ಜೀವನಯಾನ

Friday, July 11, 2014

ಬ್ರಹ್ಮ ಕಮಲ

ರಾತ್ರಿ ಅರಳುವ ವಿಸ್ಮಯ

ರಾತ್ರಿ ಅರಳುವ ಹೂವು ಬ್ರಹ್ಮ ಕಮಲ. ಈ ಬ್ರಹ್ಮ ಕಮಲ ರಾತ್ರಿ 11 ಗಂಟೆಯ ಬಳಿಕ ಅರಳಿ ಬೆಳಗಾಗುವುದರ ಒಳಗೆ  ಕಮರಿಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ. ಸೌಂದರ್ಯಕ್ಕಿಂತಲೂ ಧಾರ್ಮಿಕ  ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು.


 ಎಲೆಯಿಂದಲೇ ಬೆಳೆಯುತ್ತದೆ:
ಎಲ್ಲ ಗಿಡಗಳು ಬೇರು, ಕಾಂಡ ಅಥವಾ ಬೀಜದಿಂದ ಬೆಳೆದರೆ ಬ್ರಹ್ಮ ಕಮಲ ಎಲೆಯಿಂದಲೇ ದೊಡ್ಡದಾಗುತ್ತದೆ. ಗಿಡದ ಎಲೆಯನ್ನು ನೆಟ್ಟರೆ ಗಿಡವಾಗಿ ಬೆಳೆಯುತ್ತದೆ! ಒಂದೂವರೆ ವರ್ಷದಲ್ಲಿ ಹೂವು ಬಿಡಲು ಆರಂಭವಾಗುತ್ತದೆ.
ಬ್ರಹ್ಮ ಕಮಲ ಹೂವು ಬಿಡುವುದು ಜೂನ್- ಜುಲೈ ತಿಂಗಳಿನಲ್ಲಿ. ಕೇವಲ ಒಂದು ಎಲೆಯಿಂದ ಗಿಡವಾಗಿ ಬೆಳೆಯುತ್ತಾ ತನ್ನ ತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಒಮ್ಮಲೆ ಹತ್ತು ಹದಿನೈದು ಮೊಗ್ಗುಗಳು ಹೂವಾಗಿ ಅರಳುವುದೇ ವಿಸ್ಮಯ.
ಹಿಮಾಲಯದ ಆಸುಪಾಸಿನಲ್ಲಿ ಈ ಗಿಡ ಹೆಚ್ಚಾಗಿ ಬೆಳೆಯುತ್ತದೆ. ಇದು ಪೊದೆಯಂತೆ ಎತ್ತರಕ್ಕೆ ಹೋದಂತೆ ಕಾಂಡ ಕೂಡ ದಪ್ಪದಾಗುತ್ತಾ ಹೋಗುತ್ತದೆ. ಬೆಳ್ಳನೆಯ ಹೂವಿನ ದಳಗಳು ದಪ್ಪವಾಗಿರುತ್ತವೆ. ಅದೇರೀತಿ ಗಿಡದ ಎಲೆಗಳು ದಪ್ಪದಾಗಿದ್ದು, ಹಸಿರಾಗಿ ಎರಡರಿಂದ ಮೂರು ಅಡಿ ಉದ್ದಕ್ಕೆ ಬೆಳೆಯುತ್ತವೆ.
ಇದರ ಎಲೆ, ಹೂವು, ಕಾಂಡ ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತವೆ. ಬೇರನ್ನು ತೇಯುವ ಮೂಲಕ ಗಾಯಗಳಿಗೆ ಲೇಪನ ಮಾಡಿದರೆ, ಬೇಗ ಗುಣವಾಗುತ್ತದೆಯಂತೆ. ಪುಷ್ಪದ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. 


ರಾತ್ರಿ ರಾಣಿ:
ಈ ಹೂವಿನ ಸೌಂದರ್ಯ ಒಂದು ರಾತ್ರಿಗೆ ಮಾತ್ರ ಸೀಮಿತ. ಆದರೆ, ಅಪರಿಮಿತ ಪರಿಮಳವನ್ನು ಸುತ್ತಮುತ್ತಲೂ ಪಸರಿಸುತ್ತದೆ. ಈ ಹೂವಿನ ಸೌಂದರ್ಯ ಸವಿಯಬೇಕಾದರೆ, ಹೂವುಬಿಟ್ಟು ನಾಲ್ಕೈದು ದಿನಗಳವರೆಗೆ ಕಾದು ಜಾಗರಣೆ ಮಾಡಬೇಕು. ರಾತ್ರಿ ಅರಳುವುದರಿಂದ ಇದನ್ನು ರಾತ್ರಿ ರಾಣಿ ಎಂತಲೂ ಕರೆಯುತ್ತಾರೆ.

ಮನೆಮಂದಿಯೆಲ್ಲಾ ಸೇರಿ ಪೂಜೆ

ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ರಾತ್ರಿಯವೇಳೆ ಈ ಹೂವುಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಹೆಸರು ಬಂದಿದ್ದು ಏಕೆ?
ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ "ಕಮಲಭವ" ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮ ಕಮಲ ಎನ್ನುವ ಹೆಸರು ಬಂದಿದೆ.

No comments:

Post a Comment