ಜೀವನಯಾನ

Sunday, July 29, 2012

ಸಾಗರದ ಬುದ್ಧಿ ಜೀವಿ ಆಕ್ಟೊಪಸ್

ಸಾಗರದ ಬುದ್ಧಿ ಜೀವಿ ಎಂದು ಆಕ್ಟೊಪಸ್ ಕರೆಸಿಕೊಳ್ಳುತ್ತದೆ. ವಿಲಕ್ಷಣದ ನಡುವಳಿಕೆಯಿಂದಲೇ ತನ್ನನ್ನು ಗುರುತಿಸಿಕೊಂಡಿದೆ. ಸಾಗರದಲ್ಲಿ ತನ್ನನ್ನು ಯಾರೂ ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ಬಂಡೆಗಳ ನಡುವೆ ಅಡಗಿ ಕೂತಿರುತ್ತದೆ. ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ಇವು ವಾಸಿಸುತ್ತವೆ. ಇದು ಸೊಫಾಲೋಪೋಡಾ ವರ್ಗಕ್ಕೆ ಸೇರಿದ ಅಷ್ಟಪದಿ. ತನ್ನ ಉದ್ದನೆಯ ಎಂಟು ಬಾಹುಗಳಿಂದಲೇ ಆಕ್ಟೊಪಸ್ ಹೆಸರುವಾಸಿ. ಇದರ ಬಾಯಿ ಬಾಹುಗಳ ಮಧ್ಯದಲ್ಲಿರುತ್ತದೆ. ಮೈಯಲ್ಲಿ ಅಸ್ತಿಪಂಜರವೇ ಇಲ್ಲದ ಇದರ ಮಾಂಸದ ಮುದ್ದೆಯಂತಹ ದೇಹ ಕರಿದಾದ ಸಂದಿಯಲ್ಲೂ ನುಸುಳಬಲ್ಲದು. ಆಕ್ಟೊಪಸ್ಗಳು ಈಜುವಾಗ ತನ್ನ ಎಂಟು ಕೈಗಳನ್ನು ಹಿಂದಕ್ಕೆ ಎಳೆದುಕೊಂಡು ವೇಗವಾಗಿ ಮುಂದೆ ಸಾಗುತ್ತದೆ.

  • ಕೈಗಳೇ ಎಲ್ಲವನ್ನೂ ಮಾಡುತ್ತದೆ
ಆಕ್ಟೊಪಸ್ಳು ಆಂತರಿಕ ಅಸ್ತಿಪಂಜರ ವಿಲ್ಲದೇ ಬಹುಮಟ್ಟಿಗೆ ಮೃದು ದೇಹವನ್ನು ಹೊಂದಿದೆ. ಸಂಪೂರ್ಣ ದೇಹ ಅದರ ತಲೆಯೇ ಆಗಿರುತ್ತದೆ. ತಲೆ ಬುರುಡೆಯೇಲ್ಲಿರುವ ಕೊಕ್ಕು ಮಾತ್ರ ದೇಹದಲ್ಲಿರುವ ಗಟ್ಟಿ ಭಾಗ. ಜೀವಿಸಲು ಅಗತ್ಯವಿರುವ ಎಲ್ಲಾ ಅವಯವಗಳು ತಲೆಯ ಭಾಗದಲ್ಲಿರುತ್ತದೆ. ಇದರಲ್ಲಿ ಮೂರು ಹೃದಯಗಳೂ ಇವೆ. ಆದರೆ ನರ ಮಂಡಲ ವ್ಯವಸ್ಥೆ ಇರುವುದು ಕೈಗಳಲ್ಲಿ. ಮೂಳೆಯೇ ಇಲ್ಲದ ಕೈಗಳನ್ನು ಹೇಗೆ ಬೇಕಾದರೂ ಬಗ್ಗಿಸಬಲ್ಲದು. ಬಂಡೆಗಳ ನಡುವೆ ತೆವಳುವುದಕ್ಕೂ ಕೈಗಳು ಸಹಕಾರಿ. ಆದರೆ ಕೈಗಳು ಅಷ್ಟೇ ಬಲಿಷ್ಟ. ಪ್ರತಿ ಕೈಗಳಲ್ಲಿ ಎರಡು ಹೀರು ಕೊಳವೆಗಳಿರುತ್ತವೆ. ಬೇಟೆಯನ್ನು ಕೈಗಳಿಂದ ಸುತ್ತುವರಿದು ತಪ್ಪಿಸಿಕೊಳ್ಳದಂತೆ ಮಾಡುತ್ತದೆ. ವಸ್ತುವಿನ ರಚನೆ, ಆಕಾರ, ರುಚಿಯನ್ನು ಸ್ಪರ್ಶದ ಮೂಲಕವೇ ಗೃಹಿಸಬಲ್ಲದು. ಆಕ್ಟೊಪಸ್ ತಾನು ಕಳೆದು ಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುತ್ತದೆ.  

