ಜೀವನಯಾನ

Wednesday, October 30, 2013

ಮರಕ್ಕೆ ರಂಧ್ರ ಕೊರೆಯುವ ಮರಕುಟಿಕ!

ಕಾಡಿನಲ್ಲಿ ಕಟ್ಕಟ್ಕಟ್...ಎನ್ನುವ ಹೊಲಿಗೆಯಂತ್ರದ ಶಬ್ದ ಕೇಳಿಸಿದರೆ, ಅದು ಮರಕುಟಿಕದ್ದೇ ಪಕ್ಕಾ. ಇತರೆಲ್ಲಾ ಹಕ್ಕಿಗಳು ಕಸಕಡ್ಡಿಗಳಗೂಡಿನಲ್ಲಿ ಮರಿಗಳನ್ನು ಇಟ್ಟರೆ, ಮರಕುಟಿಕ ಮರದ ಪೊಟರೆಯಲ್ಲಿ ಮರಿಮಾಡುತ್ತದೆ. ಈ ಕಾರಣಕ್ಕಾಗಿ ಇವು ಮರದಲ್ಲಿ ರಂಧ್ರ ಕೊರೆಯುವುದು. ಮರಕುಟಿಕ ಸೆಕೆಂಡಿಗೆ 20 ಬಾರಿ ಮರಕ್ಕೆ ಕೊಕ್ಕಿನಿಂದ ಹೊಡೆಯಬಲ್ಲದು. ಮರಕುಟಿಕ ರಂಧ್ರಕೊರೆಯುವಾಗ ಗಂಟೆಗೆ 18 ಕಿ.ಮೀ.ವೇಗದಲ್ಲಿ ಕೊಕ್ಕನ್ನು ಬಡಿಯುತ್ತದೆ. ಇವು ಎಷ್ಟೇ ಜೋರಾಗಿ ಕೊಕ್ಕನ್ನು ಕುಟ್ಟಿದರೂ ಅದಕ್ಕೆ ತಲೆನೋವು ಬರುವುದಿಲ್ಲ. ತಲೆಯಲ್ಲಿನ ಗಾಳಿ ಚೀಲಗಳು ಹೊಡೆತದಿಂದ ಮಿದುಳಿಗೆ ಏಟಾಗದಂತೆ ತಡೆಯುತ್ತದೆ.
 ದಿನವೊಂದಕ್ಕೆ 8 ಸಾವಿರದಿಂದ 12 ಸಾವಿರ ಬಾರಿ ಮರಕ್ಕೆ ಕೊಕ್ಕನ್ನು ಬಡಿಯುತ್ತದೆ ಮರಕುಟಿಕ!


ಸತ್ತ ಮರಕ್ಕೆ ಕೊಕ್ಕಿನ ಏಟು!

ಮರಕುಟಿಕ ಒಣಗಿದ ಮರಗಳಲ್ಲಿ ಮಾತ್ರ ಪೊಟರೆ ಕೊರೆಯುತ್ತದೆ. ಇವು ಪೊಟರೆ ಕೊರೆದ ಬಳಿಕವೂ ಅದು ಹೆಣ್ಣಿಗೆ ಇಷ್ಟವಾಗದಿದ್ದರೆ ಮತ್ತೊಂದು ಪೊಟರೆ ಕರೆಯುತ್ತದೆ. ಪೊಟರೆಯಲ್ಲಿ ಮರಿಮಾಡಿ ಅವು ಬೆಳೆದು ದೊಡ್ಡದಾಗುತ್ತಿದ್ದಂತೆ ಸತ್ತ ಮರವನ್ನು ತ್ಯಜಿಸುತ್ತದೆ. ವರ್ಷ ವರ್ಷವೂ ಹೊಸದಾದ ಗೂಡನ್ನು ನಿಮರ್ಿಸುತ್ತವೆ. ಇವು ತ್ಯಜಿಸಿದ ಪೊಟರೆಗಳಲ್ಲಿ ಗೂಬೆ, ಬ್ಲ್ಯೂ ಬರ್ಡ್ಸ್, ವ್ರೆನ್ ಮುಂತಾದ ಪೊಟರೆಯಲ್ಲಿ ವಾಸಿಸುವ ಹಕ್ಕಿಗಳು ಬಂದು ನೆಲೆಸುತ್ತವೆ.

ಜಗತ್ತಿನಾದ್ಯಂತ ವಾಸ:

ಮರಕುಟಿಕಗಳಲ್ಲಿ ಸುಮಾರು 183 ಪ್ರಭೇದಗಳಿವೆ. ಕಪ್ಪು, ಬಿಳಿ, ಕೆಂಪು, ಹಳದಿ ಹೀಗೆ ವೈವಿಧ್ಯಮಯ ಬಣ್ಣಗಳಲ್ಲಿ ಕಂಡುಬರುತ್ತವೆ. ಆಸ್ಟ್ರೇಲಿಯಾವನ್ನು  ಹೊರತುಪಡಿಸಿ ಜಗತ್ತಿನಾದ್ಯಂತ ವಿವಿಧ ಮರಕುಟಿಕ ಸಂತತಿ ಕಂಡುಬರುತ್ತದೆ. ಕನರ್ನಾಟಕದ ಪಶ್ಚಿಮ ಘಟ್ಟದಲ್ಲಿ ಸುವರ್ಣ ಬೆನ್ನಿನ ಮರಕುಟಿಕವನ್ನು ಕಾಣಬಹುದು. 

