ಜೀವನಯಾನ

Sunday, March 18, 2012

ಗೆದ್ದಲು ಹಳಗಳ ಮಣ್ಣಿನ ಅರಮನೆ

ಒಗ್ಗಟ್ಟಾಗಿದ್ದರೆ ಏನ್ನೆಲ್ಲಾ ಮಾಡಬಹುದು ಎಂಬುದಕ್ಕೆ ಗೆದ್ದಲು ಹುಳಗಳೇ ಸಾಕ್ಷಿ. ಕಟ್ಟಿಗೆ, ಪುಸ್ತಕ, ಪ್ಲಾಸ್ಟಿಕ್ ಹೀಗೆ ಸಿಕ್ಕಿದ್ದನ್ನೆಲ್ಲಾ ತಿನ್ನುವ ಗೆದ್ದಲು ಹುಳಗಳು ಪ್ರತೀ ವರ್ಷ ಉಂಟು ಮಾಡುವ ನಷ್ಟ ಎರಡು ನೂರು ಕೋಟಿ ಅಮೆರಿಕನ್ ಡಾಲರ್! ಗೆದ್ದಲು ಹುಳ ದಿನದ 24 ಗಂಟೆ, ವಾರದ 7 ದಿನವೂ ಇನ್ನುತ್ತಲೇ ಇರುತ್ತದೆ. ಭೂಮಿಯಲ್ಲಿರುವ ಎಲ್ಲಾ ಗೆದ್ದಲು ಹುಳಗಳನ್ನು ತೂಕಹಾಕಿದರೆ ಮಾನವರ ತೂಕ ಏತಕ್ಕೂ ಸಾಕಾಗುವುದಿಲ್ಲ. ಇನ್ನು ಅವುಗಳ ಸಂಖ್ಯೆ ಎಷ್ಟಿದೆ ಎನ್ನುವುದನ್ನು ಅಂದಾಜಿಸುವುದು ಸಾಧ್ಯವೇ? 
ಸಂಘಜೀವನ
ಬಿಳಿ ಇರುವೆ ಎಂದು ಕರೆಯಲ್ಪಡುವ ಗೆದ್ದಲು ಹುಳಗಳು ಇರುವೆಗಳಂತಯೇ ಸಂಘಟಿತ ಕುಟುಂಬ ಜೀವಿಗಳಾದರೂ ಇರುವೆಗಳ ಗುಂಪಿಗೆ ಸೇರಿಲ್ಲ. ಇರುವೆ, ಜೇನು, ಕೊಣಜ, ಮೊದಲಾದ ಕೀಟಗಳು ಅತ್ಯುತ್ತಮ ಸಂಘಜೀವನ ನಡೆಸುತ್ತವೆ. ಅದೇ ಜಾತಿಗೆ ಗೆದ್ದಲು ಹುಳಗಳೂ ಸೇರಿವೆ. ಗುಂಪಿನ ಎಲ್ಲಾ ಜೀವಿಗಳು ದುಡಿಯುವುದು ಸಮುದಾಯದ ಹಿತಕ್ಕಾಗಿ. ಒಂದು ಪರಿವಾರದಲ್ಲಿ ಲಕ್ಷಾಂತರ ಹುಳಗಳಿರುತ್ತವೆ. ಸುಮಾರು 3 ಸಾವಿರದಷ್ಟು ಜಾತಿಯ ಗೆದ್ದಲು ಹುಳಗಳನ್ನು ಪ್ರಾಣಿ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಇವು 50 ಮಿಲಿಯನ್ ವರ್ಷಗಳಿಂದಲೂ ವಾಸವಾಗಿವೆ. ಉಷ್ಣವಲಯ, ಸಮಶೀತೋಷ್ಣವಯಗಳಲ್ಲಿ  ಹೆಚ್ಚಾಗಿ ಕಂಡುಬರುತ್ತವೆ. ಮರಗಟ್ಟುಗಳ ಮೇಲೆ, ಒಣಗಿಬಿದ್ದ ದಿಮ್ಮಿಗಳ ಕೆಳಗೆ, ಭೂಮಿಯೊಳಗೆ ಇವು ಗೂಡು ಕಟ್ಟುವುದು ಸಾಮಾನ್ಯ. ಕೆಲವು ಜಾತಿಯ ಗೆದ್ದಲುಗಳು 20 ಅಡಿಗಿಂತಲೂ ಹೆಚ್ಚು ಎತ್ತರದ ಹುತ್ತ ನಿರ್ಮಿಸಬಲ್ಲವು.

