ಜಗತ್ತು ಕಂಡ ಶ್ರೇಷ್ಠ ನಾಗರಿಕತೆಯಲ್ಲಿ ರೋಮನ್ ನಾಗರಿಕತೆ ಸಹ ಒಂದು. ಅಂದು ನಿರ್ಮಿಸಿದ ಕಟ್ಟಡಗಳು ಇಂದಿಗೂ ಉಳಿದುಕೊಂಡಿವೆ. ಅವುಗಳಲ್ಲಿ ಒಂದು ಈ ರೋಮನ್ ಕಲೋಸಿಯಂ. ಇದೊಂದು ಹಿಂಸಾತ್ಮಕ ಮಲ್ಲ ಯುದ್ಧ, ಪ್ರಾಣಿಗಳ ಕದನಗಳು ನಡೆಯುತ್ತಿದ್ದ ಕ್ರೀಡಾಂಗಣ. ಗ್ರೀಕರ ಕಾಲದಲ್ಲಿ ಸಂಗೀತ ನಾಟಕ ಸ್ಪರ್ಧೆ, ಕ್ರೀಡೆ, ಮನೋರಂಜನೆಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ವರ್ತುಲಾಕಾರದ ರಂಗಮಂದಿರ (ಆಂಫಿಥಿಯೇಟರ್)ಗಳು ರೋಮನ್ನರ ಕಾಲಕ್ಕೆ ಕಲೋಸಿಯಂಗಳಾಗಿ ಬದಲಾದವು. ಗುಲಾಮರನ್ನು ಖಡ್ಗ ಮಲ್ಲರನ್ನೂ ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಗಳಿಸಿದ್ದವು.
ಖಡ್ಗಮಲ್ಲರ ಕಾದಾಟ:
ಹಿಂಸಾತ್ಮಕ ಮಲ್ಲಯುದ್ಧವನ್ನು ಆಡಿಸುವ ಉದ್ದೇಶಕ್ಕಾಗಿಯೇ 2 ಸಾವಿರ ವರ್ಷಗಳ ಹಿಂದೆ ಕಲೋಸಿಯಂ ನಿರ್ಮಾಣ ಮಾಡಲಾಗಿತ್ತು. ಮರಳಿನ ಅಂಗಳದಲ್ಲಿ ಮಲ್ಲ ಯೋಧರು ಸಾಯುವ ತನಕವೂ ಕಾದಾಡಬೇಕಾಗಿತ್ತು. ಈ ಕಾದಾಟದಲ್ಲಿ ಕೆಲವೇ ಕೆಲವು ಯೋಧರು ಮಾತ್ರ ಬದುಕುಳಿಯುತ್ತಿದ್ದರು. ಉಳಿದವರು ಪ್ರೇಕ್ಷಕರಿಗೆ ಕ್ರೂರ ಮನೋರಂಜನೆಯ ಹಸಿವನ್ನು ನೀಗುವ ಸಲುವಾಗಿ ಪ್ರಾಣಿಗಳಿಗಿಂತಲೂ ಹೀನಾಯವಾದ ಸಾವನ್ನು ಅನುಭವಿಸಬೇಕಾಗಿತ್ತು.
ಕಲೋಸಿಯಂ ವಿಶೇಷತೆ:
- ರೋಮನ್ ಕಲೋಸಿಯಂ ಇಂದಿನ ಕ್ರಿಕೆಟ್ ಕ್ರೀಡಾಂಗಣದಷ್ಟು ದೊಡ್ಡದಾಗಿತ್ತು. ಇದರಲ್ಲಿ 45 ಸಾವಿರ ಮಂದಿಗೆ ಆಸನ ವ್ಯವಸ್ಥೆ, 5 ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು.
- ಇದಲ್ಲದೆ ಕ್ರೀಡೆಯಲ್ಲಿ ಭಾಗವಹಿಸುವವರು ರಂಗ ಪ್ರವೇಶಿಸುವುದಕ್ಕೆ ಮತ್ತು ಪಂದ್ಯಾಟದಲ್ಲಿ ಪ್ರಾಣತೆತ್ತವರ ಕಳೇಬರವನ್ನು ಕೂಡಲೇ ಸಾಗಿಸುವ ಏರ್ಪಾಡುಗಳೂ ಇದ್ದವು.
- ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆ ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯನಾಗರಿಕರಿಗೆ, ಅವರವರ ಘನತೆಗೆ ತಕ್ಕಂತೆ ಆಸನಗಳು ಇರುತ್ತಿದ್ದವು.
- ಅಂಡಾಕಾರದಲ್ಲಿರುವ ಕಲೋಸಿಯಂ 189 ಮೀಟರ್ ಉದ್ದ, 156 ಮೀಟರ್ ಅಗಲ ಮತ್ತು 545 ಮೀಟರ್ ಸುತ್ತಳತೆಯದ್ದಾಗಿದೆ. ಕೇಂದ್ರ ರಂಗಸ್ಥಳ ಕೂಡಾ ಅಂಡಾಕಾರವಾಗಿದ್ದು, 87 ಮೀ. ಉದ್ದ ಮತ್ತು 74 ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದುಕೊಂಡಿದ್ದು, 57 ಮೀ. ಎತ್ತರವಾಗಿದೆ. ಹೊರಗಿನ ಆವರಣ ನಾಲ್ಕು ಅಂತಸ್ತನ್ನು ಹೊಂದಿದ್ದು, ಮೂರನೇ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.
ಇಟಲಿ ರಾಜಧಾನಿ ರೋಮ್ನ ಮಧ್ಯಭಾದಲ್ಲಿರುವ ಕಲೋಸಿಯಂ ರೋಮನ್ ಸಾಮ್ರಾಜ್ಯದ ಗತವೈಭವನ್ನು ಇಂದಿಗೂ ಸಾರುತ್ತಾ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಆಕಷರ್ಿಸುತ್ತಿದೆ. ಈಗ ಉಳಿದುಕೊಂಡಿರುವ ಕಲೋಸಿಯಂ ನಿಮರ್ಾಣ ಕಾರ್ಯ ಕ್ರಿ.ಶ. 70ರಲ್ಲಿ ಪ್ರಾರಂಭವಾಯಿತು. ಇದಕ್ಕಿಂತಲೂ ಮುಂಚೆ ಇದ್ದ ಕಲೋಸಿಯಮ್ನ್ನು ಮರದಿಂದ ನಿಮರ್ಿಸಲಾಗಿದ್ದು, ಕ್ರಿ.ಶ. 64ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾಗಿದ್ದರಿಂದ ಹೊಸ ಕಲೋಸಿಯಂ ನಿರ್ಮಾಣ ಅಗತ್ಯವಾಯಿತು. 10 ವರ್ಷಗಳ ಕಾಲ ನಡೆದ ನಿರ್ಮಾಣ ಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತುಶಿಲ್ಪಿಗಳು, ರೋಮಿನ ಕಾರ್ಮಿಕರ ಜತೆ ಸಾವಿರಾರು ಗುಲಾಮರನ್ನು ಬಳಸಿಕೊಳ್ಳಲಾಗಿತ್ತು.
ಹಿಂಸಾತ್ಮಕ ಕ್ರೀಡೆಗೆ ತೆರೆ:
ಕಲೋಸಿಯಂ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ಮೋಜಿನ ಕ್ರೀಡೆಗಳ ಸಮಾರಂಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೆ, ಅಪರಾಧಿಗಳನ್ನು ಸೈನ್ಯ ಸೇವೆ ತೊರೆದವರನ್ನು ಮತ್ತು ಇನ್ನು ಹಲವು ಕೈದಿಗಳನ್ನು ಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆ ಆಯೋಜಿಸಲಾಗುತ್ತಿತ್ತು. ಕೆಲವೊಮ್ಮೆ ಕೈದಿಗಳು ತಮ್ಮ ತಮ್ಮಲ್ಲಿಯೇ ಕಾದಾಡುತ್ತಾ, ಮಿತ್ರರನ್ನೇ ಕೊಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಮುಂದೆ ಕ್ರಿ.ಶ. 404ರಲ್ಲಿ ಖಡ್ಗಮಲ್ಲರ ಕ್ರೀಡೆಯನ್ನು ಅಧಿಕೃತವಾಗಿ ರದ್ದು ಮಾಡಲಾಯಿತು.