  • ವೈರಿಗೆ ಮಂಕುಬೂದಿ ಎರಚುವ ಗುಣ  
ಆಕ್ಟೊಪಸ್ ತನ್ನ ಎದುರಾಳಿಯ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತನ್ನ ರಕ್ಷಣೆಗಾಗಿ ಹಲವಾರು ತಂತ್ರಗಳನ್ನು ಅನುಸರಿಸುತ್ತದೆ. ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತವೆ. ಮಬ್ಬು ಕವಿಯುವ ಒಂದು ರೀತಿಯ ಬಣ್ಣ ಉಗುಳಿ ಅಥವಾ ಮೈ ಬಣ್ಣ ಬದಲಾಯಿಸಿ ವೈರಿಯಿಂದ ತಪ್ಪಿಸಿಕೊಳ್ಳುತ್ತವೆ. ಆಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ಗಾಢವಾದ ಕಪ್ಪುಶಾಯಿಯನ್ನು ದಟ್ಟವಾದ ಮೋಡದಂತೆ ಹೊರಹಾಕುತ್ತದೆ. ವೈರಿಗೆ ಮಂಕುಬೂದಿ ಎರಚಿ ಅದರ ಕಾರ್ಯಕ್ಷಮತೆ ಕಡಿಮೆ ಮಾಡುತ್ತವೆ. ಆಕ್ಟೊಪಸ್ಗಳು ಹೊಡೆದಾಡುವದಕ್ಕಿಂತಲೂ ವೈರಿಯಿಂದ ನುಣುಚಿಕೊಳ್ಳುವುದೇ ಹೆಚ್ಚು. ಅಪಾಯ ಎದುರಾದರೆ 25 ಮೈಲಿ ವೇಗದಲ್ಲಿ ಅವು ಪಾರಾಗುತ್ತದೆ. ಅಕ್ಟೊಪಸ್ ಗಳು ಚುರುಕು ಬುದ್ಧಿ ಉಳ್ಳವುಗಳು. ಕಡಿಮೆ ಮತ್ತು ದೀರ್ಘಕಾಲಿಕ ನೆನಪಿನ ಶಕ್ತಿ ಹೊಂದಿವೆ. ಹುಟ್ಟಿನಿಂದ ಬಂದಿದ್ದಕ್ಕಿಂತ ಸ್ವಂತದ್ದಾದ ಏನನ್ನಾದರೂ ಅಕ್ಟೊಪಸ್ ಕಲಿಯುತ್ತದೆ. ತಂದೆ ತಾಯಿಗಳಿಂದ ಬೇಗನೆ ದೂರವಾಗುವ ಇವು ಅವುಗಳಿಂದ ಏನನ್ನೂ  ಕಲಿಯುವುದಿಲ್ಲ. ಕಡಿಮೆ ಆಯಸ್ಸೇ ಇವುಗಳ ಕಲಿಕಾ ಸಾಮರ್ಥ್ಯಕ್ಕೆ ಮಿತಿ ಒಡ್ಡಿದೆ. ಆಕ್ಟೊಪಸ್ಗಳು ಸಾಮಾನ್ಯವಾಗಿ 2 ವರ್ಷವಷ್ಟೇ ಬದುಕುತ್ತವೆ. ಗಂಡು ಆಕ್ಟೊಪಸ್ ಸಂತಾನೋತ್ಪತ್ತಿಗೆ ಕಾರಣವಾಗುವ ಹಾಮರ್ಮೋನನ್ನು ಸೃವಿಸಿದ 2 ತಿಂಗಳಲ್ಲೇ ಪ್ರಾಣ ಬಿಡುತ್ತದೆ. ಆಕ್ಟೊಪಸ್ಗಳು ತೀರಾ ಸೂಕ್ಷ್ಮ ದೃಷ್ಟಿ ಹೊಂದಿವೆ. ಇವು ನೀಲಿ ರಕ್ತದ ಜೀವಿಗಳು. ಆಕ್ಟೊಪಸ್ನಲ್ಲಿ ಸುಮಾರು 200 ಜಾತಿಗಳಿವೆ.
  • ಭವಿಷ್ಯಕಾರನ ಬಿರುದು
ಆಕ್ಟೊಪಸ್ ಭವಿಷ್ಯಕಾರ ಎಂದು ಹೆಸರುಗಳಿಸಿದೆ. ಇವು ತಮ್ಮ ಅತಿಮಾನುಷ ಬುದ್ಧಿ ಶಕ್ತಿಯಿಂದಾಗಿ ಮುಂದಿನದನ್ನು ಪೂರ್ವದಲ್ಲೇ ಗ್ರಹಿಸುತ್ತವೆ ಎನ್ನುವ ನಂಬಿಕೆ ಇದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಆಕ್ಟೊಪಸ್ ಗಳ ಕಲಿಕಾ ಸಾಮರ್ಥ್ಯ ವಿಜ್ಞಾನಿಗಳನ್ನೂ ಅಚ್ಚರಿಗೊಳಿಸಿದೆ

Monday, July 23, 2012

ಆಸ್ಟ್ರಿಚ್ ಎಂಬ ಪರಾಕ್ರಮಿ

ಪಕ್ಷಿ ಸಂಕುಲದಲ್ಲಿ ಈ ಆಸ್ಟ್ರಿಚ್ ಅತ್ಯಂತ ಶಕ್ತಿಶಾಲಿ. ಗಾತ್ರದಲ್ಲಿ ಇದನ್ನು ಮೀರಿಸುವವರು ಯಾರೂ ಇಲ್ಲ. ಇದನ್ನು ಕೇವಲ ಪಕ್ಷಿ ಎಂದು ತಿಳಿದುಕೊಳ್ಳುವ ಹಾಗಿಲ್ಲ. ಇದು ತನಗಿಂತ ಹತ್ತು ಪಟ್ಟು ದೊಡ್ಡದಾದ ಪ್ರಾಣಿಯನ್ನೂ ಸಹ ಹೆದರಿಸಬಲ್ಲದು! ಆಸ್ಟ್ರಿಚ್ ಗೆ ಹಾರಲು ಬರುವುದಿಲ್ಲ ನಿಜ. ಆದರೆ ಅದರ ಬಲವೇನಿದ್ದರೂ ಕಾಲುಗಳಲ್ಲಿ. ಉದ್ದನೆಯ ಕಾಲುಗಳ ಮೇಲೆ ನಿಂತಾಗ ಸುಮಾರು 8 ಅಡಿಗಳಷ್ಟು ಎತ್ತರಕ್ಕೆ ಕತ್ತೆತ್ತಿ ನೋಡುತ್ತದೆ. ಕತ್ತು ಸಹ ಬಲು ಉದ್ದವಾಗಿದೆ.