ವಿಧಗಳು:
 ಇದರ ಪರಿವಾರದಲ್ಲಿ ಮುಖ್ಯವಾಗಿ, ರಾಜವಂಶ, ಕೆಲಸಗಾರ, ಸೈನಿಕ ಎಂಬ ಮೂರು ಜಾತಿಗಳಿರುತ್ತವೆ.
ರಾಜವಂಶ: ಪರಿವಾರದಲ್ಲಿ ಇವುಗಳ ಸಂಖ್ಯೆ ಕಡಿಮೆ. ಸಂತಾನೋತ್ಪತ್ತಿ ಮಾಡುವುದೇ ಇವುಗಳ ಪ್ರಮುಖ ಕಾರ್ಯ. ರಾಣಿಯ ಗಾತ್ರ ಎಲ್ಲರಿಗಿಂತ ದೊಡ್ಡದು. ರಾಜನ ಗಾತ್ರ ಸ್ವಲ್ಪ ಚಿಕ್ಕದಿರುತ್ತದೆ. ರಾಜ ಅಥವಾ ರಾಣಿಯಾಗಲು ಸಾಮರ್ಥ್ಯವಿರುವ ಸಂತಾನೋತ್ಪತ್ತಿ ಮಾಡಬಲ್ಲ ಹುಳಗಳು ಈ ವಂಶಕ್ಕೆ ಸೇರಿವೆ. ರಾಣಿ ಒಂದು ದಿನಕ್ಕೆ  ಸಾವಿರಾರು ಮೊಟ್ಟೆಗಳನ್ನು ಇಡಬಲ್ಲದು. ಗೂಡಿನ ಎಲ್ಲಾ ಚಟುವಟಿಕೆಗಳ ನಿಯಂತ್ರಣ ರಾಣಿ ಹೊರಸೂಸುವ ಪೆರಾಮೋನ್ ಗಳಿಂದ ನಡೆಯುತ್ತದೆ.
ಕೆಸಗಾರ: ಗೂಡಿನ ಎಲ್ಲಾ ಕೆಲಸ ಕಾರ್ಯಗಳ ನಿರ್ವಹಣೆ ಕೆಲಸಗಾರ ಗೆದ್ದಲಗಳ ಹೊಣೆ. ಆಹಾರ ಸಂಗ್ರಹಣೆ, ಸಂಗ್ರಹಿಸಿದ ಆಹಾರವನ್ನು ಮರಿಗಳಿಗೆ, ರಾಜರಾಣಿಯರಿಗೆ, ಸೈನಿಕರಿಗೆ ತಿನ್ನಿಸುವುದು, ಗೂಡು ನಿರ್ಮಿಸುವುದು, ಗೂಡನ್ನು ಸ್ವಚ್ಛಗೊಳಿಸುವುದು, ಮರಿಗಳನ್ನು ಬೆಳೆಸುವುದು ಎಲ್ಲಾ ಕೆಲಸಗಳು ಲಕ್ಷಗಟ್ಟಲೇ ಸಂಖ್ಯೆಯಲ್ಲಿರುವ ಕೆಲಸಗಾರರದ್ದು. ಆದರೆ ಇವು ಸಂತಾನೋತ್ಪತ್ತಿ ಮಾಡಲಾರವು.
ಸೈನಿರು: ತಮ್ಮ ಗೂಡುಗಳ ರಕ್ಷಣೆ ಇವುಗಳ ಹೊಣೆ. ಸೈನಿಕರ ದೇಹ ರಚನೆಯೇ ವಿಭಿನ್ನ. ತಮ್ಮ ಪ್ರಮುಖ ಎದುರಾಳಿಗಳಾದ ಇರುವೆಗಳ ಸೈನ್ಯವನ್ನು ಮಟ್ಟಹಾಕಲು ವಿಷದ ಜೊಲ್ಲು, ಗಟ್ಟಿಮುಟ್ಟಾದ ಎದಿರು ದವಡೆಯನ್ನು ಹೊಂದಿರುತ್ತದೆ. ಗೂಡಿನಿಂದ ಹೊರಹೋಗುವ ದಾರಿಯಲ್ಲಿ ಒತ್ತೊತ್ತಾಗಿ ಸರದಿ ಪ್ರಕಾರ ನಿಲ್ಲುವ ಜಾಯಮಾನ ಇವರದ್ದು, ಮೊದಲನೇ ಸೈನಿಕ ಹೋರಾಡಿ ಸತ್ತರೆ ಎರಡನೇಯದರ ಸರದಿ. ಒಂದು ಕ್ರಿಮಿ ಕೀಟವನ್ನು ಒಳಗೆ ಬಿಡದೇ ಇಡೀ ಅರಮನೆಗೆ ಕಾವಲಾಗುವುದು ಈ ಪುಟ್ಟ ಸೈನ್ಯ.

