ಸಿಂಗಳೀಕ ಮಕಾಕ್ ಸೆಲೆನಸ್ ಪ್ರಜಾತಿಗೆ ಸೇರಿದ ಹಳೆಯ ಪ್ರಪಂಚದ ವಾನರ. ಆದರೆ, ರೂಪದಲ್ಲಿ ಸಿಂಹವನ್ನೇ ಹೋಲುತ್ತದೆ! ಕಪ್ಪು ಮುಖ, ಕುತ್ತಿಗೆಯ ಭಾಗದಲ್ಲಿ ಸಿಂಹದಂತಹ (ಕೇಸರ) ಗಡ್ಡ, ಬಾಲವೂ ಸಿಂಹದ ರೀತಿ. ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಅಪರೂಪದ ಈ ಸಿಂಗಳೀಕಗಳು ನಮ್ಮ ದೇಶ ಹೊರತುಪಡಿಸಿದರೆ ಬೇರೆ ಯಾವ ದೇಶಗಳಲ್ಲಿಯೂ ಕಂಡುಬರುವುದಿಲ್ಲ.
ಸಿಂಗಳೀಕನ ಗುಣ ಸ್ವಭಾವ
ಸಿಂಗಳೀಕಗಳು ತುಂಬಾ ನಾಚಿಕೆಯ ಸ್ವಭಾವದವು. ಇವು ಮರವಾಸಿಗಳು. ನೆಲಕ್ಕೆ ಇಳಿಯುವುದು ತುಂಬಾ ಅಪರೂಪ. ದೈತ್ಯ ಮರಗಳ ಮೇಲೆ 10ರಿಂದ 20 ಸದಸ್ಯರ ಚಿಕ್ಕ ಗುಂಪಿನಲ್ಲಿ ವಾಸಿಸುತ್ತವೆ. ಇದು ಹಗಲಿನಲ್ಲಿ ಎಚ್ಚರದಲ್ಲಿದ್ದು ರಾತ್ರಿ ಮಲಗುವ ಪ್ರಾಣಿ. ಅರಣ್ಯದ ಮಧ್ಯಭಾಗದ ಎತ್ತರದ ಮರಗಳಲ್ಲಿ ವಾಸ ಮಾಡುತ್ತವೆ. ಆಹಾರ ಹುಡುಕುತ್ತ ದಿನಕ್ಕೆ ಸುಮಾರು ಹತ್ತು ಕಿಲೋಮೀಟರ್ ಸಂಚರಿಸುತ್ತವೆ. ಇದರ ದೇಹ ಮತ್ತು ತಲೆಯ ಭಾಗ 42 ರಿಂದ 61 ಸೆಂ.ಮೀ ಉದ್ದವಿರುತ್ತದೆ. ಬಾಲ 25 ಸೆಂ.ಮೀ ಉದ್ದವಿರುತ್ತದೆ. ಸುಮಾರು 10 ಕೇಜಿ ತೂಕ ಹೊಂದಿರುತ್ತದೆ.
ಹೆಣ್ಣಿನ ಗುಂಪಿಗೆ ಗಂಡೇ ಮುಖಂಡ!
ಇವು ಸದಾ ಗುಂಪಾಗಿಯೇ ಇರುತ್ತವೆ. ಒಂದು ಗುಂಪಿನಲ್ಲಿ 20ರಿಂದ 30 ಸಿಂಗಳೀಕಗಳು ಇರುತ್ತವೆ. ಗುಂಪಿಗೆ ಗಂಡು ಮುಖಂಡ. ಆದರೆ, ಗುಂಪಿನಲ್ಲಿ ಹೆಣ್ಣು ಸಿಂಗಳೀಕಗಳ ಸಂಖ್ಯೆಯೇ ಹಚ್ಚು! ಎರಡು ವರ್ಷಕ್ಕೊಮ್ಮೆ ಸಿಂಗಳೀಕಗಳು ಗರ್ಭ ಧರಿಸುತ್ತವೆ. ಒಂದು ಸಿಂಗಳೀಕ ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ. ಬೇರೆ ಕೋತಿಗಳಂತೆ ಇವು ಮನುಷ್ಯರ ವಾಸಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.
ಶತ್ರುಗಳನ್ನು ಕೂಗಿ ಹೆದರಿಸುತ್ತದೆ!
