ಜೀವನಯಾನ

Saturday, November 12, 2016

ಜಗತ್ತಿನ ವಿಷಕಾರಿ ಸಸ್ಯಗಳು

ಹಾವು, ಚೇಳು ಮತ್ತಿತರ ವಿಷಕಾರಿ ಪ್ರಾಣಿಗಳಿಂದಷ್ಟೇ ಅಲ್ಲ, ಕೆಲವೊಂದು ಸಸ್ಯಗಳು ಘನಘೋರ ವಿಷವನ್ನು ಕಕ್ಕಬಲ್ಲವು. ಅಂತಹ ಅಪಾಯಕಾರಿ ಸಸ್ಯಗಳೂ ಸಾಕಷ್ಟಿವೆ. ಅವುಗಳಲ್ಲಿ ಅತ್ಯಂತ ವಿಷಕಾರಿ ಎನಿಸಿಕೊಂಡ ಸಸ್ಯಗಳ ಉದಾಹರಣೆಗಳು ಇಲ್ಲಿವೆ.

ಸರ್ಪದ ವಿಷದಷ್ಟೇ ಅಪಾಯಕಾರಿ

ಅಕೊನಿಟಂ ಸುಂದರವಾದ ನೀಲಿ ಬಣ್ಣದ ಹೂವಿನಿಂದ  ಆಕರ್ಷಿಸುತ್ತದೆ. ಆದರೆ, ಜಗತ್ತಿನ ಮಾರಣಾಂತಿಕ ಸಸ್ಯ ಎನಿಸಿಕೊಂಡಿದೆ. ಈ ಗಿಡ ಮೈಗೆ ಸೋಕಿದರೂ ಸಾವು ಸಂಭವಿಸಬಹುದು. ಎಲೆಗಳಲ್ಲಿರುವ ನ್ಯೂರೊಟಾಕ್ಸಿನ್  (ನರಘಾತಕ ವಿಷ) ಚರ್ಮದ ಮೂಲಕ ದೇಹವನ್ನು ಸೇರುತ್ತದೆ. ಈ ಸಸ್ಯದ ಬೇರುಗಳು ಅತ್ಯಂತ ವಿಷಕಾರಿ. ಸಸ್ಯವನ್ನು ತಿಂದರೆ, ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳುತ್ತದೆ. ಕೇವಲ 6 ತಾಸಿನಲ್ಲಿಯೇ ಸಾವು ಸಂಭವಿಸಬಹುದು. ಈ ಗಿಡದ ವಿಷ ದೇಹದ ಒಳಗೆ ಸೇರಿದರೆ ಒಂದು ತಾಸಿನ ಒಳಗಾಗಿ ಚಿಕಿತ್ಸೆಗೆ ಒಳಗಾಗಬೇಕು. ಇಲ್ಲವಾದರೆ, ರಕ್ತಪರಿಚಲನೆ ನಿಧಾನಗೊಂಡು  ಹೃದಯಾಘಾತ ಸಂಭವಿಸುತ್ತದೆ. ಅಕೊನಿಟಂನಲ್ಲಿ ಸುಮಾರು 250  ಜಾತಿಯ ಗಿಡಗಳಿವೆ. ವೂಲ್ಫ್ಸ್ ಬೇನ್, ಡೆವಿಲ್ಸ್ ಹೆಲ್ಮೆಟ್, ಬ್ಲೂ ರಾಕೆಟ್ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಹುಲ್ಲುಗಾವಲುಗಳಲ್ಲಿ, ಬೆಟ್ಟದ ತುಪ್ಪಲು ಪ್ರದೇಶದಲ್ಲಿ ಇವು ಬೆಳೆಯುತ್ತವೆ. ಹಿಂದಿನ ಕಾಲದಲ್ಲಿ ತೋಳಗಳನ್ನು ಕೊಲ್ಲಲು ಈ  ಸಸ್ಯದ ಎಲೆಯನ್ನು ಬಳಸಿಕೊಳ್ಳುತ್ತಿದ್ದರು. ಹೀಗಾಗಿ ವೂಲ್ಫ್ಸ್ ಬೇನ್ ಎಂಬ ಹೆಸರು ಬಂದಿದೆ.

ಮೈಯನ್ನೇ ಸುಡುವ ಗಿಡ

 ಜೈಂಟ್ ಹೊಗ್ವೀಡ್ ಗಿಡವನ್ನು ಅಪ್ಪಿತಪ್ಪಿ ಮುಟ್ಟಿಬಿಟ್ಟರೆ ಮೈ ಮೇಲೆ ಆಸಿಡ್ ಎರಚಿಕೊಂಡತೆ.
 ಈ ಸಸ್ಯದ ಹೀಣು ಮೈಗೆ ತಾಗಿದರೆ ಚರ್ಮವನ್ನು ಸುಡಲು ಆರಂಭಿಸುತ್ತದೆ. ಚರ್ಮ ಕೆಂಪುಬಣ್ಣಕ್ಕೆ ತಿರುಗುತ್ತದೆ. ಈ ಗಿಡವನ್ನು ಸುಡುವುದು ಕೂಡ ಅಪಾಯಕಾರಿ. ಸುಟ್ಟ ಹೊಗೆಯಿಂದ ಉಸಿರಾಟಕ್ಕೆ ತೊಂದರೆಯಾಗಬಹುದು.  ಈ ಗಿಡ ಬಿಡುವ ಬಿಳಿಯ ಹೂವನ್ನು ನೋಡಲೆಂದು ಹತ್ತಿರ ಹೋದರೆ ಕಣ್ಣೇ ಕುರುಡಾಗಬಹುದು. 19ನೇ ಶತಮಾನದಲ್ಲಿ ವಿದೇಶಿ ಸಸ್ಯಗಳನ್ನು ಪರಿಚಯಿಸುವಾಗ ಅವುಗಳ ಜತೆ ಜೈಂಟ್ ಹೊಗ್ವೀಡ್ ಗಿಡಕೂಡ ಸೇರಿಕೊಂಡಿತ್ತು. ಬಳಿಕ ಯುರೋಪಿನ ಇತರ ದೇಶಗಳಲ್ಲೂ ಇದರ ರಾಕ್ಷಸ ಸಂತತಿ ಹರಡಿಕೊಂಡಿದೆ. ಈ ಗಿಡ 7ರಿಂದ 18 ಅಡಿ ಎತ್ತರಕ್ಕೆ ಬೆಳೆಯಬಲ್ಲದು. ಈ ಗಿಡಗಳನ್ನು ಬೆಳೆಯದಂತೆ ಎಚ್ಚರಿಕೆಯ ಸಂದೇಶಗಳನ್ನು ಅಳವಡಿಸಲಾಗಿದೆ. ಅಮೆರಿಕದಲ್ಲಿ ಈ ಗಿಡವನ್ನು ಬೆಳೆಯುವುದನ್ನು ಕಾನೂನು ಬಾಹಿರಗೊಳಿಸಲಾಗಿದೆ.

