ಜೀವನಯಾನ

Friday, January 27, 2012

ಮಲಬಾರ್ ಪೈಡ್ ಹಾರ್ನಬಿಲ್

ಹಕ್ಕಿಗೆ ಒಂದೆ ಗಂಡ ಒಂದೆ ಹೆಂಡ್ತಿ !
ಮಲಬಾರ್ ಪೈಡ್ ಹಾರ್ನಬಿಲ್ (ಮಂಗಟ್ಟೆ ಹಕ್ಕಿ) ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವ ಒಂದು ವಿಶಿಷ್ಟ ಜಾತಿಯ ಪಕ್ಷಿ. ದಕ್ಷಿಣ ಭಾರತ ಮತ್ತು ಶ್ರೀಲಂಕಾಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟದ ಕಾಡುಗಳಿಗೆ ಹೊಂದಿಕೊಂಡಿರುವ ಹಳಿಯಾಳ, ದಾಂಡೇಲಿ ಹಾಗೂ ಅಂಬಿಕಾ ನಗರಗಳಲ್ಲಿ ಸುತ್ತಾಡಿದರೆ ಇವುಗಳನ್ನು ನೋಡಬಹುದು.
ಮಲಬಾರ್ ಪೈಡ್ ಹಾರ್ನಬಿಲ್ ಹಕ್ಕಿಗೆ ಹಿಂದಿಯಲ್ಲಿ ದನ್ ಛಿರಿ, ಕೊಂಕಣಿಯಲ್ಲಿ ಕನಾರಿ, ಕನ್ನಡದಲ್ಲಿ ಮಂಗಟ್ಟೆ ಹಕ್ಕಿ ಎಂದು ಕರೆಯಲಾಗುತ್ತದೆ. ಸದಾ ಹಸಿರಾಗಿರುವ ಕಾನನಗಳಲ್ಲಿ ಇವು ವಾಸವಾಗಿರುತ್ತವೆ. ಪಕ್ಷಿಗಳು ಹೆಚ್ಚಾಗಿ ಕಂಡುಬಂದರೆ ಕಾಡು ಆರೋಗ್ಯ ಪೂರ್ಣವಾಗಿದೆ ಎಂದರ್ಥ. ಸಂಖ್ಯೆ ಕ್ಷೀಣಿಸಿದ್ದರೆ ಕಾಡಿನ ಯಾವುದೋ ಒಂದು ಭಾಗದಲ್ಲಿದ್ದ ಹಣ್ಣಿನ ಮರಗಳು ಆಹುತಿಯಾಗಿವೆ; ಹೀಗಾಗಿ ಕಾಡಿಗೆ ಅಪಾಯ ಎದುರಾಗೆದೆ ಎನ್ನುವ ಮುನ್ಸೂಚನೆ ರವಾನಿಸುತ್ತೆ. ಅಂಜೂರದ ಜಾತಿಯ ಅತ್ತಿ, ಆಲ, ಬಸರಿ ಸೇರಿದಂತೆ ಎಲ್ಲಾ ಜಾತಿಯ ಹಣ್ಣಿನ ಮರಗಳಲ್ಲಿ ಗುಂಪುಗೂಡಿ ಗಲಾಟೆ ಎಬ್ಬಿಸಿ ಹಣ್ಣನ್ನು ಕೀಳುವ ಶಬ್ದ ಅರಣ್ಯದಲ್ಲೆಲ್ಲಾ ಕೇಳಿಬರುತ್ತದೆ. ಅನಿವಾರ್ಯ ಪ್ರಸಂಗಗಳಲ್ಲಿ ಹಲ್ಲಿ, ಒತಿಕ್ಯಾಟ, ಇಲಿ, ಹುಳಹಪ್ಪಟೆ ಮುಂತಾದ ಚಿಕ್ಕಪುಟ್ಟ ಪ್ರಾಣಿಗಳನ್ನೂ ತಿನ್ನುವುದುಂಟು.

ದೇಹ ರಚನೆ:
ರಣ ಹದ್ದಿನ ಗಾತ್ರದ ಹಕ್ಕಿಗೆ ಅಘಾದವಾದ ಕೊಕ್ಕಿನ ಮೇಲೆ ಖಡ್ಗ ಮೃಗಕ್ಕಿರುವ ರೀತಿಯ ಕೊಂಬು. ಕುತ್ತಿಗೆ ಹಾಗೂ ಕೆನ್ನೆಗಳ ಬಣ್ಣ ಕಪ್ಪು, ಕೆಲವು ಮಂಗಟ್ಟೆಗಳಿಗೆ ಕುತ್ತಿಗೆ ಹಾಗೂ ಎದೆಯಮೇಲೆ ಬಿಲಿ ಪಟ್ಟಿಯಿರುತ್ತದೆ. ಗಲ್ಲದಬಳಿ ಕೆಂಪು ಪಟ್ಟಿ ಸಹ ಇರಬಹುದು. ಉದ್ದವಾದ ಬಿಲಿ ಬಾಲದ ತುದಿಯಲ್ಲಿ ಕಪ್ಪು ಪಟ್ಟಿಯಿರುತ್ತದೆ. ರೆಕ್ಕೆಯ ಅಂಚಿನಲ್ಲಿರುವ ಬಿಳಿಪಟ್ಟಿಗಳು ಹಕ್ಕಿಹಾರಿದಾಗ ಸ್ಪಷ್ಟವಾಗಿ ಗೋಚರಿಸುತ್ತದೆ.

