ಜೀವನಯಾನ

Thursday, August 14, 2014

ಚಾಂದ್ ಬಾವರಿ ಎಂಬ ಮೆಟ್ಟಿಲು ಬಾವಿ

ರಾಜಸ್ಥಾನದ ಅಭಾನೇರಿಯಲ್ಲಿರುವ ಚಾಂದ್ ಬಾವರಿ ಭಾರತದಲ್ಲಿ ಕಾಣಸಿಗುವ ಸುಂದರ ಮೆಟ್ಟಿಲುಬಾವಿಗಳಲ್ಲಿ ಒಂದು. ಜಗತ್ತಿನ ಅತಿ ಆಳದ ಮೆಟ್ಟಿಲು ಬಾವಿ ಎಂದೇ ಪ್ರಸಿದ್ಧಿ ಪಡೆದಿದೆ. 9ನೇ ಶತಮಾನದಲ್ಲಿ  ನಿರ್ಮಾಣವಾದ ಬಾವಿ ಇದು. ರಾಜಾ ಚಾಂದ್ ಸಿಂಗ್ ಈ ಬಾವಿಯನ್ನು ನಿರ್ಮಿಸಿದ್ದರಿಂದ ಚಾಂದ್ ಬಾವರಿ ಎಂಬ ಹೆಸರು ಬಂದಿದೆ. ಹರ್ಷತ್ ಮಾತಾ ದೇವಾಲಯದ ಮುಂಭಾಗದಲ್ಲಿ ಈ ಮೆಟ್ಟಿಲಿನ ಬಾವಿಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾವಿ ನಿರ್ಮಾಣವಾಗಿ 1200 ವರ್ಷಗಳು ಕಳೆದಿದ್ದರೂ ಇಂದಿಗೂ ಸುಭದ್ರ ಸ್ಥಿತಿಯಲ್ಲಿದೆ.


ಬಿಸಿಲಿನಲ್ಲೂ ತಂಪಾದ ಸ್ಥಳ:
ಬಾವಿಯ ಕೆಳಭಾಗದಲ್ಲಿ ಉಷ್ಣಾಂಶ ಮೇಲಿಗಿಂತಲೂ 5 ರಿಂದ 6 ಡಿಗ್ರಿಯಷ್ಟು ಕಡಿಮೆ ಇರುತ್ತದೆ. ರಣಬಿಸಿಲಿನ ವೇಳೆಯಲ್ಲಿ ಇಲ್ಲಿನ ಜನರು ಬಾವಿಯ ಕೆಳಭಾಗಕ್ಕೆ ತೆರಳಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. 
ಅಲ್ಲದೆ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಕಾರಣ ಮಳೆಯ ನೀರನ್ನು ಇಂಗಿಸಲು ಈ ಬಾವಿಯನ್ನು ಕೊರೆಯಲಾಗಿದೆ ಎಂದೂ ಹೇಳಾಗುತ್ತದೆ.  ಮೆಟ್ಟಿಲುಗಳನ್ನು ನಿರ್ಮಿಸಲು ರಂಧ್ರವಿರುವ ಕಪ್ಪು ಕಲ್ಲುಗಳನ್ನು ಬಳಸಲಾಗಿದೆ. ಇದು ಹೆಚ್ಚು ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಭಾವಿಯ ಕೆಳಭಾಗದಲ್ಲಿರುವ ಪುಷ್ಕರಣಿಯಲ್ಲಿ ಇಂದಿಗೂ ಹಸಿರುಗಟ್ಟಿರುವ ನೀರನ್ನು ನೋಡಬಹುದು. 


ಹಿಂದು- ಮುಸ್ಲಿಂ ವಾಸ್ತುಶಿಲ್ಪ!
ಈ ಬಾವಿ ಹಿಂದು ಮತ್ತು ಮುಸ್ಲಿಂ ಎರಡೂ ಮಾದರಿಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಮೇಲಿನ ಭಾಗದಲ್ಲಿ ಮುಸ್ಲಿಂ ಶೈಲಿಯ ವಾಸ್ತುಶಿಲ್ಪವನ್ನು ಮತ್ತು ಕೆಳಭಾಗದಲ್ಲಿ ಹಿಂದು ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ. ಕಾಲ ಕ್ರಮೇಣ ಶಿಥಿಲಗೊಂಡ ಈ ಬಾವಿಯ ಮೇಲಿನ ಭಾಗವನ್ನು ಮುಘಲರು 18ನೇ ಶತಮಾನದಲ್ಲಿ ಮರು ನಿರ್ಮಾಣ ಮಾಡಿದರು. ಬಾವಿಗೆ ತಾಗಿಕೊಂಡು ಕಮಾನಿನ ಮೇಲ್ಚಾವಣಿಯನ್ನು ನಿರ್ಮಿಸಿದರು. ಚಾವಣಿಯ ಮೇಲೆ ನಿಂತು ಹರ್ಷತ್ ಮಾತಾ ದೇವಾಲಯದ ಸಂಪೂರ್ಣ ದೃಶ್ಯವನ್ನು ವೀಕ್ಷಿಸಬಹುದಾಗಿದೆ. 
ಹಾಲಿವುಡ್ ಚಿತ್ರ ನಿರ್ಮಾಣ:
 ಹಾಲಿವುಡ್ ಚಿತ್ರಗಳಾದ ದಿ ಫಾಲ್ ಮತ್ತು ದಿ ಡಾರ್ಕ್ ನೈಟ್ ರೈಸಸ್ ನಲ್ಲಿ ಈ ಬಾವಿಯನ್ನು ಚಿತ್ರೀಕರಿಸಲಾಗಿದೆ.

No comments:

Post a Comment