 
  • ಹೊಟ್ಟೆಯೊಳಗೆ ಬೀಸುಕಲ್ಲು
ಆಸ್ಟ್ರಿಚ್ಗಳಿಗೆ ನೀರಿನ ಅವಶ್ಯಕತೆ ಕಡಿಮೆ. ಅಪರೂಪಕ್ಕೆ ಎಂಬಂತೆ ನೀರು ಕುಡಿಯುತ್ತವೆ. ಅವು ತಿನ್ನುವ ಸಸ್ಯಗಳಿಂದಲೇ ದೇಹಕ್ಕೆ ಬೇಕಾದ ನೀರಿನ ಅಂಶ ಪಡೆದುಕೊಳ್ಳುತ್ತವೆ. ಇವುಗಳ ಬಾಯಲ್ಲಿ ಹಲ್ಲಿಲ್ಲ. ಆದರೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಬಾಯಿಚಪಲ. ಸೊಪ್ಪು, ಚಿಕ್ಕಪುಟ್ಟ ಸಸ್ಯ. ಸಸ್ಯದ ಬೇರು, ಕ್ರಿಮಿಕೀಟ, ಹಲ್ಲಿ, ಮಿಡತೆ ಏನಾದರೂ ಸರಿ. ತಿಂದು ಹೊಟ್ಟೆಯಲ್ಲಿನ ಚೀಲದಲ್ಲಿ ಸಂಗ್ರಹಿಸುತ್ತದೆ. ಇದರ ಜತೆ ಚಿಕ್ಕ ಕಲ್ಲಿನ ಹರಳುಗಳನ್ನು ಇನ್ನುತ್ತದೆ. ಕಲ್ಲುಗಳ ಸಹಾಯದಿಂದ ಆಹಾರವನ್ನು ಬೀಸುಕಲ್ಲಿನಂತೆ ಅರೆದು ಪಚನ ಗೊಳಿಸುತ್ತದೆ. ವಯಸ್ಸಿಗೆ ಬಂದ ಆಸ್ಟ್ರಿಚ್ ಹಕ್ಕಿಯ ಹೊಟ್ಟೆಯಲ್ಲಿ ಒಂದು ಕೆ.ಜಿಯಷ್ಟು ಕಲ್ಲು ಸಂಗ್ರಹವಾಗಿರುತ್ತದೆ.
  • ತಂಟೆಗೆ ಬಂದರೆ ಹುಷಾರ್!
ಈ ಹಕ್ಕಿ ರಟೀಟ್ ಎಂಬ ಗುಂಪಿಗೆ ಸೇರಿವೆ. ಬೆಳೆದ ಆಸ್ಟ್ರಿಚ್ ಸುಮಾರು 93ರಿಂದ 130 ಕೆ.ಜಿಗಳಷ್ಟು ತೂಗುತ್ತದೆ. ಆಸ್ಟ್ರಿಚ್ 75 ವರ್ಷಗಳ ಕಾಲ ಬದುಕಬಲ್ಲದು. ಆಸ್ಟ್ರಿಚ್ ನಕಣ್ಣು  ಇತರ ಎಲ್ಲಾ ಪ್ರಾಣಿಗಳಿಗಿಂತಲೂ ದೊಡ್ಡದು. ಇದರ ಕಣ್ಣು 2 ಇಂಚು ಇರುತ್ತದೆ. ಮೈಮೇಲೆ ಸುಂದರ ಗರಿಗಳನ್ನು ಹೊಂದಿರುತ್ತದೆ. ಇವುಗಳ ದೃಷ್ಟಿ ಮತ್ತು ಸಂವೇದನೆ ತುಂಬಾ ತೀಕ್ಷ್ಣ. ದೂರದಿಂದಲೇ ತನ್ನ ವೈರಿಯನ್ನು ಅಥವಾ ತನಗೆ ಎದುರಾಗುವ ಅಪಾಯ ಗುರುತಿಸುತ್ತದೆ. ರೆಕ್ಕೆಗಳು ಅದರ ದೇಹದ ಗಾತ್ರಕ್ಕೆ ಹೋಲಿಸಿದರೆ ತೀರಾ ಚಿಕ್ಕವು. ಇವು ತಮ್ಮ ರೆಕ್ಕೆಗಳಿಂದ ದೇಹದ ಸಮತೋಲನ ಕಾಯ್ದು ಕೊಳ್ಳುತ್ತವೆ. ಭಾವನೆಗಳನ್ನು ಮತ್ತು ಸಾಂಗತ್ಯ ಬೇಕೆಂಬ ಸೂಚನೆ ನೀಡುವುದು ರೆಕ್ಕೆಯಿಂದಲೇ. ಅಲ್ಲದೇ ದೇಹದ ಭಾರ ಕೂಡಾ ವಿಪರೀತ. ಹೀಗಾಗಿಯೇ ಆಸ್ಟ್ರಿಚ್ ಗೆಹಾರಲು ಬರುವುದಿಲ್ಲ. ಆದರೆ ಗಂಟೆಗೆ 70 ಕಿ.ಮೀ ವೇಗದಲ್ಲಿ ಓಡುವ ಶಕ್ತಿ ಹೊಂದಿದೆ. ಎಷ್ಟು ದೂರ ಕ್ರಮಿಸಿದರೂ ಓಟದ ವೇಗ ಕಡಿಮೆಯಾಗುವುದಿಲ್ಲ. ಇವು ಹೆಚ್ಚೆ ಇಡುವುದೇ 10 ರಿಂದ 15 ಅಡಿ ದೂರಕ್ಕೆ! ಪ್ರತಿ ಪಾದಕ್ಕೆ 2 ಗೊರಸನ್ನು ಹೊಂದಿರುವ ಇವುಗಳ  ಒದೆತ ತುಂಬಾ ಅಪಾಯಕಾರಿ. ಆಸ್ಟ್ರಿಚ್ ಗಳ ಒದೆತ ಮನುಷ್ಯರನ್ನೂ ಸಾಯಿಸುತ್ತದೆ. ತನ್ನ ಬದ್ಧ ವೈರಿ ಸಿಂಹನ್ನೂ ಒದ್ದು ಸಾಯಿಸುತ್ತದೆ. ಹಿಗಾಗಿ ಇದರ ತಂಟೆಗೆ ಯಾರೂ ಹೋಗುವುದಿಲ್ಲ.   

  • ಬಲು ದೊಡ್ಡ ಇದರ ಮೊಟ್ಟೆ
ಆಸ್ಟ್ರಿಚ್ಗಳ ಮೊಟ್ಟೆ ಪಕ್ಷಿಗಳ ಮೊಟ್ಟೆಗಳಲ್ಲೇ ಅತ್ಯಂತ ದೊಡ್ಡ ಗಾತ್ರದ್ದು. ಕೋಳಿಮೊಟ್ಟೆಗಿಂತ 10 ಪಟ್ಟು ದೊಡ್ಡದಾಗಿರುತ್ತದೆ. ಇದರ ಸುತ್ತಳತೆ 15 ರಿಂದ 18 ಇಂಚು. 1 ರಿಂದ 1.5 ಕೆ.ಜಿಯಷ್ಟು ತೂಕವಿರುತ್ತದೆ. ಮೊಟ್ಟೆಯಿಟ್ಟ 35 ರಿಂದ 45 ದಿನಗಳ ನಂತರ ಮರಿ ಹೊರಬರುತ್ತದೆ. ಮೊಟ್ಟೆಗಳಿಗೆ ಕಾವು ನೀಡಿ ಆರೈಕೆ ಮಾಡುವುದು ಕೇವಲ ಹೆಣ್ಣು ಆಸ್ಟ್ರಿಚ್ ಗಳ ಕೆಲಸವಲ್ಲ. ಈ ಕಾರ್ಯದಲ್ಲಿ ಗಂಡು ಆಸ್ಟ್ರಿಚ್ ಗಳೂ ಸಹಕರಿಸಿ ರಾತ್ರಿ ಸಮಯದಲ್ಲಿ ಮೊಟ್ಟೆಗೆ ಕಾವು ನೀಡುತ್ತವೆ. ಮೊಟ್ಟೆಯೊಡೆದು ಮರಿಯಾದ ನಂರತವೂ ಆರೈಕೆಯಲ್ಲಿ  ಇಬ್ಬರಿಗೂ ಸಮಪಾಲು. ಆಸ್ಟ್ರಿಚ್ ಮೊಟ್ಟೆಗಳನ್ನು ಆಹಾರವಾಗಿಯೂ ಬಳಸಬಹುದು. ಒಂದು ಮಟ್ಟೆ 2 ಸಾವಿರ ಕೆಲೊರಿಯಷ್ಟು ಶಕ್ತಿ ಒದಗಿಸುತ್ತದೆ.

ಆಫ್ರಿಕಾದ ಮರುಭೂಮಿಯಲ್ಲಷ್ಟೇ ವಾಸಮಾಡುವ ಆಸ್ಟ್ರಿಚ್ ಚರ್ಮ ಮತ್ತು ಮಾಂಸಕ್ಕೆ ಎಲ್ಲಿಲ್ಲದ ಬೇಡಿಕೆ. ಇಂದು ಆಸ್ಟ್ರಿಚ್ ಸಾಕಣೆ ಒಂದು ಉದ್ಯಮವಾಗಿ ಬೆಳೆಯುತ್ತದೆ. ಆತಂಕದ ವಿಷಯವೆಂದರೆ ಶಕ್ತಿಶಾಲಿ ಎನಿಸಿಕೊಂಡ ಈ ಪಕ್ಷಿಯ ಸಂಕುಲ ಅಪಾಯದ ಅಂಚಿನಲ್ಲಿದೆ.




Monday, July 16, 2012

ಲಂಡನ್ ಗೋಪುರ ಸೇತುವೆ

ಲಂಡನ್ ಗೋಪುರ ಸೇತುವೆ ಇಂಗ್ಲೆಂಡ್ ನಗರದ ಪ್ರಮುಖ ಹೆಗ್ಗುರುತು. ಥೇಮ್ಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸಮತೋಲನದ ತೂಗು ಸೇತುವೆ. ಸಮಭಾಗವಾಗಿ ವಿಭಾಗಿಸಬಹುದಾದ ಜಗತ್ತಿನ ಏಕೈಕ ಸೇತುವೆ ಎನ್ನುವ ಪ್ರಸಿದ್ಧಿ ಪಡೆದಿದೆ. ಈ ಬ್ರಿಡ್ಜ್ ತನ್ನ ಸೌಂದರ್ಯದಿಂದಲೇ ಹೆಸರುವಾಸಿ. ಅದ್ಭುತ ಎನಿಸುವಂತ ಇದರ ಇಂಜನಿಯರಿಂಗ್ ವಿನ್ಯಾಸ. ಈ ಎಲ್ಲಾ ಕಾರಣಕ್ಕಾಗಿ ಈ ಸೇತುವೆ ಲಂಡನ್ ನಗರದ ಮೂರ್ತಿವೆತ್ತ ಲಾಂಛನವಾಗಿ ಕಂಗೊಳಿಸುತ್ತಿದೆ. 

 


ನಿರ್ಮಾಣ ವಿನ್ಯಾಸ:
ಇದು ಲಂಡನ್ ಗೋಪುರಕ್ಕೆ ಸನಿಹ ಇರುವ ಕಾರಣ ಇದಕ್ಕೆ ಗೋಪುರ ಸೇತುವೆ ಎಂಬ ಹೆಸರು ಬಂದಿದೆ. ಆದರೆ ಇದನ್ನೇ ಲಂಡನ್ ಸೇತುವೆ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಈ ಸೇತುವೆಯ ನಿರ್ಮಾಣ ಕಾರ್ಯ 1886ರಲ್ಲಿ ಆರಂಭವಾಗಿ 8 ವರ್ಷಗಳ ಕಾಲ ಮುಂದುವರಿದು 1894ರಲ್ಲಿ ಪೂರ್ಣಗೊಂಡಿತು. 19ನೇ ಶತಮಾನದ ಅಂತ್ಯದ ವೇಳೆಗೆ ವ್ಯಾಪಾರ ಅಭಿವೃದ್ಧಿ ಸಾಧಿಸಿದ್ದ ಇಂಗ್ಲೆಂಡ್ಗೆ ಸಂಪರ್ಕ ಕಲ್ಪಿಸಲು ಇನ್ನೊಂದು ಸೇತುವೆಯ ಅಗತ್ಯ ವಿದ್ದುದರಿಂದ ಗೋಪುರ ಸೇತುವೆ ನಿರ್ಮಿಸಲಾಯಿತು.
 ಆದರೆ ಥೇಮ್ಸ್ ನದಿಯಲ್ಲಿನ ಹಡಗು ಸಂಚಾರಕ್ಕೂ ಅವಕಾಶ ಕಲ್ಪಿಸುವ ಅಗತ್ಯವಿತ್ತು. ಹಿಗಾಗಿ ಎರಡೂ ರೀತಿಯಲ್ಲೂ ಅನುಕೂಲವಾಗುವಂತೆ ಸೇತುವೆಯ ವಿನ್ಯಾಸ ರೂಪಿಸಲಾಯಿತು. ಇದರ ನಿರ್ಮಾಣಕ್ಕೆ ಸುಮಾರು 11 ಸಾವಿರ ಟನ್ನಷ್ಟು ಸ್ಟೀಲ್ ಬಳಸಲಾಗಿದೆ. ಈ ಸೇತುವೆಯ ಎರಡೂ ತುದಿಗಳಲ್ಲಿ ಎರಡು ಗೋಪುರಗಳಿವೆ. ಸೇತುವೆ 244 ಮೀಟರ್ ಉದ್ದವಾಗಿದೆ. ಮೂರು ಭಾಗವಾಗಿ ಈ ಸೇತುವೆಯನ್ನು ವಿಭಾಗಿಸಲಾಗಿದೆ. ಸೇತುವೆಯ ಮೇಲ್ಬಾಗದಲ್ಲಿ ನಡೆದು ಹೋಗಲು ಎರಡು ಸಮಾನಾಂತರ ಕಾಲುದಾರಿಗಳನ್ನು ನಿರ್ಮಿಸಲಾಗಿದೆ.


ಭಾಗಗೊಳ್ಳುವ ಸೇತುವೆ
ಗೋಪುರಗಳ ನಡುವಿನ ಸೇತುವೆಯನ್ನು ಎರಡು ಭಾಗವಾಗಿ ವಿಭಾಗಿಸಲಾಗಿದೆ. ಥೇಮ್ಸ್ ನದಿಯಲ್ಲಿ ದೊಡ್ಡ ಹಡಗುಗಳು ಬಂದಾಗ ಮಧ್ಯದ ಸೇತುವೆಯನ್ನು ಸಮಭಾಗದಲ್ಲಿ ವಿಭಾಗಿಸಿ ಮೇಲಕ್ಕೆ ಏರಿಸಲಾಗುತ್ತದೆ. ಗೋಪುರ ಸೇತುವೆಯನ್ನು 82 ಡಿಗ್ರಿಯಷ್ಟು ಮೇಲೇರಿಸಿ ಹಡಗು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಮುಂಚೆಎಲ್ಲಾ ಪ್ರತಿದಿನವೂ ಈ ಸೇತುವೆಯನ್ನು ಮೇಲಕ್ಕೆ ಎತ್ತಲಾಗುತ್ತಿತ್ತು. ಆದರೆ ಇತ್ತೀಚಿಗೆ ಹಡಗು ಸಂಚಾರ ವಿರಳವಾಗಿರುವುದರಿಂದ ವಾರದಲ್ಲಿ ಎರಡುಬಾರಿ ಮಾತ್ರ ಮೇಲಕ್ಕೆ ಎತ್ತಲಾಗುತ್ತಿದೆ. 24 ಗಂಟೆಗಳ ಮೊದಲೇ ಈ ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ತಲಾ ಒಂದು ಸಾವಿರ ಟನ್ ತೂಕವಿರುವ ಸೇತುವೆಯ ಎರಡೂ ಕಮಾನುಗಳನ್ನು 5 ನಿಮಿಷದಲ್ಲಿ ಮೇಲಕ್ಕೆ ಎತ್ತಲಾಗುತ್ತದೆ. ಸೇತುವೆಯನ್ನು ಮೇಲಕ್ಕೆ ಎತ್ತಿದಾಗ ಗೋಪುರದ ಮೇಲಿರುವ ಕಾಲುದಾರಿಯ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಗೋಪುರದ ಮೇಲೆ ನಿಂತು ಇಂಗ್ಲೆಂಡಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಸೇತುವೆಯ ಸೌಂದರ್ಯ ವೀಕ್ಷಿಸಲು ಮತ್ತು ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಇಂಗ್ಲೆಂಡಿಗೆ ಆಗಮಿಸುತ್ತಾರೆ.


ಉಗಿ ಯಂತ್ರಗಳ ಅಳವಡಿಕೆ
ಸೇತುವೆಯನ್ನು ಮೇಲಕ್ಕೆ ಎತ್ತಲು ಪ್ರಾರಂಭದಲ್ಲಿ ಬೃಹತ್ ಹಬೆಯಂತ್ರ ಅಳವಡಿಸಲಾಗಿತ್ತು. 1974ರಲ್ಲಿ ಇದನ್ನು ಬದಲಿಸಿ ವಿದ್ಯುತ್ ಚಾಲಿತ ಮತ್ತು ಇಂಧನ ಬಳಕೆಯ ಹೈಡ್ರಾಲಿಕ್ ಉಗಿಯಂತ್ರ ಅಳವಡಿಸಲಾಗಿದೆ. ಗೋಪುರ ಸೇತುವೆ ಮೇಲೆತ್ತುವ ಯಂತ್ರ ಇಂಜನಿಯರಿಂಗ್ ಚಮತ್ಕಾರಗಳಲ್ಲಿ ಸೇರ್ಪಡೆಗೊಂಡಿದೆ.

ಸೇತುವೆಯ ನವೀಕರಣ:
2008ರಲ್ಲಿ ಸುಮಾರು 4 ದಶಲಕ್ಷ ಪೌಂಡ್ ವೆಚ್ಚದಲ್ಲಿ ಸೇತುವೆಯ ನವೀಕರಣ ಕಾರ್ಯ ಆರಂಭಿಸಲಾಗಿದೆ. 2012ರಲ್ಲಿ ಈ ಕಾರ್ಯಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೇತುವೆಗೆ ಹೊಸದಾಗಿ ಲೋಹದ ಲೇಪನ ಮಾಡಲಾಗುತ್ತಿದೆ.

ಗೋಪುರ ವಸ್ತು ಪ್ರದರ್ಶನ:
ಇಲ್ಲಿ ಬರುವ ಪ್ರವಾಸಿಗರಿಗೆ ಸೇತುವೆಯ ವಿಕ್ಟೋರಿಯಾ ಯಂತ್ರ ಕೊಠಡಿಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನದಲ್ಲಿ ಚಲನಚಿತ್ರಗಳು, ಸ್ಥಬ್ದಚಿತ್ರಗಳು, ಮತ್ತು ಗೋಪುರ ವಿನ್ಯಾಸದ ಕುರಿತು ವಿವರಿಸಲಾಗುತ್ತದೆ. 1982ರಲ್ಲಿ ಆರಂಭಗೊಂಡ ಈ ವಸ್ತು ಪ್ರದರ್ಶನ 2007ರಲ್ಲಿ 25 ವರ್ಷ ಪೂರೈಸಿದೆ.

ಬಣ್ಣದ ಸೇತುವೆ
ಸೇತುವೆಯ ಈಗಿರುವ ಕೆಂಪು ಬಿಳಿ ಮತ್ತು ನೀಲಿಬಣ್ಣವನ್ನು ಇಂಗ್ಲೆಂಡ್ ರಾಣಿಯ ರಜತ ಮಹೋತ್ಸವದ ಅಂಗವಾಗಿ 1977ರಲ್ಲಿ ಬಳಿಯಲಾಯಿತು. ಮೂಲತಃ ಇದಕ್ಕೆ ಚಾಕಲೇಟಿನ ಕಂದು ಬಣ್ಣ ಬಳಿಯಲಾಗಿತ್ತು.

ರಸ್ತೆ ಸಂಚಾರ
ಗೋಪುರ ಸೇತುವೆ ಇಂದಿಗೂ ಥೇಮ್ಸ್ ನದಿಯಲ್ಲಿ ಜನನಿಬಿಡ ಮತ್ತು ಮಹತ್ವದ ಹಾದಿಯಾಗಿದೆ. ಈ ಸೇತುವೆಯ ಮೇಲೆ ಪ್ರತಿನಿತ್ಯ ಸುಮಾರು 40 ಸಾವಿರ ವಾಹನಗಳು ಸಂಚರಿಸುತ್ತವೆ.

Wednesday, July 11, 2012

ಕಡಲ ಚಿಪ್ಪಿನ ಆಭರಣ

ಸಮುದ್ರದ ತಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಡಲ ಚಿಪ್ಪುಗಳು ಬಿದ್ದಿರುತ್ತವೆ. ಜಗತ್ತಿನ ಎಲ್ಲಾ ಸಮುದ್ರ ತೀರದಲ್ಲೂ ಕಡಲ ಚಿಪ್ಪುಗಳು ಕಾಣಸಿಗುತ್ತವೆ. ಮಣ್ಣಿನಲ್ಲಿ ಹೂತು ಬಿದ್ದಿದ್ದರೂ ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುತ್ತದೆ. ಅವುಗಳನ್ನು ಕಂಡೊಡನೆಯೇ ತೆಗೆದು ಕಿಸೆಯಲ್ಲಿ ಬಚ್ಚಿಟ್ಟುಕೊಳ್ಳಬೇಕು ಎಂದು ಅನಿಸುತ್ತದೆ. ಇವು ಸಮುದ್ರದ ಜಲಚರಗಳಾದ ಚಿಪ್ಪು ಮೀನು, ಬಸವನ ಹುಳು, ಕವಡೆ ಜೀವಿ, ಬೆಳಚು ಮುಂತಾದ ಜೀವಿಗಳ ಹೊರ ಮೇಲ್ಮೈ. ಈ ಪ್ರಾಣಿಗಳು ಸತ್ತನಂತರ ಅಥವಾ ಇತರ ಪ್ರಾಣಿಗಳು ತಿಂದರೆ ಅವುಗಳ ಮೈಗೆ ಅಂಟಿದ್ದ ಚಿಪ್ಪುಗಳು ಕಳಚಿಕೊಂಡು ಸಮುದ್ರ ತಟಕ್ಕೆ ಬಂದು ಬೀಳುತ್ತವೆ. ಈ ಜಲಚರಗಳ ದೇಹ ತುಂಬಾ ಮೃದುವಾಗಿದ್ದರಿಂದ ತಮ್ಮ ರಕ್ಷಣೆಗಾಗಿ ಚಿಪ್ಪನ್ನು ನಿರ್ಮಿಸಿ ಕೊಂಡಿರುತ್ತವೆ.
 
ಕಡಲ ಚಿಪ್ಪಿನ ಜಲಚರಗಳು ಅತ್ಯಂತ ವೈವಿಧ್ಯಮಯ. ಅಷ್ಟೇ ವಿಭಿನ್ನವಾದ ಚಿಪ್ಪುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಜಾತಿಗಳಿವೆ ಎಂದು ಅಂದಾಜಿಸಲಾಗಿದೆ. ಇವು ಮೃದ್ವಂಗಿ ಜಾತಿಗೆ ಸೇರಿದ ಕಡಲ ಜೀವಿಗಳು. ಸಾಮಾನ್ಯವಾಗಿ ಇವು ಒಂದೇ ಕವಾಟ ಹೊಂದಿರುತ್ತವೆ. ಆದರೆ ಬಳಚು ಚಿಪ್ಪಿನ ಜೀವಿಗೆ ಎರಡು ಕವಾಟ. ಒಳಗಿನ ಮಾಂಸವನ್ನು ಭದ್ರವಾಗಿ ಮುಚ್ಚಿರುತ್ತವೆ.

ಚಿಪ್ಪುಗಳು ಹೇಗೆ ನಿರ್ಮಾಣವಾಗುತ್ತವೆ?
ಚಿಪ್ಪುಗಳ ಮೇಲಿನ ಹೊದಿಕೆ ಅತ್ಯಂತ ಸಂಕೀರ್ಣ ರಚನೆ ಹೊಂದಿರುತ್ತದೆ. ಚಿಪ್ಪುಗಳನ್ನು ಕ್ಯಾಲ್ಸಿಯಂ ಕಾಬರ್ೊನೇಟ್, ಆಮ್ಲಜನಕದ ಕೋಶಗಳು ಮತ್ತು ಇತರ ಮಿನರಲ್ಗಳನ್ನು ಬಳಸಿಕೊಂಡು ನಿರ್ಮಿಸುತ್ತವೆ. ತನ್ನ ಸಂಪೂರ್ಣ ದೇಹವನ್ನು ಚಿಪ್ಪಿನೊಳಗೆ ಬಚ್ಚಿಟ್ಟು ಕೊಂಡಿರುತ್ತವೆ. ಕೆಲವೊಮ್ಮೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಚಿಪ್ಪುಗಳನ್ನು ನಿರ್ಮಿಸಿಕೊಂಡಿರುತ್ತವೆ. ಚಿಪ್ಪುಗಳು 1 ಸೆಂಟಿಮೀಟರ್ 20 ಸೆಂಟಿಮೀಟರ್ ನಷ್ಟು ದೊಡ್ಡ ಗಾತ್ರದಲ್ಲಿರುತ್ತವೆ. ಈ ಪ್ರಾಣಿಗಳು ತಿನ್ನುವ ಆಹಾರದ ಮೇಲೆ ಚಿಪ್ಪಿನ ಬಣ್ಣ ಮತ್ತು ರಚನೆ ಇರುತ್ತದೆ. ಅತ್ಯಂತ ಆಳ ಸಮುದ್ರಗಳಲ್ಲಿಯೂ ಕಡಲ ಚಿಪ್ಪುಗಳು ಸಿಗುತ್ತವೆ. ಕಡಲ ಚಿಪ್ಪುಗಳನ್ನು ಹುಡುಕುತ್ತಾ ಹೋದಂತೆ ಅಸಂಖ್ಯಾತ  ವಿನ್ಯಾಸದ ಚಿಪ್ಪುಗಳು ಕಾಣಸಿಗುತ್ತವೆ. ಚಿಪ್ಪುಗಳು ಒಂದೇ ಸಮನೆ ಬೆಳವಣಿಗೆ ಹೊಂದುವುದಿಲ್ಲ. ಬದಲಾಗಿ ಜೀವಿಗಳ ದೇಹಕ್ಕೆ ತಕ್ಕಂತೆ ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತವೆ.   

ಆಭರಣಗಳ ತಯಾರಿಕೆ
ಕಡಲ ಚಿಪ್ಪುಗಳನ್ನು ಬಹಳ ಹಿಂದಿನಿಂದಲೂ ಆಭರಣಗಳನ್ನಾಗಿ ಬಳಸಲಾಗುತ್ತಿದೆ. ಶಿಲಾಯುಗದಲ್ಲಿಯೇ ಚಿಪ್ಪುಗಳನ್ನು ಆಭರಣವಾಗಿ ಬಳಸಿದ ಕುರುಹುಗಳು ಸಿಕ್ಕಿವೆ. ಈ ಚಿಪ್ಪುಗಳಿಂದ ಅತೀ ಕಡಿಮೆ ವೆಚ್ಚದಲ್ಲಿ ಅತ್ಯಂತ ಸುಂದರ ಆಭರಣಳನ್ನು ನಾವೇ ತಯಾರಿಸಿ ಕೊಳ್ಳಬಹುದು. ಚಿಪ್ಪುಗಳನ್ನು ಕಲಾಕೃತಿಗಳ ನಿಮರ್ಾಣಕ್ಕೂ ಬಳಸಲಾಗುತ್ತದೆ. ಮೆನೆಗಳ ಗೋಡೆ, ಬಾಗಿಲುಗಳ ಅಲಂಕಾರಕ್ಕೂ ಇವುಗಳನ್ನು ಬಳಸಲಾಗುತ್ತದೆ. ಕಡಲ ಚಿಪ್ಪಿನ ಕಲಾಕೃತಿಗಳಿಗೆ ಮಾರುಟ್ಟೆಯಲ್ಲಿ ಭಾರೀ ಬೇಡಿಕೆ.

