ಮನೆಯಮುಂದೊಂದು ಪುಟ್ಟ ಹೂದೋಟವಿದ್ದರೂ ಎಷ್ಟೊಂದು ಖುಷಿ. ಹೀಗಿರುವಾಗ ಬೆಟ್ಟದ
ತುಂಬೆಲ್ಲಾ ಬರೀ
ಹೂಗಿಡಗಳೇ ತುಂಬಿಕೊಂಡಿದ್ದರೆ? ಹೌದು. ಹಿಮಾಲಯದ ತಪ್ಪಲಿನಲ್ಲೊಂದು
ಹೂವಿನ ಕಣಿವೆಯಿದೆ. ಉತ್ತರಾಖಂಡದಲ್ಲಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ನೂರಾರು
ಬಗೆಯ ಹೂವುಗಳ ಬೃಹತ್ ನೈಕ ಸರ್ಗಿಕ ತೋಟ. ವಿಶ್ವದ ಏಕೈಕ ಪುಷ್ಪಕಣಿವೆ ಎಂದು
ಗುರುತಿಸಲ್ಪಟ್ಟಿದೆ. 82.50 ಚದರ್ ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿರುವ ಪುಷ್ಪಕಣಿವೆ
ವಿಶ್ವ ಪಾರಂಪರಿಕ ತಾಣವಾಗಿ ಮಾನ್ಯತೆ ಪಡೆದಿದೆ.
ಇಲ್ಲಿನ ಹೂವುಗಳು ಆಲ್ಪೈನ್ ತಳಿಗಳಿಗೆ ಸೇರಿದ್ದಾಗಿದ್ದು, ಆರ್ಕೆಡ್, ಪ್ಲೈಮ್ಯೂಲಾ, ಮೇರಿಗೋಲ್ಡ್, ಡೈಸಿಗಳು, ಹಿಮಾಲಯನ್ ಬೆಲ್ ಫ್ಲಾವರ್, ಚಂಪನುಲಾ ಲತಿಫೊಲಿಯಾ, ಹಳದಿ ಹೂ ಮತ್ತಿತರ ನೂರಾರು ಬಗೆಯ ಹೂವುಗಳನ್ನು ಕಣ್ತುಂಬಿಕೊಳ್ಳಬಹುದು. ಈ ಕಣಿವೆಯ 3800 ಮೀಟರ್ ಎತ್ತರದಲ್ಲಿ ಬ್ರಹ್ಮ ಕಮಲ ಹೂವು ಅರಳುತ್ತದೆ. ಬಣ್ಣಬಣ್ಣದ ಹೂವುಗಳಿಂದ ಕೂಡಿದ ಕಣಿವೆಯ ಮೇಲೆ ಸೂರ್ಯನ ಕಿರಣಗಳು ಸ್ಪರ್ಶಿಸಿದಾಗ ಸೃಷ್ಟಿಯಾಗುವ ಸನ್ನಿವೇಶವೇ ರಮಣೀಯ. ಇಲ್ಲಿ ಸಿಗುವಷ್ಟು ಔಷಧ ಗಿಡಮೂಲಿಕೆಗಳು ಹಿಮಾಲಯದ ಇತರ ಯಾವುದೇ ಕಡೆಗಳಲ್ಲಿ ಸಿಗುವುದಿಲ್ಲ. ಹಿಮಾಲಯದ ಗರುಡ, ಗ್ರಿಫಾನ್ ಹದ್ದು, ಹಿಮ ಕೋಳಿ, ಮೋಲಾನ್ ಹಿಮ ಪಾರಿವಾಳ ಮುಂತಾದ ಪಕ್ಷಿಗಳು ಇಲ್ಲಿ ವಾಸಿಸುತ್ತವೆ.
