ಕಪ್ಪು ಚಿರತೆ ಅಥವಾ ಬ್ಲ್ಯಾಕ್ ಪ್ಯಾಂಥರ್ ಆಕಾರ ಮತ್ತು ರೂಪದಲ್ಲಿ ಚಿರತೆಗಿಂತ ಸ್ವಲ್ಪ ಭಿನ್ನ. ತನ್ನ ಕಪ್ಪು ಬಣ್ಣದ ದೇಹ ಮತ್ತು ಹಳದಿ ಕಣ್ಣುಗಳಿಂದ ಎಂಟೆದೆಯ ಬಂಟರನ್ನೂ ನಡುಗಿಸ ಬಲ್ಲದು. ಮರದ ಮೇಲೆ ಅಡಗಿ ಕುಳಿತು ಬೇಟೆಯ ಮೇಲೆ ಒಮ್ಮೆಲೇ ದಾಳಿ ಮಾಡುತ್ತದೆ. ಆದರೆ, ಸಾಮಾನ್ಯ ಚಿರತೆ ಮತ್ತು ಬ್ಲ್ಯಾಕ್ ಪ್ಯಾಂಥರ್ ನಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಇಲ್ಲ.
ನಾನಾ ಹೆಸರು:
ಕಾಡು ಬೆಕ್ಕಿನ ಪ್ರಜಾತಿಗೆ ಸೇರಿದವು ಪ್ಯಾಂಥರ್ಗಳು. ಲ್ಯಾಟೀನ್ ಅಮೆರಿಕದಲ್ಲಿ ಬ್ಲ್ಯಾಕ್ ಪ್ಯಾಂಥರ್ ಅನ್ನು ಬ್ಲ್ಯಾಕ್ ಜಾಗ್ವಾರ್ ಎಂದು ಕರೆಯುತ್ತಾರೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದನ್ನು ಕಪ್ಪು ಚಿರತೆ ಎಂದು ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಇದನ್ನು ಬ್ಲ್ಯಾಕ್ ಕೂಗರ್ ಎಂದು ಕರೆಯಲಾಗುತ್ತದೆ. ಚಿರತೆಯಲ್ಲಿ ಹಳದಿ ಮೈ ಮೇಲೆ ಕಪ್ಪು ಚುಕ್ಕೆಗಳಿದ್ದರೆ, ಬ್ಲ್ಯಾಕ್ ಪ್ಯಾಂಥರ್ ನ ಮೈ ಸಂಪೂರ್ಣ ಕಪ್ಪಾಗಿರುತ್ತದೆ. ಚಿರತೆಗಳಿಗಿಂತ ಪ್ಯಾಂಥರ್ಗಳು ಆಕಾರದಲ್ಲಿ ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಬಿಳಿಯ ಪ್ಯಾಂಥರ್ಗಳೂ ಕಾಣಸಿಗುತ್ತವೆ. ಸಿಂಹದಂತೆ ಕಾಣುವ ಪೂಮಾಗಳು ಸಹ ಪ್ಯಾಂಥರ್ ಜಾತಿಗೆ ಸೇರಿದೆ. ಪ್ಯಾಂಥರ್ಗಳ ತಲೆ ಚಿರತೆಗಳಿಗಿಂತ ದೊಡ್ಡದಾಗಿರುತ್ತದೆ. ಅಲ್ಲದೆ, ಅಗಲವಾದ ದವಡೆಯನ್ನು ಹೊಂದಿರುತ್ತದೆ. ವಿಪರೀತ ಬೇಟೆ ಮತ್ತು ಸಂತತಿ ನಾಶದಿಂದಾಗಿ ಪ್ಯಾಂಥರ್ಗಳು ಇಂದು ಅಳಿವಿನ ಅಂಚನ್ನು ತಲುಪಿವೆ.
ಒಂದು ಬಲಿತ ಕಪ್ಪು ಚಿರತೆ 7ರಿಂದ 8 ಅಡಿಯಷ್ಟು ಉದ್ದ ಮತ್ತು 50ರಿಂದ 120 ಕೆ.ಜಿ ತೂಕವಿರುತ್ತದೆ.