ಚಿಪ್ಪುಗಳ ಬಳಕೆ

 ಆದಿ ಮಾನವರು ಹಣಕ್ಕೆ ಪರ್ಯಾಯವಾಗಿ ಕಡಲ ಚಿಪ್ಪುಗಳನ್ನು ಬಳಸುತ್ತಿದ್ದರು. ಚಿಪ್ಪುಗಳ ಒಳಗೆ ಎಣ್ಣೆಗಳನ್ನು ತುಂಬಿ ದೀಪಗಳನ್ನು ಉರಿಸಲಾಗುತ್ತಿತ್ತು. ಆಯುಧವಾಗಿಯೂ ಇವುಗಳನ್ನು ಬಳಸುತ್ತಿದ್ದರು. ಕಡಲ ಚಿಪ್ಪುಗಳ ಅಘಾದ ರಾಶಿಯಲ್ಲಿ ದೇವಾಲಯಲ್ಲಿ ವಾದ್ಯ ನುಡಿಸಲು ಬಳಸುವ ಶಂಖ ಕೂಡಾ ಒಂದು. ಶಂಖಗಳ ಉಪಯೋಗ ಬಹಳ ಹಿಂದಿನಿಂದಲೂ ಇದೆ. ಬಳಚು ಚಿಪ್ಪಿಗಳ ಮಾಂಸವನ್ನು ಬಳಸಿದ ನಂತರ ಅವುಗಳಿಂದ ಸುಣ್ಣ ತಯಾರಿಸಲಾಗುತ್ತದೆ. ಕಡಲ ಚಿಪ್ಪುಗಳಲ್ಲಿ ಕೆಲವೊಮ್ಮೆ ಮುತ್ತುಗಳೂ ಸೃಷ್ಟಿಯಾಗುತ್ತವೆ. ಕಡಲ ಮುತ್ತುಗಳು ಅತ್ಯಂತ ವಿರಳ ಮತ್ತು ಅಷ್ಟೇ ದುಬಾರಿ. ಚಿಪ್ಪುಗಳು ಅತ್ಯಂತ ದೀರ್ಘಕಾದವರೆಗೂ ಮಣ್ಣಿನಲ್ಲಿ ಹಾಗೆಯೇ ಇರುತ್ತವೆ. 600 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಕಡಲ ಚಿಪ್ಪನ್ನು  ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಮ್ಯಸಿಯಂಗಲ್ಲಿ ಕಡಲ ಚಿಪ್ಪಿನ ವಿವಿಧ ಆಕೃತಿಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಪಗಡೆ ಆಟಕ್ಕೆ ಮತ್ತು ಜ್ಯೋತಿಷವನ್ನು ಹೇಳುವ ಸಲುವಾಗಿ ಕವಡೆಗಳನ್ನು ಉಪಯೋಗಿಸಲಾಗುತ್ತದೆ. ಇವುಗಳ ಮಾಂಸವನ್ನು ಹಸಿಯಾಗಿಯೇ ತನ್ನಬಹುದು. ಮೀನಿನಂತಯೇ ಕಡಲ ಚಿಪ್ಪುಗಳ ಮಾಂಸಕ್ಕೂ ಭಾರೀ ಬೇಡಿಕೆ ಇದೆ.

 

Sunday, July 8, 2012

ಸಾಗರದಲ್ಲಿನ ನಕ್ಷತ್ರಗಳು

ಸಮುದ್ರದ ಜೀವಿಗಳಲ್ಲಿಯೇ ಅತ್ಯಂತ ಆಕರ್ಶಕ ಜೀವಿಯೆಂದರೆ ಅವು ನಕ್ಷತ್ರ ಮೀನುಗಳು. ನಕ್ಷತ್ರ ಮೀನುಗಳನ್ನು ಸಾಗರದಲ್ಲಿನ ನಕ್ಷತ್ರ-ಸೀ ಸ್ಟಾರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇವು ನೋಡಲು ನಕ್ಷತ್ರಗಳಂತೆಯೇ ಕಾಣಿಸುತ್ತವೆ. ದ್ರುವ ಸಮುದ್ರ ಸೇರಿದಂತೆ ಜಗತ್ತಿನ ಎಲ್ಲಾ ಸಮುದ್ರಗಳಲ್ಲಿಯೂ ನಕ್ಷತ್ರ ಮೀನುಗಳು ಇವೆ. ಇವುಗಳಲ್ಲಿ ಸುಮಾರು 2 ಸಾವಿರ ಜಾತಿಗಳಿವೆ. ನಕ್ಷತ್ರ ಮೀನುಗಳು ಉಪ್ಪು ನೀರಿನಲ್ಲಿ ಮಾತ್ರ ವಾಸಿಸುತ್ತವೆ. ಹೀಗಾಗಿ ಸಿಹಿನೀರಿನ ನದಿ, ಕೊಳಗಳಲ್ಲಿ ಕಾಣಸಿಗುವುದಿಲ್ಲ. ತೀರಪ್ರದೇಶ, ಹವಳದ ದಿಬ್ಬಗಳು ಮತ್ತು ಆಳವಿಲ್ಲದ ನೀರಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. 


ನಕ್ಷತ್ರ ಮೀನುಗಳಿಗೆ ಬೆನ್ನಿನ ಮೂಳೆ ಇರುವುದಿಲ್ಲ. ಬದಲಾಗಿ ಬೆನ್ನಿನ ಮೇಲೊಂದು ಮುಳ್ಳಿನ ಕವಚವಿರುತ್ತದೆ. ಹರಿತವಾದ ಚಿಕ್ಕ ಚಿಕ್ಕ ಮೂಳೆಗಳಿಂದ ಮಾಡಲ್ಪಟ್ಟ ಇವು ಶತ್ರುಗಳಿಂದ ರಕ್ಷಣೆ ನೀಡುತ್ತದೆ. ದೇಹದ ಮೇಲ್ಮೈ ಕ್ಯಾಲ್ಶಿಯಂ ಕಾರ್ಬೋನೇಟ್ ಪ್ಲೇಟ್ಗಳಿಂದ ನಿರ್ಮಾಣವಾಗಿರುತ್ತವೆ. ವೈವಿಧ್ಯಮಯ ಬಣ್ಣದ, ತರಹೇವಾರಿ ನಮೂನೆಯ ನಕ್ಷತ್ರ ಮೀನುಗಳು ಇವೆ.   

ನಕ್ಷತ್ರ ಮೀನು ಹುಟ್ಟುವುದು ಹೇಗೆ?

 ನಕ್ಷತ್ರಮೀನುಗಳ ಸರಾಸರಿ ಬೆಳವಣಿಗೆ 8 ಇಂಚು.  ಕೆಲವು ಮೀನುಗಳು 3 ಮೀಟರ್ ಉದ್ದ ಬೆಳೆದ ಉದಾಹರಣೆಗಳಿವೆ. ಹೆಣ್ಣು ನಕ್ಷತ್ರ ಮೀನು 20 ಲಕ್ಷ ಮೊಟ್ಟೆಗಳನ್ನು ಇಡಬಲ್ಲದು. ಆದರೆ ಎಲ್ಲಾ ಮೊಟ್ಟೆಗಳೂ ಜೀವತಾಳುವುದಿಲ್ಲ. ಹೆಚ್ಚಿನವು ಇತರ ಮೀನುಗಳಿಗೆ ಆಹಾರವಾಗುತ್ತವೆ. ಲಾವ್ರಾ ಸ್ಥಿತಿಯಲ್ಲರುವ ಮೊಟ್ಟಗಳನ್ನು ಗಂಡು ಮೀನುಗಳು ಅಭಿವೃದ್ಧಿಪಡಿಸಿ ನಕ್ಷತ್ರದ ಆಕಾರ ಪಡೆಯುವಂತೆ ಮಾಡುತ್ತವೆ. 

