ಜೀವನಯಾನ

Sunday, May 26, 2013

ಸಹರಾ ಎಂಬ ಮರಳುಗಾಡು!

ಸುಡುವ ಬಿಸಿಲಿಗೆ ಇನ್ನೊಂದು ಹೆಸರು ಸಹರಾ ಮರುಭೂಮಿ. ಜಗತ್ತಿನ ಅತ್ಯಂತ ಬಿಸಿಲಿನ ಪ್ರದೇಶ ಎಂದು ಕರೆಸಿಕೊಂಡಿರುವ ಸಹರಾ ವರ್ಷಪೂರ್ತಿ ಮಳೆಯನ್ನೇ ಕಾಣದ ಮರಳುಗಾಡು. ಸುಮಾರು 9,400,000 ಚದರ್ ಕಿ. ಮೀಟರ್ ವಿಸ್ತೀರ್ಣ ಹೊಂದಿರುವ ಜಗತ್ತಿನ ಎರಡನೇ ದೊಡ್ಡ ಮರುಭೂಮಿ. ವಿಚಿತ್ರವೆಂದರೆ ಜಗತ್ತಿನ ಅತ್ಯಂತ ಉದ್ದದ ನದಿ ಎಂದು ಹೆಸರಾದ ನೈಲ್ ನದಿ ಹರಿಯುವುದು ಇದೇ ಸಹರಾ ಮರುಭೂಮಿಯಲ್ಲಿ!



ಸಮುದ್ರವಿದ್ದರೂ ಮರುಭೂಮಿ

ಸಹರಾ ಮರುಭೂಮಿಗೆ ಸುಮಾರು 30 ಲಕ್ಷ ವರ್ಷಗಳಷ್ಟು ಇತಿಹಾಸವಿದೆ. ಉತ್ತರ ಆಫ್ರಿಕಾದ ಬಹುತೇಕ ಭಾಗವನ್ನು ಸಹರಾ ಮರುಭೂಮಿ ಆಕ್ರಮಿಸಿಕೊಂಡಿದೆ. ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ದಂಡೆ ಮತ್ತು ಅಟ್ಲಾಂಟಿಕ್ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದ್ದರೂ ಸಹರಾ ಮಾತ್ರ ಮರುಭೂಮಿಯಾಯೇ ಉಳಿದಿದೆ. ಇಲ್ಲಿ ವರ್ಷದಲ್ಲಿ ಬೀಳುವ ಮಳೆಯ ಪ್ರಮಾಣ 20 ಮಿಲಿ ಮೀಟರ್ಗಿಂತಲೂ ಕಡಿಮೆ. ಕೆಲವು ಪ್ರದೇಶದಲ್ಲಿ 10 ಮಿಲಿ ಮೀಟರ್ನಷ್ಟೂ ಮಳೆಯಾಗುವುದಿಲ್ಲ. ಆದರೂ ಇಲ್ಲಿ ಕೆಲವು ಪ್ರದೇಶದಲ್ಲಿ ಜನವಸತಿ ಇದೆ. ಬೆರ್ಬರ್ ಜನಾಂಗದವರು ಇಲ್ಲಿ ಅನಾದಿಕಾಲದಿಂದಲೂ ವಾಸವಾಗಿದ್ದಾರೆ. ಸಹರಾ ಮರುಭೂಮಿಯಲ್ಲಿ ಒಟ್ಟು 20 ಲಕ್ಷ ಜನರಿದ್ದಾರೆ. ಅರೆಬಿಕ್ ಅತಿ ಹೆಚ್ಚಾಗಿ ಮಾತನಾಡುವ ಭಾಷೆ.


ಹವಾಮಾನ ವೈಪರಿತ್ಯ:
ಸಹರಾ ಮರುಭುಮಿಯ ಇನ್ನೊಂದು ವಿಶೇಷವೆಂದರೆ ಹಗಲಿನಲ್ಲಿ ವಿಪರೀತ ಬಿಸಿಲಿದ್ದರೆ, ರಾತ್ರಿಯಲ್ಲಿ ಚಾದರ ಹೊದ್ದು ಮಲಗುವಷ್ಟು ಚಳಿ ಇರುತ್ತದೆ. ಬೇಸಿಗೆಯ ಹಗಲಿನಲ್ಲಿ ಸರಾಸರಿ 50 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುತ್ತದೆ. ರಾತ್ರಿಯಾಗುತ್ತಿದ್ದಂತೆ ತಾಪಮಾನ 0 ಡಿಗ್ರಿಗೆ ಕುಸಿದುಬಿಡುತ್ತದೆ.ಸಹರಾದ ಮಧ್ಯಭಾಗ ಅತ್ಯಂತ ಶುಷ್ಕ ಪ್ರದೇಶ. ಇಲ್ಲಿ ಮರಗಿಡಗಳು ತೀರಾ ಕಡಿಮೆ. ಅತ್ಯಂತ ಒರಟಾದ ಹವಾಮಾನ ಸಹರಾ ಮರುಭೂಮಿಯದ್ದು. ಇಂತಹ ಸುಡುವ ಸಹರಾದಲ್ಲಿಯೂ ಕೂಡಾ 500 ಜಾತಿಯ ಸಸ್ಯಗಳು ಬೆಳೆಯುತ್ತವೆ.  ಇಲ್ಲಿನ ವಿಷಮ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಾಣಿಗಳು ಸಹ ಇಲ್ಲಿವೆ. ಒಂಟೆ ಹಾಗೂ ಮೇಕೆ ಇಲ್ಲಿನ ಪ್ರಮುಖ ಪ್ರಾಣಿಗಳು. ಅಲ್ಲದೆ ಸಹರಾ ಚೀತ್, ಮರಳು ವೈಪರ್ಸ್, ಚೇಳು, ಹಲ್ಲಿಗಳು ಇಲ್ಲಿ ಕಾಣಸಿಗುತ್ತವೆ.


