ಜೀವನಯಾನ

Wednesday, May 6, 2015

ಬಟ್ಟಲಿನಾಕಾರದ ದೈತ್ಯ ತಾವರೆ ಎಲೆಗಳು!

ನೀರಿನಲ್ಲಿ ತೇಲಿಬಿಟ್ಟ ಬಟ್ಟಲಿನಂತೆ ಕಾಣುವ ಇವು ತಾವರೆ ಗಿಡದ ಎಲೆಗಳು! ಒಂದೊಂದು ಎಲೆಯೂ ಸುಮಾರು 2.5 ಮೀಟರ್ಗಳಷ್ಟು ಅಗಲವಾಗಿ ಬೆಳೆಯುತ್ತದೆ. ಈ ಎಲೆಯ ಸುತ್ತಲೂ 2ರಿಂದ 4 ಇಂಚು ಗಾತ್ರದ ಮಡಚಿದ ಅಂಚುಗಳಿರುತ್ತವೆ. ಈ ಎಲೆಗಳು ಎಷ್ಟು ಬಲಿಷ್ಟವೆಂದರೆ ಅದರ ಮೇಲೆ ಪುಟ್ಟ ಮಕ್ಕಳನ್ನು ಕೂರಿಸಿ ಫೋಟೊ ತೆಗೆಯಬಹುದು. ವಿಕ್ಟೋರಿಯಾ ಅಮೇಝೋನಿಕಾ ಹೆಸರಿನ ಈ ತಾವರೆಗಿಡ ತನ್ನ ದೈತ್ಯ ಹಸಿರು ಎಲೆಗಳ ಜತೆ ಸುಗಂಧ ಭರಿತ ಹೂವುಗಳಿಗೂ ಪ್ರಸಿದ್ಧಿ.


 ಬೆಳೆಯುವುದು ಶುದ್ಧ ನೀರಿನಲ್ಲಿ ಮಾತ್ರ 
ದಕ್ಷಿಣ ಅಮೆರಿಕದ ಅಮೆಝಾನ್ ನದಿಯ ದಂಡೆಗಳ ಮೇಲೆ ದೈತ್ಯ ತಾವರೆ ಎಲೆಯ ಗಿಡಗಳು ಕಂಡುಬರುತ್ತವೆ. ಒಂದು ಗಿಡದಲ್ಲಿ ಈ ರೀತಿಯ ಸುಮಾರು 40 ರಿಂದ 50 ಎಲೆಗಳು ಇರುತ್ತವೆ. ಇವು ನೀರಿನ ಮೇಲೆ ತೇಲುತ್ತಿದ್ದ ಹಾಗೆ ಕಂಡರೂ ಅದರ ಬೇರುಗಳು ಭೂಮಿಯ ಆಳಕ್ಕೆ ಇಳಿದಿರುತ್ತವೆ. ಈ ಎಲೆಗಳು ಹೊರಗಿನಿಂದ ನೋಡಲು ಎಷ್ಟು ಸೌಮ್ಯವೋ ಹಿಂಭಾಗದಲ್ಲಿ ಅಷ್ಟೇ ಹರಿತವಾದ ಮುಳ್ಳುಗಳನ್ನು ಹೊಂದಿರುತ್ತದೆ. ಹೀಗಾಗಿ ಎಲೆಗಳನ್ನು ಮೀನು ಅಥವಾ ಇನ್ನಿತರ ಪ್ರಾಣಿಗಳಿಂದ ತಿನ್ನಲು ಅಸಾಧ್ಯ. ಈ ಗಿಡಗಳಿರುವ ನೀರಿನಲ್ಲಿ ಈಜುವುದು ಕೂಡ ಅಷ್ಟೇ ಅಪಾಯ. ಸಾಮಾನ್ಯವಾಗಿ ತಾವರೆ ಹೂವು ಕೆಸರಿನಲ್ಲಿ ಅರಳಿದರೆ, ವಿಕ್ಟೋರಿಯಾ ಅಮೇಝೋನಿಕಾ  ಶುದ್ಧವಾದ ನೀರಿನಲ್ಲಿ ಮಾತ್ರ ಬೆಳೆಯುತ್ತದೆ.