ಪ್ರಾಯದಲ್ಲಿ ರೆಕ್ಕೆ:
ಗೆದ್ದಲು ಹುಳುಗಳಿಗೆ ಪ್ರಾಯದಲ್ಲಿ ರೆಕ್ಕೆ ಮೂಡುತ್ತದೆ. ಬೇಸಿಗೆಯ ಮೊದಲದ ಮಳೆ ಬೀಳುತ್ತಿದ್ದಂತೆ ರೆಕ್ಕೆಹೊಂದಿದ ಪುಟ್ಟಕೀಟಗಳು ಸಾವಿರಾರು ಸಂಖ್ಯೆಯಲ್ಲಿ ಬೆಳಕಿನೆಡೆಗೆ ಬರುತ್ತವೆ. ಮಳೆಹುಳು ಎಂದು ಕರೆಯಲ್ಪಡುವ ಇವು ರೆಕ್ಕೆಮೂಡಿದ ಗೆದ್ದಲುಗಳು. ಹೊಸ ಸಂಸಾರ ಹೂಡಲು ತಯಾರಾಗುವ ವಯಸ್ಸಿಗೆ ಬಂದ ಗೆದ್ದಲುಗಳಿಗೆ ಮಾತ್ರ ರೆಕ್ಕೆ ಮೂಡುತ್ತದೆ. ತಂಪಾದ ವಾತಾವರಣವಿದ್ದಾಗ ಇವು ಗಡಿನಿಂದ ಹೊರಗೆ ಹಾರುತ್ತವೆ.

ಮಣ್ಣಿನ ಅರಮನೆ:
ಮಣ್ಣನ್ನು ಹದಮಾಡಿ ಹುತ್ತ ನಿರ್ಮಿಸುವ ಕಲೆ ಗೆದ್ದಲು ಹುಳಗಳಿಗೆ ಕರಗತ. ಹುತ್ತದ ಮೇಲ್ಮೆ ಚೂಪಾಗಿರುವ ಕಾರಣ ಸೂರ್ಯನ ಕಿರಣಗಳು ಹುತ್ತದ ಒಳ ಪ್ರವೇಶಿಸುವುದಿಲ್ಲ. ಹುತ್ತದೊಳಗೆ ಹವಾನಿಯಂತ್ರಿತ ವ್ಯವಸ್ಥೆ ಇರುತ್ತದೆ. ಹೆಚ್ಚು ಶಾಖ ಮತ್ತು ಬೆಳಕನ್ನು ಇದರ ಮೃದುವಾದ ದೇಹ ಸಹಿಸುವುದಿಲ್ಲ. ಹೀಗಾಗಿ ತೇವಾಂಶ ಯುಕ್ತವಾದ ಮರದಕಾಂಡಗಳಲ್ಲಿ, ಮನೆಯ ಗೋಡೆಗಳಮೇಲೆ ಮತ್ತು ಭೂಮಿಯೊಳಗೂ ಗೆದ್ದಲು ಗೂಡು ಕಟ್ಟುತ್ತದೆ. ಭೂಮಿಯೊಳಗೆ ಇವುಗಳ ಗೂಡು ಅನೇಕ ಅಡಿಗಳಷ್ಟು ಆಳವಾಗಿರುತ್ತದೆ. ಅದರಲ್ಲಿ ರಾಜರಾಣಿಯರಿಗೆ, ಮರಿಗಳಿಗೆ, ಆಹಾರ ಸಂಗ್ರಹಣೆಗೆ ಪ್ರತ್ಯೇಕ ಕೋಣೆಗಳು. ಓಡಾಡಲು ಪ್ಯಾಸೇಜ್ ಎಲ್ಲವನ್ನೊಳಗೊಂಡಿರುತ್ತದೆ. ಹುತ್ತಗಳನ್ನು ಮಣ್ಣು, ಜೊಲ್ಲುರಸ ಮತ್ತು ತನ್ನದೇ ಮಲ ಬಳಸಿ ನಿರ್ಮಿಸುತ್ತದೆ. ಹುತ್ತ ಅನೇಕ ಸೂಕ್ಷ್ಮ ರಂದ್ರಗಳಿಂದ ಕೂಡಿರುವುದರಿಂದ ಒಳಗಿನ ವಾತಾವರಣ ತಂಪಾಗಿರುತ್ತದೆ. ಹೀಗಾಗಿಯೇ ತಂಪಾದ ಪರಿಸರವನ್ನು ಪ್ರೀತಿಸುವ ಹಾವುಗಳು ಹುತ್ತದಲ್ಲಿನ ಗೆದ್ದಲುಗಳನ್ನು ಒಕ್ಕಲೆಬ್ಬಿಸಿ ಮನೆ ಮಾಡಿಕೊಂಡಿರುತ್ತವೆ.




 

No comments:

Post a Comment