ಆಪಲ್ ಆಫ್ ಡೆತ್

ಮ್ಯಾಂಚಿನೇಲ್ ಟ್ರೀ ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದಕ್ಕೆ ಸೇಬು ಹಣ್ಣಿನಂಥ ಸಣ್ಣದೊಂದು ಹಣ್ಣು ಬಿಡುತ್ತದೆ. ಈ ಹಣ್ಣನ್ನು ತಿಂದರೆ ಸಾವು ಕಟ್ಟಿಟ್ಟ ಬುತ್ತಿ. ಹೀಗಾಗಿ ಈ ಮರದ ಹಣ್ಣನ್ನು ಆಪಲ್ ಆಫ್ ಡೆತ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಮರದ ಹೀಣು ಮೈ ಮೇಲೆ ಗುಳ್ಳೆಗಳನ್ನು ಏಳಿಸುತ್ತದೆ. ಈ ಸಸ್ಯದ ರಸಗಳು ಕಾರಿಗೆ ಬಳಿದ ಬಣ್ಣವನ್ನು ಅಳಿಸಿಹಾಕುವಷ್ಟು ಶಕ್ತಿಶಾಲಿ  ರಾಸಾಯನಿಕಗಳ ರೀತಿಯಲ್ಲಿ ವತರ್ತಿಸುತ್ತವೆ. 

ಈ ಬೀಜವನ್ನು ತಿನ್ನಬೇಡಿ:

ಕಾಸ್ಟರ್ ಆಯ್ಲ್ ಪ್ಲಾಂಟ್ ಗಿಡದ ಬೀಜಗಲೂ ಔಷಧ ಗುಣವನ್ನು ಹೊಂದಿದ್ದರೂ ವಿಷಕಾರಿ ಎನಿಸಿಕೊಂಡಿವೆ. ಅವುಗಳನ್ನು ನುಂಗಿದರೆ ಏನೂ ಅಪಾಯವಿಲ್ಲ. ಆದರೆ,  ಜಗೆದರೆ ಅಥವಾ 5 ಬೀಜಗಳನ್ನು ನುಂಗಿದರೆ ಸಾವಿಗೆ ಕಾರಣವಾಗಬಲ್ಲದು. ಭಾರತದಲ್ಲಿಯೂ ಈ ಸಸ್ಯ ಬೆಳೆಯುತ್ತದೆ. ಇದರ ಬೀಜ ಶೇ.40ರಷ್ಟು ಎಣ್ಣೆಯ ಅಂಶವನ್ನು ಹೊಂದಿದೆ. ಈ ಎಣ್ಣೆಯನ್ನು ಔಷಧವಾಗಿಯೂ ಬಳಸಲಾಗುತ್ತದೆ.

 

Friday, November 11, 2016

ಮರಗಳೂ ಚಲಿಸಬಲ್ಲವು!

  • ಲ್ಯಾಟಿನ್ ಅಮೆರಿಕದಲ್ಲಿದೆ ಚಲಿಸುವ ಮರ


ಭೂಮಿಯ ಆಳಕ್ಕೆ ಬೇರು ಬಿಟ್ಟು, ದೊಡ್ಡದಾಗಿ ಬೆಳೆಯುವುದೇ ಸಸ್ಯಗಳ ಬದುಕು. ಅವು ಪ್ರಾಣಿಗಳಂತೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲು ಸಾಧ್ಯವಿಲ್ಲ. ಇದೇ ಸಾರ್ವಕಾಲಿಕ ಸತ್ಯ ಎಂದು ಬಹುತೇಕರ ನಂಬಿಕೆ. ಆದರೆ, ಮರಗಳು ಕೂಡ ಚಲಿಸಬಲ್ಲವು! ಸರಿಯಾದ ಸೂರ್ಯನ ಬೆಳಕು, ನೆಲ ಸಿಗುವ ಜಾಗಕ್ಕೆ ಹೋಗಬಲ್ಲವು!
 ಹೌದು, ಇಂಥದ್ದೊಂದು ಜಾತಿಯ ಮರಗಳು ಲ್ಯಾಟಿನ್ ಅಮೆರಿಕದ ಭಾಗದಲ್ಲಿ ಕಂಡುಬರುತ್ತವೆ. ಸೊಕ್ರಾಟೆಯಾ ಕ್ಸೋರ್ಹಿಝಾ ಅಥವಾ ವಾಕಿಂಗ್ ಪಾಮ್ ಎಂಬ ಹೆಸರಿನ ಈ ಮರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಬಲ್ಲ ವಿಶೇಷ ಸಾಮಥ್ರ್ಯವನ್ನು ಹೊಂದಿದೆ. ಜಗತ್ತಿನ ಏಕೈಕ ಚಲನಶೀಲ ಮರ ಎಂದು ಕರೆಸಿಕೊಂಡಿದೆ.
 
 ಚಲಿಸುವುದು ಹೇಗೆ ಮತ್ತು ಯಾಕಾಗಿ?
ಆಹಾರವನ್ನು ಉತ್ಪಾದಿಸುವ ಸಲುವಾಗಿ ಸೂರ್ಯನ ಬೆಳಕು ಇರುವ ಕಡೆಗೆ ಸಸ್ಯಗಳು ವಾಲುವುದು ಅಥವಾ ಟೊಂಗೆಗಳು ಚಾಚಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇರೀತಿ ವಾಕಿಂಗ್ ಪಾಮ್ ಮರಗಳು ಕೂಡ ಮಣ್ಣು ಸವಕಳಿಯಾದಾಗ, ಸದೃಢವಾದ ಮಣ್ಣು ಇರುವ ಪಕ್ಕದ ಜಾಗದಲ್ಲಿ ಬೇರನ್ನು ಬಿಡುತ್ತದೆ. ಹೊಸ ಬೇರು ಭೂಮಿಯ ಆಳಕ್ಕೆ ಇಳಿಯುತ್ತಿದ್ದಂತೆ ಮರ ಆ ಕಡೆಗೆ ವಾಲುತ್ತದೆ. ಆಗ ಹಳೆಯ ಬೇರು ಮೇಲಕ್ಕೆ ಬರುತ್ತದೆ. ಮೇಲಕ್ಕೆ ಬಂದ ಬೇರನ್ನು ಅದು ಹಾಗೆಯೇ ಸಾಯಲು ಬಿಡುತ್ತದೆ. ಹೀಗೆ ಗೊತ್ತಾಗದ ರೀತಿಯಲ್ಲಿ ಮರ ತಾನು ಇದ್ದ ಜಾಗವನ್ನು ಖಾಲಿ ಮಾಡಿಬಿಟ್ಟಿರುತ್ತದೆ. ಈ ಪ್ರಕ್ರಿಯೆ ತೀರಾ ನಿಧಾನ. ಅಗತ್ಯವೆನಿಸಿದರೆ ವರ್ಷಕ್ಕೆ ಸುಮಾರು 20 ಮೀಟರ್ನಷ್ಟು ಚಲಿಸಬಲ್ಲವು ಎಂದು ಅಂದಾಜಿಸಲಾಗಿದೆ. ಉತ್ತಮವಾದ ಸೂರ್ಯನ ಬೆಳಕು ಮತ್ತು ಸದೃಢವಾದ ಮಣ್ಣಿರುವ ಜಾಗವನ್ನು ಅವು ಆಯ್ಕೆ ಮಾಡಿಕೊಳ್ಳುತ್ತವೆ.

ಕಾಲುಗಳಂತೆ ಕಾಣುವ ಬೇರುಗಳು:
ಮರಗಳು ಚಲಿಸಬೇಕಾದರೆ ಅವುಗಳ ಬೇರುಗಳು ವಿಭಿನ್ನವಾಗಿರಬೇಕು. ಅದೇ ರೀತಿ ವಾಕಿಂಗ್ ಪಾಮ್ ಮರಗಳ ಬೇರುಗಳು ಕೂಡ ನೀಳವಾಗಿವೆ. ಭೂಮಿಯ ಮೇಲಿಂದ ಕೆಲವು ಅಡಿ ಎತ್ತರಕ್ಕೆ ಅವು ಚಾಚಿಕೊಂಡಿರುತ್ತವೆ. ಅವುಗಳನ್ನು ನೋಡಿದರೆ ಮರಗಳಿಗೆ ಕಾಲುಗಳನ್ನು ಅಂಟಿಸಿದ ಹಾಗೆ ಕಾಣುತ್ತದೆ.