ಅಪರೂಪದ ಪ್ರಾಣಿಗಳಿಗೂ ಆಶ್ರಯ:
ಇದೊಂದು ಜೀವ ವೈವಿಧ್ಯದ ನೆಲೆ. ಇಲ್ಲಿ ಹೂವುಗಳನ್ನು ಮಾತ್ರವಲ್ಲ. ಕಪ್ಪು ಕರಡಿ, ಹಿಮ ಚಿರತೆ, ಕಸ್ತೂರಿ ಮೃಗ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ಅಪರೂಪದ ವನ್ಯ ಜೀವಿಗಳು ಕಾಣಸಿಗುತ್ತವೆ. ಈ ಉದ್ಯಾನದಲ್ಲಿ 750ಕ್ಕೂ ಹೆಚ್ಚಿನ ತಳಿಯ ಹೂವುಗಳಿವೆ. ಅಲ್ಪೈನ್ ಸಸ್ಯ ರಾಶಿಯಿಂದಾಗಿ ಈ ಕಣಿವೆಗೆ ಅಂತಾರಾಷ್ಟ್ರೀ ಮಟ್ಟದಲ್ಲಿ ಪ್ರಾಮುಖ್ಯ ಹೊಂದಿದೆ. ಇಲ್ಲಿಯ ಜೀವವೈವಿಧ್ಯದ ಹಲವು ತಳಿಗಳು ಜಾಗತಿಕವಾಗಿ ಅಳಿವಿನ ಅಂಚಿನಲ್ಲಿವೆ. ನಂದಾದೇವಿ ರಾಷ್ಟ್ರೀಯ ಉದ್ಯಾನದೊಂದಿಗೆ ಬೆಸೆದುಕೊಂಡಿರುವ ಪುಷ್ಪಕಣಿವೆ ಕಿರಿದಾಗಿರದೇ ವಿಶಾಲವಾಗಿದೆ. ಕಣಿವೆಯ ಮೂಲಕ ಪುಷ್ಪವತಿ ನದಿ ಹರಿದುಹೋಗುತ್ತದೆ.
ಬಹುತೇಕ ಸಮಯ ಹಿಮದಿಂದ ಆವೃತ:
ಅಂದಹಾಗೆ ಇದು ನೋಡುಲು ಎಷ್ಟು ಸುಂದರವೋ ಇದನ್ನು ತಲುಪುವುದು ಕೂಡ ಅಷ್ಟೇ ಕಷ್ಟ. ಸಮುದ್ರ ಮಟ್ಟದಿಂದ 3250 ಮೀಟರ್ನಿಂದ 6750 ಮೀಟರ್ ಎತ್ತರದಲ್ಲಿ ಕಣಿವೆ ನೆಲೆಸಿದೆ. ಹಿಮಾಲಯದ ಝಂಸ್ಕಾರ್ ಶ್ರೇಣಿಯಲ್ಲಿರುವ 6,719 ಮೀಟರ್ ಎತ್ತರದ ಗೌರಿಶಿಖರ ಪುಷ್ಪಕಣಿವೆ ರಾಷ್ಟೀಯ ಉದ್ಯಾನದ ತುತ್ತತುದಿ. ಉತ್ತರಾಖಂಡದ ಗಢ್ವಾಲ್ ಪ್ರದೇಶದಲ್ಲಿರವ ಈ ಕಣಿವೆಯನ್ನು ವರ್ಷದ ಹೆಚ್ಚಿನ ಸಮಯದಲ್ಲಿ ತಲುಪುವುದು ಅಸಾಧ್ಯ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಜೂನ್ನಿಂದ ಅಕ್ಟೋಬರ್ ವರೆಗೆ ಮಾತ್ರ ತೆರೆದಿರುವ ಈ ಉದ್ಯಾನ ಉಳಿದ ಸಮಯದಲ್ಲಿ ಹಿಮದಿಂದ ಮುಚ್ಚಿರುತ್ತದೆ. ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವನ್ನು ತಲುಪಲು 17 ಕಿ.ಮೀ.ಗಳಷ್ಟು ದೂರನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಗುತ್ತದೆ. ಇದಕ್ಕೆ ಸಮೀಪದ ದೊಡ್ಡ ಪಟ್ಟಣವೆಂದರೆ ಜೋಷಿ ಮಠ.
ಇದ್ದಿದ್ದು ಗೊತ್ತೇ ಇರಲಿಲ್ಲ!
1931ರ ವರೆಗೂ ಹೊರ ಜಗತ್ತಿಗೆ ಈ ಕಣಿವೆಯ ಕುರಿತು ತಿಳಿದಿರಲಿಲ್ಲ. ಪರ್ವತಾ ರೋಹಿ ಫ್ರಾಂಕ್ ಸ್ಮಿತ್ ಎಂಬಾತ ಹಿಮಾಲಯ ಪರ್ವತವನ್ನು ಏರುವಾಗ ದಾರಿತಪ್ಪಿ ಈ ಕಣಿವೆಗೆ ಭೇಟಿ ನೀಡುತ್ತಾನೆ. ಇಲ್ಲಿನ ಹೂವುಗಳ ಸೌಂದರ್ಯವನ್ನು ಕಂಡು ಬರೆಗಾದ ಆತ "ವ್ಯಾಲಿ ಆಫ್ ಫ್ಲವರ್ಸ್" ಎಂಬ ಪುಸ್ತಕವನ್ನು ಹೊರತರುತ್ತಾನೆ. ಆ ಬಳಿಕ ಇದು ಹೆಚ್ಚು ಪ್ರಸಿದ್ಧಿಗೆ ಬಂತು. ಪುಷ್ಪಕಣಿವೆಯನ್ನು 1982 ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.
No comments:
Post a Comment