ಹೂವಿನ ಮೂರು ದಿನದ ಬಾಳು
ಎಲೆಗಳ ತುದಿಯಲ್ಲಿ ಬಿಳಿಯ ತಾವರೆ ಹೂವು ಬಿಡುತ್ತದೆ. ಈ ತಾವರೆ ಹೂವುಗಳು ರಾತ್ರಿಯಲ್ಲಷ್ಟೇ ಅರಳುತ್ತವೆ. ಇದರ ಆಯುಷ್ಯ ಕೇವಲ ಮೂರು ದಿನ. ಎಲೆಯಂತೆಯೇ ಇವುಗಳ ಗಾತ್ರವೂ ಹಿರಿದು. ಇದರ ತಾವರೆ ಹೂವುಗಳು 9ರಿಂದ 12 ಇಂಚುಗಳಷ್ಟು ದೊಡ್ಡದಾಗಿರುತ್ತವೆ. ಇವು ಶುಷ್ಕ ವಾತಾವರಣದಲ್ಲಿ ಮಾತ್ರ ಅರಳುತ್ತವೆ. ರಾತ್ರಿಯ ವೇಳೆ ಅರಳುವ ಇವು ಗಾಢವಾದ ಸುಗಂಧ ಹೊರಸೂಸುತ್ತವೆ. ಇವುಗಳಿಂದ ಆಕರ್ಷಿತವಾಗುವ ದುಂಬಿ ಹೂವಿನ ಒಳಕ್ಕೆ ಇಳಿದು ಮಕರಂಧವನ್ನು ಹೀರಲು ತೊಡಗುತ್ತವೆ. ಮುಂಜಾನೆಯಾಗುತ್ತಲೇ ಹೂವು ಮದುಡಿಕೊಳ್ಳುತ್ತವೆ. ಮಕರಂದ ಹೀರಲು ಬಂದ ದುಂಬಿಯೂ ಅದರೊಳಗೆ ಬಂದಿಯಾಗುತ್ತದೆ. ಈ ಹೂವಿನ ವಿಶೇಷತೆಯೆಂದರೆ, ರಾತ್ರಿಯಲ್ಲಿ ಹೆಣ್ಣಾಗಿ ವರ್ತಿಸುವ ಇವು ಹಗಲಿನಲ್ಲಿ ಗಂಡಾಗಿ ಪರಿವರ್ತನೆಯಾಗುತ್ತದೆ. ಎರಡನೇ ದಿನ ಈ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಆಗ ಹೂವಿನ ಒಡಲಿಂದ ಹೊರಬರುವ ದುಂಬಿ ಪರಾಗಸ್ಪರ್ಶದಲ್ಲಿ ತೊಡಗಿಕೊಳ್ಳುತ್ತದೆ. ಈ ಕ್ರಿಯೆ ಪೂರ್ಣಗೊಂಡ ಬಳಿಕ ಮೂರನೇ ದಿನ ಹೂವು ಕೆಂಪು ಬಣ್ಣಕ್ಕೆ ತಿರುಗಿ ತನ್ನ ಬಾಳನ್ನು ಅಂತ್ಯಗೊಳಿಸುತ್ತದೆ.

ಕ್ವೀನ್ ಆಫ್ ಗಾರ್ಡನ್
ದೈತ್ಯ ಎಲೆಗಳು ಬಟ್ಟಲಿನ ಆಕಾರದಲ್ಲಿ ಇದ್ದರೂ ಇದರಲ್ಲಿ ನೀರು ತುಂಬಿಕೊಳ್ಳುವುದಿಲ್ಲ. ಎಲೆ ಸುತ್ತಲೂ ಮಡಚಿಕೊಂಡಿದ್ದರೂ ನೀರು ಹೊರಹೋಗಲು ಒಂದು ಬದಿಯಲ್ಲಿ ಬೇರ್ಪಟ್ಟಿದೆ. ಇದರ ಮೂಲಕ ನೀರು ಇಳಿದುಹೋಗುವುದರಿಂದ ಎಲೆ ಸದಾ ತೇಲುತ್ತಲೇ ಇರುತ್ತದೆ. ಎಲೆಯ ಮೇಲೆ ಹಕ್ಕಿಗಳು ಓಡಾಡುತ್ತಾ ಆಹಾರವನ್ನು ಹೆಕ್ಕಿ ತಿನ್ನುತ್ತವೆ. ಇಂದು ದೈತ್ಯ ಎಲೆಯ ತಾವರೆಗಿಡಗಳನ್ನು ಕೊಳಗಳಲ್ಲಿ ಕೃತಕವಾಗಿ ಬೆಳೆಸಲಾಗುತ್ತದೆ. ದೈತ್ಯ ತಾವರೆಗಿಡಕ್ಕೆ ಕ್ವೀನ್ ಆಫ್ ಗಾಡರ್್ನ್ ಎಂಬ ಬಿರುದು ಕೂಡ ಪ್ರಾಪ್ತವಾಗಿದೆ.

No comments:

Post a Comment