ಮಳೆ ಕಾಡಿನ ಸಸ್ಯ:
ಕೋಸ್ಟಾರಿಕಾ ಮತ್ತು ದಕ್ಷಿಣ ಅಮೆರಿಕದ ಖಂಡದ ಮಳೆಕಾಡುಗಳಲ್ಲಿ ಮಾತ್ರ ವಾಕಿಂಗ್ ಪಾಮ್ ಮರಗಳು ಕಾಣಸಿಗುತ್ತವೆ. ಅದರ ಎಲೆಗಳು ದಪ್ಪ ಮತ್ತು ಉದ್ದವಾಗಿರುತ್ತವೆ. ಸೂರ್ಯನ ಕಿರಣ ಹೆಚ್ಚಿಗೆ ಸಿಕ್ಕಷ್ಟೂ ಅವು ಇನ್ನಷ್ಟು ದಪ್ಪವಾಗಿ ಬೆಳೆಯುತ್ತವೆ. ಎಪಿಫೈಟ್ ಎಂಬ ಸಸ್ಯದ ಹಲವು ಪ್ರಭೇದಗಳು ಈ ಮರದ ಮೇಲೆ ಬೆಳೆಯುತ್ತವೆ. ಮರದ ಬೀಜಗಳನ್ನು ತಿನ್ನಲು ಬರುವ ಜೀರುಂಡೆಗಳ ಮತ್ತು ಇತರ ಕೀಟಗಳಿಂದ ಪರಾಗಸ್ಪರ್ಶ ಕ್ರಿಯೆ ನೆರವೇರುತ್ತದೆ. ಈ ಮರಗಳು ಸುಮಾರು 25 ಮೀಟರ್ ಎತ್ತರಕ್ಕೆ ಬೆಳೆಯಬಲ್ಲವು. ಮನೆಗಳನ್ನು ಕಟ್ಟಲು ಈ ಮರವನ್ನು ಉಪಯೋಗಿಸುತ್ತಾರೆ. ಬೇರುಗಳು ನೀಳವಾಗಿರವುದರಿಂದ ಅವುಗಳನ್ನು ಈಟಿಗಳನ್ನು ತಯಾರಿಸುತ್ತಾರೆ.

ಮರ ಚಲಿಸುವುದು ನಿಜವೇ?
ಮರಗಳು ಚಲಿಸುತ್ತವೆ ಎಂಬುದನ್ನು ವಿಜ್ಞಾನಿಗಳು ನಂಬಲು ಸಿದ್ಧರಿಲ್ಲ. ಆದರೆ, ಮರದ ಬೇರುಗಳು ಭೂಮಿಯಿಂದ 6 ಅಡಿಯಷ್ಟು ಎತ್ತರ ಇರುವ ಕಾರಣ ಬಿಸಿಲಿನ ಕಡೆಗೆ ವಾಲುವುದಕ್ಕೆ ವರದಾನವಾಗಿದೆ. ವರ್ಷಕ್ಕೆ 10ರಿಂದ 20 ಮೀಟರ್ ಜಾಗವನ್ನು ಅವು ಬದಲಿಸಬಲ್ಲವು. ಅಲ್ಲದೇ ಸೂರ್ಯನ ಬೆಳಕು, ನೆಲ ಮತ್ತು ನೀರು ಸಮರ್ಪಕವಾಗಿ ದೊರೆಯುತ್ತಿದ್ದರೆ ಅವುಗಳು ಚಲಿಸುವುದು ತೀರಾ ವಿರಳ. 

ವಿಶ್ವದ ಅತಿ ಎತ್ತರದ ಏಂಜಲ್ ಜಲಪಾತ

ನೀವೆಲ್ಲಾ ಜೋಗ ಜಲಪಾತವನ್ನು ನೋಡಿರುತ್ತೀರಾ ಅಥವಾ ಅದರ ಬಗ್ಗೆ ಕೇಳಿರುತ್ತೀರಾ. ಆದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರವಿರುವ ಏಂಜಲ್ ಜಲಪಾತದ ಬಗ್ಗೆ ಕೇಳಿದ್ದೀರಾ? ಅದು ಎಷ್ಟು ಎತ್ತರವಿದೆಯೆಂದರೆ, ಜಲಪಾತದ ತುದಿಯಿಂದ ಭೂಮಿಯ ಮೇಲೆ ಬೀಳುವ ಮುನ್ನವೇ ಹೆಚ್ಚಿನ ಪ್ರಮಾಣದ ನೀರು ಆವಿಯಾಗಿ ಹೋಗುತ್ತದೆ. ದಕ್ಷಿಣ ಅಮೆರಿಕ ಖಂಡದ ತುತ್ತತುದಿಯಲ್ಲಿರುವ ವಿನಿಜುವೆಲಾದಲ್ಲಿ ಈ ರಮಣೀಯ ಜಲಪಾತವಿದೆ.
 

ಜೋಗಕ್ಕಿಂತ ನಾಲ್ಕುಪಟ್ಟು ಎತ್ತರ:
ಏಂಜಲ್ ಜಲಪಾತ ಒಟ್ಟು 979 ಮೀ.(3,212 ಅಡಿ) ಎತ್ತರವಿದೆ. ಸುಮಾರು 807 (2,648 ಅಡಿ)ಯಿಂದ ನೀರು ಧುಮ್ಮಿಕ್ಕುತ್ತದೆ. ಕನೈಮ ರಾಷ್ಟ್ರೀಯ ಉದ್ಯಾನದ ಆಯನ್-ಟೆಪು  ಪರ್ವತದ ತುದಿಯಿಂದ ಬೀಳುತ್ತದೆ. ಗೌಜಾ ನದಿ ಜಲಪಾತಕ್ಕೆ ನೀರಿನ ಮೂಲ. ಜಲಪಾತದ ನೀರು ಕೆರಪ್ ನದಿಗೆ ಪೂರೈಕೆಯಾಗುತ್ತದೆ. ಜಲಪಾತವು ತಳದಲ್ಲಿ 150 ಮೀಟರ್ ಅಗಲವಾಗಿದೆ. ಪ್ರಮುಖ ಜಲಪಾತದ ತಳದಲ್ಲಿ ಚಿಕ್ಕದಾದ ಇನ್ನೆರಡು ಜಲಪಾತಗಳಿವೆ. ಜೋಗ ಜಲಪಾತವನ್ನು ಹೋಲಿಕೆ ಮಾಡುವುದಾದರೆ, ಜೋಗಕ್ಕಿಂತ ನಾಲ್ಕುಪಟ್ಟು ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ. ಏಂಜಲ್ ಜಲಪಾತದ ನೀರಿನ ಭೋರ್ಗರೆತ ಯಾವಮಟ್ಟಿಗೆ ಇದೆ ಅಂದರೆ, 1 ಕಿ.ಮೀ. ದೂರದ ವರೆಗೂ ಪ್ರವಾಸಿಗರು ನೀರಿನ ತುಂತುರು ಹನಿಗಳ ಸ್ಪರ್ಶವನ್ನು ಅನುಭವಿಸಬಹುದು.  ಆಫ್ರಿಕಾದ ವಿಕ್ಟೋರಿಯಾ ಜಲಪಾತ, ಉತ್ತರ ಅಮೆರಿಕದ ನಯಾಗರ ಫಾಲ್ಸ್, ದಕ್ಷಿಣ ಅಮೆರಿದ ಇಗುವಾಜು ಫಾಲ್ಸ್ ಬಳಿಕ ಜಗತ್ತಿ ಅತ್ಯಂತ ಸುಂದರ ಜಲಪಾತ ಎಂಬ ಹೆಗ್ಗಳಿಕೆಗೆ ಏಂಜಲ್ ಫಾಲ್ಸ್ ಪಾತ್ರವಾಗಿದೆ.

