ಜೀವನಯಾನ

Wednesday, April 3, 2013

ವಿಶ್ವದ ಏಕಮಾತ್ರ ಅಮರ ಜೀವಿ!

ವಿಶ್ವದ ಸಕಲ ಜೀವಜಂತುಗಳಿಗೂ ಹುಟ್ಟಿದ ಮೇಲೆ ಸಾವು ಬಂದೇ ಬರುತ್ತದೆ. ಆದರೆ, ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆ ಜೀವಿ ಅಮರವಾಗುತ್ತದೆ. ಪುರಾಣ ಕಥೆಗಳಲ್ಲಿ ದೇವತೆಗಳಿಗೆ ಅಮರತ್ವವಿದೆ ಎಂದು ಹೇಳಲಾಗಿದೆ.  ಆದರೆ, ಇಂಥದ್ದೊಂದು ಅಮರ ಜೀವಿ ಭೂಮಿಯಲ್ಲಿಯೂ ಇದೆ. ಸಾಗರ ಜೀವಿಯಾದ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ  ( turritopsis nutricula) ಎಂಬ ಹೆಸರಿನ ಲೋಳೆ ಮೀನು (ಜೆಲ್ಲಿ ಫಿಶ್)  ವಿಶ್ವದ ಏಕಮಾತ್ರ
ಅಮರ ಜೀವಿಯಾಗಿದೆ!


 ವೃದ್ಧಾಪ್ಯ  ಎಂಬುದೇ ಇಲ್ಲ!
ಈ ಲೋಳೆ ಮೀನು ಹೈಡ್ರೋಜೋವಾ ಅಕಶೇರುಕ ವರ್ಗಕ್ಕೆ ಸೇರಿದ್ದು ( ಬೆನ್ನುಮೂಳೆ ಇಲ್ಲದ ಪ್ರಜಾತಿ) ಸಾವು ಹತ್ತಿರ ಬರುತ್ತಿದ್ದಂತೆ ತನ್ನ ಜನನಾವಸ್ಥೆಯಾದ ಪಾಲಿಪ್ ಸ್ಥಿತಿಗೆ ಮರಳುತ್ತದೆ. ಅಂದರೆ, ವೃದ್ಧಾಪ್ಯದಿಂದ ನೇರ ಜನನಾವಸ್ಥೆಗೆ. ಈ ಪರಿವರ್ತನೆಗೆ ಟ್ರಾನ್ಸ್ ಡಿಫರೆನ್ಸಿಯೇಶನ್ ಎಂದು ಹೆಸರಿಸಲಾಗಿದೆ. ಈ ಮೂಲಕ ಮತ್ತೆ ಮತ್ತೆ ಬಾಲ್ಯಾವಸ್ಥೆಗೆ ಮರಳಿ ಅಮರತ್ವ ಪಡೆಯುತ್ತದೆ ಈ ಜೆಲ್ಲಿ ಫಿಶ್. ಇತರ ಪ್ರಾಣಿಗಳು ಇದನ್ನು ಕೊಲ್ಲುವವರೆಗೂ ಈ ಕ್ರಿಯೆ ಸತತವಾಗಿ ನಡೆಯುತ್ತಲೇ ಇರುತ್ತದೆ. ವಿಜ್ಞಾನಿಗಳು ಇದುವರೆಗೆ ನಡೆಸಿರುವ ಪರೀಕ್ಷೆಯಲ್ಲಿ ಟುರ್ರಿಟೋಪ್ಸಿಸ್ ನ್ಯೂಟ್ರಿಕ್ಯುಲಾ ನೈಸರ್ಗಿ ಕವಾಗಿ ಸಾವನ್ನಪ್ಪಿದ ಬಗ್ಗೆ ಒಂದೇ ಒಂದು ಉದಾಹರಣೆಯೂ ಲಭ್ಯವಾಗಿಲ್ಲ. ಅಮರತ್ವ ಗುಣ ಹೊಂದಿರುವ ಜೀವಿ ಇದುವರೆಗೆ ಇದೊಂದೇ ಪತ್ತೆಯಾಗಿದ್ದು, ಸಧ್ಯಕ್ಕೆ ಜಗತ್ತಿನ ಏಕಮಾತ್ರ ಜೀವಿಯಾಗಿದೆ.

ಸಂತಾನದ ಬಳಿಕ ಮರುಹುಟ್ಟು!
ಭೂಮಧ್ಯರೇಖೆಯ ಸಮಶೀತೋಷ್ಣ ವಲಯದ ಸಾಗರದಲ್ಲಿ ಕಂಡುಬರುವ ಈ ಲೋಳೆ ಮೀನು ಕೇವಲ ನಾಲ್ಕರಿಂದ ಐದು ಮಿಲಿಮೀಟರ್ ವ್ಯಾಸಹೊಂದಿದೆ. ಕಣ್ಣು ಶುದ್ಧವಾಗಿದ್ದವರು ಬರಿಗಣ್ಣಿನಿಂದಲೂ  ಇದನ್ನು ನೋಡಬಹುದು. ಹೆಚ್ಚಾಗಿ ಈ ಲೋಳೆ ಮೀನು ಆಸ್ಟ್ರೇಲಿಯಾದ ಬಳಿ ಪತ್ತೆಯಾಗಿವೆ. ಸಾಮಾನ್ಯವಾಗಿ ಇತರ ಜೆಲ್ಲಿ ಫಿಶ್ ಗಳು ಸಂತಾನ ಕ್ರಿಯೆಯ ಬಳಿಕ ಸಾವನ್ನಪ್ಪುತ್ತವೆ. ಆದರೆ, ಈ ಅಜರಾಮರ ಜೆಲ್ಲಿಫಿಶ್ನ ವಿಶೇಷವೆಂದರೆ ಇದು ಸಂತಾನ ಕ್ರಿಯೆಯ ಬಳಿಕ ಮರುಹುಟ್ಟು ಪಡೆದುಕೊಳ್ಳುತ್ತದೆ.