ಮರಳಿನ ಸುಂಟರಗಾಳಿ:
ಇಲ್ಲಿ ಆಗಾಗ ಮರಳಿನ ಸುಂಟರಗಾಳಿ ಬೀಸುತ್ತದೆ. ಇದರ ಪ್ರಭಾವ ಎಷ್ಟಿರುತ್ತೆ ಅಂದರೆ, ಇಲ್ಲಿ ಬೀಸುವ ಬಿರುಗಾಳಿಯು ಕೆಲವು ಪ್ರದೇಶಗಳ ಚಿತ್ರಣವನ್ನೇ ಬದಲಾಯಿಸಿಬಿಡುತ್ತದೆ. ಕೆಲವೊಮ್ಮೆ ಸಹರಾ ಮರುಭೂಮಿಯ ಮರಳಿನ ಕಣಗಳು ಬ್ರಿಟನ್ ಮತ್ತು ಜರ್ಮನಿಯ ವರೆಗೆ ಗಾಳಿಯ ಮೂಲಕ ತಲುಪುತ್ತವೆ. ಬಿರುಗಾಳಿ ಸಮಯದಲ್ಲಿ ವಿಚಿತ್ರವಾದ ಶಬ್ದ ಸೃಷ್ಟಿಯಾಗುತ್ತದೆ.

ಸಂಪೂರ್ಣ ಮರುಳುಗಾಡಲ್ಲ:
ಬಹುತೇಕ ಮಂದಿ ನಂಬಿರುವಂತೆ ಇದು ಸಂಪೂರ್ಣ ಮರಳುಗಾಡಲ್ಲ. ಇಲ್ಲಿ ನೂರಾರು ಮೈಲಿ ಭೂ ಪ್ರದೇಶ, ವಿಶಾಲವಾದ ಕಲ್ಲಿನ ಪ್ರಸ್ಥಭೂಮಿ, ಜಲ್ಲಿ ಕಲ್ಲಿನ ಬಯಲು ಪ್ರದೇಶ, ಒಣ ಕಣಿವೆಗಳು, ಬಯಲು ಪ್ರದೇಶಗಳಿವೆ. ಕೆಲವು ಕಡೆ ಅಂತರ್ಜಲವೂ ಲಭ್ಯವಿದೆ. ಅಷ್ಟೇಅಲ್ಲ ಓಯಾಸಿಸ್ಗಳಿಗೂ ಹೆಸರುವಾಸಿ. ಸಹರಾ ಮರುಭುಮಿಯ ಅತ್ಯಂತ ಎತ್ತರದ ಶಿಖರ ಎಮಿ ಕೋಸಿ, ಇದು 3,415 ಮೀಟರ್ ಎತ್ತರವಾಗಿದೆ.

ವಿಸ್ತೀರ್ಣ ಹೆಚ್ಚುತ್ತಿದೆ:

ಇಲ್ಲಿನ ಕೆಲವು ಮರಳಿನ ದಿಬ್ಬಗಳು 180 ಮೀಟರ್ವರೆಗೆ ಎತ್ತರವಾಗಿರುತ್ತವೆ. ಸಹರಾ ಮರುಭೂಮಿಯ ವಿನ್ಯಾಸ ಆಗಾಗ ಬದಲಾಗುತ್ತಿರುತ್ತದೆ. ಸಹರಾ ವಿಸ್ತೀರ್ಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿಜ್ಞಾನಿಗಳು ಉಪಗ್ರಹ ಚಿತ್ರದ ಮೂಲಕ ಅಧ್ಯಯನ ಮಾಡುತ್ತಿದ್ದಾರೆ. ಕೆಲವು ಕಡೆ  ಸಹರಾದ ವಿಸ್ತೀರ್ಣ ಕಡಿಮೆಯಾಗುತ್ತಿದ್ದು, ಇನ್ನು ಕೆಲವು ಕಡೆ ಮರುಭೂಮಿ ತನ್ನ ವಿಸ್ತೀರ್ಣ ಹಿಗ್ಗಿಸಿಕೊಳ್ಳುತ್ತಿದೆ.
 

Wednesday, May 22, 2013

ಅಂಟಾರ್ಕ್ಟಿಕ ಎಂಬ ಹಿಮದ ರಾಶಿ!

