ಕವಿ ಸಮಯದಲ್ಲಿ ಹೆಚ್ಚಾಗಿ ವಣರ್ಣಿಸಲ್ಪಡುವ ಚಾತಕ ಪಕ್ಷಿ ಕೇವಲ ಕವಿ ಕಲ್ಪಿತ ಪಕ್ಷಿಯಲ್ಲ. ಲೋಕದಲ್ಲಿ ವಾಸ್ತವಾಗಿಯೇ ಇರುವಂಥವು. ಮಳೆಗಾಲ ಆರಂಭಕ್ಕೆ ಇನ್ನು ಸ್ವಲ್ಪ ಸಮಯ ಇದೆ ಎನ್ನುವಾಗ ಈ ಹಕ್ಕಿಗಳು ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುತ್ತವೆ. ಮೇ ತಿಂಗಳ ಕೊನೆ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಚಾತಕ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಣಿಗೆ ಬೀಳುತ್ತವೆ. ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡುತ್ತಾ ಮೊದಲ ಮಳೆಯ ಆಗಮನದ ಸೂಚನೆ ನೀಡುತ್ತದೆ. ಚಾತಕ ಪಕ್ಷಿ ಕಾಣಿಸಿತೆಂದರೆ ಮಳೆಯಾಗುತ್ತದೆ ಎಂದೇ ಅರ್ಥ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯ ಬಲ್ಲವು. ಹೀಗಾಗಿ ಇದನ್ನು "ಮಾರುತಗಳ ಮುಂಗಾಮಿ" ಎಂದೂ ಕರೆಯುವುದುಂಟು. ಒಮ್ಮೆ ಕಾಣಿಸಿಕೊಂಡು ಮರೆಯಾಗುವ
ಈ ಪಕ್ಷಿ ಎಲ್ಲರಿಗೂ ಅಷ್ಟಾಗಿ ಪರಿಚಿತವಿಲ್ಲ.
ಪುರಾಣ ಕಾಲದ ಹಕ್ಕಿ
ಚಾತಕ ಎಂಬ ಪದ ಸಂಸ್ಕೃತದಿಂದ ಬಂದಿದ್ದಾಗಿದೆ. ಚಾತಕ ಅಂದರೆ ಕಾಯುವುದು ಎಂದರ್ಥ. ಜಾನಪದದಲ್ಲಿ, ಪುರಾಣದಲ್ಲಿ ಈ ಹಕ್ಕಿಗೆ ವಿಶೇಷ ಸ್ಥಾನವಿದೆ. ಈ ಹಕ್ಕಿಯ ಬಗ್ಗೆ ವೇದ ಕಾಲದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಮಹಾಕವಿ ಕಾಳಿದಾಸನ ಮೇಘದೂತ ಕಾವ್ಯದಲ್ಲಿಯೂ ಚಾತಕ ಪಕ್ಷಿಯ ವರ್ಣಣೆ ಇದೆ.
ಮಳೆ ನೀರನ್ನು ಮಾತ್ರ ಕುಡಿಯುತ್ತವೆ?
ಚಾತಕ; ಕೋಗಿಲೆ ಜಾತಿಗೆ ಸೇರಿದೆ. ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪೀಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಇದು ಗಾತ್ರದಲ್ಲಿ ಪಾರಿವಾಳಕ್ಕಿಂತಲೂ ಚಿಕ್ಕವು. ಉದ್ದವಾದ ಪುಕ್ಕವಿದೆ. ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಬಿಲ್ಲಿನಾಕಾರದ ಪುಕ್ಕವಿದೆ. ಈ ಪುಕ್ಕದಲ್ಲಿ ಯೇ ಮಳೆಯ ನೀರನ್ನು ಹಿಡಿಟ್ಟುಕೊಂಡು ತನ್ನ ದಾಹವನ್ನು ಇಂಗಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ. ನೀರಿಲ್ಲದೆ ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ ಚಾತಕಗಳಿಗೆ ಇವೆ. ಇದು ಮಳೆಯ ನೀರನ್ನು ಮಾತ್ರವೇ ಕುಡಿಯುತ್ತದೆ ಎನ್ನುವ ಪ್ರತೀತಿ. ಚಾತಕ ಭೂಮಿಯನ್ನು ತಾಕದ ನೀರಿಗಾಗಿ ಕಾತರಿಸುವ ಪಕ್ಷಿ. ಅದಕ್ಕೆ ಬೇಕಾದದ್ದು ಮಣ್ಣಿನ ಮೇಲೆ ಬಿದ್ದ ನೀರಲ್ಲ. ಬದಲಾಗಿ ಶುದ್ಧವಾದ ಅಂಬರ ಲೋಕದ ನೀರು ಎನ್ನುವ ನಂಬಿಕೆ.
ಮಳೆಯೊಂದಿಗೆ ಸಂಚಾರ
ಚಾತಕ ವಲಸಿಗ ಹಕ್ಕಿ ಎಂದೇ ಹೆಸರಾಗಿದೆ. ಇವು ಸದಾ ಮಳೆಯೊಂದಿಗೇ ಸಂಚಾರ ಮಾಡುತ್ತಿರುತ್ತವೆ. ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಆ ದಿಕ್ಕಿನತ್ತ ವಲಸೆಹೋಗುತ್ತವೆ. ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಹಾದು ಮೇ ಮತ್ತು ಜೂನ್ ನಲ್ಲಿ ಭಾರತಕ್ಕೆ ಆಗಮಿಸುತ್ತವೆ.
ಸಂತಾನಕ್ಕಾಗಿ ಭಾರತಕ್ಕೆ ಆಗಮನ
ಚಾತಕ ಪಕ್ಷಿಗಳಲ್ಲಿ ಪ್ರಮುಖವಾಗಿ ಮೂರು ಉಪ ಪ್ರಭೇದಗಳಿದ್ದು, ಕ್ಲೇಮೇಟರ್ ಜಾಕೋಬೈನಸ್ ಪಿಕಾ ಮತ್ತು ಕ್ಲೇಮೇಟರ್ ಜಾಕೋಬೈನಸ್ ಜಾಕೋಬೈನಸ್ ಎಂಬ ಎರಡು ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ. ಸಂತಾನೋತ್ಪತ್ತಿಗಾಗಿ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಕೋಗಿಲೆಗಳಂತೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ಟರ್ಡ್ ಯ್ಡೆಸ್ ಪಕ್ಷಿಗಳ ನೀಲಿ ಮೊಟ್ಟೆಯನ್ನು ಎಸೆದು ತನ್ನ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಜೂನ್ ಮತ್ತು ಆಗಸ್ಟ್ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ.
Very beautiful information sir.
ReplyDeleteತುಂಬಾ ಉಪಯುಕ್ತ ಮಾಹಿತಿ ಇದೆ ಧನ್ಯವಾದಗಳು ಸರ್
ReplyDelete