ಬಿಸಿ ನೀರಿನ ನೈಸರ್ಗಿಕ ಸ್ನಾನ ಕೊಳ.. !
ಬಿಸಿ ನೀರಿನ ಬುಗ್ಗೆಗಳು ನೈಸರ್ಗಿಕ ಕೊಡುಗೆ. ಭೂಗರ್ಭದಲ್ಲಿನ ಶಾಖಭರಿತ ನೀರು ಭೂಮಿಯ ಮೇಲ್ಪದರದಿಂದ ಹೊರಕ್ಕೆ ಚಿಮ್ಮುವುದರಿಂದ ಇದು ಉಂಟಾಗುತ್ತದೆ. ಜಗತ್ತಿನ ಎಲ್ಲಾ ಕಡೆಗಳಲ್ಲಿ, ನದಿ, ಸಾಗರ ಹಿಮಾಲಯಗಳಲ್ಲಿಯೂ ಬಿಸಿನೀರಿನ ಬುಗ್ಗೆಗಳಿವೆ. ನೈಸರ್ಗಿಕ ನೀರಿನ ಶಾಖ ಗಣನೀಯ ಪ್ರಮಾಣದಲ್ಲಿ ಜಾಸ್ತಿಯಿದ್ದಾಗ ಬಿಸಿನೀರಿನ ಚಿಲುಮೆ ಎನಿಸಿಕೊಳ್ಳುತ್ತದೆ. ಇಂತಹ ಬುಗ್ಗೆಗಳ ಉಷ್ಣತೆ 50 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು.
- ಏಕೆ ಬಿಸಿಯಾಗಿರುತ್ತದೆ ?
ಬಿಸಿನೀರಿನ ಬುಗ್ಗೆಯ ನೀರು ಶಾಖವನ್ನು ಭೂಗರ್ಭದಲ್ಲಿನ ಶಿಲೆಗಳಿಂದ ಪಡೆದುಕೊಳ್ಳುತ್ತದೆ. ಭೂಮಿಯ ಆಳಕ್ಕೆ ಹೋದಂತೆಲ್ಲ ಶಿಲೆಗಳ ತಾಪಮಾನ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿಗೆ ನೀರು ಇಳಿದಾಗ ಈ ಶಿಲೆಗಳ ಸಂಪರ್ಕದಿಂದ ಬಿಸಿಯಾಗುತ್ತದೆ. ನೀರು ಕುದಿಯುವ ಮಟ್ಟಕ್ಕಿಂತ ಹೆಚ್ಚು ಬಿಸಿಯಾದಾಗ ಆವಿಯಾಗಿ ಪರಿವರ್ತಿತವಾಗುತ್ತದೆ. ಇವು ಅತ್ಯಂತ ಒತ್ತಡದ ಸ್ಥಿತಿಯಲ್ಲಿರುತ್ತದೆ. ಈ ಒತ್ತಡ ಹೆಚ್ಚಿದಾಗ ಭೂಮಿಯ ಪದರ ಛೇದಿಸಿ ಬಲು ಎತ್ತರದವರೆಗೆ ಕಾರಂಜಿಯಾಗಿ ಚಿಮ್ಮುತ್ತದೆ. ಇಂತಹ ಬುಗ್ಗೆಗಳಲ್ಲಿ ಗೀಸರ್, ಫ್ಯುಮರೋಲ್, ಮಡ್ ಫಾರ್ಮ್ ಎಂಬ ಹಲವು ವಿಧಗಳಿವೆ. ಇಂತಹ ಬುಗ್ಗೆ ಅತೀ ಬಿಸಿಯಾಗಿದ್ದು ಇದರ ಸಂಪರ್ಕದಿಂದ ಮೈಮೇಲೆ ಸುಟ್ಟಗಾಯಗಾಗುತ್ತವೆ. ಸಣ್ಣ ಪ್ರಮಾಣದ ಒಸರುವಿಕೆಯಿಂದ ಹಿಡಿದು ದೊಡ್ಡ ಪ್ರಮಾಣದ ನದಿಗಳವರೆಗೆ ಬಿಸಿನೀರಿನ ಬುಗ್ಗೆ ನೀರನ್ನು ಹೊರಚಿಮ್ಮುತ್ತದೆ. ಪ್ರತಿ ಸೆಕೆಂಡಿಗೆ ಒಂದು ಲೀಟರ್ಗಿಂತ ಹೆಚ್ಚು ನೀರನ್ನು ಹೊರಚಿಮ್ಮುವ ಬುಗ್ಗೆಗಳು ಗಣನೀಯ. ಚಿಲುಮೆಯ ಅತೀವ ಶಾಖಭರಿತ ನೀರಿನಲ್ಲಿ ಸಹ ಕೆಲ ಜೀವಿಗಳಿದ್ದು ಮಾನವನಿಗೆ ರೋಗ ಉಂಟು ಮಾಡಬಲ್ಲದು.
- ನೈಸರ್ಗಿಕ ಸ್ನಾನ ಕೊಳ.
ಚಿಲುಮೆಯ ನೀರಿನಲ್ಲಿ ಹಲವುಬಗೆಯ ಖನಿಜ ಮತ್ತು ಲವಣಗಳು ಕರಗಿರುತ್ತವೆ. ಈ ನೀರಿನಲ್ಲಿ ಗಂಧಕಗಳು ಹಚ್ಚಾಗಿ ಕರಗಿರುವುದರಿಂದ ಚರ್ಮರೋಗಳನ್ನು ವಾಸಿಮಾಡುವ ಗುಣವಿದೆ ಎಂದು ನಂಬಲಾಗಿದೆ. ಹೀಗಾಗಿ ಬಿಸಿನೀರಿನ ಸ್ನಾನ ಜನಪ್ರಿಯತೆ ಗಳಿಸಿಕೊಂಡಿದೆ. ನೈಸರ್ಗಿಕ ಬಿಸಿನೀರನ್ನು ಸಂಗ್ರಹಿಸಿ ಕೊಳವನ್ನು ನಿರ್ಮಿಸಿ ಸಾರ್ವಜನಿಕ ಸ್ನಾನಕ್ಕೆ ಅವಕಾಶ ಕಲ್ಪಸಿದ ಸ್ಥಳಗಳಿಗೆ ಭಾರೀಬೇಡಿಕೆ. ಜಗತ್ತಿನ ಎಲ್ಲಾಕಡೆ ಬಿಸಿನೀರಿನ ಬುಗ್ಗೆಗಳು ಕಂಡುಬಂದರೂ ಚೀನಾ, ಕೊಸ್ಟರಿಕಾ, ಐಸ್ಲ್ಯಾಂಡ್, ನ್ಯೂಜಿಲ್ಯಾಂಡ್, ಕೆನಡಾ, ಪೆರು, ಟೈವಾನ್ ಮತ್ತು ಜಪಾನ್ ದೇಶಗಳು ಬಿಸಿನೀರಿನ ಚಿಲುಮೆಗೆ ಹೆಸರುವಾಸಿ. ಭಾರತದಲ್ಲಿ ಮಣಿಕರಣ್, ಬದರಿನಾಥ, ಯಮನೋತ್ರಿ ಮುಂತಾದ ತೀರ್ಥಕ್ಷೇತ್ರಗಳಲ್ಲಿ ಬಿಸಿನೀರಿನ ಚಿಲುಮೆಗಳಿವೆ. ಅಷ್ಟೆಅಲ್ಲ ಕರ್ನಾಟಕದ ಪುತ್ತೂರಿನ ಬೆಂದ್ರ ಕ್ಷೇತ್ರದಲ್ಲಿಯೂ ಬಿಸಿನೀರಿನ ಚಿಲುಮೆ ಕಾಣಬಹುದು.
- ಇಂಧನ ಮೂಲವಾಗಿ ಬಳಕೆ.
ನೈಸರ್ಗಿಕ ಬಿಸಿನೀರನ ಬುಗ್ಗೆಗಳು ಲಭ್ಯವಿರುವ ಜಾಗದಲ್ಲಿ ನೀರಿನ ಶಾಖವನ್ನು ಶಕ್ತಿಯ ಮೂಲವನ್ನಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತದೆ. ವಿಶ್ವಾದ್ಯಂತ ಇರುವ ಭೂಶಾಖದ ಸ್ಥಾವರಗಳು ಸುಮಾರು 10 ಗಿಗಾವ್ಯಾಟ್ನಷ್ಟು ವಿದ್ಯುತ್ ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಬಿಸಿನೀರಿನ ಬುಗ್ಗೆಗಳು ಜಾಗತಿಕ ವಿದ್ಯುತ್ಶಕ್ತಿ ಬೇಡಿಕೆಗೆ ಶೇ.0.3ರಷ್ಟು ಕೊಡುಗೆ ನೀಡುತ್ತಿವೆ.
- ವಿಶ್ವದ ಕೆಲವು ಪ್ರಸಿದ್ಧ ಬಿಸಿ ನೀರಿನ ಬುಗ್ಗೆಗಳು
- ಐಸ್ ಲ್ಯಾಂಡಿನ ಗೀಸರ್ ಚಿಲುಮೆ. ನೀರು ಬಿಸಿಮಾಡಲು ಬಳಸುವ ಗೀಸರ್ ಎಂಬ ಪದ ಈ ಚಿಲುಮೆಯಿಂದಲೇ ಬಂದಿದೆ.
- ಕೊಸ್ಟರಿಕಾದ ರಿಂಕನ್ ಡಿ ಲಾ ವಿಯೇಜಾ ರಾಷ್ಟ್ರೀಯ ಉದ್ಯಾನದಲ್ಲಿನ ಬಿಸಿನೀರಿನ ಬುಗ್ಗೆಗಳು.
- ಜರ್ಮನಿಯ ಆಚೆನ್ ಬುಗ್ಗೆ. ಇದು 74 ಡಿಗ್ರಿ ಸೆ. ಉಷ್ಣಾಂಶದ ನೀರನ್ನು ಹೊರಚಿಮ್ಮುತ್ತದೆ.
- ಟಿಬೇಟ್ನ ಯಾಂಗ್ಬಾಜಿಂಗ್ ಚಿಲುಮೆ ಹಲವು ಚದರ್ ಕಿ.ಮಿ ಪ್ರದೇಶವನ್ನು ವ್ಯಾಪಿಸಿದೆ.
- ಗ್ರೀಸ್ ದೇಶದ ಇಕಾರಿಕಾ ಬಿಸಿನೀರನಿನ ಚಿಲುಮೆ ವಿಕಿರಣಯುಕ್ತ ನೀರನ್ನು ಹೊಂದಿದೆ.
- ಐಸ್ಲ್ಯಾಂಡಿನ ಡೆಯಿಲ್ಡ್ ಆಟರ್ುಂಗುವರ್ ಚಿಲುಮೆ 97 ಡಿಗ್ರಿ.ಸೆ.ಶಾಖ ಹೊಂದಿದ್ದು, ಈ ನೀರನ್ನು ಕೊಳವೆಯ ಮೂಲಕ ಹಾಯಿಸಿ ಪಟ್ಟಣವನ್ನು ಬೆಚ್ಚಗಿಡಲು ಉಪಯೋಗಿಸಲಾಗುತ್ತದೆ.
No comments:
Post a Comment