ಉದ್ದನೆಯ ಬಲಶಾಲಿ ಕೊಕ್ಕು:

ಮರಕುಟಿಕಗಳು ಮರವನ್ನು ಕೊರೆಯಲು ಅನುಕೂಲವಾಗುವ ವಿಶಿಷ್ಟವಾದ ದೇಹ ರಚನೆಯನ್ನು ಹೊಂದಿವೆ. ಮರಕುಟಿಕ ಬಲಶಾಲಿ ಕೊಕ್ಕು ನೇರವವಾಗಿದ್ದು, ತುದಿಯಲ್ಲಿ ಚೂಪಾಗಿದೆ. ಇದರ ಗಟ್ಟಿ ಬಾಲವು ಮರಗಳ ಕಾಂಡವನ್ನು ಆಧಾರಕ್ಕಾಗಿ  ಬಳಸಿಕೊಳ್ಳಲು ಸಹಾಯವಾಗಿದೆ. ಜೋಡಿ ಬೆರಳುಗಳಿರುವ ಪಾದದ ಎರಡು ಬೆರಳು ಹಿಂದಕ್ಕೆ ಮತ್ತು ಎರಡು ಬೆರಳು ಮುಂದಕ್ಕೆ ಇದ್ದು ಮರ ಹತ್ತಲು ಮತ್ತು ಬಿಗಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ. ಪೊಟರೆ ಕೊರೆಯುವಾಗ ಏಳುವ ಮರದ ಚಕ್ಕೆಗಳನ್ನು ಸ್ವಚ್ಛಗೊಳಿಸಲು ಕೊಕ್ಕಿನ ಮೇಲೆ ವಿಶೇಷ ಗರಿಗಳನ್ನು  ಹೊಂದಿವೆ. ಇವುಗಳ ನಾಲಿಗೆ ಉದ್ದವಾಗಿದ್ದು, ಮರದ ತೊಗಟೆಯ ಮೇಲಿನ ಹುಳಹಪ್ಪಟೆಗಳನ್ನು ಹೆಕ್ಕಿ ತಿನ್ನುತ್ತವೆ. ಹಣ್ಣು ಹಂಪಲುಗಳನ್ನು ಸಹ  ಮರಕುಟಿಕ ಇಷ್ಟಪಡುತ್ತದೆ.

ತನ್ನ ಮರಿಗಳಿಗಾಗಿ ಗೂಡು:

ಸಾಮಾನ್ಯವಾಗಿ ಸಂತಾನೋತ್ಪತ್ತಿಯ ಸಮಯದಲ್ಲಿಯೇ ಮರಕುಟಿಕ ಮರಗಳನ್ನು ಕುಟ್ಟಿ ಗೂಡು ನಿಮರ್ಮಿಸುತ್ತದೆ. ಹುಟ್ಟುವ ಮರಿಗಳಿಗೆ ಅನುಕೂಲವಾಗುವ ಸಲುವಾಗಿ ಹೊಂಡದಂತೆ ಗೂಡನ್ನು ಕೊರೆಯುತ್ತದೆ. ಮರಕ್ಕೆ ರಂಧ್ರಕೊರೆಯಲು ಗಂಡು ಹಕ್ಕಿಗೆ ಹೆಣ್ಣು ಮರಕುಟಿಕವೂ  ನೆರವು ನೀಡುತ್ತದೆ. ಇವುಗಳ ಮೊಟ್ಟೆ ಇಡುವಿಕೆಯನ್ನು  ಹವಾಮಾನಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತದೆ. ಫೆಬ್ರವರಿಯಿಂದ ಜುಲೈ ತಿಂಗಳ ತನಕ ಕಾಡಿನಲ್ಲಿ ಮರಕುಟಿಕದ ಶಬ್ದ ಕೇಳಿಬರುತ್ತದೆ. ಮರಕುಟಿಕ ಜೀವಿತಾವಧಿಯಲ್ಲಿ 10ರಿಂದ 15 ಮರಗಳಿಗೆ ರಂಧ್ರ ತೋಡುತ್ತದೆ.

ಸಂಗಾತಿ ಆಕರ್ಷಿಸಲೂ ಹೌದು!

ಮರಕುಟಿಕ  ಕೇವಲ ಗೂಡು ಕಟ್ಟುವ ಸಲುವಾಗಿ ಮಾತ್ರ ಮರಕುಟ್ಟುವುದಿಲ್ಲ. ಬದಲಾಗಿ  ಸಂವಹನಕ್ಕೂ ಅದೇ ಸಾಧನ. ಪೊಳ್ಳಾದ ಮರಗಳಗನ್ನು ಮತ್ತು ಮರದ ಕೊರಡುಗಳನ್ನು ಕೊಕ್ಕಿನಿಂದ ಕುಟ್ಟಿ ಇನ್ನೊಂದು  ಹಕ್ಕಿಗೆ ಸಂದೇಶ ರವಾನಿಸುತ್ತದೆ. ತನ್ನ ಸಂಗಾತಿಯನ್ನು ಆಕಷರ್ಿಸಲು ಇವು ವಿವಿಧ ವಿಧಾನದಲ್ಲಿ ಮರವನ್ನು ಕುಟ್ಟುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಈ ಕ್ರಿಯೆ ನಡೆಸುತ್ತವೆ. ಮರಕುಟಿಕ ಮರಕುಟ್ಟುವ ಶಬ್ದ ಕಾಡಿನನ ತುಂಬೆಲ್ಲಾ ಕೇಳಿಬರುತ್ತದೆ.
ವಿಪರ್ಯಾಸವೆಂದರೆ,  ಇಂದು ನಗರೀಕರಣದ ಹಾವಳಿಯಿಂದಾಗಿ ಮರಕುಟಿಕಗಳಿಗೆ ಗೂಡು ನಿಮರ್ಮಿಸಲು ಸೂಕ್ತವಾದ ಒಣಗಿದ ಮರಗಳು ಸಿಗುತ್ತಿಲ್ಲ. ಹೀಗಾಗಿ ಸಂತತಿ ಕೊರತೆಯಿಂದ ಮರಕುಟಿಕಗಳ ಸಂಖ್ಯೆ ಕ್ಷೀಣಿಸುತ್ತಿದೆ.