ಹೆಸರು ಬಂದಿದ್ದು ಹೇಗೆ?
ಸ್ಥಳೀಯ ಜನರು ಈ ಜಲಪಾತವನ್ನು ಕೆರೆಪಾಕುಪೈ ಎಂದು ಹೆಸರಿಸುತ್ತಾರೆ. 1937ರಲ್ಲಿ ಅಮೆರಿಕದ ವಿಮಾನ ಚಾಲಕ ಜಿಮ್ಮಿ ಎಂಜಲ್ ಎಂಬಾತ  ಆಯನ್-ಟೆಪು  ಪರ್ವತದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಆತನ ವಿಮಾನ ಪತನಗೊಂಡಿತ್ತು. ಬಳಿಕ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚರಿಸದ ವೇಳೆ ಪರ್ವತದ ತುದಿಯಲ್ಲಿ ಜಲಪಾತ ಇರುವುದನ್ನು ಆತ ಪತ್ತೆ  ಮಾಡಿದ್ದ. ಅಂದಿನಿಂದ ಏಂಜಲ್ ಜಲಪಾತ ಅಂತಲೇ ಪ್ರಸಿದ್ಧಿ ಪಡೆದಿದೆ. ಕನೈಮ ರಾಷ್ಟ್ರೀಯ ಉದ್ಯಾನದಲ್ಲಿರುವ ಮ್ಯೂಸಿಯಂನಲ್ಲಿ ವಿಮಾನವನ್ನು ಪ್ರದರ್ಶನಕ್ಕೆ ಇಡಾಗಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಜಲಪಾತ ಸ್ಥಾನಪಡೆದಿದೆ.

ಜಲಪಾತ ವೀಕ್ಷಣೆ ಇಂದಿಗೂ ಕಷ್ಟ:
ಏಂಜಲ್ ಜಲಪಾತದಿಂದ ವರ್ಷಪೂರ್ತಿ ನೀರು ಧುಮ್ಮಿಕ್ಕುತ್ತದೆ. ವರ್ಷದ ಸದಾಕಾಲ ಈ ಜಲಪಾತದಲ್ಲಿ ನೀರಿರುತ್ತದೆ. ಮಳೆಗಾಲದಲ್ಲಿ ನೀರಿನ ಭೋರ್ಗರೆತ ಜಾಸ್ತಿ. ಮಳೆಗಾಲದಲ್ಲಿ ಎರಡು ಭಾಗವಾಗಿ ನೀರು ಪರ್ವತದ ಮೇಲಿಂದ ಧುಮ್ಮಿಕ್ಕುತ್ತದೆ. ನದಿಯಲ್ಲಿ ಹೆಚ್ಚಿನ ನೀರಿದ್ದರೆ ಜಲಪಾತ ವೀಕ್ಷಣೆಗೆ ಬೋಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಏಂಜಲ್ ಜಲಪಾತ ವೆನಿಜುವೆಲಾದ ಪ್ರಸಿದ್ಧ ಪ್ರಸಿದ್ಧ ಪ್ರವಾಸಿ ತಾಣ ಎನಿಸಿಕೊಂಡಿದೆ. ಆದರೆ, ಇಂದಿಗೂ ಜಲಪಾತಕ್ಕೆ ಪ್ರವಾಸ ಕೈಗೊಳ್ಳಲು ಪರಿಶ್ರಮ ಪಡಬೇಕು. ದುರ್ಗಮವಾದ ಕಾಡನ್ನು ದಾಟಿ ಜಲಪಾತದ ಸಮೀಪ ತಲುಪುವುದು ಅಷ್ಟು ಸುಲಭದ ಮಾತಲ್ಲ.



ಬೆಟ್ಟಕೊರೆದು ನಿರ್ಮಿಸಿದ ಬೃಹತ್ ಬುದ್ಧ

ಪ್ರಪಂಚದಲ್ಲಿ ಹಲವಾರು ಬುದ್ಧನ ಮೂರ್ತಿಗಳನ್ನು ನೋಡಿರುತ್ತೀರಿ. ಆದರೆ, ಈ ಬುದ್ಧನ ಮೂತರ್ಿಯನ್ನು ಬೃಹತ್ ಗುಡ್ಡವನ್ನು ಕೊರೆದು ನಿರ್ಮಿಸಲಾಗಿದೆ. ಇದು ಬರೋಬ್ಬರಿ 233 ಅಡಿ ಎತ್ತರವಾಗಿದೆ. ಚೀನಾದ ಟಾಂಗ್ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಲೇಷನ್ನ ಬೃಹತ್ ಬುದ್ಧ ಜಗತ್ತಿನ ಅತಿ ಎತ್ತರದ ಕಲ್ಲಿನ ಬುದ್ಧನ ಶಿಲ್ಪ ಎಂದು ಹೆಸರು ಪಡೆದಿದೆ. ಈ ಬೃಹತ್ ಮೂರ್ತಿಯ ಅಗಾಧತೆಯ ಮುಂದೆ ಮನುಷ್ಯ ಏನೇನೂ ಅಲ್ಲ. 1200 ವರ್ಷಗಳಿಂದ ಬಿಸಿಲು ಮಳೆಗೆ ಮೈಯೊಡ್ಡಿ ಈಗಲೂ ಅಸ್ತಿತ್ವ ಕಾಯ್ದುಕೊಂಡಿದೆ. ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಇದು ಆಕರ್ಷಿಸುತ್ತಿದೆ. 
 


