ಮುಂಗುಸಿಗಳು ವಿಷ ಸರ್ಪದೊಂದಿಗೆ ಕಾದಾಟ ನಡೆಸುವುದಕ್ಕೆ ಪ್ರಸಿದ್ಧಿ. ಆದರೆ, ಸರ್ಪದ ವಿಷವೇಕೆ ಮುಂಗುಸಿಯನ್ನು ಏನೂ ಮಾಡುವುದಿಲ್ಲ? ಹಾವು ಮುಂಗುಸಿಗಳು ಏಕೆ ಕಾದಾಡುತ್ತವೆ? ಎನ್ನುವುದೇ ಕುತೂಹಲ.
ಹಾವು ಮುಂಗುಸಿ ಕಾದಾಟ:
ನಿಜವೇನೆಂದರೆ, ಮುಂಗುಸಿಗಳು ತಾವಾಗಿಯೇ ಬಂದು ಹಾವಿನ ಹತ್ತಿರ ಸುಳಿದಾಡುತ್ತದೆ. ಇದರಿಂದ ಪ್ರಚೋದನೆಗೊಂಡ ಹಾವು ಮುಂಗುಸಿಯನ್ನು ಸಾಯಿಸಿ ಆಹಾರವನ್ನಾಗಿಸಿಕೊಳ್ಳುವ ಸಲುವಾಗಿ ಕಾದಾಟಕ್ಕೆ ಇಳಿಯುತ್ತದೆ. ಆದರೆ, ಮುಂಗುಸಿಗಳು ಹಾವಿಗಿಂತಲೂ ಚುರುಕು. ವೇಗವಾಗಿ ಸರಿದಾಡಿ ಹಾವಿನ ಹೊಡೆತದಿಂದ ತಪ್ಪಿಸಿಕೊಳ್ಳುತ್ತದೆ. ಪದೇ ಪದೇ ವಿಷದ ಹೆಡೆಯನ್ನು ನೆಲಕ್ಕೆ ಬಡಿದುಕೊಂಡು ಸುಸ್ತಾದ ಹಾವಿನ ಮೇಲೆರಗುವ ಮುಂಗುಸಿ ಒಂದೇ ಏಟಿಗೆ ಅದರ ತಲೆಯನ್ನು ಛಿದ್ರಗೊಳಿಸಿಸುತ್ತದೆ!
ಮುಂಗುಸಿ ಸಾಯದಿರಲು ಮತ್ತೊಂದು ಅಂಶವೂ ಕಾರಣ. ಅದೆಂದರೆ, ಮುಂಗುಸಿಗಳು ಸಹ ಹಾವುಗಳಲ್ಲಿರುವಂತೆಯೇ ರಾಸಾಯನಿಕ ಗ್ರಂಥಿಗಳನ್ನು ಹೊಂದಿವೆ. ಅಲ್ಲದೆ ಮೈಮೇಲಿನ ಚರ್ಮ ದಪ್ಪವಾಗಿರುವ ಕಾರಣ ಹಾವಿನ ಕಡಿತ ಇವುಗಳಿಗೆ ತಾಗುವುದಿಲ್ಲ. ಇದರಿಂದಾಗಿ ಹಾನಿನ ನರಘಾತುಕ ವಿಷ ಮುಂಗುಸಿಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ಕೆಲವೊಮ್ಮೆ ಹಾವಿನಿಂದ ಹೊಡೆತ ತಿಂದು ಮುಂಗುಸಿಗಳೇ ಸಾವನ್ನಪ್ಪಿದ ಉದಾಹರಣೆಗಳೂ ಉಂಟು.