Wednesday, October 23, 2013

ಬರ್ಡ್ಸ್ ಆಫ್ ಪ್ಯಾರಡೈಸ್

 ಸೌಂದರ್ಯಕ್ಕೆ ಇನ್ನೊಂದು ಹೆಸರು ನಂದನವನದ ಪಕ್ಷಿಗಳು. ಇತರ ಎಲ್ಲ ಹಕ್ಕಿಗಿಂತ ಸುಂದರ ಎಂಬ ಖ್ಯಾತಿಗಳಿಸಿವೆ. ಹೀಗಾಗಿ ಇದನ್ನು ಬರ್ಡ್ಸ್ ಆಫ್ ಪ್ಯಾರಡೈಸ್ ಎಂದು ಕರೆಯಲಾಗುತ್ತದೆ. ಇವು ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿವೆ. ಗಂಡು ಹಕ್ಕಿಗಳು ಬಣ್ಣ ಬಣ್ಣದ ಗರಿಗಳ ಜೋಡಣೆ ಮತ್ತು ಪುಕ್ಕಗಳ ಗುಚ್ಛಕ್ಕೆ ಹೆಸರುವಾಸಿ. 
ನಸುಗೆಂಪು,  ಹಳದಿ, ಬಿಳಿ, ಹಸಿರು, ನೀಲಿ ಬಣ್ಣದ ಗರಿಗಳಿಂದ ಕಂಗೊಳಿಸುತ್ತವೆ. ಗಂಡು ಹಕ್ಕಿಯ ಬಾಲದಲ್ಲಿ 
ಪತಾಕೆಯಂತಹ ಉದ್ದನೆಯ ಗರಿಗಳಿರುತ್ತವೆ. ಕೆಲವು ಹಕ್ಕಿಗೆ ತಲೆಯ ಮೇಲೂ ಉದ್ದನೆಯ ಜುಟ್ಟು ಇರುತ್ತದೆ. ಆದರೆ, ಹೆಣ್ಣು ಹಕ್ಕಿಗಳ ತಲೆ ಬೋಳಾಗಿದ್ದು, ಆಕರ್ಷಣೀಯವಲ್ಲದ ಬಣ್ಣ ಹೊಂದಿರುತ್ತವೆ.
ಬರ್ಡ್ಸ್ ಆಫ್ ಪ್ಯಾರಡೈಸ್ಗಳಲ್ಲಿ ಹೆಣ್ಣಿಗಿಂತ ಗಂಡೇ ಸುಂದರ! 


  • ಹೆಸರು ಬಂದಿದ್ದು ಹೇಗೆ?

16ನೇ ಶತಮಾನದಲ್ಲಿ ಈ ಹಕ್ಕಿಯನ್ನು ವಿಕ್ಟೋರಿಯಾ ಹಡಗಿನ ಮೂಲಕ ಯೂರೋಪಿಗೆ ತರಲಾಯಿತು. ಈ  ಹಕ್ಕಿಯ ಸೌಂದರ್ಯ ಮತ್ತು ಆಕರ್ಷಕ ಬಣ್ಣಕ್ಕೆ ಮರುಳಾದ ಅಲ್ಲಿನ ಜನರು ಈ  ಹಕ್ಕಿಗೆ ಬರ್ಡ್ಸ್ ಆಫ್ ಪ್ಯಾರಡೈಸ್ ಎನ್ನುವ ಹೆಸರನ್ನಿಟ್ಟರು.
 
  • ಮಳೆ ಕಾಡುಗಳಲ್ಲಿ ವಾಸ:

ಪ್ಯಾರಡೈಸ್ ಸಮೂಹದಲ್ಲಿ ಸುಮಾರು 42 ಪ್ರಭೇದಗಳಿವೆ. ನ್ಯೂಗಿನಿವೊಂದರಲ್ಲಿಯೇ 35 ಪ್ರಭೇದಗಳು ಕಾಣಸಿಗುತ್ತವೆ. ಉಳಿದವು ಪೂರ್ವ ಇಂಡೋನೇಷ್ಯಾ, ಟೋರೆನ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಂಡುಬರುತ್ತವೆ. ಇವು 15 ಸೆ.ಮೀಟರ್ನಿಂದ ಒಂದು ಮೀಟರ್ವರೆಗೆ ಉದ್ದವಿರುತ್ತವೆ. ಉಷ್ಣವಲಯದ ಮಳೆ ಕಾಡು ಮತ್ತು ಮಲೆನಾಡಿನ ಗುಡ್ಡಬೆಟ್ಟಗಳಲ್ಲಿ ಮಾತ್ರ ಇವು ಕಾಣಸಿಗುತ್ತವೆ. ಹಣ್ಣನ್ನು ತಿನ್ನಲು ಹೆಚ್ಚು ಇಷ್ಟಪಡುತ್ತವೆ.