ಬುದ್ಧನ ಮೂರ್ತಿ ನಿರ್ಮಿಸಿದ್ದು ಏಕೆ?
ಚೀನಾದ ಸಿಚುವಾನ್ ಪ್ರಾಂತದ ಮಿಂಜಿಯಾಂಗ್, ದಾಡು ಮತ್ತು ಕ್ವಿಂಗೈ ನದಿಗಳು ಒಂದನ್ನೊಂದು ಸೇರುವ ಕಡೆ ಲೇಷನ್ ಎಂಬಲ್ಲಿ ಬುದ್ಧನ ಮೂರ್ತಿ ಇದೆ. ಈ ನದಿಯಗಳು ಪದೇ ಪ್ರವಾಹಕ್ಕೆ ತುತ್ತಾಗಿ ದೋಣಿಗಳು ಮುಳುಗಿ  ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಇದರಿಂದ ಪಾರಾಗುವ ಉಪಾಯ ಹುಡುಕಿದ ಚೀನಾದ ಬೌದ್ಧ ಸನ್ಯಾಸಿ ಹೈಟೊಂಗ್ ಎಂಬಾತ ನದಿಗಳ ಕೋಪವನ್ನು ಶಾಂತಗೊಳಿಸಲು ನದಿಯ ದಂಡೆಯ ಮೇಲಿದ್ದ ಕಲ್ಲಿನ ಬಂಡೆಯನ್ನು ಕೊರೆದು ಬುದ್ಧನ ಮೂರ್ತಿ ಯನ್ನು ನಿರ್ಮಿಸುವ ಸಲಹೆ ನೀಡುತ್ತಾನೆ. ಹೀಗೆ ನಿರ್ಮಾಣವಾಗಿದ್ದೇ ಲೇಷನ್ನ ಬೃಹತ್ ಬುದ್ಧ. 713ರಲ್ಲಿ ಈ ಬುದ್ಧನ ಮೂರ್ತಿಯನ್ನು ನಿರ್ಮಿಸುವ ಕಾರ್ಯ ಆರಂಭವಾಗುತ್ತದೆ. ಆದರೆ, ಹಣಕಾಸಿನ ಕೊರತೆಯಿಂದಾಗಿ ಬುದ್ಧನ ಕೆತ್ತನೆ ಕಾರ್ಯ ಅರ್ಧದಲ್ಲೇ ನಿಂತು ಹೋಗುತ್ತದೆ. ಹೀಗಾಗಿ ಹೈಟೊಂಗ್ನ ಶಿಷ್ಯರು 20 ವರ್ಷ ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಾರೆ. ಬರೋಬ್ಬರಿ 80 ವರ್ಷಗಳ ಬಳಿಕ ಅಂದರೆ 803ರಲ್ಲಿ ಆತನ ಶಿಷ್ಯಂದಿರು  ಬುದ್ಧನ ಮೂರ್ತಿ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ. ಬೌದ್ಧರ ಪವಿತ್ರ ಬೆಟ್ಟವೆನಿಸಿದ ಮೌಂಟ್ ಎಮಿಗೆ ಎದುರಾಗಿ ನಿಂತಿರುವ ಬೆಟ್ಟದಲ್ಲಿ ಇದನ್ನು ನಿರ್ಮಿಸಲಾಗಿದೆ. ಗುಡ್ಡವನ್ನು ಕರೆಯುವ ವೇಳೆ ಸಂಗ್ರಹವಾದ ಅಪಾರ ಪ್ರಮಾಣದ ಕಲ್ಲಿನ ಚೂರುಗಳನ್ನು ನದಿಯಲ್ಲಿ ತುಂಬಿ ಪ್ರವಾಹದ ದಿಕ್ಕನ್ನು ಬದಲಿಸಲಾಯಿತು. ಇದರಿಂದ ದೋಣಿಗಳ ಸಂಚಾರಕ್ಕೆ ಸುಗಮವಾಯಿತು. ಜತೆಗೆ ಪ್ರವಾಹವೂ ತಗ್ಗಿತು.

ವಿರಾಟ ಮೂರ್ತಿಯ ವಿಶೇಷತೆ:
ತನ್ನ ನೀಳವಾದ ಕೈಗಳನ್ನು ಮಂಡಿಯ ಮೇಲೆ ಇಟ್ಟು ಕುಳಿತು ಶಾಂತ ಚಿತ್ತದಿಂದ ನದಿಯನ್ನು ನೋಡುತ್ತಿರುವ ಸ್ಥಿತಿಯಲ್ಲಿ ಬುದ್ಧನ ಮೂರ್ತಿಯನ್ನು ಕೆತ್ತಲಾಗಿದೆ. ಕುಳಿತ ಮೈತ್ರೇಯ ಬುದ್ಧನ ಮೂರ್ತಿಯನ್ನು ಇದು ಹೋಲುತ್ತದೆ. ಮೂರ್ತಿಯ ಬುಜಗಳು 28 ಮೀಟರ್ ಅಗಲವಾಗಿವೆ. ಬುದ್ಧನ ಕೈಗಳು 50 ಅಡಿ ಎತ್ತರವಾಗಿವೆ. ಮೂಗು 20 ಅಡಿ ಉದ್ದವಾಗಿದ್ದು, ಎಲ್ಲ ಕೈ ಬೆರಳುಗಳು 10 ಅಡಿ ಉದ್ದವಿವೆ. ಬುದ್ಧನ ಸಂಪೂರ್ಣ ರಚನೆಯನ್ನು ಕಲ್ಲಿನಿಂದಲೇ ಕೆತ್ತಲಾಗಿದೆ. ಆದರೆ, ಮರದಿಂದ ಮಾಡಿದ ಕಿವಿಯನ್ನು ಅಳವಡಿಸಲಾಗಿದೆ. ಬುದ್ಧನ ತಲೆಯ ಮೇಲೆ ಗುಂಗುರು ಕೂದಲಿನ ರಚನೆಯನ್ನು ಮಾಡುವ ಸಲುವಾಗಿ 1,021 ಉಬ್ಬುಗಳನ್ನು ಕೊರಯಲಾಗಿದೆ. ಅದಕ್ಕೆ ಕರಿಯ ಬಣ್ಣ ಬಳಿಯಲಾಗಿದ್ದು, ಕೆತ್ತನೆಗಳಿವೆ. ಮೂರ್ತಿಯ ಮೇಲೆ ನೀರು ಸಂಗ್ರಹಗೊಂಡು ಅದು ಕುಸಿದು ಬೀಳಬಾರದು ಎಂಬ ಕಾರಣಕ್ಕೆ ಗುಪ್ತವಾದ ಕಾಲುವೆಗಳನ್ನು ಕೊರೆಯಲಾಗಿದೆ. ಕೈ ಮತ್ತು ತಲೆಯ  ಭಾಗದಲ್ಲಿ ಈ ಕಾಲುವೆಗಳಿವೆ. ಇನ್ನೊಂದು ವಿಶೇಷವೆಂದರೆ ಬುದ್ಧನ ಮೂರ್ತಿಯನ್ನು ನೈಸಗರ್ಗಿಕ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ಮೆಟ್ಟಿಲುಗಳನ್ನು ಏರಿ ಮೂರ್ತಿಯ ತಲೆಯವರೆಗೂ ತಲುಪಬಹುದು. ಇದಕ್ಕಾಗಿ ಪಕ್ಕದಲ್ಲಿ 3500 ಕಿರಿದಾದ ಮೆಟ್ಟಿಲುಗಳನ್ನು ಕೊರಯಲಾಗಿದೆ. ಜತೆಗೆ ನದಿಯಲ್ಲಿ ದೋಣಿ ಸವಾರಿ ಮಾಡುತ್ತಾ ಬುದ್ಧನ ಭವ್ಯ ರೂಪವನ್ನು ನೋಡಬಹುದು. 

ಪಾರಂಪರಿಕ ತಾಣ:
ಗಾಳಿ ಮಳೆಗೆ ಶಿಥಿಲಗೊಂಡಿದ್ದ ಈ ಮೂರ್ತಿಯನ್ನು ಚೀನಾ ಸರ್ಕಾರ 1963ರಲ್ಲಿ ಪುನರುತ್ಥಾನ ಮಾಡಿತ್ತು. 1966ರ  ಬಳಿಕ ಇದನ್ನು ವಿಶ್ವ ಪಾರಂಪರಿಕ ತಾಣವಾಗಿ ಸಂರಕ್ಷಿಸಲಾಗುತ್ತಿದೆ.

