ಈ ಸರೋವರದಲ್ಲಿ ಯಾರೋ ಬಂದು ಗುಲಾಬಿ ಬಣ್ಣವನ್ನು ಕದಡಿ ಹೋಗಿಲ್ಲ. ಆದರೂ ಸರೋವರದ ನೀರೆಲ್ಲಾ ಗುಲಾಬಿ ಬಣ್ಣಕ್ಕೆ ತಿರುಗಿದೆ. ಹೌದು. ಪಶ್ಚಿಮ ಆಸ್ಟ್ರೇಲಿಯಾದ ಮಿಡಲ್ ಐಲೆಂಡ್ನಲ್ಲಿರುವ ಲೇಕ್ ಹೀಲಿಯರ್ ಗುಲಾಬಿ ಬಣ್ಣದ ನೀರಿಗೆ ಹೆಸರುವಾಸಿ. ಆಕರ್ಷಕ ಗುಲಾಬಿ ಬಣ್ಣದಿಂದ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಆದರೆ, ಇಲ್ಲಿನ ನೀರು ಏಕೆ ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
10 ಪಟ್ಟು ಅಧಿಕ ಉಪ್ಪಿನ ಪ್ರಮಾಣ
ಈ ಚಿಕ್ಕ ಸರೋವರ 600 ಮೀಟರ್ನಷ್ಟು ಅಗಲ ಮತ್ತು 250 ಮೀಟರ್ನಷ್ಟು ಅಗಲವಾಗಿದೆ. 1802ರಲ್ಲಿ ಈ ಸರೋವರವನ್ನು ಬ್ರಿಟಿಷ್ ಸಮುದ್ರ ಯಾನಿ ಕ್ಯಾಪ್ಟನ್ ಫಿಲಿಂಡರ್ ಎಂಬಾತ ಅನ್ವೇಷಿಸಿದ. ಅಂದಿನಿಂದಲೂ ಇದರ ಬಣ್ಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಕ್ಕದಲ್ಲೇ ಇರುವ ಸಮುದ್ರದ ಪ್ರಭಾವದಿಂದಾಗಿ ಸರೋವರದ ನೀರು ಕೂಡ ಉಪ್ಪಾಗಿದೆ. ಆಳವಿಲ್ಲದ ಈ ಸರೋವರದ ತುಂಬೆಲ್ಲಾ ಬಿಳಿಯ ಉಪ್ಪುತುಂಬಿಕೊಂಡಿದೆ. ವಿಶೇಷವೆಂದರೆ, ಸಮುದ್ರದ ನೀರಿಗಿಂತಲೂ ಲೇಕ್ ಹೀಲಿಯರ್ನ ನೀರಿನಲ್ಲಿ 10 ಪಟ್ಟು ಅಧಿಕ ಉಪ್ಪಿನ ಪ್ರಮಾಣವಿದೆ. ಸರೋವರದ ಸುತ್ತಲೂ ದಟ್ಟವಾದ ನೀಲಗಿರಿ ಮತ್ತು ಪೆಪರ್ಬಾರ್ಕ್ ಮರಗಳು ಆವರಿಸಿಕೊಂಡಿವೆ. ಆದರೆ, ಸರೋವರದ ನೀರಿನಲ್ಲಿ ಪೌಷ್ಟಿಕಾಂಶದ ಸಾಂದ್ರತೆ ತೀರಾ ಕಡಿಮೆ. ವಿವಿಧ ನಮೂನೆಯ ಬ್ಯಾಕ್ಟೀರಿಯಾ ಮತ್ತು ಪಾಚಿಗಳು ನೀರಿನಲ್ಲಿ ಬೆರೆತುಕೊಂಡಿವೆ. ನೀರಿನಲ್ಲಿ ಅಧಿಕ ಉಪ್ಪಿನ ಪ್ರಮಾಣ ಇರುವುದರಿಂದ ಮತ್ತು ಉಷ್ಣಾಂಶವೂ ಅಧಿಕವಿದ್ದ ಸಂದರ್ಭದಲ್ಲಿ ಪಾಚಿಗಳು ಕೆಂಪು ಬಣ್ಣದ ರಾಸಾಯನಿಕವನ್ನು ಉತ್ಪತ್ತಿಮಾಡುತ್ತದೆ. ಇದೆಲ್ಲದರ ಪರಿಣಾಮವಾಗಿ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ ಎಂದು ಅಂದಾಜಿಸಲಾಗಿದೆ. ಉಪ್ಪು ಮತ್ತು ಸೋಡಿಯಂ ಬೈಕಾಬ್ರೋನೇಟ್ನ ಪ್ರತಿಕ್ರಿಯೆಯಿಂದಾಗಿ ನೀರು ಗುಲಾಬಿಯಾಗಿರಬಹುದು ಎಂಬ ಮತ್ತೊಂದು ವಾದವೂ ಇದೆ.
ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣ ಬದಲಾಗಲ್ಲ!
ಇದರ ನೀರು ಕೇವಲ ಸರೋವರದಲ್ಲಿ ಇದ್ದಾಗ ಮಾತ್ರ ನೀರು ಗುಲಾಬಿ ಬಣ್ಣದಲ್ಲಿ ಕಾಣತ್ತದೆ ಎನ್ನುವ ಹಾಗೂ ಇಲ್ಲ. ನೀರನ್ನು ಗ್ಲಾಸಿನಲ್ಲಿ ಹಿಡಿದಿಟ್ಟರೂ ಬಣ್ಣದಲ್ಲಿ ಬದಲಾವಣೆ ಆಗುವುದಿಲ್ಲ! ಅಲ್ಲದೆ, ಈ ಸರೋವರ ಮಾನವನ ಬಳಕೆಗೆ ಅಪಾಯಕಾರಿ ಅಲ್ಲ. ಎಲ್ಲ ಸರೋವರಗಳಂತೆ ಇದರ ನೀರಿನಲ್ಲೂ ಈಜಾಡಬಹದು. ಸರೋವರದಿಂದ ಕೆಲವು ವರ್ಷಗಳ ಕಾಲ ಇಲ್ಲಿ ಉಪ್ಪನ್ನು ಹೊರತೆಯಲಾಗಿತ್ತು. ಆದರೆ, ಇದನ್ನು ಈಗ ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಮೀಸಲಿಡಲಾಗಿದೆ. ಆಕಾಶದಿಂದ ಈ ಸರೋವರವನ್ನು ನೋಡಿದರೆ ಗುಲಾಬಿ ಬಣ್ಣದ ಈಜುಕೊಳದಂತೆ ಗೋಚರಿಸುತ್ತದೆ.
ಜಗತ್ತಿನ ಬೇರೆ ಕಡೆಗಳಲ್ಲೂ ಇದೆ
ಹೀಲಿಯರ್ ಜಗತ್ತಿನ ಏಕೈಕ ಗುಲಾಬಿ ನೀರಿನ ಸರೋವರವೇನೂ ಅಲ್ಲ. ಜಗತ್ತಿನ ಇತರ ಭಾಗದಲ್ಲೂ ಗುಲಾಬಿ ಸರೋವರಗಳನ್ನು ಕಾಣಬಹುದು. ಆಫ್ರಿಕಾದ ರಾಷ್ಟ್ರ ಸೆನೆಗಲ್ನಲ್ಲಿಯೂ ಇಂತಹುದೇ ಗುಲಾಬಿ ಸರೋವರವಿದೆ. ಅಲ್ಲದೆ, ಕೆನಡಾ, ಸ್ಪೇನ್ ಮತ್ತು ಆಸ್ಟ್ರೇಲಿಯಾದ ಇತರ ಭಾಗದಲ್ಲೂ ಗುಲಾಬಿ ನೀರಿನ ಸರೋವರವನ್ನು ಕಾಣಬಹುದು. ಆದರೆ, ಈ ಎಲ್ಲಾ ಸರೋವರಗಳಿಗಿಂತ ಹೀಲಿಯರ್ರ ನೀರು ಸದಾ ಗುಲಾಬಿ ಬಣ್ಣದಲ್ಲೇ ಇರುತ್ತದೆ ಎನ್ನುವುದು ವಿಶೇಷ.
No comments:
Post a Comment