  • ಬಣ್ಣದ ಗರಿಗೆ ಭಾರೀ ಬೇಡಿಕೆ:

ನ್ಯೂಗಿನಿ ನಿವಾಸಿಗಳ ಸಾಂಸ್ಕೃತಿಕ ಬದುಕಿನಲ್ಲಿಯೂ ಈ ಹಕ್ಕಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಕಳೆದ 2000 ವರ್ಷಗಳಿಂದ ಪ್ಯಾರಡೈಸ್ ಹಕ್ಕಿಯ ಚರ್ಮ ಮತ್ತು ಗರಿಗಳ ಮಾರಾಟ ನಡೆಯುತ್ತಿದೆ. ಪ್ಯಾರಡೈಸ್ ಹಕ್ಕಿಯ ಸೊಗಸಾದ ಬಣ್ಣದ ಗರಿಗಳನ್ನು ಬಟ್ಟೆ ಮತ್ತು  ವೇಷಭೂಷಣಗಳನ್ನು  ತಯಾರಿಸಲು ಬಳಸುತ್ತಾರೆ. ಹೀಗಾಗಿ ಈ ಹಕ್ಕಿಗಳಿಗೆ ಭಾರಿ ಬೆಲೆ. 
  • ಹೆಣ್ಣನ್ನು ಆಕರ್ಷಿಸಲು ನೃತ್ಯ: 

 ಆಫ್ ಪ್ಯಾರಡೈಸ್ ಹೆಚ್ಚಾಗಿ ಒಬ್ಬೊಂಟಿಯಾಗಿಯೇ ಜೀವನ ಸಾಗಿಸುತ್ತವೆ. ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಒಂದಾಗುತ್ತವೆ. ಗಂಡು ಹಕ್ಕಿ ತನ್ನ ಆಕರ್ಷಕ ಗರಿಗಳನ್ನು ಪ್ರದರ್ಶಿಸಿ ನೃತ್ಯ ಮಾಡುವ ಮೂಲಕ ಹೆಣ್ಣನ್ನು ವಲಿಸಿಕೊಳ್ಳುತ್ತದೆ. ಕೆಲವೊಮ್ಮೆ ಒಂದು ತಾಸಿಗೂ ಹೆಚ್ಚು ಕಾಲ ನೃತ್ಯಮಾಡುವುದುಂಟು. ಇವುಗಳ ನೃತ್ಯ ಅದ್ಭುತ ನೈಸರ್ಗಿಕ ವಿದ್ಯಮಾನದಲ್ಲೊಂದು. ಹೆಣ್ಣನ್ನು ಆಕರ್ಷಿಸಲು ಗಂಡು ಮಾಡುವ ಚಮತ್ಕಾರಗಳು ಅತ್ಯಂತ ಕುತೂಹಲಕಾರಿ. ಹೆಣ್ಣಿನ ಮುಂದೆನಿಂತು ಅತ್ತಿಂದಿತ್ತ ಕುಪ್ಪಳಿಸುತ್ತ ಗಿರಕಿ ಹೊಡೆಯುತ್ತವೆ. ಬರ್ಡ್ಸ್ ಆಫ್ ಪ್ಯಾರಡೈಸ್ ಎತ್ತರದ ಮರಗಳ ಮೇಲೆ ಗೂಡು ಕಟ್ಟುವ ಬದಲು ನೆಲಮಟ್ಟದ ಗಿಡಗಂಟಿಗಳ ಮೇಲೆ ಮೃದುವಾದ ವಸ್ತುಗಳನ್ನು  ಬಳಸಿ ಗೂಡು ಕಟ್ಟಿ ಮೊಟ್ಟೆಯನ್ನು ಇಡುತ್ತವೆ.

  • ಅಳಿವಿನ ಅಂಚಿನಲ್ಲಿವೆ:

ಬರ್ಡ್ಸ್ ಆಫ್ ಪ್ಯಾರಡೈಸ್ಗೆ ನೈಸರ್ಗಿಕವಾಗಿ ಹೆಚ್ಚಿನ ವೈರಿಗಳಿಲ್ಲ. ಆದರೆ, ಮಾನವರ ನಿರಂತರ ಬೇಟೆ ಮತ್ತು ಅರಣ್ಯ ನಾಶದಿಂದ ಇವು ಕಂಗೆಟ್ಟಿವೆ. ಅತ್ಯಾಕರ್ಷಕ ಗರಿಗಳಿಂದ ಕೂಡಿದ ನಂದನವನದ ಪಕ್ಷಿಗಳ ಹಲವು ಪ್ರಭೇದಗಳು ಇಂದು ಅಳಿವಿನ ಅಂಚಿನಲ್ಲಿವೆ.

 

Wednesday, October 16, 2013

ಚಾತಕ ಪಕ್ಷಿ

ಕವಿ ಸಮಯದಲ್ಲಿ ಹೆಚ್ಚಾಗಿ ವಣರ್ಣಿಸಲ್ಪಡುವ ಚಾತಕ ಪಕ್ಷಿ ಕೇವಲ ಕವಿ ಕಲ್ಪಿತ ಪಕ್ಷಿಯಲ್ಲ. ಲೋಕದಲ್ಲಿ ವಾಸ್ತವಾಗಿಯೇ ಇರುವಂಥವು. ಮಳೆಗಾಲ ಆರಂಭಕ್ಕೆ ಇನ್ನು ಸ್ವಲ್ಪ ಸಮಯ ಇದೆ ಎನ್ನುವಾಗ ಈ ಹಕ್ಕಿಗಳು ಒಮ್ಮಿಂದೊಮ್ಮೆಲೇ ಕಾಣಿಸಿಕೊಳ್ಳುತ್ತವೆ. ಮೇ ತಿಂಗಳ  ಕೊನೆ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಚಾತಕ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಣಿಗೆ ಬೀಳುತ್ತವೆ. ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡುತ್ತಾ ಮೊದಲ ಮಳೆಯ ಆಗಮನದ ಸೂಚನೆ ನೀಡುತ್ತದೆ. ಚಾತಕ ಪಕ್ಷಿ ಕಾಣಿಸಿತೆಂದರೆ ಮಳೆಯಾಗುತ್ತದೆ ಎಂದೇ ಅರ್ಥ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯ ಬಲ್ಲವು. ಹೀಗಾಗಿ ಇದನ್ನು "ಮಾರುತಗಳ ಮುಂಗಾಮಿ" ಎಂದೂ ಕರೆಯುವುದುಂಟು. ಒಮ್ಮೆ ಕಾಣಿಸಿಕೊಂಡು ಮರೆಯಾಗುವ
 ಈ ಪಕ್ಷಿ ಎಲ್ಲರಿಗೂ ಅಷ್ಟಾಗಿ ಪರಿಚಿತವಿಲ್ಲ.