ಇದು ಭೂಮಿಯ ಮೇಲಿನ ಚಂದ್ರಲೋಕ

ಗಗನಯಾತ್ರಿ ನೀಲ್ ಆರ್ಮ್ಟ್ರಾಂಗ್ ಚಂದ್ರನ ಮೇಲಿಳಿದು ನಡೆದಾಡಿದ. ಆದರೆ, ಚಂದ್ರನಲ್ಲಿ ವಾತಾವರಣ ಹೇಗಿದೆ. ಅಲ್ಲಿ ಹೋದರೆ ಯಾವರೀತಿಯ ಅನುಭವ ಆಗುತ್ತದೆ ಎಂಬುದನ್ನು ಭೂಮಿಯಲ್ಲಿಯೇ ಕಾಣಬಹುದು. ಹೌದು, ಭೂಮಿಯ ಮೇಲೂ ಒಂದು ಚಂದ್ರಲೋಕವಿದೆ! ಅದು ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶ ಎನಿಸಿರುವ ಚಿಲಿ ದೇಶದ ಅಟಕಾಮಾ ಮರುಭೂಮಿ. ಸ್ಯಾನ್ ಪೆಡ್ರೋ ಡಿ ಎಂಬಲ್ಲಿಂದ 13 ಕಿ.ಮೀ. ದೂರದಲ್ಲಿರುವುದೇ ಎಲ್ ವ್ಯಾಲೆ ಡೆ ಲಾ ಲುನಾ. ಇದು ಚಂದ್ರದ ಕಣಿವೆ ಎಂದೇ ಕರೆಸಿಕೊಂಡಿದೆ. ಸಾವಿರಾರು ವರ್ಷಗಳಿಂದ ನೀರು ಮತ್ತು ಗಾಳಿಯ ರಭಸದಿಂದ ನಿಮರ್ಮಾಣಗೊಂಡ ವಿವಿಧ ಕಲ್ಲಿನ ಮತ್ತು ಮರಳು ರಚನೆಗಳು, ಮಣ್ಣಿನ ಬಣ್ಣ ಚಂದ್ರನ ಮೇಲ್ಮೈ ಅನ್ನು ನೆನಪಿಸುತ್ತದೆ.



ಚಂದ್ರನಂತಿರುವ ಮೇಲ್ಮೈ:
ವ್ಯಾಲೆ ಡೆ ಲಾ ಲುನಾ ಭೂಮಿಯ ಮೇಲಿನ ಅತಿ ಒಣ ಪ್ರದೇಶ  ಎಂದು ಕರೆಸಿಕೊಂಡಿದೆ. ನೂರಾರು ವರ್ಷದಿಂದ ಇಲ್ಲಿ ಒಂದೇ ಹನಿ ನೀರು ಕೂಡ ಬಿದ್ದಿಲ್ಲ. ಇಲ್ಲಿ ಮಳೆಯಾಗದ ಕಾರಣ ನದಿಗಳು ಸಂಪೂರ್ಣ ಬತ್ತಿಹೋಗಿವೆ. ವಾತಾವರಣದಲ್ಲಿ ಸ್ವಲ್ಪವೂ ನೀರಿನ ಅಂಶ ಇಲ್ಲ. ಈ ಕಾರಣಕ್ಕೆ ಬತ್ತಿಹೋಗಿರುವ ನದಿಗಳ ತಳದಲ್ಲಿ ಉಳಿದುಕೊಂಡಿರುವ ಉಪ್ಪುನಿಂದ ನೆಲದ ಮೇಲೆ ಬಿಳಿ ಪದರ ಸೃಷ್ಟಿಯಾಗಿದೆ. ಅಲ್ಲದೆ, ಇಲ್ಲಿ ಸಣ್ಣಪುಟ್ಟ ಗುಡ್ಡದ ರಚನೆಗಳನೂ ಕಾಣಬಹುದು.

ವಿಜ್ಞಾನಿಗಳ  ಪ್ರಯೋಗ ಶಾಲೆ:

ಯುರೋಪಿನ ಬಾಹ್ಯಾಕಾಶ ವಿಜ್ಞಾನಿಗಳು ಮಂಗಳ ಶೋಧಕ ನೌಕೆಯ ಅಣಕು ಕಾಯರ್ಯಾ ಚರಣೆಗೆ ವ್ಯಾಲೆ ಡೆ ಲಾ ಲುನಾಯನ್ನು ಬಳಸಿಕೊಂಡಿದ್ದರು. ಭೂಮಿಯ ಮೇಲೆ ಜೀವಿಗಳ ಉಗಮದ ಕುರುತು ಅಧ್ಯಯನ ನಡೆಸಲು ಇದು ಸೂಕ್ತ ಸ್ಥಳ. ಇಲ್ಲಿನ ನೈಸಗರ್ಗಿಕ ಸೌಂದರ್ಯವನ್ನು ಕಾಪಾಡುವ ಸಲುವಾಗಿ 1982ರಲ್ಲಿ ಇದನ್ನು ರಾಷ್ಟ್ರೀಯ ಅಭಯಾರಣ್ಯ ಎಂದು ಚಿಲಿ ಸರ್ಕಾರ ಘೋಷಿಸಿದೆ.

ಸೂಯರ್ಾಸ್ತ ನೋಡುವುದೇ ಚಂದ:
ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲು ಸಂಜೆಯ ವೇಳೆ ಸೂಕ್ತ ಸಮಯ. ಇಲ್ಲಿನ ಮನೋಜ್ಞ ಸೂಯರ್ಯಾಸ್ತ ಮತ್ತೆಲ್ಲೂ ನೋಡಲು ಸಿಗಲಾರದು. ಸೂರ್ಯ ಮುಳುಗುತ್ತಿದ್ದಂತೆ ಆಕಾಶ ರತ್ನದ ಹರಳಿನಂತೆ ಹೊಂಬಣ್ಣಕ್ಕೆ ತಿರುಗುತ್ತದೆ. ಹುಣ್ಣಿಮೆಯ ಬೆಳಕಿನಲ್ಲಿ ಇದು ಭೂಮಿಯೇ ಅಲ್ಲವೇನೋ ಎನ್ನುವ ರೀತಿಯಲ್ಲಿ ಕಂಡುಬರುತ್ತದೆ.

Tuesday, November 1, 2016

ಲೇಹ್- ಮನಾಲಿ ಹೆದ್ದಾರಿ

  • ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ

ಹೆದ್ದಾರಿ ಅಂತಿಂಥ ಹೆದ್ದಾರಿಯಲ್ಲ. ಸ್ವಲ್ಪ ಆಯ ತಪ್ಪಿದರೂ ಸಾವು ಗ್ಯಾರೆಂಟಿ. ಪ್ರಕೃತಿ ಸೌಂದರ್ಯದ ಜತೆ ಎದೆ ನಡುಗುವ ಕಿರಿದಾದ ಕಣಿವೆಗಳು, ಬೆಟ್ಟ ಕೊರೆದು ನಿರ್ಮಿಸಿದ ರಸ್ತೆಗಳು, ಏರು ತಗ್ಗು, ಅಪಾಯಕಾರಿ ಸೇತುವೆಗಳನ್ನು ದಾಟಿದರಷ್ಟೇ ಮುಂದೆ ಹೋಗಲು ಸಾಧ್ಯ. ಈ ಕಾರಣಕ್ಕೆ ಲೇಹ್- ಮನಾಲಿ ಹೆದ್ದಾರಿ ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ರಸ್ತೆ ಎನಿಸಿಕೊಂಡಿದೆ.