 ಅಂಟಾರ್ಕ್ಟಿಕ  ಒಂದು ಹಿಮದ ಮರುಭೂಮಿ. ಇಲ್ಲಿನ ಶೇ. 98ರಷ್ಟು ಭಾಗ ಸಂಪೂರ್ಣವಾಗಿ ಮಂಜುಗಡ್ಡೆಯಿಂದಲೇ ಆವೃತ್ತವಾಗಿದೆ. ಭೂಮಿಯ ದಕ್ಷಿಣ ತುದಿಯಲ್ಲಿ ಸುಮಾರು 15 ಸಾವಿರ ಚದರ್ ಕೀ.ಮೀ.ಯಷ್ಟು ವಿಶಾಲ ಪ್ರದೇಶದಲ್ಲಿ ಚಾಚಿಕೊಂಡಿರುವ ಇದು ಜಗತ್ತಿನ 5ನೇ ದೊಡ್ಡ ಖಂಡವೆನಿಸಿಕೊಂಡಿದೆ. ಇಲ್ಲಿ ಬಿದ್ದಿರುವ ಮಂಜುಗಡ್ಡೆಯ ದಪ್ಪವೇ ಸುಮಾರು 1.6 ಕೀ.ಮೀ. ಹೀಗಾಗಿ ವರ್ಷದ 365 ದಿನವೂ ಇಲ್ಲಿ ಥಂಡಿ ಥಂಡಿ!



ಮುಕ್ಕಾಲುಭಾಗ ಶುದ್ಧ ನೀರು:
 ಅಂಟಾರ್ಕ್ಟಿಕ ಎನ್ನುವ ಪದ ಗ್ರೀಕ್ ಮೂಲದ್ದಾಗಿದ್ದು, ಉತ್ತರ ದಿಕ್ಕಿನ ವಿರುದ್ಧ ಎಂಬ ಅರ್ಥನೀಡುತ್ತದೆ. ಇಡೀ  ಅಂಟಾರ್ಕ್ಟಿಕ ಖಂಡವನ್ನು ಪೂರ್ವ  ಅಂಟಾರ್ಕ್ಟಿಕ ಹಾಗೂ ಪಶ್ಚಿಮ  ಅಂಟಾರ್ಕ್ಟಿಕ ಎಂದು  ವಿಂಗಡಿಸ ಬಹುದಾಗಿದೆ.   ಪ್ರಪಂಚದ ಶೇ. 90 ರಷ್ಟು ಮಂಜುಗಡ್ಡೆ ಈ ಖಂಡ ಒಂದರಲ್ಲೇ ಶೇಖರಣೆಯಾಗಿದೆ. ಅಕಸ್ಮಾತ್ ಇಲ್ಲಿನ ಮಂಜುಗಡ್ಡೆಗಳೆಲ್ಲಾ ಒಮ್ಮೆಲೇ ಕರಗಿದರೆ, ಸಮುದ್ರದ ನೀರಿನ ಮಟ್ಟ 200 ಅಡಿ ಏರಿಕೆಯಾಗಲಿದೆ. ಜಗತ್ತಿನ ಶುದ್ಧ  ನೀರಿನಲ್ಲಿ ಶೇ. 70  ಅಂಟಾರ್ಕ್ಟಿಕ ದಲ್ಲಿ ಮಾತ್ರವೇ ಶೇಖರಣೆಗೊಂಡಿದೆ. ಆದರೆ, ಇಲ್ಲಿ ಬೀಳುವ ಮಳೆಯ ಪ್ರಮಾಣ 10 ಸೆಂಟಿ ಮೀಟರ್ಗಿಂತಲೂ ಕಡಿಮೆ. ಇಲ್ಲಿನ ತಾಪಮಾನ  "0 ಡಿಗ್ರಿ" ದಾಟಿದ ಇತಿಹಾಸವೇ ಇಲ್ಲ. -128 ಡಿಗ್ರಿ ಸೆಲ್ಸಿಯಸ್ ಇಲ್ಲಿ ದಾಖಲಾದ ಕನಿಷ್ಠ ತಾಪಮಾನ. ಇಲ್ಲಿನ ಹಗಲು ಮತ್ತು ರಾತ್ರಿ ದೀರ್ಘವಾಗಿರುತ್ತದೆ. ಸೂರ್ಯ ಮಾರ್ಚ್ ನಲ್ಲಿ ಮುಳುಗಿ ಅಕ್ಟೋಬರ್ನಲ್ಲಿ ಮತ್ತೆ ಉದಯಿಸುತ್ತಾನೆ.

