ಜೀವನಯಾನ

Thursday, December 11, 2014

ವಿಶ್ವದ ಅತಿದೊಡ್ಡ ಉಪ್ಪಿನ ಮರುಭೂಮಿ!

ಗುಜರಾತಿನ ಕಚ್ ಮರುಭೂಮಿಗೆ ಹೊಂದಿಕೊಂಡಿರುವ ರಣ್ ಪ್ರದೇಶ ಸಂಪೂರ್ಣವಾಗಿ ಉಪ್ಪಿನಿಂದ ಆವೃತ್ತವಾಗಿದೆ. ಇದು ಜಗತ್ತಿನ ಅತಿದೊಡ್ಡ ಉಪ್ಪಿನ ಮರುಭೂಮಿ! ಇಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಬರೀ ಉಪ್ಪು ಮಣ್ಣು. ಬೂದು, ಕಪ್ಪು, ಬಳಿ ಬಣ್ಣದಲ್ಲಿ ಮಿನುಗುವ ಲವಣಗಳೇ ಕಾಣುತ್ತವೆ. 7,505 ಚದರ್ ಕಿ.ಮೀ.ಯಷ್ಟು ವಿಶಾಲ ಪ್ರದೇಶಕ್ಕೆ ಉಪ್ಪಿನ ಮರುಭೂಮಿ ವ್ಯಾಪಿಸಿದೆ. ಕುಟ್ಜಿ ಜನಾಂಗ ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ. ಗ್ರೇಟರ್ ರಣ್ ಮತ್ತು ಲಿಟ್ಲ್ (ಚಿಕ್ಕ) ರಣ್ ಎಂಬುದಾಗಿ ಎರಡು ಭಾಗಗಳಾಗಿ ಮರುಭೂಮಿ ವಿಂಗಡನೆಗೊಂಡಿದೆ. 
 

ನಿರ್ಮಾಣಗೊಂಡಿದ್ದು ಹೇಗೆ?
ಮರುಭೂಮಿಯ ಇನ್ನೊಂದು ಭಾಗದಲ್ಲಿ ಸಮುದ್ರವಿದೆ. ರಣ್ ಮರುಭೂಮಿ ಸಮುದ್ರ ಮಟ್ಟಕ್ಕಿಂತ 15 ಮೀಟರ್ ಎತ್ತರದಲ್ಲಿದೆ. ಮಳೆಗಾಲದಲ್ಲಿ ಸಮುದ್ರದ ನೀರು ಮರುಭೂಮಿಗೆ ನುಗ್ಗುತ್ತದೆ. ಮಳೆಗಾಲ ಮುಗಿದ ಬಳಿಕ ಈ ನೀರೆಲ್ಲಾ ಅಲ್ಲೇ ಇಂಗಿ ಉಪ್ಪಿನ ಅಂಶ ಶೇಖರಣೆಯಾಗುತ್ತದೆ.  ಬೇಸಿಗೆಯಲ್ಲಿ ನೀರು ಬತ್ತಿಹೋದಾಗ ರಣ್ನ ಜವುಗು ಉಪ್ಪಿನ ಪದರಗಳು ಬಿಳಿ ಹಿಮಪಾತದಂತೆ ಕಾಣುತ್ತವೆ. ಹೀಗಾಗಿ ಇದೊಂದು ಉಪ್ಪಿನ ಮರುಭೂಮಿ ಎನಿಸಿಕೊಂಡಿದೆ. ರಣ ಎಂಬ ಶಬ್ದ ಹಿಂದಿಯಿಂದ ಬಂದಿದ್ದು. ಹಿಂದಿಯಲ್ಲಿ ರಣ ಅಂದರೆ ಮರುಭೂಮಿ ಎಂದರ್ಥ.

ಸಿಂಧು ನದಿಯ ಕೆಸರು: 
 