ಹಿಮಾಲಯ ಶಿಖರಗಳ ಸಂದುಗೊಂದಿನಲ್ಲಿ ಸಾಗುವ ಈ ಹೆದ್ದಾರಿ ದೇಶದ ಅತ್ಯಂತ ಎತ್ತರದ ಕಣಿವೆ ಮಾರ್ಗಗಳಲ್ಲಿ ಒಂದಾಗಿದೆ. 479 ಕಿ.ಮೀ. ದೂರ ಇರುವ ಈ ಹೆದ್ದಾರಿಯನ್ನು ಭಾರತೀಯ ಸೇನೆ ನಿರ್ಮಿಸಿ ನಿರ್ವಹಣೆ ಮಾಡುತ್ತಿದೆ.
ಜೂನ್ ಮತ್ತು ಮಧ್ಯ ಸೆಪ್ಟೆಂಬರ್ವರಗೆನ ನಾಲ್ಕೂವರೆ ತಿಂಗಳು ಮಾತ್ರ ಈ ಹೆದ್ದಾರಿ ಸಂಚಾರಕ್ಕೆ ತೆರೆದುಕೊಳ್ಳುತ್ತದೆ. ಉಳಿದ ಸಂದರ್ಭದಲ್ಲಿ ಇಲ್ಲಿ ವಾಹನ ಸಂಚಾರವೇ ಇರುವುದಿಲ್ಲ. ಅಕ್ಟೋಬರ್ನಲ್ಲಿ ಇಲ್ಲಿ ಭಾರೀ ಪ್ರಮಾಣದ ಹಿಮಪಾತವಾಗುವುದರಿಂದ ರಸ್ತೆ ಹಿಮದಲ್ಲಿ ಮುಚ್ಚಿಹೋಗುತ್ತದೆ. ಕೆಲವೊಮ್ಮೆ 40 ಅಡಿಯಷ್ಟು ಹಿಮ ಆವರಿಸುತ್ತದೆ. ಅಲ್ಲದೆ, ರಸ್ತೆಯ ಮೇಲೆ ಹಿಮ ಬಿದ್ದಿರುವುದರಿಂದ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಕ್ಷಣ ಕ್ಷಣಕ್ಕೂ ಇಲ್ಲಿನ ವಾತಾವರಣ ಬದಲಾಗುತ್ತಿರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದಕ್ಕೂ ಮುನ್ನು ಹತ್ತು ಬಾರಿ ಯೋಚಿಸಬೇಕು. ಹೆಚ್ಚುವರಿಯಾಗಿ ಪ್ರೆಟ್ರೋಲ್ ಅಥವಾ ಡೀಸೆಲ್ ಒಯ್ಯದಿದ್ದರೆ ಮುಂದೆ ಸಂಚರಿಸಲು ಆಗದೇ ಹಿಂತಿರುಗಲೂ ಆಗದೆ ಪೇಚಿಗೆ ಸಿಲುಕಬೇಕಾಗುತ್ತದೆ.

ಪ್ರಯಾಣ ತುಂಬಾ ನಿಧಾನ:
ಜಮ್ಮು- ಕಾಶ್ಮೀರದ ಲಡಾಖ್ನ  ಲೇಹ್ನಿಂದ ಹಿಮಾಚಲ ಪ್ರದೇಶದ ಮನಾಲಿಯನ್ನು ಈ ಹೆದ್ದಾರಿ ಸಂಪರ್ಕಿಸುತ್ತದೆ. ಈ ಹೆದ್ದಾರಿಯ ಮಧ್ಯೆ ಬರುವ ಟಗ್ಲಾಂಗ್ ಲಾ ಮೌಂಟೇನ್ ಪಾಸ್ 17,480 ಎತ್ತದಲ್ಲಿದೆ. ಚೀನಾ ಮತ್ತು ಪಾಕಿಸ್ತಾನದ ಲಡಾಖ್ ಮೂಲಕ ಈ ಹೆದ್ದಾರಿ ಹಾದು ಹೋಗುವುದರಿಂದ ಭಾರತದ ಮಟ್ಟಿಗೆ ರಾಜತಾಂತ್ರಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದೆ. ಇಲ್ಲಿ ವಾಹನ ಸಂಚಾರ ಎಷ್ಟು ನಿಧಾನವೆಂದರೆ ಜೀಪಿನಲ್ಲಾದರೆ ಮನಾಲಿಯಿಂದ ಲೇಹ್ಗೆ ಪೂರ್ತಿ ಒಂದು ದಿನದ ಬೇಕಾಗುತ್ತದೆ. ಬಸ್ನಲ್ಲಿ ಪ್ರಯಾಣಿಸಿದರೆ ಎರಡು ದಿನಗಳಿಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಹಿಮಾಲಯದ ಹತ್ತಿರ ದರ್ಶನ:
ಈ ಹೆದ್ದಾರಿ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆಯಿಂದ ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸಲು ಇಷ್ಟ ಪಡುತ್ತಾರೆ. ಹಿಮಾಲಯದ ಗಿರಿಶಿಖರಗಳನ್ನು ತೀರಾ ಹತ್ತಿರದಿಂದ ನೋಡುವ ಅವಕಾಶ ಇರುವುದು ಈ ಹೆದ್ದಾರಿ ಮೂಲಕ ಮಾತ್ರ. ಇಲ್ಲಿ ಕಾರು ಜೀಪುಗಳು ಅಷ್ಟೇ ಅಲ್ಲ, ಸರಕುಗಳನ್ನು ತುಂಬಿದ ಭಾರೀ ತೂಕದ ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಿರಿಸುತ್ತವೆ. ಮಳೆ ಬಂದರಂತೂ ರಸ್ತೆಯಲ್ಲಿ ಓಡಾಡುವುದೇ ದುಸ್ತರ. ಕೆಸರುಗದ್ದೆಯಂತಾಗಿ ಲಾರಿ ಚಕ್ರಗಳು ಹೂತು ಹೋಗುತ್ತವೆ. ನದಿ ತೊರೆಗಳು ರಸ್ತೆಯಲ್ಲೇ ಹರಿಯುತ್ತಿರುತ್ತವೆ.
ಈ ಹೆದ್ದಾರಿ ಸಾವಿರಾರು ಅಡಿ ಎತ್ತರದಲ್ಲಿ ಇರುವುದರಿಂದ ಆಮ್ಲಜನಕದ ಕೊರತೆಯೂ ಉಂಟಾಗಬಹುದು. ಸಿರ್ ಭೂಮ್ ಚೂಮ್ ಎಂಬಲ್ಲಿ ಸಲ್ಪಮಟ್ಟಿನ ಸಮತಟ್ಟಾದ ಪ್ರದೇಶವಿದ್ದು, ರಾತ್ರಿಯ ವೇಳೆ ಟೆಂಟ್ ಹಾಕಿಕೊಂಡು ವಿಶ್ರಾಂತಿ ಪಡೆದು ಮರುದಿನ ಪ್ರಾಣ ಮುಂದುವರಿಸಬಹುದು.

ಮಾಜುಲಿ ಎಂಬ ಜಗತ್ತಿನ ಅತಿದೊಡ್ಡ ನದಿ ದ್ವೀಪ

ಬ್ರಹ್ಮಪುತ್ರ ನದಿ ತನ್ನ ವಿಸ್ತಾರ ಮತ್ತು ಅಗಾಧತೆಗೆ ಹೆಸರು ಪಡೆದಿದೆ. ಇದರ ಒಂದು ದಂಡೆಯಿಂದ ಇನೊಂದು ದಂಡೆಗೆ 15 ಮೈಲಿಗಳ ಅಂತರವಿದೆ. ಈ ವಿಸ್ತಾರವಾದ ನದಿಯಲ್ಲಿ ಸಾವಿರಾರು ದ್ವೀಪಗಳಿವೆ. ಅವುಗಳಲ್ಲಿ ಅಸ್ಸಾಂನಲ್ಲಿರುವ ಮಾಜುಲಿ ಕೂಡ ಒಂದು. ಈ ದ್ವೀಪವು ಜಗತ್ತಿನಲ್ಲಿಯೇ ಅತಿದೊಡ್ಡದಾದ ನದಿ ಮಧ್ಯದ ದ್ವೀಪವಾಗಿದೆ. ಅಲ್ಲದೇ ಇದು ಅಸ್ಸಾಂನ ಸಾಂಸ್ಕೃತಿಕ ರಾಜಧಾನಿ ಕೂಡ ಹೌದು. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. 

