ಜೀವನಯಾನ

Sunday, July 14, 2013

ಅಮರನಾಥ ಗುಹೆಯ ಹಿಮಲಿಂಗ ದರ್ಶನ

ಅಮರನಾಥ ಗುಹೆ ಹಿಂದುಗಳ ಪವಿತ್ರ ಯಾತ್ರಾ ಸ್ಥಳ. ಜಮ್ಮು-ಕಾಶ್ಮೀರದ ಶ್ರೀನಗರದಿಂದ 141 ಕಿ.ಮೀ. ದೂರಲ್ಲಿನ ಪಹಲ್ಗಾಮ್ ಸಮೀಪದಲ್ಲಿದೆ. ಈ ಗುಹೆ ಸಮುದ್ರ ಮಟ್ಟದಿಂದ 3,888 ಮೀ. (12,756 ಅಡಿ) ಎತ್ತರದಲ್ಲಿದೆ. ಶಿವಕ್ಷೇತ್ರಗಲ್ಲಿ ಒಂದಾಗಿರುವ ಅಮರನಾಥ ಗುಹೆಯಲ್ಲಿ ನೈಸರ್ಗಿಕವಾಗಿ  ರೂಪಗೊಳ್ಳುವ ಹಿಮಲಿಂಗ ಪ್ರಮುಖ ಆಕರ್ಷಣೆ. ದಕ್ಷಿಣಕ್ಕೆ ಮುಖಮಾಡಿ ನಿಂತಿರುವ 131 ಅಡಿ ಎತ್ತರದ ಗುಹೆಯ ಒಳಗೆ ಹಿಮಲಿಂಗವಿದೆ.
 ಈ ಗುಹೆ 5000 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತದೆ.


ಹಿಮಲಿಂಗದ ಉದ್ಭವ ಹೇಗೆ?
ಗುಹೆಯ ಮೇಲ್ಭಾಗ ಮತ್ತು ಕೆಳಭಾಗ ನೀರಿನ ಸೆಲೆ ಇದ್ದು, ಗುಹೆಯ ನೆತ್ತಿಯ ಮೇಲಿನಿಂದ ತೊಟ್ಟಿಕ್ಕುವ ನೀರು ಘನೀಕೃತವಾಗಿ ಶಿವವಲಿಂಗದ ಆಕೃತಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಹಿಮಲಿಂಗ ಸುಮಾರು 15 ಅಡಿ ಎತ್ತರ ಬೆಳೆದು ಗುಹೆಯ ಒಳಗಿನ ತುದಿಯನ್ನು ಮುಟ್ಟುತ್ತದೆ. ಇದನ್ನು ಶಿವಲಿಂಗ ಎಂದು ಪರಿಗಣಿಸಲಾಗುತ್ತದೆ. ಮೇನಿಂದ ಆಗಸ್ಟ್ ತಿಂಗಳಿನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಚಂದ್ರನ ಗತಿಗೆ ಅನುಸಾರವಾಗಿ ಬೆಳೆದು ಬಳಿಕ ಕರಗುವುದು ಹಿಮಲಿಂಗದ ವಿಶೇಷ. ಶ್ರಾವಣ ಪೂರ್ಣಿಮೆಯಂದು  ಹಿಮಲಿಂಗ ಪೂರ್ಣ ಪ್ರಮಾಣದ ಎತ್ತರವನ್ನು ತಲುಪುತ್ತದೆ. ಈ ಹಿಮಲಿಂಗನ್ನು ಅಮರೇಶ್, ಅಮರೇಶ್ವರ, ರಾಸ ಲಿಂಗಂ, ಶುದ್ಧಿ ಲಿಂಗಂ ಮುಂತಾದ ಅನೇಕ ಹೆಸರಿನಿಂದ ಕರೆಯಲಾಗುತ್ತದೆ. 

ಹಿಮಲಿಂಗದ ಮಹತ್ವ: 
ಅಮರನಾಥ ಗುಹೆಯಲ್ಲಿ ಶಿವನನ್ನು ಪ್ರತಿನಿಧಿಸುವ ಹಿಮಲಿಂಗದೊಂದಿಗೆ ಎರಡು ಸಣ್ಣ ಹಿಮಲಿಂಗಗಳೂ ಇದ್ದು, ಅದು ಪಾರ್ವತಿ ಮತ್ತು ಗಣೇಶ ಎಂದು ಹೇಳಲಾಗುತ್ತದೆ. ಈ ಸ್ಥಳದಲ್ಲಿ ಶಿವ ತನ್ನ ಪತ್ನಿ ಪಾರ್ವತಿಗೆ ಜೀವನದ ರಹಸ್ಯವನ್ನು ಹೇಳಿದ ಎನ್ನುವ ಪ್ರತೀತಿ ಇದೆ. 

