ಜೀವನಯಾನ

Thursday, October 23, 2014

ಐತಿಹಾಸಿಕ ಕೆಂಪು ಕೋಟೆ!

ದೆಹಲಿಯ ಜನಪ್ರಿಯ ಕಿಲ್ಲಾ- ಇ- ಮೊಲ್ಹಾ ಇದರ ಹೊಸ ಹೆಸರೇ ಈಗಿನ ಕೆಂಪು ಕೋಟೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನಾವಾದ 1947ರ ಆಗಸ್ಟ್ 15ರಂದು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರ್ ಗೇಟಿನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಇದರ ಧ್ಯೋತಕವಾಗಿ ಪ್ರತಿ ವರ್ಷ ಆಗಸ್ಟ್- 15 ರಂದು ಭಾರತದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲೆ  ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಾರೆ. ಸ್ವಾತಂತ್ರ್ಯ ದೊರೆತ ಬಳಿಕ ಕೆಂಪುಕೋಟೆಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಾಗಿದೆ. ಇಂದು ಇದು ಪ್ರಸಿದ್ಧ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.
 

ಕೆಂಪು ಕೋಟೆಯನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಲ್ಲೇ ಅದ್ಭುತವಾದ ಅರಮನೆಯೊಂದು ಇದರಲ್ಲಿದೆ. 254.67 ಎಕರೆಯಷ್ಟು ವಿಶಾಲವಾದ ಜಾಗವನ್ನು ಕೆಂಪು ಕೋಟೆ ಆವರಿಸಿಕೊಂಡಿದೆ. ಈ ಕೋಟೆಯು ಸುಮಾರು 2.41 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದರ ಎರಡು ಪ್ರಮುಖ ದ್ವಾರಗಳನ್ನು ಲಾಹೋರ್ ಹಾಗೂ ದೆಹಲಿ ಗೇಟ್ ಎಂದು ಹೆಸರಿಸಲಾಗಿದೆ. ಲಾಹೋರ್ ದ್ವಾರವು ಚಚ್ಛಾ ಚೌಕ ಮಾರುಕಟ್ಟೆಗೆ ಕೊಂಡೊಯ್ಯುತ್ತದೆ. ಇಲ್ಲಿ ರೇಷ್ಮೆ ಒಡವೆಗಳು ಹಾಗೂ ಇತರೇ ಬೆಲೆಬಾಳುವ ವಸ್ತುಗಳನ್ನು ರಾಜವಂಶಸ್ಥರಿಗಾಗಿ ಮಾರಾಟ ಮಾಡಲಾಗುತ್ತಿತ್ತು. ದೆಹಲಿ ಗೇಟ್ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂ ಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಇಲ್ಲಿ ಬೀಡುಬಿಟ್ಟಿರುತ್ತದೆ. 

ಕುತೂಹಲಗಳ ಆಗರ!
ಈ ಸುಂದರ ಸ್ಮಾರಕದಲ್ಲಿ ಅನೇಕ ಅದ್ಭುತ ಕಲಾಕೃತಿಗಳಿವೆ. ದಿವಾನ್ ಐ ಆಮ್ ಅವುಗಳಲ್ಲೊಂದು. ಇಲ್ಲೇ ರಾಜನು ಪ್ರಜೆಗಳ ಕಷ್ಟ ಸುಖಗಳನ್ನು ಆಲಿಸುತ್ತಿದ್ದನು. ಕೆಂಪು ಕೋಟೆಯ ಒಳಭಾಗದಲ್ಲಿ ದಿವಾನ್ ಐ ಖಾಸ್ (ಖಾಸ್ ಮಹಲ್) ಇದೆ. ಇಲ್ಲಿ ರಾಜ್ಯದ ಮಂತ್ರಿಮಂಡಲದ ಸದಸ್ಯರು ಮತ್ತು ಅಥಿತಿಗಳೊಂದಿಗೆ ರಾಜರು ಖಾಸಗೀ ಸಭೆಗಳನ್ನು ನಡೆಸುತ್ತಿದ್ದರು. ಇಡೀ ಕೆಂಪುಕೋಟೆ ಅರ್ಧ ಚಂದ್ರಾಕಾರದಲ್ಲಿದ್ದು, ಕೋಟೆಯ ಗೋಡೆಗಳು 21 ಮೀಟರ್ ಎತ್ತರವಾಗಿವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಕೆಂಪು ಕೋಟೆಯಲ್ಲಿರುವ ರಾಗ ಮಹಲ್ಲನ್ನು ಬೇಗಂ ಮಹಲ್ ಎಂದೂ ಕರೆಯುತ್ತಾರೆ. ಇಲ್ಲಿ ಷಹಜಾನನ ಪತ್ನಿ ಮತ್ತು ಉಪಪತ್ನಿಯರು ವಾಸವಿದ್ದರು. ಇಲ್ಲಿರುವ ಮುಮ್ತಾಜ್ ಮಹಲ್ ಮಹಿಳೆಯರ ಸಭಾಂಗಣವಾಗಿದ್ದು, ಇಂದು ವಸ್ತು ಸಂಗ್ರಹಾಲಯವಾಗಿದೆ.