ಇದು ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ತಮ್ಮದೇ ಪ್ರತ್ಯೇಕ ಪಂಗಡಗಳನ್ನು ರಚಿಸಿಕೊಳ್ಳುತ್ತವೆ. ತನ್ನ ಗುಂಪನ್ನು ಪ್ರವೇಶ ಮಾಡದಂತೆ ಇನ್ನೊಂದು ಗುಂಪಿಗೆ ಕೂಗಿ ಹೇಳುತ್ತದೆ. ಶತ್ರುಗಳು ಗೋಚರವಾಗುತ್ತಿದ್ದಂತೆ ಎಚ್ಚರಿಕೆಯ ಕೂಗು ಹಾಕುತ್ತದೆ. ಕೂಗು ಸುಮಾರು ಅರ್ಧ ಕಿ.ಮೀ.ವರಗೆ ಕೇಳಿಸುತ್ತದೆ. ಸಾಮಾನ್ಯವಾಗಿ ಹೆಣ್ಣುಸಿಂಗಳೀಕ ನಾಲ್ಕು ವರ್ಷಕ್ಕೊಮ್ಮೆ ಪ್ರೌಢಾವಸ್ಥೆಗೆ ಬರುತ್ತದೆ. ಮರಿಗಳು ಆರು ತಿಂಗಳವರೆಗೆ ತಾಯಿಯ ಜತೆಯಲ್ಲಿದ್ದು ನಂತರ ಗುಂಪಿನ ಸಂಪರ್ಕ ಕಳೆದುಕೊಳ್ಳುತ್ತದೆ.
ಶಾಕಾಹಾರಿ-ಮಾಂಸಾಹಾರಿ ಪ್ರಾಣಿ
ಸಿಂಗಳೀಕಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎನ್ನುವ ಎರಡು ಪ್ರಭೇದಗಳಿವೆ. ಕಾಡಿನಲ್ಲಿ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಗಳೇ ಇದರ ಮುಖ್ಯ ಆಹಾರ. ಸಸ್ಯಾಹಾರಿ ಸಿಂಗಳಿಕಗಳು 90 ನಮೂನೆಯ ಹಣ್ಣುಗಳನ್ನು ತಿಂದು ಬದುಕುತ್ತವೆ. ಪಶ್ಚಿಮ ಘಟ್ಟದಲ್ಲಿ ದೊರೆಯುವ ಬಗೆನೆ, ಮಾವು, ಪತ್ರೆ, ಹಲಸು, ಮಂಡಿಗೆ, ಕರಿಮಿಟಗ ಮತ್ತಿತರ ಹಣ್ಣುಗಳು ಇವುಗಳಿಗೆ ಇಷ್ಟ. ಮಾಂಸಾಹಾರಿ ಸಿಂಗಳೀಕಗಳು ಕಂಬಳಿಹುಳು, ಓತಿಕ್ಯಾತ, ಅಳಿಲು, ಕಬ್ಬೆಕ್ಕು, ಜೇಡ, ಮಿಡತೆ, ಇರುವೆ ಹಾಗೂ ಗೆದ್ದಲ ಹುಳಗಳನ್ನು ತಿನ್ನುತ್ತವೆ. ಇದರ ಜೀವಿತಾವಧಿ ಸರಿಸುಮಾರು 20 ವರ್ಷ.
ಅಳಿದು ಹೋಗುವ ಅಪಾಯ
ಹಿಂದೊಒಮ್ಮೆ ಪಶ್ಚಿಮ ಘಟ್ಟದಲ್ಲಿ ವಿಪುಲವಾಗಿ ಕಂಡುಬರುತ್ತಿದ್ದ ಸಿಂಗಳೀಕಗಳ ಸಂಖ್ಯೆ ಇಂದು ಗಣನೀಯವಾಗಿ ಕುಸಿದಿದೆ. ಹವಾಗುಣ, ಕಾಡಿನ ಅತಿಕ್ರಮಣ, ಅರಣ್ಯ ನಾಶದಿಂದಾಗಿ ಇವುಗಳ ಸಂತತಿ ಕ್ಷೀಣವಾಗುತ್ತಿದೆ. ಜತೆಗ ಆಹಾರದ ಕೊರತೆಯಿಂದಾಗಿ 3 ರಿಂದ ನಾಲ್ಕು ವರ್ಷಗಳಿಗೊಮ್ಮೆ ಸಂತಾನೋತ್ಪತ್ತಿ ಮಾಡುವ ಹಂತಕ್ಕೆ ತಲುಪಿವೆ. ಹೀಗಾಗಿ ಸಿಂಗಳೀಕಗಳನ್ನು ಅಳಿವಿನ ಅಂಚಿನಲ್ಲಿರುವ ಜೀವಪ್ರಭೇದ ಎಂದು ಪರಿಗಣಿಸಲಾಗಿದೆ. ಈ ಆತಂಕದ ನಡುವೆಯೇ ಖುಷಿಯ ವಿಚಾರ ವೆಂದರೆ, ಇತ್ತಿಚೆಗೆ ಕೈಗೊಳ್ಳಲಾದ ಸಂಶೋಧನೆಯಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ 3000ದಿಂದ 3500 ಸಿಂಗಳೀಕಗಳು ವಾಸವಾಗಿವೆ ಎನ್ನುವುದೇ ಸಮಾಧನಾದ ವಿಷಯ.
ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಕ್ತೆ ಧನ್ಯವಾದಗಳು .ಜೀವರಾಜ್ ಸರ್
ReplyDelete