ಜೀವನಯಾನ

Sunday, April 1, 2012

ನೀರಿನಲ್ಲಿ ಈಜುವ ಪಕ್ಷಿ

ಪೆಂಗ್ವಿನ್ ಅಂದಕೂಡಲೇ ನೆನಪಾಗುವುದು ಅಂಟಾರ್ಟಿಕಾ ಖಂಡ. ಹೆಚ್ಚಿನ ಪೆಂಗ್ವಿನ್ ಗಳು ವಾಸಿಸುವುದು ಅಲ್ಲಿಯೇ. ಅದಲ್ಲದೇ ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯ, ನ್ಯುಜಿಲ್ಯಾಂಡಗಳಲ್ಲಿ ಮತ್ತು ದಕ್ಷಿಣ ದ್ರುವದ ಸಣ್ಣ ಪುಟ್ಟ ದ್ವೀಪಗಳಲ್ಲಿ ಇವು ಕಂಡುಬರುತ್ತದೆ. ಆದರೆ ಉತ್ತರಾರ್ಧ ಗೋಳದಲ್ಲಿ ಪೆಂಗ್ವಿನ್ ಗಳ ವಾಸ ಇಲ್ಲ.

 ಪೆಂಗ್ವಿನ್ ಒಂದು ವಿಶಿಷ್ಟ ಜಾತಿಯ ಪಕ್ಷಿ. ಎಲ್ಲಾ ರೀತಿಯ ಪರಿಸರಕ್ಕೂ ಇವು ಹೊಂದಿಕೊಂಡಿವೆ. ಸಮುದ್ರ ಮತ್ತು ಭೂಮಿ ಎರಡರ ಮೇಲೂ ಪೆಂಗ್ವಿನ್ ವಾಸಿಸ ಬಲ್ಲದು. ಹಾರುವ ಸಾಮರ್ಥ್ಯವನ್ನು ಪೆಂಗ್ವಿನ್ಗಳು ಲಕ್ಷಾಂತರ ವರ್ಷಗಳ ಹಿಂದೆಯೆ ಕಳೆದು ಕೊಂಡಿವೆ. ಆದರೆ ಇದರ ರೆಕ್ಕೆಗಳು ಈಜಾಡಲು ನೆರವಾಗುತ್ತಿವೆ. ಈಜುವಾಗ ರೆಕ್ಕೆಗಳು ದೋಣಿಯ ಹುಟ್ಟಿನಂತೆ ಕೆಲಸಮಾಡುತ್ತೆ. ತ್ರಿಕೋಣಾಕೃತಿಯ ಇವುಗಳ ದೇಹ ನೀರಿನಲ್ಲಿ ವೇಗವಾಗಿ ಈಜಲು ಸಹಾಯಕ. ನೀರಿನಲ್ಲಿ ಸರಾಗವಾಗಿ ಈಜಿದಂತೆಯೇ ಪೆಂಗ್ವಿನ್ ಮಾನವನಿಗಿಂತ ವೇಗವಾಗಿ ನಡೆದಾಡಬಲ್ಲವು. ನೀರಿನಲ್ಲಿರುವಾಗ 20 ನಿಮಿಷಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲವು. ಹಕ್ಕಿಯ ಜಾತಿಯಲ್ಲಿಯೇ ವೇಗವಾಗಿ ಈಜಬಲ್ಲ  ಮತ್ತು ನೀರಿನ ಆಳಕ್ಕೆ ಇಳಿಯಬಲ್ಲ ಪಕ್ಷಿ ಪೆಂಗ್ವಿನ್. ಇವು ಗಂಟೆಗೆ 32 ಕಿ.ಮೀ ವೇಗವಾಗಿ ಈಜುತ್ತವೆ.
 ಪೆಂಗ್ವಿನ್ ಜೀವಿತಾವಧಿಯ ಅರ್ಧ ಭಾಗವನ್ನು ಭೂಮಿಯ ಮೇಲೆ ಕಳೆದದರೆ ಉಳಿದ ಅರ್ಧ ಭಾಗವನ್ನು ಮಹಾಸಾಗರಗಳಲ್ಲಿ ಕಳೆಯುತ್ತವೆ. ನೀರಿನಲ್ಲಿಯ ಜೀವನಕ್ಕೇ ಹೆಚ್ಚಾಗಿ ಹೊಂದಿಕೊಂಡಿರುವ ಇವು ಹಾರಲಾರದ ಪಕ್ಷಿಗಳ  ಗುಂಪಿಗೆ ಸೇರಿದೆ. ಕೆಲವೇ ಕೆಲವು ಜಾತಿಯ ಆದರೆ, ಹೆಚ್ಚಿನ ಪೆಂಗ್ವಿನ್ಗಳು ದಕ್ಷಿಣಾರ್ಧಗೋಳದಲ್ಲಿ ವಾಸಿಸುತ್ತವೆ. ಹಲವಾರು ಜಾತಿಗಳು ಸಮಶೀತೋಷ್ಣ ವಲಯದಲ್ಲಿಯೂ ಕಂಡುಬರುತ್ತದೆ. ಜಗತ್ತಿನಲ್ಲಿ ಪೆಂಗ್ವನ್ ಗಳ  18 ಜಾತಿಗಳಿವೆ.