ಪುರಾಣ ಕಾಲದ ಹಕ್ಕಿ
ಚಾತಕ ಎಂಬ ಪದ ಸಂಸ್ಕೃತದಿಂದ ಬಂದಿದ್ದಾಗಿದೆ. ಚಾತಕ ಅಂದರೆ ಕಾಯುವುದು ಎಂದರ್ಥ. ಜಾನಪದದಲ್ಲಿ, ಪುರಾಣದಲ್ಲಿ ಈ ಹಕ್ಕಿಗೆ ವಿಶೇಷ ಸ್ಥಾನವಿದೆ. ಈ ಹಕ್ಕಿಯ ಬಗ್ಗೆ ವೇದ ಕಾಲದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಮಹಾಕವಿ ಕಾಳಿದಾಸನ ಮೇಘದೂತ ಕಾವ್ಯದಲ್ಲಿಯೂ ಚಾತಕ ಪಕ್ಷಿಯ ವರ್ಣಣೆ ಇದೆ.

ಮಳೆ ನೀರನ್ನು ಮಾತ್ರ ಕುಡಿಯುತ್ತವೆ?
ಚಾತಕ; ಕೋಗಿಲೆ ಜಾತಿಗೆ ಸೇರಿದೆ. ಚಾತಕ ಪಕ್ಷಿಗೆ ಇಂಗ್ಲೀಷ್ನಲ್ಲಿ ಪೀಯ್ಡ್ ಕುಕ್ಕೂ ಅಥವಾ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಇದು  ಗಾತ್ರದಲ್ಲಿ ಪಾರಿವಾಳಕ್ಕಿಂತಲೂ ಚಿಕ್ಕವು. ಉದ್ದವಾದ ಪುಕ್ಕವಿದೆ. ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ  ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಬಿಲ್ಲಿನಾಕಾರದ ಪುಕ್ಕವಿದೆ. ಈ ಪುಕ್ಕದಲ್ಲಿ ಯೇ ಮಳೆಯ ನೀರನ್ನು ಹಿಡಿಟ್ಟುಕೊಂಡು ತನ್ನ ದಾಹವನ್ನು ಇಂಗಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರ. ನೀರಿಲ್ಲದೆ  ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ  ಚಾತಕಗಳಿಗೆ ಇವೆ. ಇದು ಮಳೆಯ ನೀರನ್ನು ಮಾತ್ರವೇ ಕುಡಿಯುತ್ತದೆ ಎನ್ನುವ ಪ್ರತೀತಿ. ಚಾತಕ ಭೂಮಿಯನ್ನು ತಾಕದ ನೀರಿಗಾಗಿ ಕಾತರಿಸುವ ಪಕ್ಷಿ. ಅದಕ್ಕೆ ಬೇಕಾದದ್ದು ಮಣ್ಣಿನ ಮೇಲೆ ಬಿದ್ದ ನೀರಲ್ಲ. ಬದಲಾಗಿ ಶುದ್ಧವಾದ ಅಂಬರ ಲೋಕದ ನೀರು ಎನ್ನುವ ನಂಬಿಕೆ.

ಮಳೆಯೊಂದಿಗೆ ಸಂಚಾರ
ಚಾತಕ ವಲಸಿಗ ಹಕ್ಕಿ ಎಂದೇ ಹೆಸರಾಗಿದೆ. ಇವು ಸದಾ ಮಳೆಯೊಂದಿಗೇ ಸಂಚಾರ ಮಾಡುತ್ತಿರುತ್ತವೆ. ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಆ ದಿಕ್ಕಿನತ್ತ ವಲಸೆಹೋಗುತ್ತವೆ.  ವಲಸೆ ಋತುವಿನಲ್ಲಿ ಈ ಹಕ್ಕಿ ಓಮನ್, ಸೌದಿ ಅರೇಬಿಯಾ, ಸೀಶೆಲ್ಸ್ ಗಳಿಗೆ ಭೇಟಿ ನೀಡಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಹಾದು ಮೇ ಮತ್ತು ಜೂನ್ ನಲ್ಲಿ ಭಾರತಕ್ಕೆ ಆಗಮಿಸುತ್ತವೆ.

ಸಂತಾನಕ್ಕಾಗಿ ಭಾರತಕ್ಕೆ ಆಗಮನ
ಚಾತಕ ಪಕ್ಷಿಗಳಲ್ಲಿ ಪ್ರಮುಖವಾಗಿ ಮೂರು ಉಪ ಪ್ರಭೇದಗಳಿದ್ದು, ಕ್ಲೇಮೇಟರ್ ಜಾಕೋಬೈನಸ್ ಪಿಕಾ ಮತ್ತು ಕ್ಲೇಮೇಟರ್ ಜಾಕೋಬೈನಸ್ ಜಾಕೋಬೈನಸ್ ಎಂಬ ಎರಡು ಪ್ರಭೇದಗಳು ಭಾರತದಲ್ಲಿ ಕಂಡುಬರುತ್ತವೆ. ಸಂತಾನೋತ್ಪತ್ತಿಗಾಗಿ ಆಫ್ರಿಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಕೋಗಿಲೆಗಳಂತೆ ಇವು ಸಹ ಬೇರೆ ಪಕ್ಷಿಯ ಗೂಡಿನಲ್ಲಿ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತದೆ. ಟರ್ಡ್ ಯ್ಡೆಸ್ ಪಕ್ಷಿಗಳ ನೀಲಿ ಮೊಟ್ಟೆಯನ್ನು ಎಸೆದು ತನ್ನ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಜೂನ್ ಮತ್ತು ಆಗಸ್ಟ್ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ. 

Wednesday, October 9, 2013

ಸಾವಿರ ಕಾಲುಗಳ ಸಹಸ್ರಪದಿ!

ಯಾವುದೇ ಪ್ರಾಣಿಗಳಿದ್ದರೂ ಅವುಗಳಿಗೆ ಎಂಟು ಅಥವಾ ಅದಕ್ಕಿಂತ ಹೆಚ್ಚು ಕಾಲುಗಳಿವುದು ಅಪರೂಪ. ಆದರೆ, ಈ ಜೀವಿಯ ಕಾಲುಗಳು ಎಷ್ಟಿವೆ ಎಂದು ಎಣಿಸುವುದೇ ಕಷ್ಟ. ಮುಟ್ಟಿದರೆ ಮುನಿ ಗಿಡದಂತೆ ಇವು ಕೂಡಾ ಯಾರಾದರೂ ಮುಟ್ಟಿದರೆ, ಚಕ್ಕುಲಿಯಂತೆ ದೇಹವನ್ನು ಸುತ್ತಿಕೊಂಡು ಸತ್ತಂತೆ ನಟಿಸುತ್ತವೆ! ಸಹಸ್ರಪದಿಗಳು ಬಹು ಕಾಲುಗಳುಳ್ಳ ಕೀಟಗಳ ಜಾತಿಗೆ ಸೇರಿವೆ. ಹೀಗಾಗಿ ಸಹಸ್ರಪದಿ ಎನ್ನುವ ಹೆಸರನ್ನು ನೀಡಲಾಗಿದೆ. ನಿಜವಾಗಲೂ ಇವು  ಸಾವಿರ ಕಾಲುಗಳನ್ನು ಹೊಂದಿರುವುದಿಲ್ಲ. ಕೆಲವೊಂದಕ್ಕೆ 400ಕ್ಕೂ ಹೆಚ್ಚು ಕಾಲುಗಳಿರುತ್ತವೆ. ಆದರೆ ಯಾವುದಕ್ಕೂ 750ಕ್ಕಿಂತ ಹೆಚ್ಚಿನ ಕಾಲಿರುದಿಲ್ಲ. ಇದನ್ನು ಆಂಗ್ಲ ಭಾಷೆಯಲ್ಲಿ ಮಿಲ್ಲಿಪೀಡ್ ಎನ್ನುತ್ತಾರೆ. ಗ್ರಾಮ್ಯ ಭಾಷೆಯಲ್ಲಿ ಚೋರಟೆ ಎಂದು ಕರೆದು ರೂಢಿ.


ಮಳೆಗಾಲದಲ್ಲಿ ಬರುವ ಅತಿಥಿ:

ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಕಂಡುಬರುವ  ಚಿತ್ರವಿಚಿತ್ರ ಜೀವಿಗಳಲ್ಲಿ ಸಹಸ್ರಪದಿಯೂ ಒಂದು. ರಸ್ತೆ, ತೋಟ, ಮನೆಯಂಗಳ, ಹೀಗೆ ಎಲ್ಲೆಂದರಲ್ಲಿ ನೂರೆಂಟು ಕಾಲುಳಿಂದ ಓಡಾಡುತ್ತಿರುತ್ತವೆ. ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ ಹೊಂದಿವೆ. ತಲೆ ಹೊಲೆ ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಸಹಸ್ರಪದಿಗಳಲ್ಲಿ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಪ್ರಜಾತಿಗಳಿವೆ. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳಿಂದ ಇವು ಬದುಕಿವೆ.

ತೇವಾಂಶವಿರುವ ಕಡೆ ವಾಸ:  

ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣ ಹೊಂದಿರುತ್ತವೆ. ಇವುಗಳ ದೇಹದ ನೀರಿನ ಅಂಶ ಕಾಪಾಡಲು ತೇವಾಂಶಯುತ ವಾತಾವರಣ ಬೇಕು. ಆದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಚಟುವಟಿಕೆಯಿಂದ ಇರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಯಲ್ಲಿ ಅಡಗುತ್ತವೆ. ಒಣಗಿದ, ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ. ಕೆಲವೊಂದು ಜಾತಿಯ ಸಹಸ್ರಪದಿಗಳು ಎರೆಹುಳು, ಕೆಲ ಕೀಟಗಳನ್ನೂ ತಿನ್ನುವುದುಂಟು.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ  ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
 

 ಸುರುಳಿ ಸುತ್ತುವ ದೇಹ!

ಎಲ್ಲಕ್ಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ, ಕಚ್ಚಲು, ಚುಚ್ಚಲು ಯಾವುದೇ ಅಂಗಗಳಿಲ್ಲದ, ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ  ವೈರಿಗಳನ್ನು ಗಲಿಬಿಲಿಗೊಳಿಸಲು ಚಕ್ಕುಲಿಯಾಕಾರದಲ್ಲಿ, ಇನ್ನು ಕೆಲವು ಉಂಡೆಯಾಕಾರದಲ್ಲಿ ದೇಹವನ್ನು ಸುತ್ತಿಕೊಳ್ಳುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅದನ್ನು ಹೊರಗೆಳೆದುಕೊಳ್ಳುತ್ತದೆ. ನಾಯಿಗಳು ಈ ಸಹಸ್ರಪದಿಗಳು ಕಂಡಾಗ ಅವುಗಳನ್ನು ಮುಟ್ಟಿ ಸುತ್ತಿಕೊಳ್ಳುವುದನ್ನು ಮೋಜಿನಿಂದ ನೋಡುತ್ತಿರುತ್ತವೆ.