ಕೆಂಪು ಕೋಟೆಯ ಚರಿತ್ರೆ:
5ನೇ ಮುಘಲ್ ದೊರೆ ಷಹಜಹಾನನ ರಾಜಧಾನಿಯಾಗಿ ಕೆಂಪುಕೋಟೆಯನ್ನು 1648ರಲ್ಲಿ ನಿರ್ಮಿಸಲಾಯಿತು. ಷಹಜಹಾನನ ಆಸ್ತಾನದಲ್ಲಿದ್ದ ಉಸ್ತಾದ್ ಅಹಮದ್ ಲಹೌರಿ ಕೆಂಪು ಕೋಟೆಯ ವಾಸ್ತುಶಿಲ್ಪಿ. 1632ರಿಂದ 1648ರ ಅವಧಿಯಲ್ಲಿ ಮುಘಲ್ ವಾಸ್ತುಶಿಲ್ಪದ ಪ್ರಕಾರದಲ್ಲಿ ಕೆಂಪು ಕೋಟೆ ನಿರ್ಮಾಣಗೊಂಡಿದೆ. ತದನಂತರ ಮುಘಲರು ನಿರ್ಮಿಸಿದ ಎಲ್ಲ ಕಟ್ಟಡಗಳಿಗೂ ಕೆಂಪು ಕೋಟೆ ಮಾದರಿ ಎನಿಸಿಕೊಂಡಿತು.
ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೇ ರಾಜರಾಣಿಯರ ಅರಮನೆ ನಿವಾಸವಾಗಿಯೂ ರೂಪತಳೆಯಿತು.  200 ವರ್ಷಗಳ ಕಾಲ ಕೆಂಪು ಕೋಟೆಯಲ್ಲಿ ಮುಘಲ್ ದೊರೆಗಳು ವಾಸವಿದ್ದರು. ಕೆಂಪು ಕೋಟೆಯನ್ನು ಆಳಿದ ಕೊನೆಯ ಮುಘಲ್ ದೊರೆ 2ನೇ ಬಹದ್ದೂರ್ ಶಾ. 1857ರಲ್ಲಿ ನಡೆದ ಮೊದಲ ಸೇನಾ ದಂಗೆಗೆ ಕೆಂಪು ಕೋಟೆ ಸಾಕ್ಷಿಯಾಯಿತು. ಈ ಸಮಯದಲ್ಲಿ 2ನೇ ಬಹದ್ದೂರ್ ಶಾ ತಾನು ಸಂಪೂರ್ಣ ಭಾರದ ಅರಸ ಎಂದು ಘೋಷಿಸಿಕೊಂಡ. ಯುದ್ಧದಲ್ಲಿ ಸೋತಬಳಿಕ ಕೋಟೆಯಿಂದ ಪಲಾಯನಗೈದ. ಯುದ್ಧದ ಬಳಿಕ ಬ್ರಿಟೀಷರು ಕೆಂಪು ಕೋಟೆಯ ಬಹುಭಾಗವನ್ನು ನಾಶಪಡಿಸಿ ಅಲ್ಲಿ ಮಿಲಿಟರಿ ಬ್ಯಾರಕ್ಗಳನ್ನು ನಿಮರ್ಮಿಸಿದ್ದಾರೆ. ಕೋಟೆಯ ಒಳಗಿದ್ದ ಮೂರನೇ ಎರಡರಷ್ಟು ರಚನೆಗಳನ್ನು ನಾಶಪಡಿಸಿದ್ದಾರೆ. 1911ರಲ್ಲಿ ಬ್ರಿಟನ್ ರಾಜ ಮತ್ತು ರಾಣಿ ದೆಹಲಿ ದರ್ಭಾರ್ ಗೆ  ಭೇಟಿ ನೀಡಿದರು. ಈ ಕಾರಣಕ್ಕಾಗಿ ಕೆಲವೊಂದು ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ. 2007ರಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಿದೆ. 

No comments:

Post a Comment