ಈ ಹಕ್ಕಿಯನ್ನು ಪಕ್ಷಿ ಲೋಕದ ಇಂಟೀರಿಯರ್ ಡೆಕೊರೇಟರ್ ಎಂದೇ ಕರೆಯಲಾಗುತ್ತದೆ. ನೆಲದ ಮೇಲೆ ಗುಡಿಸಲಿನ ಹಾಗೆ ಗೂಡು ಕಟ್ಟುವ ಇದು, ತನ್ನ ಗೂಡನ್ನು ಬಣ್ಣ ಬಣ್ಣದ ವಸ್ತುಗಳಿಂದ, ಹೂವುಗಳಿಂದ ಅಲಂಕರಿಸುತ್ತದೆ. ಇದೇ ಬೋವರ್ ಹಕ್ಕಿಯ ವೈಶಿಷ್ಟ್ಯ. ಆಸ್ಟ್ರೇಲಿಯಾ, ನ್ಯೂಗಿಯಾ ಮಳೆಕಾಡುಗಳಲ್ಲಿ ಇವು ವಾಸಿಸುತ್ತವೆ.
ಗುಡಿಸಲಿನಾಕಾರದ ಗೂಡು!
ಬೋವರ್ ಬರ್ಡ್ 7 ರಿಂದ 8 ಇಂಚಿನಷ್ಟು ದೊಡ್ಡದು. ಆದರೆ, ಅದು ಕಟ್ಟುವ ಗೂಡು ಮಾತ್ರ ಊಹಿಸಲು ಅಸಾಧ್ಯ.
ಇತರ ಎಲ್ಲ ಹಕ್ಕಿಗಳು ಮೊಟ್ಟೆಯನ್ನು ಸಂರಕ್ಷಿಲು ಮರದ ತುದಿಯಲ್ಲೋ, ಯಾರಿಗೂ ಕಾಣದ ರೀತಿಯಲ್ಲೋ ಗೂಡನ್ನು ಕಟ್ಟಿದರೆ, ಬೋವರ್ ಹಕ್ಕಿ ರಾಜಾರೋಷವಾಗಿ ನೆಲದ ಮೇಲೆಯೇ ಗೂಡನ್ನು ನಿರ್ಮಿಸುತ್ತದೆ. ಇದರ ಗೂಡನ್ನು ಒಂದು ಚಿಕ್ಕ ಗುಡಿಸಲಿಗೆ ಹೋಲಿಸಬಹುದು. ಅಷ್ಟೊಂದು ಅಚ್ಚುಕಟ್ಟು. ಕಸ ಕಡ್ಡಿ, ಹುಲ್ಲುಗಳನ್ನು ಬಳಸಿ ನಿರ್ಮಿಸಿದ ಇದರ ಗೂಡಿನ ಆವರಣ ಸುಮಾರು 15 ಮೀಟರ್ ನಷ್ಟು ವಿಶಾಲವಾಗಿರುತ್ತದೆ. ಕೆಲವೊಮ್ಮೆ 5 ರಿಂದ 6ಅಡಿ ಎತ್ತರದವರೆಗೂ ಗೂಡನ್ನು ಕಟ್ಟಿದ ಉದಾಹರಣೆಗಳಿವೆ. ಗೂಡಿನ ಒಳಗೂ ಮೂರು ಅಡಿಯಷ್ಟು ವಿಶಾಲ ಜಾಗವಿರುತ್ತದೆ. ಚಾವಣಿ ನೆಲಕ್ಕೆ ತಾಗದಂತೆ ಪ್ರವೇಶ ದ್ವಾರದಲ್ಲಿ ಎರಡು ಆಧಾರ ಕಂಬಗಳನ್ನು ನೆಟ್ಟು ಭದ್ರ ಪಡಿಸುತ್ತದೆ.
ಮನೆಯ ಸುತ್ತ ಸಿಂಗಾರ!