ಮುಂಗೂಸಿಯ ದೇಹ ಲಕ್ಷಣ:
ಮುಂಗುಸಿ ನಸು ಬೂದು ಬಣ್ಣವನ್ನು ಹೊಂದಿರುತ್ತದೆ. ಇದೊಂದು ಸಣ್ಣಗಾತ್ರದ ಸಸ್ತನಿಯಾಗಿದ್ದು, ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಜಾತಿಗಳಿವೆ. ಮುಂಗುಸಿಯ ಮುಖ ಮತ್ತು ಶರೀರ ಉದ್ದವಿರುತ್ತದೆ. ಸಣ್ಣ ದುಂಡಗಿನ ಕಿವಿ, ಕಿರಿದಾದ ಪಾದ, ಉದ್ದನೆಯ ಬಾಲ ಹೊಂದಿರುತ್ತದೆ. ಕೆಲವು ಮುಂಗುಸಿಗಳ ಮೈಮೇಲೆ ಎದ್ದು ಕಾಣುವ ಬಿಳಿಯ ಪಟ್ಟೆಗಳಿರುತ್ತದೆ. ಗಾತ್ರದಲ್ಲಿ ಅಳಿಲನ್ನು ಹೋಲುತ್ತೆ. ಇದರ ದಂತ ಪಂಕ್ತಿ ಪುನುಗು ಬೆಕ್ಕಿನಂತಿದೆ. ಆಕಾರದಲ್ಲಿ 10ರಿಂದ 25 ಇಂಚು ದೊಡ್ಡದಾಗಿದ್ದು, 5 ಕೇಜಿಯಷ್ಟು ತೂಕ ಹೊಂದಿರುತ್ತದೆ. ಪ್ರಾದೇಶಿಕ ಪ್ರಾಣಿ ಎನಿಸಿದ ಇವು ನೆಲದೊಳಗೆ ಬಿಲ ತೋಡಿಕೊಂಡು ವಾಸಮಾಡುವುದೇ ಹೆಚ್ಚು. ಇನ್ನು ಕೆಲವು ಮುಂಗುಸಿಗಳು ಸ್ವಲ್ಪ ನೀರಿರುವ ಜಾಗದಲ್ಲಿಯೂ ಕಂಡುಬರುತ್ತದೆ. ಸಾಕಿದ ಮುಂಗುಸಿಗಳು 15 ರಿಂದ 20 ವರ್ಷ ಬದುಕುತ್ತದೆ.
ಹಾವನ್ನು ತಿನ್ನುವುದಲ್ಲ.
ಮುಂಗುಸಿ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂನ್ನೂ ತಿನ್ನುತ್ತದೆ. ಹಕ್ಕಿಗಳ ಮೊಟ್ಟೆಗಳನ್ನು ಒಡೆದು ಅದರಲ್ಲಿನ ಮಾಂಸವನ್ನು ತಿನ್ನುವುದಕ್ಕೂ ಮುಂಗುಸಿ ಹೆಸರುವಾಸಿ. ಅಲ್ಲದೆ ಹಕ್ಕಿ, ಇಲಿ, ಕೀಟಗಳು, ಕಪ್ಪೆ ಮತ್ತು ಹುಳುಗಳನ್ನು ಇದರ ಮೆಚ್ಚಿನ ಆಹಾರ. ಅಲ್ಲದೆ ಹಣ್ಣು ಮತ್ತುಹಣ್ಣಿನ ಬೀಜಗಳನ್ನು ತಿನ್ನುತ್ತದೆ. ವಿಚಿತ್ರವೆಂದರೆ ಹಾವುಗಳನ್ನು ಸಾಯಿಸಿದರೂ ಅದನ್ನು ತಿನ್ನುವುದರಲ್ಲಿ ಮುಂಗುಸಿಗೆ ಆಸಕ್ತಿ ಕಡಿಮೆ. ಚೂರು ಪಾರುತಿಂದು ಹಾಗೇಯೇ ಬಿಡುತ್ತದೆ!
ಮುಂಗುಸಿಯ ಆಮದಿಗೆ ನಿಷೇಧ!ಹಗಲಿನ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಮುಂಗಸಿ ಚುರುಕು ಮತ್ತು ಕುಶಾಗ್ರಬುದ್ಧಿಯುಳ್ಳ ಪ್ರಾಣಿ. ಮುಂಗುಸಿ ಕೆಲವೊಂದು ತಂತ್ರಗಳನ್ನು ಬೇಗನೆ ಕಲಿಯಬಲ್ಲದು. ಇವು ಮಾನುಷ್ಯನೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ಭಾರತದ ಕಂದು ಮುಂಗುಸಿಗಳು ವಿಷ ಸರ್ಪವನ್ನು ಕೊಲ್ಲುವ ಸಾಮರ್ಥ್ಯಕ್ಕೆ ಹೆಸರುವಾಸಿ. ಸರ್ಪ ಮತ್ತು ದುಷ್ಟಜಂತುಗಳ ನಿಯಂತ್ರಣಕ್ಕಾಗಿ ಇತರ ದೇಶಗಳು ಭಾರತೀಯ ಮುಂಗುಸಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ, ಇವು ಇಲಿ, ಕೋಳಿ ಇನ್ನಿತರ ಪ್ರಾಣಿಗಳನ್ನು ಸಹ ಕೊಲ್ಲುವುದರಿಂದ ಅಮೆರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಮುಂಗುಸಿಗಳನ್ನು ಆಮದು ಮಾಡಿಕಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ.