ಜೀವನಯಾನ

Monday, April 13, 2015

ಲೇಕ್ ಪ್ಯಾಲೇಸ್

ಸರೋವರದಲ್ಲೊಂದು ಅರಮನೆ

ಸ್ವಸಂರಕ್ಷಣೆಗಾಗಿ ರಾಜರು ಭಿನ್ನ ವಿಭಿನ್ನ ರೀತಿಯ ಕೋಟೆ, ಸಾಮ್ರಾಜ್ಯಗಳನ್ನು ನಿರ್ಮಿಸಿದ್ದಾರೆ. ತಮ್ಮ ವಾಸಸ್ಥಾನ ಶತ್ರುಗಳಿಗೆ ಸುಲಭ ತುತ್ತಾಗಬಾರದು, ಪ್ರಜೆಗಳು ಕ್ಷೇಮದಿಂದ ಇರಬೇಕು ಎಂಬ  ಕಾರಣಕ್ಕೆ ಚಾಕಚಕ್ಯತೆಯಿಂದ ಅರಮನೆಯನ್ನು ನಿರ್ಮಿಸುತ್ತಿದ್ದರು. ಇದಕ್ಕೊಂದು ಉದಾಹರಣೆ ರಾಜಸ್ಥಾನದ ಉದಯಪರದಲ್ಲಿರುವ ಲೇಕ್ ಪ್ಯಾಲೇಸ್. ಇದನ್ನು ಒಂದು ಕೃತಕ ಸರೋವರದ ಮೇಲೆ ನಿರ್ಮಿಸಲಾಗಿದೆ. ಇದು ಭಾರತ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ರಮ್ಯವಾದ ಅರಮನೆ ಎಂದೇ ಖ್ಯಾತಿಗಳಿಸಿದೆ. 


ಈಗ ಇದು ಪಂಚತಾರಾ ಹೋಟೆಲ್!
ಲೇಕ್ ಪ್ಯಾಲೇಸ್ ಇರುವುದು ಪಿಚೋಲಾ ಸರೋವರದ ಮಧ್ಯೆ ಇರುವ ಜಗನಿವಾಸ ದ್ವೀಪದಲ್ಲಿ. ಹೀಗಾಗಿ ಇದಕ್ಕೆ ಜಗನಿವಾಸ ಅರಮನೆ ಎಂದು ಹೆಸರು ಬಂದಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಅರಮನೆಗಳಲ್ಲಿ ಇದೂ ಒಂದು. 2ನೇ ಮಹಾರಾಣ ಜಗತ್ಸಿಂಗ್ 1743ರಲ್ಲಿ ಜಗನಿವಾಸ ಅರಮನೆಯನ್ನು ನಿರ್ಮಿಸಿದ. ಇಂದು ಈ ಅರಮನೆಯನ್ನು ಪಂಚತಾರಾ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ತಾಜ್ ಹೋಟೆಲ್ಸ್ ಸಮೂಹ ಇದರ ನಿರ್ವಹಣೆಯನ್ನು ಮಾಡುತ್ತಿದೆ.

ಸುಂದರ ವಾಸ್ತುಶಿಲ್ಪ:
ಈ ಕಟ್ಟಡದ ವಾಸ್ತುಶಿಲ್ಪ ಶೈಲಿ ಅತ್ಯಂತ ಸುಂದರವಾಗಿದೆ. ಸುಂದರವಾಗಿ ನಿರ್ಮಿಸಿದ  ಕಂಬಗಳು, ಅಂಕಣಗಳನ್ನು ಹೊಂದಿರುವ ವರಾಂಡ, ಉದ್ಯಾನವನಗಳು ಮತ್ತು ಕಾರಂಜಿಗಳು ಅರಮನೆಯ ಸೌಂದರ್ಯವನ್ನು ಹೆಚ್ಚಿಸಿದೆ. ಸುಮಾರು ನಾಲ್ಕು ಎಕರೆಯಷ್ಟು ವಿಶಾಲವಾದ ಪ್ರದೇಶಕ್ಕೆ ಅರಮನೆ ವ್ಯಾಪಿಸಿದೆ.  ಅರಮನೆಯ ಕೋಣೆಗಳನ್ನು ಗಾಜುಗಳು, ಕಮಾನುಗಳು ಮತ್ತು ಹಸಿರು ಕಮಲದ ಎಲೆಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಇನ್ನೂ ಕೆಲವು ವಸತಿಸಮಚ್ಚಯಗಳಿದ್ದು, ಖುಷ್ ಮಹಲ್, ಬಡಾ ಮಹಲ್, ಧೋಲಾ ಮಹಲ್, ಫೂಲ್ ಮಹಲ್ ಮತ್ತು ಅಜ್ಜನ್ ನಿವಾಸ್ ಎಂದು ಗುರುತಿಸಲಾಗಿದೆ. ಬಾರ್, ಈಜುಕೊಳ ಮತ್ತು ಸಭಾಂಗಣ ಈ ಅರಮನೆಯಲ್ಲಿದೆ. ನಗರದಿಂದ ಈ ಅರಮನೆಗೆ ಅತಿಥಿಗಳನ್ನು ದೋಣಿಯ ಮೂಲಕ ಕರೆತರಲಾಗುತ್ತದೆ.
ಪೂರ್ವಾಭಿಮುಖವಾಗಿ ಜಗನಿವಾಸ ಅರಮನೆಯನ್ನು ನಿರ್ಮಿಸಲಾಗಿದೆ. ಅರಮನೆಯ ನಿವಾಸಿಗಳು ಪ್ರತಿನಿತ್ಯ ಸೂರ್ಯನಿಗೆ ಪೂಜೆ ಸಲ್ಲಿಸುತ್ತಿದ್ದರು. ಬಳಿಕ ಬಂದ ರಾಜರುಗಳು ಈ ಅರಮನೆಯನ್ನು ಬೇಸಿಗೆಯ ಆಶ್ರಯತಾಣವಾಗಿ ಬಳಸಿಕೊಂಡಿದ್ದರು.

ಷಹಜಹಾನನಿಗೆ ಪ್ರೇರಣೆ
ಮಹಾರಾಣ ಮೊಗಲ್ ದೊರೆಗಳಿಗೆ ಆಪ್ತನಾಗಿದ್ದ, ಇಲ್ಲಿಗೆ ಭೇಟಿ ನೀಡಿದ್ ಷಹಜಹಾನ್ ತನ್ನ ಆಸ್ತಾನದ ವಾಸ್ತುಶಿಲ್ಪಿಗಳಿಗೆ ಈ ಅರಮನೆಯ ಮಾದರಿಯಲ್ಲೇ ಆಗ್ರಾದಲ್ಲಿ  ಕಟ್ಟಡವನ್ನು ನಿರ್ಮಿಸಲು ಪ್ರೋತ್ಸಾಹಿಸಿದ್ದ. ಇದನ್ನು ಅನುಸರಿಸಿ ಆಗ್ರಾದಲ್ಲಿ ತಾಜ್ ಮಹಲ್ ಮತ್ತು ಆಗ್ರಾಕೋಟೆಯನ್ನು ಷಹಜಹಾನ್ ನಿರ್ಮಿಸಿದ. 


ಸರೋವರಗಳ ನಗರ:
ಉದಯಪುರ ಸರೋವರಗಳ ನಗರ ಎಂದೂ ಪ್ರಸಿದ್ಧವಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಂ ಮತ್ತು ವನ್ಯಧಾಮಗಳನ್ನು ಹೊಂದಿದೆ. ಪಿಚೋಲಾ ಸರೋವರವನ್ನು ಸುಮಾರು 1362ರಲ್ಲಿ ನಿರ್ಮಿಸಲಾಯಿತು. ಆಣೆಕಟ್ಟಿನ ಪರಿಣಾಮವಾಗಿ ಸುತ್ತಲಿನ ಪ್ರದೇಶದ ನೀರಿನ ದಾಹವನ್ನು ನೀಗಿಸಲು ಸಹಾಯಮಾಡಿತು. ಈ ಸರೋವರದ ಸೌಂದರ್ಯವನ್ನು ಗಮನಿಸಿದ ಮಹಾರಾಣ ಉದಯ್ಸಿಂಗ್ ಈ ಸರೋವರದ ದಡದಲ್ಲಿ ನಗರವೊಂದನ್ನು ನಿರ್ಮಿಸಲು ಉದ್ದೇಶಿಸಿದ. ಹೀಗೆ ರೂಪಗೊಂಡಿದ್ದೇ ಉದಯಪರ. ಪತೇಹ್ ಸಗರ ಇಲ್ಲಿನ ಇನ್ನೊಂದು ಇನ್ನೊಂದು ಕೃತಕ ಸರೋವರ. ಇದನ್ನು 1678ರಲ್ಲಿ ಮಹಾರಾಣ ಪತೇಹ್ ಸಿಂಗ್ ನಿರ್ಮಿಸಿದ. ಅಲ್ಲದೆ, ರಾಜ ಸಮಾನಂದ್ ಮತ್ತು ಉದಯಸಾಗರ ಮತ್ತು ಜೈಸಮಂದ್ ಸರೋವರಗಳು ಇಲ್ಲಿನ ಆಕರ್ಷಣೆಗಳಾಗಿವೆ.

1 comment: