿದೆ. ಈ ಪ್ರದೇಶ ಟಿಬೆಟ್ ಪ್ರಸ್ಥಭೂಮಿಯ ಒಂದು ಭಾಗ. 14, 500 ಅಡಿ ಎತ್ತರದಲ್ಲಿರುವ ಈ ಪ್ರದೇಶ ಊಹಿಸಲು ಸಾಧ್ಯವಾಗದ ವಾತಾವರಣವನ್ನು ಹೊಂದಿದೆ. ಇಲ್ಲಿ ನಿರಾಶ್ರಿತರಂತೆ ಬೆಟ್ಟ ಕಾಡುಗಳನ್ನು ಅಲೆಯುವ ಚಾಂಗ್ಪಾ ಜನಾಂಗ 5 ಲಕ್ಷದಷ್ಟು ಇದ್ದಾರೆ ಎಂದು ಊಹಿಸಲಾಗಿದೆ. ಆದರೆ, ಅವರು ಕಣ್ಣಿಗೆ ಬೀಳುವುದೇ ಅಪರೂಪ. ಚಾಂಗ್ ತಾಂಗ್ ಪ್ರಸ್ಥಭೂಮಿಯ ಗಡಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ಗೂ ತಾಗಿಕೊಂಡಿದೆ. ಆದರೆ, ಇದು ಜಗತ್ತಿನ ಅತ್ಯಂತ ದುರ್ಗಮ ಪ್ರದೇಶಗಲ್ಲಿ ಒಂದೆನಿಸಿದೆ. ಚಾಂಗ್ ತಾಂಗ್ ಪ್ರಸ್ಥಭೂಮಿಯನ್ನು ದಾಟುವುದು ಅಸಾಧ್ಯದ ಮಾತು. ಸ್ವೀಡನ್ನ ಸಾಹಸಿಗ ಸ್ವೇನ್ ಹೆಡಿನ್ ಎಂಬಾತ 2009ರಲ್ಲಿ ಈ ಪ್ರಸ್ಥಭೂಮಿಯನ್ನು ದಾಟಿದ್ದ, 81 ದಿನಗಳ ಆತನ ಚಾರಣದಲ್ಲಿ ಯಾವೊಬ್ಬ ವ್ಯಕ್ತಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಇಲ್ಲಿನ ವಾತಾವರಣ ಎಷ್ಟು ಕಠಿಣವೆಂದರೆ, ಸಾಮಾನ್ಯ ಉಷ್ಣಾಂಶ -5 ಡಿಗ್ರಿ ಸೆಲ್ಸಿಯಸ್ ಇದ್ದರೆ, ಚಳಿಗಾಲದಲ್ಲಿ - 50 ಡಿಗ್ರಿಯ ವರೆಗೂ ಇಳಿಕೆಯಾಗುತ್ತದೆ. ಹೀಗಾಗಿ ಚಾಂಗ್ ತಾಂಗ್ ಪ್ರಸ್ಥಭೂಮಿ ಆಧುನಿಕತೆಯಿಂದ ಸಂಪೂರ್ಣ ದೂರವಾಗಿ ಕೈಗೆಟುಕದ ಪ್ರದೇಶವಾಗಿಯೇ ಉಳಿದುಕೊಂಡಿದೆ. ಕಾಡು ಚಮರೀಮೃಗ, ಕಿಯಾಂಗ್ನಂತಹ ಪ್ರಾಣಿಗಳನ್ನಷ್ಟೇ ಇಲ್ಲಿ ನೋಡಲು ಸಾಧ್ಯ.