ಜ್ವಾಲಾಮುಖಿ ಪರ್ವತಗಳು:
ಇಂತಹ  ಅಂಟಾರ್ಕ್ಟಿಕ ಖಂಡದಲ್ಲಿಯೂ ಜ್ವಾಲಾಮುಖಿ ಪರ್ವತಗಳಿವೆ. ಮೌಂಟ್ ಎರೆಬಸ್ ಮತ್ತು ಡಿಸೆಪ್ಷನ್ ಐಲ್ಯಾಂಡ್ ಇಲ್ಲಿ ಕಂಡುಬರುವ ಅಗ್ನಿಪರ್ವತಗಳಾಗಿವೆ. ಅಲ್ಲದೆ ಇಲ್ಲಿ 70ಕ್ಕೂ ಹೆಚ್ಚು ಸರೋವರಗಳಿವೆ. ಇವು ಮೇಲಿನಿಂದ ಹೆಪ್ಪುಗಟ್ಟಿಕೊಂಡಿದ್ದು, ಮಂಜುಗಡ್ಡೆಯ ಕೆಳಭಾದಲ್ಲಿ ಹರಿಯುತ್ತದೆ. ಇಲ್ಲಿ ಸಸ್ಯ ಸಂಕುಲ ಕಡಿಮೆ ಪ್ರಮಾಣದಲ್ಲಿದೆ. ಆದರೂ, 360 ಜಾತಿಯ ಸಸ್ಯಗಳು ಇಲ್ಲಿವೆ.  ಅಂಟಾರ್ಕ್ಟಿಕ ಪೆಂಗ್ವಿನ್ಗಳ ಸಾಮರ್ಾಜ್ಯ ಎಂತಲೇ ಕರೆಸಿಕೊಂಡಿದೆ. ಇದಲ್ಲದೆ ಸೀಲ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.  ಅಂಟಾರ್ಕ್ಟಿಕ ಮನುಷ್ಯರು ವಾಸಮಾಡುವುದಕ್ಕೆ ಯೋಗ್ಯವೆನಿಸಿಲ್ಲ. ಇಲ್ಲಿನ ಹವಾಮಾನ ವತ್ತು ಇನ್ನಿತರ ವಿಷಯಗಳ ಅಧ್ಯಯನಕ್ಕೆ ವಿಜ್ಞಾನಿಗಳು, ಪ್ರವಾಸಿಗರು ತಾತ್ಕಾಲಿಕವಾಗಿ ಇಲ್ಲಿಗೆ ತೆರಳುತ್ತಾರೆ. ವರ್ಷಪೂರ್ತಿ ಸುಮಾರು  1000 ದಿಂದ 5000 ಮಂದಿ ಇಲ್ಲಿ ವಾಸಮಾಡುತ್ತಾರೆ. ಅಂಟಾರ್ಕ್ಟಿಕ ಯಾವುದೇ ದೇಶದ ಹಿಡಿತಕ್ಕೆ ಒಳಪಟ್ಟಿಲ್ಲ. ಇದನ್ನು ಒಂದು ಖಂಡವನ್ನಾಗಿ ಕಾಯ್ದಿರಿಸಲಾಗಿದೆ. ಪ್ರಸ್ತುತ ಇಲ್ಲಿ ಯಾವುದೇ ಆರ್ಥಿಕ ಚಟುವಟಿಕೆ ನಡೆಯುತ್ತಿಲ್ಲ. 


ಅಂಟಾರ್ಕ್ಟಿಕ  ಒಪ್ಪಂದ:
ಇದು ಯಾವುದೇ ದೇಶದ ಹಿಡಿತದಲ್ಲಿ ಇಲ್ಲದಿರುವುದರಿಂದ ಇಲ್ಲಿ ಯಾವುದೇ ದೇಶ ಜನರಾಗಲಿ ವಸಹತುವಾಗಲಿ ಇಲ್ಲ. ಹಿಗಾಗಿ ಯಾವುದೇ ರೀತಿಯ ಸರ್ಕಾರ  ಕೂಡಾ ಅಸ್ಥಿತ್ವದಲ್ಲಿಲ್ಲ. ಆದರೆ, ಅನೇಕ ದೇಶಗಳು ಅಂಟಾರ್ಕ್ಟಿಕದ ಮೇಲೆ ಹಕ್ಕನ್ನು ಪ್ರತಿಪಾದಿಸಿದ ಕಾರಣಕ್ಕಾಗಿ, ಈ ಖಂಡವನ್ನು ವೈಜ್ಞಾನಿಕ ಸಂಶೋಧನೆಗೆ ಬಳಸಿಕೊಳ್ಳುವ ಏಕೈಕ ಉದ್ದೇಶದಿಂದ 1959ರಲ್ಲಿ  ಅಂಟಾರ್ಕ್ಟಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಕ್ಕೆ ಇದುವರೆಗೆ 49 ದೇಶಗಳು ಸಹಿ ಹಾಕಿವೆ. ಇಲ್ಲಿ 30 ವಿವಿಧ ದೇಶಗಳ 70 ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.


ಕರಗುವ ಭೀತಿ:
ಸದಾ ಮಂಜುಗಟ್ಟಿರುವ ಭೂಮಿಯ ಮೇಲಿನ ವಿಶಿಷ್ಟ ಪ್ರದೇಶವಿಂದು ಜಾಗತಿಕ ತಾಪಮಾನದ ಹೊಡೆತಕ್ಕೆ ಸಿಲುಕಿ ನಲುಗುತ್ತಿದೆ. ಬಿಸಿಯಿಂದಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ. ಇಲ್ಲಿನ ಮಂಜುಗಡ್ಡೆಗಳು ದಿನದಿಂದ ದಿನಕ್ಕೆ ಕರಗುತ್ತಿವೆ.  ಭೂ ಖಂಡದಿಂದ ಬೇರ್ಪಟ್ಟು ಸಮುದ್ರ ಪಾಲಾಗುತ್ತಿವೆ. ಒಂದು ವೇಳೆ ಇಲ್ಲಿನ ಹಿಮ ಕರಗಿದರೆ ಆಗಬಹುದಾದ ಅನಾಹುತ ಊಹಿಸುವುದೂ ಅಸಾಧ್ಯ.