ಕೈಗಳನ್ನು ಪುನಃ ಪಡೆಯುತ್ತದೆ
ಬಹುತೇಕ ನಕ್ಷತ್ರ ಮೀನುಗಳಿಗೆ ಐದು ಕೈಗಳು ಇರುತ್ತವೆ. ಈ ಕೈಗಳು ಮಧ್ಯದ ತಟ್ಟೆಯಾಕೃತಿಯ ದೇಹದಿಂದ ಹೊರಚಾಚಿ ಕೊಳ್ಳುತ್ತವೆ. ಕೆಲವು ಜಾತಿಯ ನಕ್ಷತ್ರ ಮೀನುಗಳಿಗೆ ಆರು ಅಥವಾ ಅದಕ್ಕಿಂತ ಹೆಚ್ಚಿನ ಕೈಗಳಿರುತ್ತವೆ. ಸೊಲಾಸ್ಟರಿಡೇ ನಕ್ಷತ್ರ ಮೀನಿಗೆ 10-15 ಕೈಗಳಿದ್ದರೆ, ಸನ್ಸ್ಟಾರ್ ಎಂಬ ನಕ್ಷತ್ರ ಮೀನಿಗೆ 40 ಕೈಗಳಿವೆ! ವೈರಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೈಗಳನ್ನು ಕಡಿದುಕೊಳ್ಳತ್ತದೆ. ಆದರೆ ಕಡಿದುಕೊಂಡ ಕೈಗಳನ್ನು ಪುನಃ ಪಡೆದುಕೊಳ್ಳುವುದೇ ನಕ್ಷತ್ರ ಮೀನಿನ ವಿಶೇಷತೆ. ಕೈಗಳನ್ನು ಮರಳಿ ಪಡೆಯಲು ಒಂದು ವರ್ಷ ಬೇಕಾಗುತ್ತದೆ. ಕತ್ತರಿಸಿದ ಕೈಗಳಿಂದ ಇನ್ನೊಂದು ನಕ್ಷತ್ರ ಮೀನೇ ಬೆಳೆಯುತ್ತದೆ.

ಈಜಲು ಬರುವುದಿಲ್ಲ
ನೀರಿನಲ್ಲೇ ಇದ್ದರೂ ನಕ್ಷತ್ರ ಮೀನಿಗೆ ಈಜಲು ಬರುವುದಿಲ್ಲ. ಕೈಗಳ ಸಹಾಯದಿಂದ ನೀರಿನಲ್ಲಿ ಚಲಿಸುತ್ತದೆ. ಪ್ರತಿಯೊಂದು ಕೈಯ ಕೊನೆಯಲ್ಲಿ ಪುಟ್ಟ ಕಣ್ಣು ಇದ್ದು ಅವುಗಳ ಮೂಲಕ ಕತ್ತಲು ಮತ್ತು ಬೆಳಕನ್ನು ಗುರುತಿಸುತ್ತದೆ. ದೇಹದ ತುಂಬೆಲ್ಲಾ ಇರುವ ಕೋಶಗಳ ಮೂಲಕ ಗಾಳಿಯಲ್ಲಿ ಉಸಿರಾಡುತ್ತದೆ. ತನ್ನ ದೇಹದ ಮಧ್ಯ ಭಾಗದಲ್ಲಿರುವ ಬಾಯಿಯ ಮೂಲಕ ಆಹಾರ ತಿನ್ನುತ್ತದೆ. ಆಹಾರ ತಿನ್ನುವುದು ಕೈಗಳಿಂದಲೇ. ಇದಕ್ಕೆ ಎರಡು ಹೊಟ್ಟೆಗಳಿದ್ದು, ದೊಡ್ಡ ಹೊಟ್ಟೆಯನ್ನು ಹೊರ ಚಾಚಿ ತನಗಿಂತಲೂ ದೊಡ್ಡ ಜೀವಿಗಳನ್ನು ಬೇಟೆಯಾಡಿ ತಿನ್ನಬಲ್ಲದು. ರಕ್ತದ ಬದಲಾಗಿ ಇವು ನೀರಿನ ನರಮಂಡಲ ವ್ಯವಸ್ಥೆ ಹೊಂದಿವೆ. ಕಾಲಿನ ಕೆಳ ಭಾಗದಲ್ಲಿರುವ ಕೊಳವೆಯ ಮೂಲಕ ನೀರನ್ನು ಹೀರಿ ನರಗಳಿಗೆ ಕಳುಹಿಸುತ್ತದೆ. ಕೊಳವೆಯ ಮುಖಾಂತವೇ ನೀರನ್ನು ಹೊರಹಾಕುತ್ತದೆ.  
ನಕ್ಷತ್ರ ಮೀನಿನ ಜೀವಿತಾವಧಿಯಲ್ಲಿ ವ್ಯತ್ಯಾಸವಿದೆ. 
ಹೆಕ್ಸಾಕ್ಟಿಸ್ ಎಂಬ ಮೀನು 10 ವರ್ಷ ಜೀವಿಸಿದರೆ ಒಕ್ರೇಶಿಯಸ್ ಎಂಬ ದೊಡ್ಡಗಾತ್ರದ ಮೀನು 35 ವರ್ಷಗಳ ಕಾಲ ಬದುಕುತ್ತದೆ. ವಿವಿಧ ಬಗೆಯ ಆಹಾರವನ್ನು ನಕ್ಷತ್ರ ಮೀನು ತಿನ್ನುತ್ತದೆ. ದಕ್ಷಿಣ ಏಷ್ಯಾದ ಒಂದು ಮೀನು ಹವಳವನ್ನು ಮಾತ್ರ ತಿನ್ನುತ್ತದೆ. ಕೆಲವು ಮೀನುಗಳು ಶುದ್ಧ ಸಸ್ಯಾಹಾರಿಯಾಗಿರುತ್ತವೆ. ಪಿಸಾಸ್ಟರ್ ಎಂಬ ನಕ್ಷತ್ರಮೀನು ಕೈಗಳಿಂದ ಕಡಲ ಚಿಪ್ಪುಗಳನ್ನು ಅಗಲಿಸಿ ನಂತರ ತನ್ನ ಹೊಟ್ಟೆಯನ್ನು ಚಿಪ್ಪಿನೊಳಗೆ ಇಳಿಸಿ ತಿನ್ನುತ್ತದೆ. ನಕ್ಷತ್ರ ಮೀನುಗಳಲ್ಲಿ ಔಷಧಿಯ ಗುಣಗಳಿವೆ ಎಂದು ವಿಜ್ಞಾನಿಗಳು ಸಂಶೋಧಿಸಿದ್ದಾರೆ.