ಸಾಮ್ರಾಟ ಪೆಂಗ್ವಿನ್:
ಇವು ಅಂಟಾರ್ಟಿಕಾದಲ್ಲಿ ಮಾತ್ರ ಕಂಡುಬರುತ್ತದೆ. ಪೆಂಗ್ವಿನ್ಗಳಲ್ಲಿಯೇ ಅತೀ ದೊಡ್ಡ ಜೀವಂತ ಜಾತಿ ಇದಾಗಿದೆ. ಸಾಮ್ರಾಟ ಪೆಂಗ್ವಿನ್ 1.1 ಮೀಟರ್ (3 ಅಡಿ 7 ಇಂಚು) ನಷ್ಟು ಎತ್ತರ ಮತ್ತು 35 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಭಾರವಾಗಿರುತ್ತದೆ. ಸರಾಸರಿ 20 ರಿಂದ 40 ವರ್ಷ ಜೀವಿಸಬಲ್ಲದು. ಇದರ ಹೊಟ್ಟೆಯ ಭಾಗ ಬಿಳಿ ಮತ್ತು ಬೆನ್ನಿನ ಭಾಗ ಕಪ್ಪಾಗಿರುತ್ತದೆ. ಇದರ ಕಪ್ಪು ಬಿಳಿ ಪುಕ್ಕಗಳು ಅಂಗಿ ತೊಡಿಸಿದಂತೆ ಭಾಸವಾಗುತ್ತದೆ. ಮೀನು ಇವುಗಳಿಗೆ ಪ್ರೀತಿಯ ಆಹಾರ.

ನೀಲಿ ಬಣ್ಣದ ಪೆಗ್ವಿನ್:
ಪೆಂಗ್ವಿನ್ಗಳಲ್ಲಿಯೇ ಇದು ಅತೀ ಚಿಕ್ಕದು. 40 ಸೆಂಟಿಮೀಟರ್ ನಷ್ಟು ಎತ್ತರವಿದ್ದು, 1 ಕೆ.ಜಿ ತೂಗುತ್ತದೆ. ನ್ಯುಜಿಲ್ಯಾಂಡ್, ಆಸ್ಟ್ರೇಲಿಯದ ಕಡಲ ದಂಡೆಗಳಲ್ಲಿ ಕಂಡುಬರುತ್ತವೆ. 

ಹಳದಿ ಕಣ್ಣಿನ ಪೆಂಗ್ವಿನ್:

 ಇದು ತೀರಾ ಅಪರೂಪ. ಈ ಜಾತಿಯ ಕೇವಲ 5,000 ಪೆಂಗ್ವಿನ್ಗಳು ಮಾತ್ರ ಈಗ ಬದುಕಿವೆ. ನ್ಯುಜಿಲ್ಯಾಂಡ್ ಮತ್ತು ಅಕ್ಕಪಕ್ಕದ ದ್ವೀಪಗಳಲ್ಲಿ ಇವು ವಾಸವಾಗಿವೆ.

ಪರಂಪರೆ ಮುರಿಯಲ್ಲ:
ಇತರ ಪಕ್ಷಿಗಳಂತೆ  ಪೆಂಗ್ವಿನ್ ಸಹ ಗುಂಪಾಗಿ ವಾಸಿಸಲು ಇಷ್ಟಪಡುತ್ತದೆ. ತಮ್ಮದೇ ಆದ ದೊಡ್ಡ ಗುಂಪನ್ನು ಇವು ಹೊಂದಿರುತ್ತವೆ. ಗುಂಪಿನಲ್ಲಿ ಕರಾರುವಕ್ಕಾದ ನಡುವಳಿಕೆಗೆ ಪೆಂಗ್ವಿನ್ ಪ್ರಸಿದ್ಧ. ಒಂದು ಗೂಡಿನಲ್ಲಿ ನೂರಾರು ಪೆಂಗ್ವಿನ್ಗಳ ಗುಂಪು ವಾಸಿಸುತ್ತವೆ. ಸಾವಿರಾರು ವರ್ಷಗಳ ಕಾಲ ಒಂದೇ ಗೂಡಿನಲ್ಲಿಯೇ ಜೀವನ ಸಾಗಿಸುವುದು ಇವುಗಳ ಪರಂಪರೆ. ಗಂಡು ಪೆಂಗ್ವಿನ್ ಮೊಟ್ಟೆಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಅದು ಎರಡು ತಿಂಗಳು ಯಾವುದೇ ಅಹಾರ ತಿನ್ನುವುದಿಲ್ಲ. ಆಗ ಹೆಣ್ಣು ಪೆಂಗ್ವಿನ್ ಸಮುದ್ರದಲ್ಲಿರುತ್ತದೆ. ಹೆಣ್ಣು ಪೆಂಗ್ವಿನ್ ಬಂದ ನಂತರ ಮಕ್ಕಳ ಜವಾಬ್ದಾರಿಯನ್ನು ಅವುಗಳಿಗೆ ವಹಿಸಿ ಗಂಡು ಸಮುದ್ರಕ್ಕೆ ಜಾರುತ್ತದೆ. ಉಪವಾಸದಲ್ಲಿ ಕಳೆದು ಕೊಂಡಿದ್ದ ಮೈ ಕೊಬ್ಬಬನ್ನು ಗಂಡು ಪೆಂಗ್ವಿನ್ ಪುನಃ ಪಡೆದುಕೊಳ್ಳುತ್ತದೆ.
 ಮಾನವರ ಕಾಟ:
ಸಮುದ್ರದಲ್ಲಿ ಉಂಟಾಗುತ್ತಿರುವ ಮಾಲಿನ್ಯಗಳು ಪೆಂಗ್ವಿನ್ಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಅನಿಲ ಸೋರಿಕೆ, ತಾಪಮಾನ ಹೆಚ್ಚಳ, ಅಕ್ರಮ ಮೀನುಗಾರಿಕೆ, ಆಹಾರ ಕೊರತೆ ಮುಂತಾದವುಗಳಿಂದ ಪೆಂಗ್ವಿನ್ಗಳಿಗೆ ಸಂಕಷ್ಟ ಎದುರಾಗಿದೆ. 


 

No comments:

Post a Comment