 

Monday, May 13, 2013

ಕಲ್ಲಿನ ಅರಣ್ಯ!

ಇಲ್ಲೊಂದು ಅರಣ್ಯ ಸಂಪೂರ್ಣ ಕಲ್ಲಿನಿಂದಲೇ ನಿಮರ್ಮಾಣಗೊಂಡಿದೆ. ಒಂದರ ಪಕ್ಕ ಒಂದು ಸಾಲಾಗಿ ನಿಂತಿರುವ ಕಲ್ಲಿನ ಆಕೃತಿಗಳು ಅರಣ್ಯದಂತೆಯೇ ಭಾಸವಾಗುತ್ತದೆ. ಹೀಗಾಗಿ ಇದು ಕಲ್ಲಿನ ಅರಣ್ಯ (ಸ್ಟೋನ್ ಫಾರೆಸ್ಟ್) ಎಂದು ಪ್ರಸಿದ್ಧಿ ಪಡೆದಿದೆ. ಈ  ಅರಣ್ಯ ಇರುವುದು ಚೀನಾದ  ನೈಋತ್ಯ ಭಾದಲ್ಲಿರುವ ಲುನಾನ್ ಯು ಸ್ವಾಯತ್ತ ಪ್ರಾಂತದ ಯುನಾನ್ ಪ್ರದೇಶದಲ್ಲಿ. ಇಲ್ಲಿನ 350 ಚದರ್ ಕಿ.ಮೀವರೆಗೆ ಅರಣ್ಯ ವಿಸ್ತರಿಸಿಕೊಂಡಿದೆ. ಅಂದರೆ 96 ಸಾವಿರ ಎಕರೆಯಷ್ಟು ಜಾಗದಲ್ಲಿ ಕೇವಲ ಕಲ್ಲಿನ ಅರಣ್ಯವೇ ತುಂಬಿಕೊಂಡಿದೆ!


 ಜಗತ್ತಿನ ಮೊದಲ ಅದ್ಭುತ
ಈ  ರಚನೆಯನ್ನು  ಹಳೆಯ ಪ್ರಪಂಚದ ಅದ್ಭುತಗಳಲ್ಲಿ ಮೊದಲನೆಯದಾಗಿ ಗುರುತಿಸಾಲಾಗಿದೆ. ಸದ್ಯ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿ ಸಂರಕ್ಷಿಸಲಾಗುತ್ತದೆ. ಸ್ಟೋನ್ ಫಾರೆಸ್ಟ್ ಎಂದೇ ಪ್ರಸಿದ್ಧಿ ಪಡೆದಿರುವ ಈ ಪ್ರದೇಶ  ಸಮುದ್ರ ಮಟ್ಟದಿಂದ ಸುಮಾರು  1600 ಅಡಿಯಿಂದ 1900 ಅಡಿಯ ಎತ್ತರದಲ್ಲಿದೆ. ಸುಮಾರು 5 ರಿಂದ 30 ಮೀಟರ್ ತನಕ ಎತ್ತರವಾಗಿರುವ ಕಲ್ಲಿನ ರಚನೆಗಳು ಒಂದರ ಪಕ್ಕ ಒಂದು ನಿರ್ಮಾಣಗೊಂಡಿವೆ. ಪ್ರತಿಯೊಂದು ರಚನೆಯು ಭಿನ್ನವಾಗಿದ್ದು, ಅವುಗಳಲ್ಲಿ ಅನೇಕ ಮರಗಳ ಆಕಾರ, ಮನುಷ್ಯನ ಆಕಾರ, ಪ್ರಾಣಿಗಳ ಆಕಾರದಲ್ಲಿವೆ. ಸುಮಾರು 270 ದಶ ಲಕ್ಷ ವರ್ಷಗಳ ಹಿಂದೆ ಸುಣ್ಣದ ಕಲ್ಲಿನಿಂದ ಈ ಅರಣ್ಯ ನಿರ್ಮಾಣಗೊಂಡಿದೆ ಎಂದು  ಹೇಳಲಾಗಿದೆ.

ಸಾಂಪ್ರದಾಯಿಕ ಆಚರಣೆ:
ಇಂತಹ ಕಲ್ಲಿನ ಅರಣ್ಯ ಇರುವುದು ಜಗತ್ತಿಗೆ ಗೊತ್ತಾಗಿದ್ದು 13 ರಿಂದ 16ನೇ ಶತಮಾನದವರೆಗೆ ಚೀನಾವನ್ನು ಆಳಿದ ಮಿಂಗ್ ಸಾಮರ್ಾಜ್ಯದ ಅವಧಿಯಲ್ಲಿ. ಇಲ್ಲಿನ  ಸ್ಥಳೀಯ ಸಾನಿ ಜನಾಂಗ ಪ್ರತಿ ವರ್ಷ ಜೂನ್ 24ರಂದು ದೀಪಗಳನ್ನು ಬೆಳಗುವ ಮೂಲಕ ಸ್ಟೋನ್ ಫೆಸ್ಟಿವಲ್ ಆಚರಿಸುವ ಸಂಪ್ರದಾಯ ರೂಢಿಯಲ್ಲಿದೆ. ಆ ದಿನ ವಿವಿಧ ಸಾಂಪ್ರದಾಯಿಕ ಕ್ರೀಡೆಗಳನ್ನು ಆಡಲಾಗುತ್ತದೆ. ಅಲ್ಲದೇ ಇದೊಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕಲ್ಲಿನ ಸೌಂದರ್ಯಕ್ಕೆ ಬೆರಗಾಗುತ್ತಾರೆ.