ಪ್ರವಾಹದಿಂದ ಸೃಷ್ಟಿಯಾದ ದ್ವೀಪ:
ಮಾಜುಲಿ ದ್ವೀಪ ಮೂಲದಲ್ಲಿ 1250 ಚದರ ಕಿ.ಮೀ. ಪ್ರದೇಶವನ್ನು ವ್ಯಾಪಿಸಿತ್ತು. ಆದರೆ ಈಗ ಅದರ ವಿಸ್ತಾರ ಕೇವಲ 500 ಚದರ ಕಿ.ಮಿ.ಗೆ ಇಳಿದಿದೆ. ದಕ್ಷಿಣ ಏಷ್ಯಾದ ಅತಿದೊಡ್ಡ ಸಿಹಿ ನೀರಿನ ದ್ವೀಪ ಎನಿಸಿಕೊಂಡಿದೆ.
ಜೊರ್ಹತ್ ಮಾಜುಲಿಗೆ ಹತ್ತಿರವಾದ ಪ್ರದೇಶ. ಅಲ್ಲಿಂದ ದೋಣಿ ಹಾಗೂ ಫೆರ್ರಿ (ತೆಪ್ಪ)ದ ಮೂಲಕ ಮಾಜುಲಿ ತಲುಪ ಬಹುದಾಗಿದೆ. ಇಲ್ಲಿ ಅನಿವಾಸಿ ಬುಡಕಟ್ಟು ಜನರೇ ಹೆಚ್ಚಾಗಿದ್ದು, ಮಿಶಿಂಗ್, ದೇಯೋರಿ, ಸೋನೋವಾಲ್ ಕಚಾರಿಸ್ ಸಮುದಾಯಗಳನ್ನು ಕಾಣಬಹುದು. ಈ ದ್ವೀಪದಲ್ಲಿ 144 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇದೆ. ಇಲ್ಲಿ ಹಿಂದುಗಳು ಮಾತ್ರ ನೆಲೆಸಿದ್ದಾರೆ ಎನ್ನುವುದು ಕೂಡ ಈ ದ್ವೀಪದ ಇನ್ನೊಂದು ವಿಶೇಷ. 1661-1696 ರಲ್ಲಿ ಸಂಭವಿಸಿದ ಭೀಕರ ಭೂಕಂಪ ಎತ್ತರ ಮತ್ತು ತಗ್ಗು ಪ್ರದೇಶಗಳನ್ನು ನಿರ್ಮಾಣ ಮಾಡಿತ್ತು. ಆ ಬಳಿಕ 1750ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮಾಜುಲಿ ದ್ವೀಪ ಸೃಷ್ಟಿಯಾಯಿತು. ಸುಮಾರು 2 ವಾರಗಳ ಕಾಲ ನಿರಂತರ ಪ್ರವಾಹಕ್ಕೆ ಅಸ್ಸಾಂ ತುತ್ತಾಗಿತ್ತು.

ಪಕ್ಷಿ ಪ್ರಿಯರ ಸ್ವರ್ಗ
ಈ ದ್ವೀಪದಲ್ಲಿ ಅಪಾರವಾದ ಜಲರಾಶಿ ಇರುವುದರಿಂದ ಮತ್ತು ಜೀವ ವೈವಿಧ್ಯ ವ್ಯವಸ್ಥೆಯಿಂದಾಗಿ ಸಸ್ಯ  ಮತ್ತು ಪ್ರಾಣಿ ಸಂಕುಲಗಳು ಅಪಾರ ಪ್ರಮಾಣದಲ್ಲಿವೆ. ಚಳಿಗಾಲದಲ್ಲಿ ವಲಸೆ ಹಕ್ಕಿಗಳಿಗೆ ಮಾಜುಲಿ  ನೆಚ್ಚಿನ ತಾಣ. ಸೈಬೇರಿಯಾದ ವೈಟ್ ಕ್ರೇನ್, ಬಾತುಕೋಳಿ ಮತ್ತು ಪೆಲಿಕಾನ್ ಹಕ್ಕಿಗಳು ಇಲ್ಲಿಗೆ ವಲಸೆ ಕೈಗೊಳ್ಳುತ್ತವೆ. ಈ ಕಾರಣಕ್ಕೆ ಹಕ್ಕಿ ವೀಕ್ಷಕರು ಮತ್ತು ಛಾಯಾಗ್ರಾಹಕರಿಗೆ ಮಾಜುಲಿ ಸ್ವರ್ಗ ಎನಿಸಿಕೊಂಡಿದೆ. ಅಕ್ಟೋಬರ್ ಮತ್ತು ಮಾರ್ಚ್ ಮಾಜುಲಿಗೆ ಭೇಟಿ ನೀಡಲು ಪ್ರಶಸ್ತವಾದ ಕಾಲ. ದೋಣಿಯಲ್ಲಿ ವಿಹರಿಸುತ್ತಾ ಪರಿಸರ ಸೌಂದರ್ಯವನ್ನು ಸವಿಯಬಹುದು.

ಸಂಸ್ಕೃತಿಯ ತವರು
ಕಲೆ, ಸಂಗೀತ,  ನೃತ್ಯ, ಜ್ಯೋತಿಷ್ಯ ಶಾಸ್ತ್ರ, ಇಲ್ಲಿನ ಜನರ ಪ್ರಮುಖ ಚಟುವಟಿಕೆ. ಇಲ್ಲಿ ದೊಡ್ಡ ದೊಡ್ಡ ದೇವಾಲಯಗಳಿಲ್ಲ, ಚಿನ್ನ ಮತ್ತು ಬೆಳ್ಳಿಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಸರಳತೆಯೇ ಇಲ್ಲಿನ ಜನರ ವಿಶೇಷತೆ. ಹಿಂದಿನಿಂದ ಅನುಸರಿಸಿಕೊಂಡು ಬಂದ ಸಂಸ್ಕೃತಿಯನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮೀನುಗಾರಿಕೆ, ಮತ್ತು ದೋಣಿ ನಡೆಸುವುದು ಇಲ್ಲಿನ ಜನರ ಪ್ರಮುಖ ಉದ್ಯೋಗ.

ಮುಳುಗುತ್ತಿರುವ ದ್ವೀಪ
1853ರಲ್ಲಿ ಮಾಜುಲಿ ದ್ವೀಪ  1,150 ಕಿ.ಮೀ. ವ್ಯಾಪ್ತಿಗೆ ವಿಸ್ತಿರಿಸಿಕೊಂಡಿತ್ತು. 20ನೇ ಶತಮಾನದಲ್ಲಿ ದ್ವೀಪ ಶೇ.33ರಷ್ಟು ಭೂ ಪ್ರದೇಶವನ್ನು ಕಳೆದುಕೊಂಡಿದೆ. 1991ರ ವರೆಗೆ ಸುಮಾರು 35 ಗ್ರಾಮಗಳು ನೀರುಪಾಲಾಗಿವೆ. ಸಮೀಕ್ಷೆಯೊಂದರ ಪ್ರಕಾರ ಮುಂದಿನ 15ರಿಂದ 20 ವರ್ಷಗಳಲ್ಲಿ ದ್ವೀಪ ಪ್ರವಾಹ ಮತ್ತು ತಾಪಮಾನ ಏರಿಕೆಯ ಪರಿಣಾಮವಾಗಿ ದ್ವೀಪ ಸಂಪೂರ್ಣ ಮುಳುಗಿ ಹೋಗುವ ಅಪಾಯ ಎದುರಿಸುತ್ತಿದೆ.