ರಾಸಾಯನಿಕ ಅಸ್ತ್ರ ಪ್ರಯೋಗ!

ಇವು ತಮ್ಮ ರಕ್ಷಣೆಗೆ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸುತ್ತವೆ. ಕೆಲ ಸಹಸ್ರಪದಿಗಳು ಕೀಟಗಳನ್ನು, ಇರುವೆಗಳನ್ನು ದೂರಮಾಡಲು ಕೆಟ್ಟವಾಸನೆ  ಬೀರುವ, ವೈರಿಗಳ ದೇಹವನ್ನು  ಸುಡಬಲ್ಲ ರಾಸಾಯನಿಕಗಳನ್ನು ಸೃವಿಸುತ್ತವೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಮೈಮೇಲೆ ಕಜ್ಜಿಯಾಗಬಹುದು. ಹೀಗಾಗಿ ಅವುಗನ್ನು ಪುಟ್ಟ ಮಕ್ಕಳು ಬಾಯಿಗೆ ಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕು. 

ಕಾಣಲು ಅಪರೂಪವಾಗುತ್ತಿವೆ

ಮುಂಚೆ ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಇವು ಇತ್ತೀಚೆಗೆ ಮಲೆನಾಡಿನಲ್ಲೂ ಮೊದಲಿನಷ್ಟು ಕಂಡುಬರುತ್ತಿಲ್ಲ.  ಮನೆಯಂಗಳಿಗೆ ಸಿಮೆಂಟ್ ಬಳಕೆ, ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಭೂಮಿ, ಕಡಿಮೆಯಾದ ಮಳೆ ಇವೆಲ್ಲ ಕಾರಣದಿಂದ ಸಹಸ್ರಪದಿಗಳು ನಮ್ಮಿಂದ ನಿಧಾನವಾಗಿ ಕಣ್ಮರೆಯಾಗುತ್ತಿವೆ.  

Thursday, October 3, 2013

ನೀಲಿ ರಕ್ತದ ಹಾರ್ಸ್ ಶೂ ಏಡಿ!

ಮನುಷ್ಯರಂತೆಯೇ ಪ್ರಾಣಿಗಳ ರಕ್ತವೂ ಕೆಂಪಾಗಿರುವುದು ಸಾಮಾನ್ಯ. ಆದರೆ, ಈ ವಿಶಿಷ್ಟ ಪ್ರಾಣಿಯ ರಕ್ತದ ಬಣ್ಣ ಮಾತ್ರ ನೀಲಿ! ಈ ಕಾರಣಕ್ಕಾಗಿಯೇ ಇದನ್ನು ತೀರಾ ಅರೂಪದ ಪ್ರಾಣಿ ಸಂಕುಲ ಎಂದು ಗುರುತಿಸಲಾಗಿದೆ. ಈ ಪ್ರಾಣಿಯ ಹೆಸರು ಹಾರ್ಸ್ ಶೂ ಏಡಿ. ಇಂದು ಹಾರ್ಸ್ ಶೂ ಏಡಿಯ ಕೇವಲ ನಾಲ್ಕು ಪ್ರಕಾರಗಳು ಮಾತ್ರ ಉಳಿದುಕೊಂಡಿದೆ. ಇವುಗಳಲ್ಲಿ ಒಂದು ಪ್ರಕಾರ ಉತ್ತರ  ಅಮೆರಿಕ, ಅಟ್ಲಾಂಟಿಕ್ ಮತ್ತು ಗಲ್ಫ್ ಸಮುದ್ರ ತೀರದಲ್ಲಿ ಕಂಡುಬಂದರೆ, ಇನ್ನುಳಿದ ಮೂರು ಪ್ರಕಾಗಳು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಇವುಗಳಿಗೆ ಏಡಿ ಎನ್ನುವ ಹೆಸರು ಬಂದಿದ್ದರೂ ಸಹ. ಕಡಲೇಡಿ ಅಥವಾ ಸಿಗಡಿಗಳ ಜಾತಿಗೆ ಸೇರಿಲ್ಲ. ಬದಲಾಗಿ ಜೇಡ ಮತ್ತು ಚೇಳಿನ ಸಂತತಿಗೆ ಸೇರಿದ ಅರಾಕ್ನಿಡ್ ಎನ್ನುವ ಪ್ರಜಾತಿಗೆ ಸೇರಿದೆ. 


 ಜೀವಂತ ಪಳೆಯುಳಿಕೆ!
ಇವು ಡೈನೋಸಾರ್ಗಳಿಗಿಂತ 20 ಕೋಟಿ ವರ್ಷಗಳ ಹಿಂದಿನವು. ಅಂದರೆ ಸುಮಾರು 45 ಕೋಟಿ ವರ್ಷಗಳಿಂದ ಭೂಮಿಯ ಮೇಲಿವೆ. ಹೀಗಾಗಿ ಇವುಗಳಿಗೆ "ಜೀವಂತ ಪಳೆಯುಳಿಕೆ" ಎಂದು  ಕರೆಯಲಾಗುತ್ತದೆ. ಭೂಮಿಯ ಮೇಲೆ ಇಷ್ಟೊಂದು ಸುದೀರ್ಘ ಕಾಲದಿಂದ ಬದುಕಿದ್ದರೂ ಸಹ ಹಾರ್ಸ್ಶೂ ಏಡಿಯ ದೇಹ ರಚನೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಮುಂಚೆ ಹೇಗಿತ್ತೋ ಈಗಲೂ ಹಾಗಯೇ ಇದೆ.