ಕಲ್ಲಿನ ಅರಣ್ಯದ ವಿಶೇಷತೆ
  •  ನೆಲದಡಿಯಲ್ಲಿ ಜಲಪಾತ
ಈ ಅರಣ್ಯದ ವಿಶೇಷತೆಯೆಂದರೆ, ಮಳೆಯ ರಭಸಕ್ಕೆ ಕಲ್ಲುಗಳು ಕರಗಿ ನೆಲದ ಅಡಿಯಲ್ಲಿ ಅನೇಕ ಸುರಂಗಗಳು, ಕೆರೆಗಳು, ಜಲಪಾತ, ಜಲಾಶಯಗಳು ನಿರ್ಮಾಣವಾಗಿದೆ.
  • ಗುಪ್ತ ಸರೋವರ
ಗುಪ್ತಗಾಮಿನಿಯಾಗಿ ಹರಿಯುವ  5 ನದಿಗಳನ್ನು ಈ ಅರಣ್ಯ ಹೊಂದಿದೆ. ಲೆಕ್ಕವಿಲ್ಲದಷ್ಟು ಕಲ್ಲಿನ ಕಂಬ, ಕಲ್ಲಿನ ಮೊಗಸಾಲೆ ( ಕಿರು ದಾರಿ)ಗಳನ್ನು ಅರಣ್ಯದಲ್ಲಿ ಕಾಣಬಹುದು.ಚಿಕ್ಕ ಚಿಕ್ಕ ದ್ವೀಪ
ಇಲ್ಲಿ ನಿರ್ಮಾಣಗೊಂಡಿರುವ ಸರೋವರಗಳು ಒಟ್ಟು 50 ದಶಲಕ್ಷ ಘನ ಮೀಟರ್ನಷ್ಟು ಶುದ್ಧ ನೀರನ್ನು ಹಿಡಿದಿಟ್ಟುಕೊಂಡಿದೆ. ಈ ಅರಣ್ಯ 96 ಸಾವಿರ ಎಕರೆಯಷ್ಟು ವಿಸ್ತಾರವಾಗಿದೆ. ನೀರಿನ ಮಧ್ಯೆಯೇ ಕಲ್ಲಿನ ಅರಣ್ಯ ತಲೆ ಎತ್ತಿರುವುದರಿಂದ ಅವು ಚಿಕ್ಕ ಚಿಕ್ಕ ದ್ವೀಪಗಳಂತೆ ಕಂಡುಬರುತ್ತದೆ. 
  • ಮುಳುಗುವ ಸುರಂಗ
ಇಲ್ಲಿ ಎರಡು ನಿಮಿಷ ಮಳೆ ಬಿದ್ದರೂ ಅಂತರ್ಗತವಾಗಿರುವ ಸುರಂಗಗಳು ಕಾಲ ಸಂಪೂರ್ಣ ಮುಚ್ಚಿಬಿಡುತ್ತದೆ. ಮತ್ತೆ ಸುರಂಗ ತೆರೆದುಕೊಳ್ಳಲು 30 ನಿಮಿಷ ಹಿಡಿಯುತ್ತದೆ. 
  • ಕಲ್ಲಿನ ಪ್ರತಿಬಿಂಬ
ಪ್ರವಾಸಿಗರಿಗೆ ಈ ಅರಣ್ಯದಲ್ಲಿ 2 ತಾಸು ಮಾತ್ರ ಸುತ್ತಾಡಲು ಅವಕಾಶ. ನದಿಗಳ ಮೇಲೆ ಬೀಳುವ ಕಲ್ಲಿನ ಕಂಬಗಳ ಪ್ರತಿಬಿಂಬ ಪ್ರವಾಸಿಗರನ್ನು  ಸೂಜಿಗಲ್ಲಿನಂತೆ ಸೆಳೆಯುತ್ತದೆ.
  • ವಾಲಿನಿಂತಿರುವ ಕಲ್ಲು
ಇಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಅನೇಕ ಕಲ್ಲುಗಳು ವಾಲಿಕೊಂಡಿದ್ದು, ಮೈಮೇಲೆ ಬಿಳುತ್ತಿರುವಂತೆ ಭಾಸವಾಗುತ್ತದೆ.
 