ಗೂಡಿನ ಸುರಕ್ಷತೆಗಿಂತ ಹೆಚ್ಚಾಗಿ ಸೌಂದರ್ಯಕ್ಕೆ ಮೊದಲ ಪ್ರಾಶಸ್ತ್ಯ. ಎಲೆಗಳು, ಕೀಟಗಳ ಆಕರ್ಷಕ ಚಿಪ್ಪುಗಳು, ಕಾಯಿ
ಹಣ್ಣುಗಳು, ಕೊನೆಗೆ ಮಾನವ ನಿರ್ಮಿ ತ ಬಾಟಲ್ ಕ್ಯಾಪ್, ಕ್ಲಿಪ್ ಯಾವುದೇ ಸಿಕ್ಕರೂ ಅಲಂಕಾರಕ್ಕೆ ಬಳಸಿಕೊಳ್ಳುತ್ತದೆ. ಆ ಬಳಿಕ ಆರ್ಚಿಡ್ ಹೂವುಗಳನ್ನು ತಂದು ಇನ್ನಷ್ಟು ಸಿಂಗಾರಗೊಳಿಸುತ್ತದೆ. ಸುಂದರ ವಸ್ತುಗಳನ್ನು ಕಂಡರೆ ಅವುಗಳನ್ನು ತಂದು ಗೂಡಿನ ಮುಂದೆ ರಾಶಿ ಹಾಕುತ್ತದೆ. ಗೂಡಿನ ಒಳಗಡೆ ಮತ್ತು ಹೊರಗೆ ಕೆಂಪು, ನೀಲಿ, ಕಪ್ಪು, ಕೇಸರಿ ಬಣ್ಣದ ವಸ್ತುಗಳನ್ನು ತಂದು ಜೋಡಿಸುತ್ತದೆ. ಇಷ್ಟೆಲ್ಲಾ ಮಾಡಲು ಸಮಯ ಬೇಡವೇ? ಹೀಗಾಗಿ ವರ್ಷದಲ್ಲಿ 9 ತಿಂಗಳು ಮನೆಯನ್ನು ಕಟ್ಟಿ ಅದನ್ನು ನಿರ್ವಹಿಸುವುದಕ್ಕೆ ಮೀಸಲು. ವಿಪರ್ಯಾಸವೆಂದರೆ, ಗಂಡು ಹಕ್ಕಿ ವರ್ಷವಿಡೀ ಕಷ್ಟಪಟ್ಟು ಗೂಡು ನಿರ್ಮಿಸುವುದು ಹೆಣ್ಣನ್ನು ಆಕರ್ಷಿಸಲು ಮಾತ್ರ.
ಹೆಣ್ಣನ್ನು ಆಕರ್ಷಿಸಲು ಕಸರತ್ತು!
ಹೆಣ್ಣು ಹಕ್ಕಿಯೂ ಅಷ್ಟೇ ಚಾಲಾಕಿ. ಇಂತಹ ಕೆಲ ಮನೆಯನ್ನು ನೋಡಿ, ತನಗೆ ಹೆಚ್ಚು ಇಷ್ಟವಾದ ಮನೆಯ ಗಂಡನ್ನು ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳತ್ತದೆ! ಒಮ್ಮೆ ಒಂದು ಹೆಣ್ಣು ಒಲಿದು, ಅದರೊಂದಿಗೆ ನಲಿದಾದ ಮೇಲೆ ಹೆಣ್ಣು ಹಕ್ಕಿ ಬೇರೆ ಜಾಗದಲ್ಲಿ ತಾನೇ ಗೂಡು ನಿರ್ಮಿಸಿ ಮೊಟ್ಟೆ ಇಡುತ್ತದೆ. ಕಾವುಕೊಡುವುದು ಮರಿಗಳನ್ನು ಸಾಕುವುದು ಮೊದಲಾದ ಎಲ್ಲ ಕಾರ್ಯವನ್ನು ಹೆಣ್ಣು ಹಕ್ಕಿಯೊಂದೇ ನಿಭಾಯಿಸುತ್ತದೆ. ಹೆಣ್ಣು ಹೀಗೆ ತನ್ನ ಮರಿಗಳನ್ನು ಬೆಳೆಸುವ ಕಾಯಕದಲ್ಲಿರುವಾಗ ಅದರ ಸಂಗಾತಿಯಾಗಿದ್ದ ಗಂಡು ಹಕ್ಕಿ ತನ್ನ ಸುಂದರವಾದ ಗೂಡಿನೊಂದಿಗೆ ಬೇರೊಂದು ಹೆಣ್ಣನ್ನು ಆಕರ್ಷಿಸುವ ಕೆಲಸದಲ್ಲಿರುತ್ತದೆ.
ಸುದೀರ್ಘ ಬದುಕು:
ಬೋವರ್ ಹಕ್ಕಿಗಳು ಸುದೀರ್ಘ ಕಾಲ ಬದುಕು ನಡೆಸುತ್ತದೆ. ಇದರ ಆಯುಸ್ಸು ಸರಾಸರಿ 21 ವರ್ಷಗಳವರೆಗೆ ಬದುಕಿರ ಬಲ್ಲದು ಎಂದು ಅಂದಾಜಿಸಲಾಗಿದೆ. ಈ ಹಕ್ಕಿಯಲ್ಲಿ ಸುಮಾರು 20 ಪ್ರಕಾರಗಳಿವೆ. ಹಣ್ಣುಗಳು ಇದರ ಇಷ್ಟವಾದ ಆಹಾರ.