ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಕಾಲುಗಳಿವುದು ಅಪರೂಪ. ಆದರೆ, ಈ ಜೀವಿಯ ಕಾಲುಗಳು ಎಷ್ಟಿವೆ ಎಂದು ಎಣಿಸುವುದೇ ಕಷ್ಟ. ಮುಟ್ಟಿದರೆ ಮುನಿ ಗಿಡದಂತೆ ಇವು ಕೂಡಾ ಯಾರಾದರೂ ಮುಟ್ಟಿದರೆ, ಚಕ್ಕುಲಿಯಂತೆ ದೇಹವನ್ನು ಸುತ್ತಿಕೊಂಡು ಸತ್ತಂತೆ ನಟಿಸುತ್ತವೆ! ಸಹಸ್ರಪದಿಗಳು ಬಹು ಕಾಲುಗಳುಳ್ಳ ಕೀಟಗಳ ಜಾತಿಗೆ ಸೇರಿವೆ. ಹೀಗಾಗಿ ಸಹಸ್ರಪದಿ ಎನ್ನುವ ಹೆಸರನ್ನು ನೀಡಲಾಗಿದೆ. ನಿಜವಾಗಲೂ ಇವು ಸಾವಿರ ಕಾಲುಗಳನ್ನು ಹೊಂದಿರುವುದಿಲ್ಲ. ಕೆಲವೊಂದಕ್ಕೆ 400ಕ್ಕೂ ಹೆಚ್ಚು ಕಾಲುಗಳಿರುತ್ತವೆ. ಆದರೆ ಯಾವುದಕ್ಕೂ 750ಕ್ಕಿಂತ ಹೆಚ್ಚಿನ ಕಾಲಿರುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ಮಿಲ್ಲಿಪೀಡ್ ಎನ್ನುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಚೋರಟೆ ಎಂದು ಕರೆದು ರೂಢಿ.
ಮಳೆಗಾಲದಲ್ಲಿ ಬರುವ ಅತಿಥಿ:
ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ ಚಿತ್ರವಿಚಿತ್ರ ಜೀವಿಗಳಲ್ಲಿ ಸಹಸ್ರಪದಿಯೂ ಒಂದು. ರಸ್ತೆ, ತೋಟ, ಮನೆಯಂಗಳ, ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಹೊಲೆ ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಪ್ರಜಾತಿಗಳಿವೆ. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳಿಂದ ಇವು ಬದುಕಿವೆ.
ತೇವಾಂಶವಿರುವ ಕಡೆ ವಾಸ:
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣ ಹೊಂದಿರುತ್ತವೆ. ಇವುಗಳ ದೇಹದ ನೀರಿನ ಅಂಶ ಕಾಪಾಡಲು ತೇವಾಂಶಯುತ ವಾತಾವರಣ ಬೇಕು. ಆದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಚಟುವಟಿಕೆಯಿಂದ ಇರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಯಲ್ಲಿ ಅಡಗುತ್ತವೆ. ಒಣಗಿದ, ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ. ಕೆಲವೊಂದು ಜಾತಿಯ ಸಹಸ್ರಪದಿಗಳು ಎರೆಹುಳು, ಕೆಲ ಕೀಟಗಳನ್ನೂ ತಿನ್ನುವುದುಂಟು.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
ಸುರುಳಿ ಸುತ್ತುವ ದೇಹ!
ಎಲ್ಲಕ್ಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ, ಕಚ್ಚಲು, ಚುಚ್ಚಲು ಯಾವುದೇ ಅಂಗಗಳಿಲ್ಲದ, ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ವೈರಿಗಳನ್ನು ಗಲಿಬಿಲಿಗೊಳಿಸಲು ಚಕ್ಕುಲಿಯಾಕಾರದಲ್ಲಿ, ಇನ್ನು ಕೆಲವು ಉಂಡೆಯಾಕಾರದಲ್ಲಿ ದೇಹವನ್ನು ಸುತ್ತಿಕೊಳ್ಳುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅದನ್ನು ಹೊರಗೆಳೆದುಕೊಳ್ಳುತ್ತದೆ. ನಾಯಿಗಳು ಈ ಸಹಸ್ರಪದಿಗಳು ಕಂಡಾಗ ಅವುಗಳನ್ನು ಮುಟ್ಟಿ ಸುತ್ತಿಕೊಳ್ಳುವುದನ್ನು ಮೋಜಿನಿಂದ ನೋಡುತ್ತಿರುತ್ತವೆ.
ರಾಸಾಯನಿಕ ಅಸ್ತ್ರ ಪ್ರಯೋಗ!
ಇವು ತಮ್ಮ ರಕ್ಷಣೆಗೆ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸುತ್ತವೆ. ಕೆಲ ಸಹಸ್ರಪದಿಗಳು ಕೀಟಗಳನ್ನು, ಇರುವೆಗಳನ್ನು ದೂರಮಾಡಲು ಕೆಟ್ಟವಾಸನೆ ಬೀರುವ, ವೈರಿಗಳ ದೇಹವನ್ನು ಸುಡಬಲ್ಲ ರಾಸಾಯನಿಕಗಳನ್ನು ಸೃವಿಸುತ್ತವೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಮೈಮೇಲೆ ಕಜ್ಜಿಯಾಗಬಹುದು. ಹೀಗಾಗಿ ಅವುಗನ್ನು ಪುಟ್ಟ ಮಕ್ಕಳು ಬಾಯಿಗೆ ಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕು.
ಕಾಣಲು ಅಪರೂಪವಾಗುತ್ತಿವೆ
ಮುಂಚೆ ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಇವು ಇತ್ತೀಚೆಗೆ ಮಲೆನಾಡಿನಲ್ಲೂ ಮೊದಲಿನಷ್ಟು ಕಂಡುಬರುತ್ತಿಲ್ಲ. ಮನೆಯಂಗಳಿಗೆ ಸಿಮೆಂಟ್ ಬಳಕೆ, ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಭೂಮಿ, ಕಡಿಮೆಯಾದ ಮಳೆ ಇವೆಲ್ಲ ಕಾರಣದಿಂದ ಸಹಸ್ರಪದಿಗಳು ನಮ್ಮಿಂದ ನಿಧಾನವಾಗಿ ಕಣ್ಮರೆಯಾಗುತ್ತಿವೆ.
No comments:
Post a Comment