Sunday, May 5, 2013

ಅಮೆರಿಕದ ಸ್ವಾತಂತ್ರ್ಯ ಪ್ರತಿಮೆ

ಅಮೆರಿಕನ್ನರ ಹೆಮ್ಮೆಯ ಹೆಗ್ಗುರುತು, ಆಶಯದ ಪ್ರತೀಕ ಸ್ವಾತಂತ್ರ್ಯ ಪ್ರತಿಮೆ. ಕಡಲ ಮಾರ್ಗದಲ್ಲಿ ಬಂದವರಿಗೆ ದಾರಿತೋರುವ, ಮಂಕು ಕವಿದ ಮನದಲ್ಲಿಬೆಳಕು ಮೂಡಿಸುವ, ಹೊಸಬಾಳಿನ ಆಸೆ ಚಿಗುರಿಸುವ ಈ ಪ್ರತಿಮೆ ನಾವಿಕರಿಂದ ''ಲೇಡಿ ಲಿಬರ್ಟಿ'' ಅಥವಾ ಸ್ವಾತಂತ್ರ್ಯ ಮಹಿಳೆ ಎಂದು ಕರೆಸಿಕೊಂಡಿದೆ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತ ಎಂತಲೂ ಕರೆಯಲಾಗುತ್ತದೆ. 



ಸ್ವಾತಂತ್ರ್ಯದ ಪ್ರತೀಕ
ಅಮೆರಿಕ ಸಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷನೆಯ ಶತಮಾನೋತ್ಸವದ ಅಂಗವಾಗಿ 1886ರ ಅಕ್ಟೊಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು.
ನ್ಯೂಯಾರ್ಕ ಮತ್ತು ನ್ಯೂಜೆರ್ಸಿ ರಾಜ್ಯಗಳ ಮಧ್ಯದ ಹಡ್ಸನ್ ನದಿಯ ನಡುವೆ ಇರುವ ಪುಟ್ಟ ಲಿಬಟರ್ಿ ದ್ವೀಪದಲ್ಲಿ ಮುಗಿಲೆತ್ತರಕ್ಕೆ ಸ್ವಾತಂತ್ರ್ಯ ಜ್ಯೋತಿಯನ್ನು ಎತ್ತಿಹಿಡಿದಿರುವ ಅಮೆರಿಕದ ಹೆಮ್ಮೆಯ ಹೆಗ್ಗುರುತಾಗಿ ಈ ಪ್ರತಿಮೆ ನಿಮರ್ಾಣಗೊಂಡಿದೆ. ಅಮೆರಿಕ ಸ್ವಾತಂತ್ರ್ಯಗಳಿಸಿದ ಧ್ಯೋತಕವಾಗಿ ಫ್ರಾನ್ಸ್ ಸ್ನೇಹಪೂರ್ವಕವಾಗಿ ಲೋಕ ವಿಖ್ಯಾತ ಕೊಡುಗೆಯೊಂದನ್ನು ನೀಡಲು ಮುಂದಾಯಿತು. ಅದರ ಫಲವೇ ಈ ಜಗತ್ ವಿಖ್ಯಾತ ಕಂಚಿನ ಸ್ವಾತಂತ್ರ್ಯ ಪ್ರತಿಮೆ. ಸ್ವಾತಂತ್ರ್ಯದ ಕಿಡಿಯನ್ನು ಜನರಲ್ಲಿ ಹೊತ್ತಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ಈ ಯೋಜನೆಗೆ ಮೂಹೂರ್ತರೂಪ ಬಂದಿದ್ದು 1871ರಲ್ಲಿ ಫ್ರೆಡರಿಕ್ ಅಗಷ್ಟೆ ಬಾರ್ತೋಲ್ಡಿ ಇದರ ಶಿಲ್ಪಿ. 151 ಅಡಿ ಎತ್ತರದ ಕಂಚಿನ ಪ್ರತಿಮೆ ಇದಾಗಿದ್ದು, ಒಟ್ಟು ಎತ್ತರ 305 ಅಡಿ. ವಿಶ್ವದ ಅತಿ ಎತ್ತರದ ಕಲಾಕೃತಿಗಳಲ್ಲಿ ಇದು ಕೂಡಾ ಒಂದೆನಿಸಿದೆ.

ನಿರ್ಮಾಣಗೊಂಡಿದ್ದು ಹೇಗೆ?