ತನ್ನ
ಗೂಡಿನಲ್ಲಿ ತನೇ ಬಂಧಿ:
ಮಾರ್ಚನಿಂದ ಜೂನ್ ತಿಂಗಳಿನಲ್ಲಿ ಮಂಗಟ್ಟೆ ಹಕ್ಕಿಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಕೆಲವೊಮ್ಮ ಫೆಬ್ರವರಿ ತಿಂಗಳಿನಲ್ಲಿಯೇ ಸಂಸಾರ ಹೂಡುತ್ತವೆ. ಮಂಗಟ್ಟೆಗಳ ವಿಶೇಷವೆಂದರೆ ಸಂತಾನಾಭಿವೃದ್ಧಿ ಕಾಲಕ್ಕೆ ಹೆಣ್ಣುಹಕ್ಕಿ ಕಾಡಿನ ಮಧ್ಯದ ದೊಡ್ಡ ಮರವನ್ನು ಹುಡುಕುತ್ತದೆ. ಭೂಮಿಯಿಂದ ಸುಮಾರು 60 ಅಡಿ ಎತ್ತರದಲ್ಲಿ ಪೊಟರೆಕೊರೆದು ಅದರಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಕೊಲವೊಮ್ಮೆ ಒಂದೇ ಸಲಕ್ಕೆ 3 ರಿಂದ 5 ಮೊಟ್ಟಗಳನ್ನೂ ಇರಿಸಿದ ಉದಾಹರಣೆಗಳಿವೆ. ಮೊಟ್ಟೆ ಇರಿಸಿದ ತಕ್ಷಣ ಹೆಣ್ಣು ಮಂಗಟ್ಟೆ ಕೇವಲ ಕೊಕ್ಕು ಮತ್ರ ಹೊರಬರುವಂತೆ ವ್ಯವಸ್ಥೆ ಮಾಡಿಕೊಂಡು ಬಾಯಿಯ ಜೊಲ್ಲು, ಮರದ ಅಂಟನ್ನು ಬಳಸಿಕೊಂಡು ಪೊಟರೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಬಿಡುತ್ತದೆ. ಮೂಲಕ ತನ್ನನ್ನೇ ತಾನು ಗೂಡಿನೊಳಗೆ ಬಂಧಿಸಿಕೊಳ್ಳುತ್ತದೆ. ಗಂಡು ಮಂಗಟ್ಟೆ ತನ್ನ ಪತ್ನಿಗೆ ಆಹಾರ ಒದಗಿಸುವ ಸೇವಕನ ಕೆಲಸಕ್ಕೆ ಅಣಿಯಾಗುತ್ತದೆ.
ಪೊಟರೆಯೊಳಗಿದ್ದ ಹೆಣ್ಣು ಮಂಗಟ್ಟೆ ಮೊಟ್ಟೆಗೆ ಕಾವು ಕೊಡುತ್ತಾ, ಮೊಟ್ಟೆ ಒಡೆದು ಜೀವತಳೆಯುವ ಮರಿಗೆ ಗೂಡಿನಲ್ಲಿ ಜಾಗಸಾಲುವುದಿಲ್ಲ ಎನ್ನುವ ಸಲುವಾಗಿ ತನ್ನೆಲ್ಲಾ ಪುಕ್ಕಗಳನ್ನು ಕಿತ್ತು ಹೊರಗೆಸೆದು ಸಂಪೂರ್ಣ ಬೋಳಾಗಿ ಹರಲಾಗದ ಸ್ಥಿತಿ ತಂದು ಕೊಳ್ಳುತ್ತದೆ. ಚಿಕ್ಕಗರಿಗಳನ್ನು ಬಳಸಿ ಪೊಟರೆಯೊಳಗೆ ಮರಿಗಳಿಗೆ ಹಾಸಿಗೆ ನಿರ್ಮಿಸುತ್ತದೆ. ಮೊಟ್ಟೆಯಿಂದ ಮರಿಹೊರಬಂದು ಹಾರಲು ಕಲಿಯುವ ವೇಳೆಗೆ ತಾಯಿ ಸಹ ಉದುರಿದ ತನ್ನ ಗರಿಗಳನ್ನು ಪುನಃ ಪಡೆದುಕೊಂಡಿರುತ್ತದೆ. ಮಧ್ಯೆ ಗಂಡುಹಕ್ಕಿ ವೇಳೆಯಲ್ಲಿ ನೀರಿನ ಅಂಶಹೆಚ್ಚಾಗಿರುವ ಹಣ್ಣುಗಳನ್ನೇ ತಂದು ತನ್ನ ಮರಿಗಳಿಗೆ ಉಣಬಡಿಸುತ್ತದೆ. ಕೆವೊಮ್ಮ ತಾನು ಉಪವಾಸ ಬಿದ್ದರೂ ಮರಿಗಳಿಗೆ ಆಹಾರ ಒದಗಿಸಲು ಮರೆಯುವುದಿಲ್ಲ. ವೇಳೆ ಗಂಡುಹಕ್ಕಿ ಆಕಸ್ಮಿಕವಾಗಿ ಸಾವನ್ನಪ್ಪಿದರೆ ರೆಕ್ಕೆಕಳೆದುಕೊಂಡು ಪೊಟರೆಯೊಳಗೆ ಬಂಧಿಯಾಗಿರುವ ಹೆಣ್ಣುಹಕ್ಕಿ ಮತ್ತು ಅದರ ಮರಿಗಳು ಹಸಿವಿನಿಂದ ಬಳಲಿ ಅಲ್ಲಿಯೇ ಸಾವನ್ನಪ್ಪುತ್ತವೆ.

ಸಂಸಾರ
ಹೂಡುತ್ತವೆ.
ಮಂಗಟ್ಟೆ ಮಾನವನಂತೆ ಸಂಸಾರ ನಡೆಸುತ್ತದೆ. ಮರಿ ಹಾರುವ ಹಂತ ತಲುಪಿದಾಗ ತಾಯಿ ತನ್ನ ಕೊಕ್ಕಿನಿಂದ ಗೂಡಿನ ಬಾಗಿಲು ಒಡೆದು ಹೊರಗರುತ್ತದೆ. ತಂದೆ ತಾಯಿಯ ಸುಪರ್ದಿಯಲ್ಲಿ ಮರಿಗಳು ಬೆಳೆದು ಕಾಡಿನ ಬದುಕಿಗೆ ಅಣಿಯಾಗುತ್ತವೆ. ತನಗೊಂದು ಸಂಗಾತಿ ಜೊತೆಯಾಗುವ ವರೆಗೆ ತಂದೆ ತಾಯಿ ಹಕ್ಕಿಗಳೊಂದಿಗೆ ಮರಿ ಅನ್ಯೋನ್ಯವಾಗಿ ಸ್ವಚ್ಚಂದವಾಗಿ ಬದುಕುತ್ತವೆ. ಏಕ ಪತಿ ಹಾಗೂ ಏಕ ಪತ್ನಿ ಮಂಗಟ್ಟೆಗಳು ಒಂದೇ ಗೂಡಿನ್ನು ಹತ್ತಾರುಬಾರಿ ಸಂತಾನೋತ್ಪತ್ತಿಗೆ ಬಳಸಿಕೊಳ್ಳುತ್ತವೆ. ಇಬ್ಬರಲ್ಲಿ ಯಾರಾದರೂ ಅಕಾಲಿಕವಾಗಿ ಸಾವನ್ನಪ್ಪಿದರೆ ಬದುಕುಳಿದ ಹಕ್ಕಿ ಜೀವನ ಪರ್ಯಂತ ಏಕಾಂಗಿಯಾಗಿ ಜೀವನ ಸಾಗಿಸುತ್ತದೆ.

3 comments:

  1. ಮಂಗಟೆ ಹಕ್ಕಿಯ ಬಗ್ಗೆ ಒಳ್ಳೆಯ ಮಾಹಿತಿ, ನಾನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುತಾಡಿದಾಗ , ಇವುಗಳನ್ನು ಫೋಟೋ ಅವಕಾಶದಿಂದ ವನ್ಚಿತನಾಗಿದ್ದೇನೆ, ಮತ್ತೊಮ್ಮೆ ಇವಗಳನ್ನು ನನ್ನ ಕ್ಯಾಮರದಲ್ಲಿ ಸೆರೆ ಹಿಡಿಯುವ ಆಸೆ ಇದೆ. ಜೀವ ರಾಜ್ ಭಟ್ ನಿಮ್ಮ ಒಳ್ಳೆಯ ಲೇಖನಕ್ಕೆ ಕೆ ನನ್ನ ಸಲಾಮ್

    ReplyDelete
  2. ಮಂಗಟ್ಟೆ ಹಕ್ಕಿ ಅಂದಚೆಂದ ನನ್ನನ್ನು ಯಾವಾಗಲೂ ಮೂಕವಿಸ್ಮಿತನನ್ನಾಗಿಸಿದೆ. ￿￿ಇತ್ತೀಚೆಗೆ ಗಣೇಶಗುಡಿಗೆ ಹೋಗಿದ್ದಾಗ ಅದರ ವಿವರಗಳನ್ನು ಸ್ನೇಹಿತ ನೀಡಿದ್ದ. ನೀವು ನೀಡಿರುವ ವಿವರಗಳು ಇನ್ನೂ ಉಪಯುಕ್ತವಾಗಿವೆ. ಧನ್ಯವಾದಗಳು.

    ReplyDelete
  3. ಮಂಗಟ್ಟೆ ಹಕ್ಕಿ ಅಂದಚೆಂದ ನನ್ನನ್ನು ಯಾವಾಗಲೂ ಮೂಕವಿಸ್ಮಿತನನ್ನಾಗಿಸಿದೆ. ￿￿ಇತ್ತೀಚೆಗೆ ಗಣೇಶಗುಡಿಗೆ ಹೋಗಿದ್ದಾಗ ಅದರ ವಿವರಗಳನ್ನು ಸ್ನೇಹಿತ ನೀಡಿದ್ದ. ನೀವು ನೀಡಿರುವ ವಿವರಗಳು ಇನ್ನೂ ಉಪಯುಕ್ತವಾಗಿವೆ. ಧನ್ಯವಾದಗಳು.

    ReplyDelete