ಮರುಹುಟ್ಟಿನ ಹಿಂದಿನ ರಹಸ್ಯವೇನು?
ಟ್ರಾನ್ಸ್ಡಿಫರೆನ್ಸಿಯೇಶನ್ ಪ್ರಕ್ರಿಯೆಯ ಮೂಲಕ ಜೆಲ್ಲಿಫಿಶ್ ಕೋಶಗಳನ್ನು ಅಭಿವೃದ್ಧಿಪಡಿಸುತ್ತದೆ. ಜತೆಗೆ ತನ್ನ ಕೋಶಗಳನ್ನು ಬದಲಾಯಿಸುವ ಸಾಮಥ್ರ್ಯಹೊಂದಿದೆ ಮತ್ತು ತನ್ನ ದೇಹವನ್ನು ನೂತನ ಕೋಶಗಳನ್ನಾಗಿ ಪರಿವರ್ತಿಸುತ್ತದೆ. ಜೆಲ್ಲಿಫಿಶ್ ಪಾಲಿಪ್ (ಬಾಲ್ಯಾವಸ್ಥೆ) ಸ್ಥಿತಿಗೆ ಮರಳುವಾಗ  ಪಾಲಿಪ್ಗಳ ಕಾಲೋನಿಯನ್ನೇ ನಿಮರ್ಮಾಣಮಾಡುತ್ತದೆ. ಈ ಸಮೂಹ ಒಂದಕ್ಕೊಂದು ಅಂಟುಕಂಡು ನೂತನ ಜೀವಿ ಉತ್ಪತ್ತಿಯಾಗುತ್ತದೆ.  ಹೀಗೆ ಮರುಹುಟ್ಟು ಪಡೆದ ಜೀವಿ ಹೊಸ ಸಮೂಹ ರಚಿಸಲು ಆರಂಭಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ. ಹೀಗಾಗಿ ಇದಕ್ಕೆ ಸಾವು ಎಂಬುದೇ ಎದುರಾಗುವುದಿಲ್ಲ. ಈ ಗುಣ ಹಲ್ಲಿ ಮತ್ತು ಸರಿಸೃಪ ಮೊದಲಾದವುಗಳಲ್ಲಿ ಕೊಂಚಮಟ್ಟಿಗೆ ಕಂಡುಬರುತ್ತದೆ. ಹಲ್ಲಿ ಓತಿಕೇತಗಳು ಅಪಾಯ ಕಂಡು ಬಂದಾಗ  ತಮ್ಮ ಬಾಲವನ್ನು ಉದುರಿಸಿ ಓಡುತ್ತವೆ. ಉದುರಿದ ಬಾಲ ವಿಲವಿಲನೆ ಒದ್ದಾಡುವುದನ್ನು ನೋಡಿ ಇದನ್ನೂ ಒಂದು ಜೀವಿ ಎಂದೇ ಭಾವಿಸಿ ಅದರ ಮೇಲೆ ವೈರಿ ದಾಳಿ ನಡೆಸುತ್ತದೆ. ಇತ್ತ ಸುರಕ್ಷಿತವಾದ ಹಲ್ಲಿಗೆ ಕೆಲವು ಸಮಯದಲ್ಲೇ ಹೊಸ ಬಾಲ ಬೆಳೆಯುತ್ತದೆ. ಆದರೆ ಇವು ಕೇವಲ ಒಂದು ಅಂಗವನ್ನು ಮಾತ್ರ ಮರಳಿಸ ಬಲ್ಲವೇ ಹೊರತು ಲೋಳೆ ಮೀನಿನ ತರಹ ಮತ್ತೆ ಹೊಸಜನ್ಮ ಪಡೆಯಲಾರವು.

ವೈಜ್ಞಾನಿಕ ಅಚ್ಚರಿ!
ವಿಜ್ಞಾನಿಗಳಲ್ಲಿ ತೀವ್ರ  ಕುತೂಹಲ ಕೆರಳಿಸಿರುವ ಈ ಲೋಳೆ ಮೀನಿನ ರಹಸ್ಯ ಭೇದಿಸಲು ಪ್ರಯತ್ನ ಸಾಗಿದೆ. ಇದು ಏನಾದರು ಯಶಸ್ವಿಯಾದರೆ ಮಾನವನಿಗೆ ಮರುಹುಟ್ಟು ನೀಡಲು ಸಾಧ್ಯವಾಗದೇ ಹೋದರೂ ಸಾವವನ್ನು ಸ್ವಲ್ಪದಿನದ ಮಟ್ಟಿಗೆ ಮುಂದೂಡಲು ಸಾಧ್ಯವಾಗಬಹುದು.

No comments:

Post a Comment