ಪ್ರತಿಮೆ ನಿರ್ಮಾಣಕ್ಕಾಗಿ ಪ್ರಾನ್ಸ್ ಮತ್ತು ಅಮೆರಿಕನ್ ಸಮಿತಿಯೊಂದನ್ನು ರಚಿಸಲಾಯಿತು. ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಶಿಲ್ಪಿ ಫ್ರೆಡರಿಕ್ ಅಗಸ್ಟೆ ಬಾತರ್ತೋಡಿಯನ್ನು ಅಮೆರಿಕಕ್ಕೆ ಕಳುಹಿಸಿಕೊಡಲಾಯಿತು. ಆತ ನ್ಯೂಯಾರ್ಕ್ ನಲ್ಲಿನ ಕಲಾವಿದರು, ಲೇಖಕರು ರಾಜಕಾರಣಿಗಳ ಜತೆ ಸಮಾಲೋಚನೆ ನಡೆಸಿದ. ಶತಮಾನೋತ್ಸವದ ನೆನಪಿಗಾಗಿ ಪ್ರತಿಮೆ ಸ್ಥಾಪಿಸುವ ಯೋಜನೆ ಎಲ್ಲರ ಗಮನ ಸೆಳೆಯಿತು. ಫ್ರೆಂಚರು ಪ್ರತಿಮೆಯ ನಿರ್ಮಾಣ ವೆಚ್ಚವನ್ನು ಮತ್ತು ಅದರ ಪೀಠದ ಖರ್ಚನ್ನು ಅಮೆರಿಕನ್ನರು ನೀಡಬೇಕೆಂದು ತೀರ್ಮಾನ ಮಾಡಲಾಯಿತು. 10 ಲಕ್ಷ ಡಾಲರ್ ಸಂಗ್ರಹಿಸಿ 151 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಗೊಂಡಿತು. ಸ್ಟೀಲ್ ಮತ್ತು ತಾಮ್ರದಿಂದ ನಿರ್ಮಾಣವಾದ ಈ ಪ್ರತಿಮೆಯ ತೂಕ 225 ಟನ್. ಪ್ರತಿಮೆಯನ್ನು  250 ತುಂಡುಗಳನ್ನಾಗಿ ಮಾಡಿ 200 ಕಟ್ಟಿಗೆ ಪೆಟ್ಟಿಗೆಯಲ್ಲಿ ಹಡಗಿನ ಮೂಲಕ ಅಮೆರಿಕಕ್ಕೆ ಸಾಗಿಸಲಾಯಿತು. ನಂತರ ಪ್ರತಿಮೆಯನ್ನು ಮರು ಜೋಡಿಸಲಾಯಿತು. 151 ಅಡಿ  ಎತ್ತರದ ಪ್ರತಿಮೆಯನ್ನು 154   ಅಡಿ ಎತ್ತರದ ನಕ್ಷತ್ರಾಕಾರ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. 


ಪ್ರತಿಮೆ ಸಾರುವ ಸಂದೇಶ
  • ಪ್ರತಿಮೆ ಬಲಗೈಯಲ್ಲಿ ಪಂಜಿನ ಮಾದರಿಯ ದೀಪವನ್ನು ಎತ್ತಿಹಿಡಿದು ಪೂರ್ವಾಭಿಮುಖವಾಗಿ ನಿಂತಿದೆ.
  •  ಎಡಗೈಯಲ್ಲಿ ಪುಸ್ತಕವಿದೆ. ಅದರ ಮೇಲೆ ಜೂ.4, 1776 ಎನ್ನುವ ಬರಹವಿದೆ. ಅದು ಅಮೆರಿಕ ಸ್ವತಂತ್ರವಾದ ದಿನ.
  •  ತಲೆಯ ಮೇಲಿನ ಸ್ಟೋಲಾ ಎಂಬ ಹೊಳಪಿನ ಕಿರೀಟದಲ್ಲಿ ಏಳು ಕಿರಣಗಳಿವೆ. ಇವು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ.
  • ಕಾಲಬುಡದಲ್ಲಿ ತುಂಡರಿಸಿದ ಸರಪಳಿ ಗುಲಾಮಗಿರಿಯ ನಿಮರ್ಮೂಲನೆಯ ಸಂಕೇತ.

ಪ್ರಮುಖ ಪ್ರವಾಸಿ ತಾಣ:

ಸುಮಾರು ಒಂದು ಕೋಟಿಯಷ್ಟು ಜನ ಈ ಪ್ರತಿಮೆಯತ್ತ ನಿತ್ಯ ಕಣ್ಣು ಹಾಯಿಸುತ್ತಾರೆ. ವಿಶ್ವ ಪಾರಂಪರಿಕ ಸ್ಮಾರಕವಾಗಿಯೂ ಗುರುತಿಸಲಾಗಿದೆ. ಲಿಬರ್ಟಿ ಪ್ರತಿಮೆ ರಾಷ್ಟ್ರ ಲಾಂಛನದಷ್ಟೇ ಪ್ರಖ್ಯಾತ. ಅದರ ಸ್ಮರಣಾರ್ಥ ಅಂಚೆ ಚೀಟಿಗಳು, ನಾಣ್ಯಗಳು, ಕರೆನ್ಸಿ ನೋಟುಗಳನ್ನು ಹೊರತರಲಾಗಿದೆ. ಈ ಸ್ಥಳ ವರ್ಷದ 365ದಿನವೂ ಪ್ರವಾಸಿಗರ ವೀಕ್ಷಣೆಗೆ ಮುಕ್ತ. 1984ರಲ್ಲಿ ಶಿಥಿಲಗೊಂಡಿದ್ದ ಪ್ರತಿಮೆಯನ್ನು  ಲಕ್ಷಾಂತರ ರೂ. ಖರ್ಚುಮಾಡಿ ಪುನರುತ್ಥಾನ ಮಾಡಲಾಯಿತು. ಬಳಿಕ ನೆಲದಿಂದ ಪೀಠದ ಮೇಲಿನ ವರೆಗೆ ಲಿಫ್ಟ ಅಳವಡಿಸಲಾಗಿದೆ. ಅಲ್ಲಿಂದ 344 ಮೆಟ್ಟಿಲುಗಳನ್ನು ಏರಿದರೆ ಪ್ರತಿಮೆಯ ಶಿರೋಭಾಗ ತಲುಪಬಹದು.