ಬ್ಲ್ಯಾಕ್ ಪ್ಯಾಂಥರ್ಗಳು ಮಳೆ ಕಾಡು, ಅರಣ್ಯ ಪ್ರದೇಶ, ಗುಡ್ಡಗಾಡು, ಮರುಭೂಮಿ ಹೀಗೆ ನಾನಾ ಪ್ರದೇಶದಲ್ಲಿ ವಾಸಿಸುತ್ತದೆ. ಉಷ್ಣ ಮತ್ತು ಶೀತ ಎರಡೂ ಪ್ರದೇಶಕ್ಕೂ ಹೊಂದಿಕೊಳ್ಳಬಲ್ಲದು. ಇತರ ಬಿಗ್ ಕ್ಯಾಟ್ಗಳಂತಲ್ಲದೇ, ಇವು ಗರ್ಜನೆಯನ್ನೂ ಮಾಡುತ್ತವೆ. ಇವು ತಮ್ಮ ವಾಸಕ್ಕೆ ಜನವಸತಿ ಇರುವ ಸಮೀಪದ ಪ್ರದೇಶವನ್ನೂ ಆಯ್ಕೆ ಮಾಡಿಕೊಳ್ಳಬಲ್ಲದು.
ಏಕಾಂತವಾಗಿರುವದೇ ಇಷ್ಟ:
ಇವು ಹೆಚ್ಚಾಗಿ ಏಕಾಂತವಾಗಿ ಇರುವುದನ್ನೇ ಇಷ್ಟ ಪಡುತ್ತವೆ. ಸಂತಾನೋತ್ಪತ್ತಿಗೆ ಮಾತ್ರವೇ ಹೆಣ್ಣಿನೊಂದಿಗೆ ಕೂಡುತ್ತದೆ. ಇದರ ಪಂಜುಗಳು ಅಗಲವಾಗಿದ್ದು, ಅತ್ಯಂತ ಬಲಿಷ್ಠವಾಗಿರುತ್ತವೆ. ಹೀಗಾಗಿ ಸಲೀಸಾಗಿ ಮರವನ್ನು ಏರಬಲ್ಲದು. ಬೇಟೆಯನ್ನು ಮರದ ಮೇಲೊಯ್ದು ತಿನ್ನುತ್ತದೆ. ಇವು ಶುದ್ಧ ಮಾಂಸಾಹಾರಿ. ಮರಿಗಳು ಎರಡರಿಂದ ಮೂರು ತಿಂಗಳಿನಲ್ಲಿ ತಾಯಿಯಿಂದ ಬೇಟೆಯಾಡುವುದನ್ನು ಕಲಿತುಕೊಳ್ಳುತ್ತದೆ. ತನ್ನ ಆಹಾರವನ್ನು ತಾನೇ ಬೇಟೆಯಾಡಿ ತಿನ್ನುತ್ತದೆ. ಇವು 20 ಅಡಿ ದೂರದವರಗೆ ಜಿಗಿಯುವ ಸಾಮಥ್ರ್ಯವನ್ನು ಹೊಂದಿದೆ. ಆದರೆ ಓಟದಲ್ಲಿ ಚಿರತೆಗಳಿಗಿಂತ ಸಲ್ಪ ನಿಧಾನ. ಕಪ್ಪು ಚಿರತೆ ಗಂಟೆಗೆ 58 ಕಿ.ಮೀ ವೇಗದಲ್ಲಿ ಓಡುವ ಸಾಮಥ್ರ್ಯವನ್ನು ಹೊಂದಿದೆ. ಅದೇ ಹಳದಿ ಚೀತಾ ಗಂಟೆಗೆ 113 ಕಿ.ಮೀ. ವೇಗದಲ್ಲಿ ಓಡಬಲ್ಲದು. ಬ್ಲ್ಯಾಕ್ ಪ್ಯಾಂಥರ್ ಗಳ ಕಣ್ಣಿನ ದೃಷ್ಟಿ ತೀಕ್ಷ್ಣ ಮತ್ತು ಕಿವಿಗಳು ಸೂಕ್ಷ್ಮ. ಕಪ್ಪು ಚಿರತೆಗಳು 12 ವರ್ಷ ಜೀವಿತಾವಧಿಯನ್ನು ಹೊಂದಿವೆ. ಇದು ಉತ್ತಮ ಈಜುಗಾರ ಕೂಡ ಹೌದು. ಆಗಾಗ್ಗೆ ನೀರಿಗೆ ಹಾರಿ ವಿಶ್ರಾಂತಿ ಪಡೆಯುತ್ತವೆ.