ಶತಶತಮಾನಗಳಿಂದ ಬನಾಸ್, ಲೂನಿ, ಸರಸ್ವತಿ, ರೂಪೆನ್ ನದಿಗಳ ಕೆಸರುಗಳು ರಣ್ ಮರುಭೂಮಿಯನ್ನು ಜವುಗು ಪ್ರದೇಶವನ್ನಾಗಿ ರೂಪಿಸಿವೆ. 1917ರಲ್ಲಿ ಎರಗಿದ ಭೂಕಂಪದಿಂದಾಗಿ ಸಿಂಧು ನದಿ ಪಶ್ಚಿಮದ ಕಡೆ ಹರಿಯಲು ಆರಂಭಿಸಿದ ಪರಿಣಾಮ ರಣ್ ವಿಶಾಲವಾದ ಲವಣಾಂಶಯುಕ್ತ ಮರುಭೂಮಿಯ ನಿಕ್ಷೇಪವಾಯಿತು. ಇಂದು ಇಲ್ಲಿ ಹೇರಳ ಪ್ರಮಾಣದಲ್ಲಿ ಉಪ್ಪನ್ನು ಹೊರತೆಗೆಯಲಾಗುತ್ತಿದೆ. ಇದರಿಂದ ನೈಸಗರ್ಿಕ ಸೌದರ್ಯಕ್ಕೆ ಧಕ್ಕೆ ಉಂಟಾಗಿದೆ. ಇತ್ತೀಚಿನ ಸಂಶೋಧನೆಗಳಲ್ಲಿ ಹರಪ್ಪ ನಾಗರಿಕತೆಯ ಕುರುಹುಗಳು ಇಲ್ಲಿ ಪತ್ತೆಯಾಗಿವೆ.

ಕಾಡು ಕತ್ತೆಗಳ ಅಭಯಾರಣ್ಯ:

ಇದೊಂದು ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ವಿಶೇಷವಾಗಿ ಸಿದ್ಧಪಡಿಸಿದ ಜೀಪಿನಲ್ಲಿ ಮರುಭೂಮಿಯಲ್ಲಿ ಸುತ್ತಾಡಬಹುದು. ಅಲ್ಲದೆ, ಒಂಟೆ ಸಫಾರಿಯನ್ನೂ ಕೈಗೊಳ್ಳಬಹುದು. ಲಿಟ್ಲ್ ರಣ್ ಭಾರತೀಯ ಕಾಡು ಕತ್ತೆಗಳಿಗೆ ಹೆಸರುವಾಸಿಯಾಗಿದೆ. ಎತ್ತರದ ದ್ವೀಪ ಪ್ರದೇಶಗಳಲ್ಲಿ ಕತ್ತೆಗಳು ವಾಸಿಸುತ್ತವೆ. ಲಿಟ್ಲ್ ರಣ್ ಮರುಭೂಮಿಯನ್ನು ಕಾಡುಕತ್ತೆಗಳ ಅಭಯಾರಣ್ಯ ಎಂದು ಗುರುತಿಸಲಾಗಿದೆ.

ಅತೀ ಉಷ್ಣ ಪ್ರದೇಶ:

ಇದು ಭಾರತದ ಅತ್ಯಂತ ಉಷ್ಣ ಪ್ರದೇಶದಲ್ಲಿ ಒಂದು. ಇಲ್ಲಿನ ಸಾಮಾನ್ಯ ಉಷ್ಣಾಂಶವೇ 41 ರಿಂದ  49 ಡಿಗ್ರಿಯ ವರೆಗೆ ಇರುತ್ತದೆ. ಡಿಸೆಂಬರ್ ಮಧ್ಯ ಭಾಗದಲ್ಲಿ ರಣ್ ಉತ್ಸವ ನಡೆಯುತ್ತದೆ. ಉತ್ಸವ ನಡೆಯುವ  ಸಂದರ್ಭ ಈ ಮರುಭೂಮಿ ವೀಕ್ಷಣೆಗೆ ಪ್ರಶಸ್ತವಾದ ಸಮಯ. ಈ ವೇಳೆ ಇಲ್ಲಿ ಸರ್ಕಾರದ ವತಿಯಿಂದ ನೂರಾರು ಟೆಂಟ್ಗಳನ್ನು ಹಾಕಲಾಗುತ್ತದೆ. ಜನರಿಗೆ ಮರುಭೂಮಿ ತೋರಿಸಲು ವಿಶೇಷ ಸೌಲಭ್ಯ ಕಲ್ಪಿಸಲಾಗುತ್ತದೆ. ಫೋಟೋಗ್ರಫಿ ಹಾಗೂ ಪಕ್ಷಿ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ತಾಣ. ಗೂಬೆ, ನೆಲಗುಬ್ಬಿಗಳನ್ನು ಇಲ್ಲಿ ಕಾಣಬಹುದು. ರಣ್ ಮರುಭೂಮಿ ಪಾಕಿಸ್ತಾನದ ಗಡಿಗೆ ತೀರಾ ಸಮೀಪವಾಗಿದೆ. ಇಲ್ಲಿ ಭೇಟಿ ನೀಡಲು ಪೊಲೀಸರಿಂದ ಮೊದಲೇ ಅನುಮತಿ ಪಡೆದುಕೊಳ್ಳಬೇಕು!


No comments:

Post a Comment