ಶಾಂತ ಸ್ವಭಾವದ ಪ್ರಾಣಿ
ಹಾರ್ಸ್ಶೂ ಏಡಿಯ ಮೈಮೇಲೆ ತೆಳುವಾದ ಕವಚವಿದೆ. ಹರಿತವಾದ ಉದ್ದನೆಯ ಬಾಲದಿಂದ ಆಕ್ರಮಣಕಾರಿಯತೆ ಬಿಂಬಿತವಾಗಿದೆ. ಆದರೆ, ಇವು ಯಾರಿಗೂ ಹಾನಿ ಮಾಡುವಂತದ್ದಲ್ಲ. ಉದ್ದನೆಯ ಬಾಲ ಸಮುದ್ರದಲ್ಲಿ ಚಲಿಸುವ ದಿಕ್ಕನ್ನು ಬದಲಿಸಲು ನೆರವಾಗುತ್ತದೆ. ಹೆಣ್ಣು ಹಾರ್ಸ್ಶೂ ಏಡಿ ಸಮುದ್ರದ ದಡದಲ್ಲಿ 60 ರಿಂದ 120 ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಆದರೆ, ಅದರಲ್ಲಿ ಸಹಸ್ರಾರು ಮೊಟ್ಟೆಗಳು ಸಮುದ್ರ ಪಕ್ಷಿಗಳಿಗೆ ಆಹಾರವಾಗುತ್ತದೆ. ಹೆಚ್ಚಿನ ಸಂಖ್ಯೆಯ ಮರಿಗಳನ್ನು ಬೆಳೆಸುತ್ತವೆ. ಹೀಗಾಗಿಯೇ ಇವು ಸುದೀರ್ಘ ಕಾಲ ಭೂಮಿಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ. ಆದರೆ ಇಂದು ಇವು ಅಳಿವಿನ ಅಂಚಿಗೆ ತಲುಪಿರುವುದರಿಂದ ಹಾರ್ಸ್ಶೂ ಏಡಿಯ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ.


ರಕ್ತದ ಬಣ್ಣ ನೀಲಿ ಏಕೆ?
ಹಾರ್ಸ್ಶೂ ಏಡಿಯ ರಕ್ತ ಕೆಂಪಾಗಿರುವ ಬದಲು ನೀಲಿಯಾಗಿದೆ. ಇದಕ್ಕೆ ಕಾರಣ ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶವೇ ಇಲ್ಲ. ಇದರ ಬದಲಾಗಿ ಆಮ್ಲಜನಕವನ್ನು  ಹೊಂದಿರುವ ಹೊಮೊಸೈನಿಸ್ ಇದೆ. ಹೊಮೊಸೈನಿಸ್ನಲ್ಲಿ ತಾಮ್ರದ ಅಂಶ ಹೆಚ್ಚಾಗಿ  ಇರುವುದರಿಂದ ಹಾರ್ಸ್ಶೂ ಏಡಿಯ ರಕ್ತ ನೀಲಿಯಾಗಿದೆ. ಇವು ರೋಗಕಾರಕದ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿವೆ. ಬ್ಯಾಕ್ಟೀರಿಯಾಗಳ ನಾಶಕ್ಕೆ ರಕ್ತವನ್ನು ಬಳಸಲಾಗುತ್ತದೆ.

ರಕ್ತಕ್ಕೆ ಭಾರೀ ಬೇಡಿಕೆ!
ಹಾರ್ಸ್ಶೂ ಏಡಿಯ ರಕ್ತವನ್ನು ರಾಸಾಯನಿಕಗಳ ಪರೀಕ್ಷೆಗೆ ಉಪಯೋಗಿಸಲಾಗುತ್ತದೆ. ಕಡಿದ ಗಾಯಗಳನ್ನು ಗುಣಪಡಿಸಲು ಹಾರ್ಸ್ಶೂ ಏಡಿಯ ರಕ್ತದ ಜೆಲ್ನ್ನು ಹಚ್ಚಲಾಗುತ್ತದೆ. ಹೀಗಾಗಿ ಹಾರ್ಸ್ಶೂನ ನೀಲಿ ರಕ್ತಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಇದರ ಒಂದು ಬಾಟಲಿ ರಕ್ತಕ್ಕೆ ಸುಮಾರು 9 ಲಕ್ಷ ರೂ. ಬೆಲೆಯಿದೆ. ಸಮುದ್ರದಿಂದ ಹಾರ್ಸ್ಶೂ ಏಡಿಯನ್ನು ಹಿಡಿದು ತಂದು ರಕ್ತ ತೆಗೆದು, ಮತ್ತೆ ಸಮುದ್ರಕ್ಕೆ ಬಿಡಲಾಗುತ್ತದೆ. ದೇಹದಿಂದ ಶೇ.30ರಷ್ಟು ರಕ್ತ ತೆಗೆದರೂ ಇವು ಬದುಕುಳಿಯ ಬಲ್ಲವು. ನಷ್ಟವಾದ ರಕ್ತವನ್ನು 30 ದಿನದಲ್ಲಿ ತುಂಬಿಕೊಳ್ಳುತ್ತವೆ. ಆದರೆ, ಹೆಚ್ಚಿನ ರಕ್ತ ತೆಗೆಯುವುದರಿಂದ ಪ್ರತಿ ವರ್ಷ ಸುಮಾರು 20 ದಿಂದ 35 ಸಾವಿರ ಹಾರ್ಸ್ಶೂ ಏಡಿಗಳು ಸಾವಿಗೀಡಾಗುತ್ತಿವೆ ಎಂದು ಅಧ್ಯನದಿಂದ ತಿಳಿದುಬಂದಿದೆ. ರಕ್ತ ತೆಗೆಯುವುದರಿಂದ ಹಾರ್ಸ್ಶೂ ಸಂತತಿ ಇಂದು ಅಳಿವಿನ ಅಂಚನ್ನು ತಲುಪಿದೆ.