ಅಮರನಾಥ ಯಾತ್ರೆ:
ಅಮರನಾಥ ಯಾತ್ರೆ ಶ್ರಾವಣ ಮಾಸದಲ್ಲಿ ಅಂದರೆ, ಜೂನ್ ನಿಂದ  ಆಗಸ್ಟ್ ತನಕ ವರ್ಷಂಪ್ರತಿ ಆಯೋಜನೆ ಮಾಡಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹಿಮಲಿಂಗದ ದರ್ಶನ ಪಡೆಯಲು ಸಾವಿರಾರು ಭಕ್ತರು ಅಮರನಾಥಕ್ಕೆ ಆಗಮಿಸುತ್ತಾರೆ.  ಸಾವಿರಾರು ವರ್ಷಗಳ ಇತಿಹಾಸವಿರುವ ಅಮರನಾಥ ದೇಗುಲ 12ನೇ  ಶತನಾನದ ಬಳಿಕ ಜನಮಾನಸದಿಂದ ಕಳೆದುಹೋಗಿತ್ತು. ಅಮರನಾಥದಲ್ಲಿ ಗುಹಾಂರ್ತಗತ ಹಿಮಲಿಂಗ ಇರುವುದನ್ನು ಮುಸ್ಲಿಂ ದನಗಾಹಿಯೊಬ್ಬ ಪತ್ತೆಹಚ್ಚಿದ. ನಂತರ ಅಮರನಾಥ ಯಾತ್ರೆ ಆರಂಭವಾದಾಗ ಯಾತ್ರಾರ್ಥಿಗಳ  ಕಷ್ಟ ಸುಖವನ್ನು ನೋಡಿಕೊಳ್ಳುತ್ತಿರುವುದು ಸಹ ಮುಸ್ಲಿಮರೇ. 

ಗುಡ್ಡ, ಪರ್ವತಗಳ ಚಾರಣ:
ಅಮರನಾಥ ಗುಹೆಗೆ ತೆರಳಲು ಯಾವುದೇ ವಾಹನದ ವ್ಯವಸ್ಥೆಯಿಲ್ಲ. ಭಕ್ತರು 24 ಕಿ.ಮೀ. ಹಾದಿಯನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕು. ಇದು ಪರ್ವತ ಚಾರನವನ್ನು ಹೊಂದಿರುವ ಪ್ರಯಾಸದ ಹಾದಿ. ನಡೆಯಲು ಸಾಧ್ಯವಾಗದವರಿಗೆ ಕುದುರೆ ಸವಾರಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾತ್ರೆಯ ವೇಳೆ ಹೃದಯಾಘಾತಕ್ಕೆ ಒಳಗಾಗಿ ಅನೇಕ ಭಕ್ತರು ಸಾವನ್ನಪ್ಪುತ್ತಾರೆ. ಇತ್ತಿಚೆಗೆ ಉಗ್ರರ ಬೆದರಿಕೆಯಿಂದಾಗಿ ಯಾತ್ರೆಯುದ್ದಕ್ಕೂ ಮಿಲಿಟರಿ ಭದ್ರತೆ ಒದಗಿಸಲಾಗುತ್ತಿದೆ. ಯಾತ್ರೆಗೂ ಮುನ್ನ ಭಕ್ತರು ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 

ಮೂಲ ಸ್ವರೂಪಕ್ಕೆ ಧಕ್ಕೆ:
ಅಮರನಾಥದ ಸರಾಸರಿ ಉಷ್ಣಾಂಶ ಬೇಸಿಗೆಯಲ್ಲಿ 15 ಡಿಗ್ರಿ ಸೆಲ್ಸಿಯಸ್. ಚಳಿಗಾಲದಲ್ಲಿ ಅತ್ಯಂತ ಕಡು ಚಳಿಯಿದ್ದು, -5  ಡಿಗ್ರಿಗೆ ಕುಸಿಯುತ್ತದೆ. ಸಾಧಾರಣವಾಗಿ ನವೆಂಬರ್ನಿಂದ ಏಪ್ರಿಲ್ ತನಕ ಅಮರನಾಥ ಹಿಮಚ್ಛಾದಿತವಾಗಿರುತ್ತದೆ. ಬೇಸಿಗೆಯ ಮೂರು ತಿಂಗಳು ಮಾತ್ರ ಯಾತ್ರಾರ್ಥಿಗಳಿಗೆ   ತೆರೆದಿರುತ್ತದೆ. ಆದರೆ, ತಾಪಮಾನ ಏರಿಕೆಯ ಬಿಸಿ ಅಮರನಾಥಕ್ಕೂ ತಟ್ಟಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿ ಳು ಭೇಟಿ ನೀಡುತ್ತಿರುವುದರಿಂದ ಹಿಮಲಿಂಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಕೇಳಲಾರಂಭಿಸಿದೆ.

No comments:

Post a Comment